ADVERTISEMENT

‘ದುನಿಯಾ 2’ ದರ್ಬಾರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST
ಚಲ
ಚಲ   

‘ದುನಿಯಾ 2’ ಚಿತ್ರದ ಟೈಟಲ್‌ಗಾಗಿ ಒಂದೂವರೆ ವರ್ಷ ಕೋರ್ಟ್‌ ಅಂಗಳ ಸುತ್ತಿದ್ದ ನಿರ್ದೇಶಕ ಚಲ ಅವರ ಮನದಲ್ಲಿ ಸುತ್ತಾಟದ ಕಥೆ ಹೇಳುವ ಉತ್ಸಾಹವಿತ್ತು. ಅದಕ್ಕಾಗಿ ಖುಷಿಯಿಂದಲೇ ಮೈಕ್‌ ಕೈಗೆತ್ತಿಕೊಂಡರು. ಆದರೆ, ಕಥೆ ಹೇಳಲು ತಡಬಡಾಯಿಸಿದರು.

ಕೊನೆಗೆ ಸವಾರಿಸಿಕೊಂಡ ಅವರು, ‘ಹಳೆಯ ದುನಿಯಾಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದರು. ಆದರೆ, ಆ ಚಿತ್ರದ ಮಾದರಿಯಲ್ಲಿಯೇ ಇದರ ಮೇಕಿಂಗ್‌ ಇರಲಿದೆ ಎಂದು ಹೇಳುವುದನ್ನು ಮರೆಯಲಿಲ್ಲ. ಮಹಾರಾಷ್ಟ್ರದಲ್ಲಿ ನಾಲ್ಕು ದಿನ ಶೂಟಿಂಗ್‌ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿತ್ತು.

‘ನಟ ಯೋಗೀಶ್‌ ಅವರಿಗೆ ಈ ಕಥೆ ಹೇಳಿದ್ದೆ. ಅವರೇ ಚಿತ್ರದ ನಾಯಕರಾಗಬೇಕಿತ್ತು. ನನ್ನ ಕನಸು ಈಡೇರಲಿಲ್ಲ. ಟೈಟಲ್‌ಗಾಗಿ ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯವಾಯಿತು’ ಎಂದರು ಚಲ. ಇದು ಅವರು ನಿರ್ದೇಶನದ ಮೂರನೇ ಚಿತ್ರ. ಯುಗಾದಿ ಹಬ್ಬದ ಬಳಿಕ ಮೈಸೂರು, ಗೋಕರ್ಣ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ADVERTISEMENT

ನಾಯಕ ಗ್ಯಾರೇಜ್‌ ಕೆಲಸಗಾರ. ನಾಯಕಿ ಗಾರ್ಮೆಂಟ್‌ ಉದ್ಯೋಗಿ. ಇಬ್ಬರ ಪ್ರೇಮದ ಸುತ್ತ ಕಥೆ ಹೆಣೆಯಲಾಗಿದೆಯಂತೆ. ತಾಯಿ-ಮಗನ ಸೆಂಟಿಮೆಂಟ್‌ ಜೊತೆಗೆ ಆ್ಯಕ್ಷನ್‌ ಇರುವ ಸಿನಿಮಾ ಇದು. ಸಿನಿಮಾಗಳಲ್ಲಿ ಸಣ್ಣ‍ಪುಟ್ಟ ಪಾತ್ರ ಮಾಡಿರುವ ರಾಜೈ ಈ ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆಯುತ್ತಿದ್ದಾರೆ. ‘ನಿರ್ದೇಶಕರು ನನಗೆ ಇನ್ನೂ ಕಥೆ ಹೇಳಿಲ್ಲ. ದೃಶ್ಯಗಳನ್ನಷ್ಟೇ ಹೇಳಿದ್ದಾರೆ’ ಎಂದರು. ಚಿತ್ರದ ಪಾತ್ರಕ್ಕಾಗಿ ಅವರು ಮಾರ್ಷಲ್‌ ಕಲೆ ಕೂಡ ಕಲಿತಿದ್ದಾರಂತೆ.

‘ನಾಗಿಣಿ’ ಧಾರಾವಾಹಿ ಖ್ಯಾತಿಯ ಹರಿಣಿ ಅವರದ್ದು ಚಿತ್ರದಲ್ಲಿ ಅಮ್ಮನ ಪಾತ್ರ. ‘ನನ್ನದು ಭಾವನಾತ್ಮಕ ಪಾತ್ರ. ನಾಯಕನ ಜೊತೆಯಲ್ಲಿಯೇ ನನ್ನ ಪಾತ್ರವೂ ಚಲಿಸುತ್ತಿರುತ್ತದೆ’ ಎಂದ ಅವರು, ಪಾತ್ರದ ಗುಟ್ಟು ಬಿಟ್ಟುಕೊಡಲಿಲ್ಲ.

ಕೃಷ್ಣರಾಜ್‌ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳು ಮತ್ತು ಮೂರು ತುಣುಕುಗಳಿದ್ದು, ಗೌತಮ್‌ ಶ್ರೀವತ್ಸ ಹಾಗೂ ವಿಕ್ರಂ ವರ್ಮನ್‌ ಸಂಗೀತ ಸಂಯೋಜಿಸಿದ್ದಾರೆ. ಹರೀಶ್‌ ಎನ್‌. ಸೊಂಡೆಕೊಪ್ಪ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನೂ ನಾಯಕಿ ಆಯ್ಕೆ ಅಂತಿಮಗೊಂಡಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.