ADVERTISEMENT

ದೃಷ್ಟಿದೋಷಕ್ಕೆ ತಂತ್ರಜ್ಞಾನದ ಹೊಸ ಕೈಗೋಲು

ಅಭಿಲಾಷ ಬಿ.ಸಿ.
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST
ಪ್ರಶಸ್ತಿಗಳೊಂದಿಗೆ ಭವಾನಿಶಂಕರ್ ರವೀಂದ್ರ (ಚಿತ್ರ: ಎಂ.ಎಸ್. ಮಂಜುನಾಥ)
ಪ್ರಶಸ್ತಿಗಳೊಂದಿಗೆ ಭವಾನಿಶಂಕರ್ ರವೀಂದ್ರ (ಚಿತ್ರ: ಎಂ.ಎಸ್. ಮಂಜುನಾಥ)   

‘ಇಚ್ಛಾಶಕ್ತಿಯೊಂದು ಇದ್ದರೆ ಸಾಧನೆಗೆ ಅಂಗವಿಕಲತೆ ಅಡ್ಡಿಯಾಗಲಾರದು’ ಎಂಬ ಮಾತಿಗೆ ಭವಾನಿಶಂಕರ್‌ ರವೀಂದ್ರ ಸಾಕ್ಷಿಯಂತೆ ಇದ್ದಾರೆ. ತಮ್ಮ ಸಾಧನೆಯಿಂದ ರಾಷ್ಟ್ರದ ಕೀರ್ತಿ ಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ಮುನೇಶ್ವರ ಬ್ಲಾಕ್‌ನಲ್ಲಿ ವಾಸವಿರುವ ಭವಾನಿಶಂಕರ್ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಐಟಿ ಉದ್ಯಮದಲ್ಲಿ ಇವರದು ಎಂಟು ವರ್ಷಗಳ ಅನುಭವ.

‘ಒಪನ್ ಸೋರ್ಸ್’ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಅವರು, ದೃಷ್ಟಿ ದೋಷವಿರುವವರು ಶಬ್ದವನ್ನು ಗ್ರಹಿಸಿ ನಡೆಯಲು ಸಹಕಾರಿಯಾಗುವಂತಹ ‘ಇಂಡಿಕ್‌ ಐವಿಆರ್‌ಎಸ್’ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದಾರೆ. ಸಂಶೋಧನೆಗಾಗಿ ಹಲವು ದೇಶಗಳಲ್ಲಿ ಸಂಚರಿಸಿದ್ದಾರೆ. ಜನ್ಮಜಾತ ಮಿದುಳಿನ ಸಮಸ್ಯೆಯಿಂದ (ಸೆರಬ್ರಲ್ ಡಿಸೆಬೆಲಿಟಿ) ಅವರ ದೇಹದ ಎಡಪಾರ್ಶ್ವ ಕೆಲಸ ಮಾಡುತ್ತಿಲ್ಲ. ತುಂಬು ಜೀವನೋತ್ಸಾಹ ಮೈಗೂಡಿಸಿಕೊಂಡು ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರ ಸಾಧನೆಗೆ 2013ರಲ್ಲಿ ‘ಹೆಲೆನ್ ಕೆಲರ್’ ಪ್ರಶಸ್ತಿ ದೊರೆತಿದೆ. ಬ್ಯಾಂಕಾಕ್‌ನಲ್ಲಿ ನಡೆದ ‘ಗ್ಲೋಬಲ್ ಐಟಿ ಚಾಲೆಂಜೆಸ್‌ ಫಾರ್ ಡಿಸೆಬಿಲಿಟಿ ಪೀಪಲ್’ ಸ್ಪರ್ಧೆಯಲ್ಲಿ ಭಾಗವಹಿಸಿ ವಿಶ್ವಸಂಸ್ಥೆಯಿಂದ ಬೆಳ್ಳಿ ಪದಕ ಪಡೆದಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೊಡುಗೆಗಾಗಿ ರಾಜ್ಯ ಸರ್ಕಾರವು ‘ಆರ್ಯಭಟ’ ಪ್ರಶಸ್ತಿ ನೀಡಿ ಗೌರವಿಸಿದೆ. 2017ರಲ್ಲಿ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ADVERTISEMENT

ಬಾಲ್ಯದಲ್ಲಿ ಶೇ75 ರಷ್ಟು ಅಂಗವಿಕಲತೆ ಇವರಿಗಿತ್ತು. 20 ವರ್ಷಗಳ ಪಿಜಿಯೊಥೆರಪಿ ಫಲವಾಗಿ ಇಂದು ವೀಲ್‌ಚೇರ್‌ ಇಲ್ಲದೆಯೇ ಓಡಾಡುವ ಸ್ಥಿತಿ ತಲುಪಿದ್ದಾರೆ. ದೇಶದಲ್ಲಿ ಈ ಕಾಯಿಲೆ ಇದ್ದೂ ಎಲೆಕ್ಟ್ರಿಕಲ್ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುವ ಕೆಲವೇ ಎಂಜಿನಿಯರ್‌ಗಳಲ್ಲಿ ಇವರೂ ಒಬ್ಬರು. ಇನ್‌ಫೋಸಿಸ್, ಎಚ್‌.ಪಿ., ಮೊದಲಾದ ಪ್ರತಿಷ್ಠಿತ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದು.‌

‘ಚಿಕ್ಕವನಿದ್ದಾಗ ದೇಹದ ಯಾವ ಭಾಗವೂ ಕಾರ್ಯನಿರ್ವಹಿಸುತ್ತಿರಲಿಲ್ಲ. ಕಾಲೇಜಿನವರೆಗೂ ವೀಲ್‌ಚೇರ್‌ ಅಥವಾ ಬೇರೆಯವರ ಸಹಕಾರದಿಂದಲೇ ನಡೆದುಹೋಗುತ್ತಿದ್ದೆ. ಫಿಜಿಯೋಥೆರಪಿ ಹಾಗೂ ಇಚ್ಛಾಶಕ್ತಿಯಿಂದಾಗಿ ಇಂದು ಸಮತಟ್ಟಾದ ಪ್ರದೇಶದಲ್ಲಿ ಸ್ವತಂತ್ರವಾಗಿ ನಡೆಯುತ್ತೇನೆ. ಬಾಲ್ಯದಲ್ಲಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಈಗ ನಾನು ಮಾತನಾಡಬಲ್ಲೆ’ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಭವಾನಿ ಶಂಕರ್‌.

‘ಈ ಕಾಯಿಲಿಗೆ ಸಂಪೂರ್ಣವಾಗಿ ಗುಣವಾಗುವಂತಹ ಯಾವುದೇ ಔಷಧಗಳಿಲ್ಲ. ಆದರೆ, ನಿತ್ಯ ಫಿಜಿಯೋಥೆರಪಿ ಅಥವಾ ವ್ಯಾಯಾಮಗಳನ್ನು ಮಾಡುವ ಮೂಲಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದು. ನಾನು ಕೆಲಸ ಮಾಡುತ್ತಿರುವ ‘ಫ್ರೀ ಸಾಫ್ಟ್‌ವೇರ್ ಫೌಂಡೇಷನ್‌’ ನನಗೆ ಹೆಚ್ಚು ಸಹಕಾರ ನೀಡುತ್ತಿದೆ. ಕಂಪೆನಿಯ ನೈತಿಕ ಬೆಂಬಲವೇ ಸಾಧನೆಗೆ ಸ್ಪೂರ್ತಿ. ಒತ್ತಡ ಹೇರದೆ ಕಾರ್ಯನಿರ್ವಹಿಸಲು ಸಹಕರಿಸುತ್ತಾರೆ’ ಎಂದು ತಮ್ಮನ್ನು ಬೆಂಬಲಿಸುವ ಕಂಪೆನಿಯನ್ನು ನೆನೆಯುತ್ತಾರೆ.

‘ವಿಶ್ವದ ವಿವಿಧ ದೇಶಗಳಲ್ಲಿ ಸುತ್ತಿದ್ದೇನೆ. ನಮ್ಮ ದೇಶದಲ್ಲಿ ಇನ್ನೂ ಅಂಗವಿಕಲ ಸ್ನೇಹಿ ವಾತವರಣವಿಲ್ಲ ಎಂದೆನಿಸುತ್ತದೆ. ನನಗೆ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗುವುದಿಲ್ಲ. ಆದರೆ ನಮ್ಮ ದೇಶದ ಅನೇಕ ಬ್ಯಾಂಕುಗಳಲ್ಲಿ ಇದಕ್ಕೆ ಪರ್ಯಾಯ ಮಾರ್ಗಗಳಿಲ್ಲ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೇನೆ. ಇತರ ದೇಶಗಳಂತೆ ಅಂಗವಿಕಲ ಸ್ನೇಹಿ ವಾತಾವರಣ ಸೃಷ್ಟಿಯಾಗಬೇಕು’ ಎಂದು ಆಶಿಸುತ್ತಾರೆ.

ಫೇಸ್‌ಬುಕ್‌ ಕೊಂಡಿ: https://www.facebook.com/bshankar

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.