ADVERTISEMENT

ದುಡ್ಡು ಅರಸಿ ಬೈಕ್ ಮೇಲೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST
ದುಡ್ಡು ಅರಸಿ ಬೈಕ್ ಮೇಲೆ
ದುಡ್ಡು ಅರಸಿ ಬೈಕ್ ಮೇಲೆ   

ಭಾರತೀಯರಲ್ಲಿ ಹಣದ ಕುರಿತಾದ ಕಲ್ಪನೆ ಹೇಗೆ ಮಾರ್ಪಡುತ್ತ ಬಂದಿದೆ ಎನ್ನುವುದನ್ನು ಅರಿತುಕೊಳ್ಳುವ  ಯತ್ನ ನಡೆಸಿತ್ತು ಕೊಟಕ್ ಮಹಿಂದ್ರ ಅವರದ್ದು. ಏಕೆಂದರೆ ಅದು ಬ್ಯಾಂಕಿಂಗ್, ಶೇರು, ಹಣಕಾಸು ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿಯೇ ಕೊಟಕ್ ಮಹಿಂದ್ರ ಬ್ಯಾಂಕ್ `ಮನಿ ಕ ಮತ್‌ಲಬ್ ಡೈರೀಸ್~ ಎಂಬ ಅಧ್ಯಯನ ಯಾತ್ರೆ ಆಯೋಜಿಸಿತ್ತು. ಇದು ಚಂಡೀಗಡದಿಂದ ಬೆಂಗಳೂರಿನ ವರೆಗೆ 3500 ಕಿ.ಮೀ ನಡೆದ ಮೋಟರ್ ಸೈಕಲ್ ಸಾಹಸಯಾತ್ರೆ .

ಈ ವಿಶಿಷ್ಟ ಪ್ರಯತ್ನದಲ್ಲಿ ವಿಖ್ಯಾತ ಬೈಕರ್‌ಗಳಾದ ವೀರ್ ನಕಾಯ್ ಮತ್ತು ಲಿಯಾನ್ ಡಾಸನ್ ಅವರು `ಭಾರತೀಯರ ದೃಷ್ಟಿಯಲ್ಲಿ ಹಣಕ್ಕೆ ಏನು ಅರ್ಥ~ ಎಂಬುದನ್ನು ಗ್ರಹಿಸಿ ದಾಖಲಿಸಿದರು. ಜನರ ಅಗತ್ಯಗಳನ್ನು ಇನ್ನಷ್ಟು ಅಚ್ಚುಕಟ್ಟಾದ ರೀತಿಯಲ್ಲಿ ಈಡೇರಿಸಲು ಏನು ಮಾಡಬೇಕು ಎಂಬುದರ ಅಧ್ಯಯನವೇ ಈ ಸಾಹಸ ಯಾತ್ರೆಯ ಉದ್ದೇಶವಾಗಿತ್ತು.

ಮಾರ್ಗ ಹೀಗಿತ್ತು...
ವಾಸ್ತು ಶಿಲ್ಪ ಮತ್ತು ನಗರ ಯೋಜನೆಗೆ ಪ್ರಖ್ಯಾತವಾದ ಭಾರತದ ಪ್ರಥಮ ಯೋಜಿತ ನಗರ ಚಂಡೀಗಡದಿಂದ ಬೈಕರ್‌ಗಳ ಸಾಹಸ ಯಾತ್ರೆ ಮೊದಲು ತಲುಪಿದ್ದು ರಾಜಧಾನಿ ದೆಹಲಿ. ಮುಂದಿನ ನಿಲುಗಡೆ ಪಿಂಕ್ ಸಿಟಿ ಜೈಪುರ.
 
ಅಲ್ಲಿಂದ ಸರೋವರಗಳ ನಗರ ಉದಯಪುರ, ಉದ್ಯಮಕ್ಕೆ ಹೆಸರಾದ ಅಹಮದಾಬಾದ್, ವಜ್ರಗಳ ವ್ಯಾಪಾರಕ್ಕೆ ಹೆಸರಾದ ಸೂರತ್, ಮನರಂಜನೆ ರಾಜಧಾನಿ ಮುಂಬೈ, ಶೈಕ್ಷಣಿಕ ಸೌಲಭ್ಯಗಳಿಗೆ ಹೆಸರಾದ ಪುಣೆ, ನಂತರ ಪ್ರವಾಸಿ ತಾಣ ಗೋವಾ.  ಐಟಿ ರಾಜಧಾನಿ ಬೆಂಗಳೂರು ಕೊನೆಯ ನಿಲುಗಡೆ ಆಗಿತ್ತು. ಇಲ್ಲಿ ಬಂದು ತಲುಪಿದ ನಂತರ ಬೈಕರ್‌ಗಳು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ....

`ಈ ಸಾಹಸ ಯಾತ್ರೆಯಲ್ಲಿ ಸಾವಿರಾರು ಜನರನ್ನು ಭೇಟಿ ಮಾಡಿದೆವು. ಮುಂಬೈನಲ್ಲಿ ಒಬ್ಬರು ಸಿಕ್ಕರು. ಅವರಿಗೆ ತಮ್ಮ ಪರ್ಸ್‌ನಲ್ಲಿ ಎಷ್ಟು ದುಡ್ಡು ಇದೆ ಎಂಬುದೇ ತಿಳಿದಿರಲಿಲ್ಲ. ಉದಯಪುರದ ಹತ್ತಿರದ ಒಬ್ಬ ರೈತನ  ಬಳಿ 50 ರೂ ಮಾತ್ರ ಇತ್ತು.

ಆದರೂ ಆತ ನೆಮ್ಮದಿ, ಖುಷಿಯಿಂದ ಇದ್ದರು. ದೆಹಲಿಯ ಒಬ್ಬ ಯುವತಿ ಹತ್ತಿರ ಹತ್ತು ಸಾವಿರ ರೂಪಾಯಿ ಇದ್ದರೂ ಸೌಂದರ್ಯ ವರ್ಧಕ ಸಾಧನಗಳನ್ನು ಕೊಳ್ಳಲು ಸಾಲುತ್ತಿಲ್ಲ ಎಂದು ಗೊಣಗುತ್ತಿದ್ದಳು. ಇನ್ನೂ ಹೆಚ್ಚು ಹಣ ಬೇಕೆಂಬುದು ಅವಳ ಬಯಕೆಯಾಗಿತ್ತು.

ಸಣ್ಣ ನಗರದಲ್ಲಿ ಇರುವವರು, `ಅಷ್ಟೇ ಹಣದಲ್ಲಿ ಮಕ್ಕಳ ಶಾಲೆ ಶುಲ್ಕ ಕಟ್ಟಿ ನೆಮ್ಮದಿಯಾಗಿ ಮೂರು ಹೊತ್ತು ಊಟ ಮಾಡಬಹುದು~ ಎಂದು ತೃಪ್ತಿಪಟ್ಟುಕೊಂಡರು. ಮತ್ತೆ ಕೆಲವರದು, ಕೋಟಿಗಟ್ಟಲೆ ಇದ್ದರೂ ಶಾಪಿಂಗ್‌ಗೆ ಸಾಲುವುದಿಲ್ಲ ಎಂಬ ಹಪಾಹಪಿ.

 `ಒಟ್ಟಾರೆ ನಾವು ಕಂಡುಕೊಂಡಂತೆ ದುಡ್ಡು ಎಂದರೆ ಸ್ವಾತಂತ್ರ್ಯ, ನಮ್ಮ ಬಳಿ ಬೇಕಾದಷ್ಟು ದುಡ್ಡಿದ್ದಾಗ ಹೇಗೆ ಬೇಕಾದರೂ ಉಪಯೋಗಿಸಬಹುದು, ದುಡ್ಡು ವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ. ದುಡ್ಡಿಲ್ಲ ಅಂದರೆ ನಿಮ್ಮ ಪ್ರತಿಭೆ ಗೌಣವಾಗಿ ಬಿಡುತ್ತದೆ~ ಎಂದರು ವೀರ್ ಮತ್ತು ಲಿಯಾನ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.