ADVERTISEMENT

ದುಬೈ ಸೈಕಲೂ ಅರ್ಜುನ್ ಸ್ಟೈಲೂ

ಸುರೇಖಾ ಹೆಗಡೆ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ದುಬೈ ಸೈಕಲೂ ಅರ್ಜುನ್ ಸ್ಟೈಲೂ
ದುಬೈ ಸೈಕಲೂ ಅರ್ಜುನ್ ಸ್ಟೈಲೂ   

ಮನೆಯಲ್ಲಿ ರಾಜಕೀಯದ ಘಮಲು. ಆದರೆ ನನಗೆ ಚಿಕ್ಕಂದಿನಿಂದಲೂ ಅಂಟಿಕೊಂಡಿದ್ದು ಸಿನಿಮಾ ಅಮಲು. ಬಣ್ಣ ಹಚ್ಚಬೇಕು, ನಟನಾಗಬೇಕು, ತೆರೆಯಲ್ಲಿ ಮಿಂಚಬೇಕು ಎಂಬುದು ಬಾಲ್ಯದ ಕನಸು.

ಎಂಇಎಸ್‌ ಕಾಲೇಜಿನಲ್ಲಿ ಬಿಕಾಂ ಓದಿದೆ. ಅನೇಕರು ‘ಎಷ್ಟು ಚೆನ್ನಾಗಿದ್ದೀಯಾ, ಮಾಡೆಲಿಂಗ್‌ ಮಾಡೋ’ ಎನ್ನುತ್ತಿದ್ದರು. ಬ್ಯಾಡ್ಮಿಂಟನ್‌ ಕೂಡ ಆಡುತ್ತಿದ್ದೆ. ನಾಟಕ, ನೃತ್ಯ ಎನ್ನುತ್ತ ಪಠ್ಯೇತರ ಚಟುವಟಿಕೆಗಳಲ್ಲಿ ಬಹುವಾಗಿ ತೊಡಗಿಸಿಕೊಂಡಿದ್ದೆ.

ಸಹಜವಾಗಿಯೇ  ಫಿಟ್‌ ಆಗಿದ್ದೆ. ಹೀಗಾಗಿ ಮಾಡೆಲಿಂಗ್‌ ದಾರಿಯಲ್ಲಿ ಹೆಜ್ಜೆ ಇಟ್ಟಾಗ ಆ ಕ್ಷೇತ್ರ ನನ್ನನ್ನು ಸ್ವೀಕರಿಸಿತು. ನಾಲ್ಕು ವರ್ಷ ವಿವಿಧ ಬ್ರಾಂಡ್‌ಗಳಿಗಾಗಿ ರ್‍ಯಾಂಪ್‌ ಏರಿದೆ.

ADVERTISEMENT

ಡಾ.ಮಂಜುನಾಥ ಬಾಬು ಎನ್ನುವವರು  ‘ಯುಗಪುರುಷ’ ಚಿತ್ರ ನಿರ್ಮಾಪಕರು. ಕಾರ್ಯಕ್ರಮವೊಂದರಲ್ಲಿ ನನ್ನನ್ನು ನೋಡಿ ಚಿತ್ರದಲ್ಲಿ ನಾಯಕನ ಪಾತ್ರ ಮಾಡುವ ಕುರಿತು ಚರ್ಚಿಸಿದರು. ಬಹುದಿನದ ಕನಸು ಈಡೇರಿದ ಖುಷಿಯಲ್ಲಿ ಒಪ್ಪಿಕೊಂಡೆ.

ಚಿತ್ರೀಕರಣ ಪೂರ್ತಿಯಾಗಿದ್ದು, ಜೂನ್‌ 9ರಂದು ಬಿಡುಗಡೆಯಾಗಲಿದೆ. ಆ್ಯಕ್ಷನ್‌ ಹಾಗೂ ಪ್ರೀತಿಯ ಎಳೆಯಲ್ಲೇ ಕಥೆ ಓಡುತ್ತದೆ. ನನ್ನದು ರಫ್‌ ಅಂಡ್‌ ಟಫ್‌ ನಾಯಕನ ಪಾತ್ರ. ಈಗಾಗಲೇ ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಮುಂಬೈನ ಪೂಜಾ ಜವೇರಿ ಚಿತ್ರದ ನಾಯಕಿ. ದೇವರಾಜ್‌, ಶೋಭರಾಜ್‌, ವೀಣಾ ಸುಂದರ್‌, ಪವನ್‌, ರಾಧಾಕೃಷ್ಣ  ಮುಖ್ಯಭೂಮಿಕೆಯಲ್ಲಿದ್ದಾರೆ. ಮಂಜುನಾಥ ಮಸ್ಕಲಮತಿ ನಿರ್ದೇಶನ ಚಿತ್ರಕ್ಕಿದ್ದು ನವೀನ್‌ ಕೃಷ್ಣ ಸಂಭಾಷಣೆ ಬರೆದಿದ್ದಾರೆ.

ಸಿನಿಮಾ ಅವಕಾಶ ಬರುವುದಕ್ಕೂ ಮುಂಚೆ ಮೂರು ತಿಂಗಳು ಅಲೋಕ್‌ ಉಲ್ಪತ್‌ ಅವರ ಬಳಿ ನಟನಾ ತರಬೇತಿ ಪಡೆದಿದ್ದೆ. ಸಿನಿಮಾಕ್ಕಾಗಿ ಕೇರಳದ ಹಿಂದೂಸ್ತಾನಿ ಕಳರಿ ಸಂಗಮ್‌ ಸಂಸ್ಥೆಯಲ್ಲಿ ಕಳರಿಪಯಟ್ಟು ಕಲಿತಿದ್ದೇನೆ. ನಟನ ಹಾವಭಾವ ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ಮಿನೋಟಿ ರಾಮಚಂದ್ರ ಅವರಿಂದ ಸಾಲ್ಸಾ ನೃತ್ಯ ಕಲಿಯುತ್ತಿದ್ದೇನೆ. ಮಾಸ್‌ ಮಾದ ಅವರಿಂದ ಫೈಟಿಂಗ್‌ ತರಬೇತಿಯೂ ಆಗುತ್ತಿದೆ. 

ದೇಹ ಸೌಂದರ್ಯ ಕಾಪಾಡಿ ಕೊಳ್ಳಲು ನಿತ್ಯ ವ್ಯಾಯಾಮ, ಡಯಟ್‌ ಮೊರೆ ಹೋಗಿದ್ದೇನೆ. ಬೆಳಿಗ್ಗೆ 5 ಗಂಟೆಗೆ ಎದ್ದು ಆರು ಕಿ.ಮೀ. ದೂರ ಇರುವ ಜಿಮ್‌ಗೆ ಸೈಕ್ಲಿಂಗ್‌ ಮಾಡಿಕೊಂಡು ಹೋಗುತ್ತೇನೆ. 30 ಕಿ.ಮೀ. ವೇಗವಾಗಿ ಓಡುವ ಈ ಸೈಕಲ್‌ ಅನ್ನು ದುಬೈನಿಂದ ತರಿಸಿಕೊಂಡಿದ್ದೇನೆ. ಜಿಮ್‌ನಲ್ಲಿ ಬೆವರಿಳಿಸುತ್ತೇನೆ.

ಇನ್ನು ಆಹಾರ ವಿಷಯದಲ್ಲಿ ಸಿಕ್ಕಾಪಟ್ಟೆ ನಿಯಮಗಳಿವೆ ಕಣ್ರಿ. ಅಂತರರಾಷ್ಟ್ರೀಯ ಖ್ಯಾತಿಯ ಬಾಡಿ ಬಿಲ್ಡರ್‌ ಪ್ರಸಾದ್‌ ಕುಮಾರ್‌ ನನಗೆ ತರಬೇತುದಾರರು. ಅವರು ಹಾಕಿಕೊಟ್ಟ ನಿಯಮದಲ್ಲಿ ನಿತ್ಯ 400ರಿಂದ 500ಗ್ರಾಂ ಕೋಳಿಮಾಂಸ ತಿನ್ನಬೇಕು. ಇದಕ್ಕೆ ಉಪ್ಪು ಖಾರ ಏನೂ ಸೇರಿಸಿಕೊಳ್ಳುವಂತಿಲ್ಲ. 15 ಮೊಟ್ಟೆ ಸೇವಿಸಬೇಕು. ದಿನಕ್ಕೆ ಮೂರೇಮೂರು ಚಪಾತಿ. ಹಣ್ಣು ಚೆನ್ನಾಗಿ ತಿನ್ನಬೇಕು. 5–6 ಲೀಟರ್‌ ನೀರು ಕುಡಿಯಲೇಬೇಕು. ಕಳೆದ ಒಂದು ವರ್ಷದಿಂದ ಫಿಟ್‌ನೆಸ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ಹೀಗಾಗಿ ಈ ಆಹಾರ ಕ್ರಮ ಅಭ್ಯಾಸವಾಗಿದೆ.

ಅಂದಹಾಗೆ ‘ಬತಾಸ್‌’ ಚಿತ್ರವನ್ನೂ ಒಪ್ಪಿಕೊಂಡಿದ್ದೇನೆ. ಈಗಷ್ಟೇ ಸಿನಿಮಾ ದಾರಿಯಲ್ಲಿ ಹೆಜ್ಜೆ ಇಡುತ್ತಿರುವುದರಿಂದ ಇಂಥದ್ದೇ ಪಾತ್ರ ಎನ್ನುವ ನಿಯಮವಿಲ್ಲ. ಅಭಿನಯ ವೈವಿಧ್ಯಕ್ಕೆ ಅವಕಾಶ ಇರುವ ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಆಸೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.