ADVERTISEMENT

ತೆಲುಗಿನಲ್ಲೂ ಚಂದ್ರು ಸೌಧ!

ಅಮಿತ್ ಎಂ.ಎಸ್.
Published 23 ಜನವರಿ 2013, 19:59 IST
Last Updated 23 ಜನವರಿ 2013, 19:59 IST
ನಿರ್ದೇಶಕ ಚಂದ್ರು
ನಿರ್ದೇಶಕ ಚಂದ್ರು   

ನಿರ್ದೇಶಕ ಆರ್. ಚಂದ್ರು ಹೊಸ ಹುಮ್ಮಸ್ಸಿನಲ್ಲಿದ್ದಾರೆ. ತೆಲುಗು ಚಿತ್ರರಂಗ ಪ್ರವೇಶಿಸಲು ಸಕಲ ಸಿದ್ಧತೆ ನಡೆಸಿರುವ ಅವರು `ಚಾರ್‌ಮಿನಾರ್' ಮೇಲೆ ಮತ್ತೊಂದು ಚಾರ್‌ಮಿನಾರ್ ಕಟ್ಟಲು ಹೊರಟಿದ್ದಾರೆ. ಬಿಡುಗಡೆಗೂ ಮುನ್ನವೇ ಚಂದ್ರು ಅವರ `ಚಾರ್‌ಮಿನಾರ್' ತೆಲುಗಿಗೆ ರೀಮೇಕ್ ಆಗುತ್ತಿದೆ. ಚಂದ್ರು ತೆಲುಗಿಗೆ ಕೊಂಡೊಯ್ಯುತ್ತಿರುವ ಚಾರ್‌ಮಿನಾರ್‌ನಲ್ಲಿ ನಟ ನಾಗಾರ್ಜುನ ನಟಿಸುವ ಸಾಧ್ಯತೆ ಹೆಚ್ಚೂ ಕಡಿಮೆ ನಿಚ್ಚಳವಾಗಿದೆ. ಚಂದ್ರು ಅವರನ್ನು ನೆರೆ ಆಂಧ್ರಸೀಮೆಗೆ ಕರೆದೊಯ್ಯುತ್ತಿರುವವರು ನಿರ್ಮಾಪಕ ಶ್ರೀಧರ್.

ನಾಗಾರ್ಜುನ ಅವರ ಹಲವು ಚಿತ್ರಗಳನ್ನು ನಿರ್ಮಿಸಿರುವ ಶ್ರೀಧರ್, ತಮ್ಮಿಬ್ಬರ ಕಾಂಬಿನೇಷನ್‌ನ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಸಿದ್ದರಂತೆ. ಕತೆಯ ಹುಡುಕಾಟದಲ್ಲಿದ್ದ ಅವರಿಗೆ ಚಂದ್ರು `ಚಾರ್‌ಮಿನಾರ್' ಕತೆಯ ಎಳೆ ಹೇಳಿದ್ದರಂತೆ. ಅದನ್ನು ಮೆಚ್ಚಿಕೊಂಡ ಶ್ರೀಧರ್ ನೀವೇ ಆ ಚಿತ್ರ ನಿರ್ದೇಶಿಸಬೇಕು ಎಂದು ಒತ್ತಾಯ ಮಾಡಿದ್ದರಂತೆ. ಕನ್ನಡದಲ್ಲಿ ಚಾರ್‌ಮಿನಾರ್ ಸೌಧದ ನಿರ್ಮಾಣ ಪೂರ್ಣಗೊಂಡಿದೆ. ಅದನ್ನು ವೀಕ್ಷಿಸಲು ಶ್ರೀಧರ್ ತಮ್ಮ ತಂಡದೊಂದಿಗೆ ಆಗಮಿಸುತ್ತಿದ್ದಾರೆ. ಕತೆಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಇದು ಕನ್ನಡದ ನೇಟಿವಿಟಿಗೆ ಅನುಗುಣವಾಗಿ ಮೂಡಿದ ಚಿತ್ರ. ಅವರು ಬಯಸಿದ್ದಲ್ಲಿ ಮಾತ್ರ ಚಿಕ್ಕಪುಟ್ಟ ಬದಲಾವಣೆಗಳು ತೆಲುಗಿನಲ್ಲಿ ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ ಚಂದ್ರು.

ಅಂದಹಾಗೆ, ತೆಲುಗಿಗೆ ಪದಾರ್ಪಣೆ ಮಾಡುವ ಅವಕಾಶ ಚಂದ್ರು ಅವರಿಗೆ ಈ ಹಿಂದೆಯೇ ಬಂದಿತ್ತು. ಅವರದೇ ಚಿತ್ರ `ತಾಜ್‌ಮಹಲ್'ನ ತೆಲುಗು ಅವತರಣಿಕೆಗೆ ಮಾಡಲು ಬಂದಿದ್ದ ಆಹ್ವಾನವನ್ನು ಮತ್ತೊಂದು ಚಿತ್ರದಲ್ಲಿ ಬಿಜಿಯಾಗಿದ್ದ ಕಾರಣಕ್ಕೆ ತಿರಸ್ಕರಿಸಿದ್ದರು ಚಂದ್ರು. ಅವಕಾಶ ತಪ್ಪಿಸಿಕೊಂಡದ್ದಕ್ಕೆ ಗೆಳೆಯರಿಂದ ಬೈಗುಳ ಸಿಕ್ಕಿತ್ತು. ಹೀಗಾಗಿ ಈ ಬಾರಿಯ ಅವಕಾಶವನ್ನು ತಪ್ಪಿಸಿಕೊಳ್ಳಲು ಅವರು ಸಿದ್ಧರಿಲ್ಲ. ಚಂದ್ರು ನಿರ್ದೇಶನದ ಮತ್ತೊಂದು ಕನ್ನಡದ ಚಿತ್ರ `ಕೋ...ಕೋ...' ಕೂಡ ತೆಲುಗಿಗೆ ರೀಮೇಕ್ ಆಗಿದ್ದು ಬಿಡುಗಡೆಗೆ ಸಿದ್ಧವಾಗಿದೆ.

ಚಿತ್ರವನ್ನು ಸೆನ್ಸಾರ್ ಮಂಡಳಿ ಮುಂದಿಟ್ಟಿರುವ ಚಂದ್ರು, ಫೆಬ್ರುವರಿ ಮೊದಲ ವಾರದಲ್ಲಿ `ಚಾರ್‌ಮಿನಾರ್' ತೆರೆಗಾಣಿಸಲು ಸಿದ್ಧತೆ ನಡೆಸಿದ್ದಾರೆ.
ಎಲ್ಲಾ ಸರಿಯಾಗಿದೆ...

ಚಾರ್‌ಮಿನಾರ್ ನಾಯಕಿ ಮೇಘನಾ ಗಾಂವ್ಕರ್ ಮತ್ತು ನಿರ್ದೇಶಕ ಆರ್.ಚಂದ್ರು ನಡುವೆ ಡಬ್ಬಿಂಗ್ ವಿಚಾರದಲ್ಲಿ ಚಿಕ್ಕದಾದ ಜಟಾಪಟಿ ಇತ್ತೀಚೆಗೆ ನಡೆದಿತ್ತು. ಚಿತ್ರ ಪ್ರಾರಂಭವಾಗುವ ಮುನ್ನವೇ ಡಬ್ಬಿಂಗ್ ಬೇರೆಯವರಿಂದ ಮಾಡಿಸುವುದಾಗಿ ಮೇಘನಾಗೆ ಚಂದ್ರು ಹೇಳಿದ್ದರಂತೆ. ಪಾತ್ರಕ್ಕೆ ಅವರ ಧ್ವನಿ ಹೊಂದಿಕೊಳ್ಳುವುದಿಲ್ಲ ಎನ್ನುವುದು ಅವರ ಅಭಿಪ್ರಾಯ.

ಅದಕ್ಕೆ ಮೇಘನಾ ಕೂಡ ಒಪ್ಪಿಕೊಂಡಿದ್ದರಂತೆ. ಆದರೆ ಒಮ್ಮೆ ಸುಮ್ಮನೆ ನಾನೇ ಡಬ್ಬಿಂಗ್ ಮಾಡಿ ನೋಡುತ್ತೇನೆ ಎಂದು ಮೇಘನಾ ಬಯಕೆ ವ್ಯಕ್ತಪಡಿಸಿದಾಗ ಚಂದ್ರು ಒಪ್ಪಿಕೊಂಡರಂತೆ. ಧ್ವನಿ ಚೆನ್ನಾಗಿದೆ ಎಂದು ಚಂದ್ರು ಸಹಾಯಕರಿಂದ ಮಾತುಗಳು ಕೇಳಿಬಂದ ನಂತರ ಮೇಘನಾ ನಡೆ ಬದಲಾಯಿತು ಎನ್ನುತ್ತಾರೆ ಚಂದ್ರು.

ಎಲ್ಲವೂ ಸುಗಮವಾಗಿ ನಡೆದು ಕೊನೆಯಲ್ಲಿ ವಿವಾದ ಎದ್ದಿದ್ದಕ್ಕೆ ಚಂದ್ರು ಬೇಸರಪಟ್ಟುಕೊಳ್ಳುತ್ತಾರೆ. ತಾವಾಗಿಯೇ ಕರೆದು ಅವಕಾಶ ನೀಡಿದ ನಟಿ ಹೀಗೆ ಮಾಡಬಾರದಿತ್ತು ಎನ್ನುವುದು ಅವರ ಬೇಸರಕ್ಕೆ ದೊಡ್ಡ ಕಾರಣ. ಮೇಘನಾ ಕರೆ ಮಾಡಿ ಕ್ಷಮೆ ಕೋರಿದ್ದಾರೆ. ಮುಂದೆ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಈ ಮನಸ್ತಾಪ ಇಲ್ಲಿಗೇ ಅಂತ್ಯಗೊಂಡಿದೆ ಎಂದು ಚಂದ್ರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.