ADVERTISEMENT

ದೈಹಿಕ ಅಸಮರ್ಥರಿಗೆ ಬಾಳ ಬೆಳಕು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST
ದೈಹಿಕ ಅಸಮರ್ಥರಿಗೆ ಬಾಳ ಬೆಳಕು
ದೈಹಿಕ ಅಸಮರ್ಥರಿಗೆ ಬಾಳ ಬೆಳಕು   

ದೈಹಿಕವಾಗಿ ಅಸಮರ್ಥನಾಗಿರುವ ಮಗ ಭವಿಷ್ಯದಲ್ಲಿ ನಮ್ಮ ಬಾಳಿಗೆ ಬೆಳಕಾಗದಿದ್ದರೂ, ಆತನ ಜೀವನ ಚೆನ್ನಾಗಿ ಇರಲೆಂದು ಹಾರೈಸುತ್ತಿದ್ದ ತಾಯಿಗೆ ಅಂದು ಮರಳುಗಾಡಿನಲ್ಲಿ ಓಯಸಿಸ್ ಕಂಡಷ್ಟು ಸಂತೋಷವಾಗಿತ್ತು.

ಆತ ಅಂಗವಿಕಲತೆಯನ್ನು ಮೆಟ್ಟಿ `ಕೇಕ್ ಪಾರ್ಲರ್~ನಲ್ಲಿ ಕೆಲಸ ಮಾಡಿ ಮೂರು ಸಾವಿರ ರೂಪಾಯಿ ಸಂಬಳ ಪಡೆದಿದ್ದ. ಆ ಮೊದಲ ಸಂಬಳದಿಂದ ತಾನೊಂದು ಶರ್ಟ್ ಕೊಳ್ಳಬೇಕೆಂದು ಹೇಳಿದಾಗ ಆತನ ತಾಯಿಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ.

ಆಶಾ ಸೆಂಟರ್‌ನ ಪ್ರಾಂಶುಪಾಲರಾದ ಮೀರಾ ರವಿಚಂದರ್ ಈ ಕಥಾನಕವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮಾನಸಿಕ ಹಾಗೂ ದೈಹಿಕ ಅಸಮರ್ಥ ಮಕ್ಕಳಿಗಾಗಿ ಎಂ.ಜಿ.ರಸ್ತೆಯ ರಾಜೇಂದ್ರ ಸಿಂಗ್‌ಜೀ ಇನ್‌ಸ್ಟಿಟ್ಯೂಟ್‌ನ (ಆರ್‌ಎಸ್‌ಐ) ಆವರಣದಲ್ಲಿ ಮಾರ್ಚ್ 4ರಂದು ಜಸ್ಟ್ ಬೇಕ್ ಬೇಕರಿ ಆರಂಭಿಸಲಾಗಿತ್ತು. ಇಲ್ಲಿ ಆಶಾ ಸೆಂಟರ್‌ನ ಎಂಟು ಮಕ್ಕಳು ಕೆಲಸ ಮಾಡಿ ಸೈ ಎನಿಸಿಕೊಂಡರು.
 
ಗ್ರಾಹಕರಿಗೆ ಕೇಕ್ ಸರ್ವ್ ಮಾಡುವುದು, ಪಾರ್ಸಲ್ ಮಾಡುವುದು ಹಾಗೂ ಐಸ್‌ಕ್ರೀಂ ಮಿಕ್ಸ್ ಮಾಡಿ ಕೊಡುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಏಪ್ರಿಲ್ 19ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕರ್ನಾಟಕ ಮತ್ತು ಕೇರಳ ಉಪವಲಯದ ಮೇಜರ್ ಜನರಲ್ ಕೆ.ಎಸ್.ವೇಣುಗೋಪಾಲ್ ಒಂದು ತಿಂಗಳ ವಂತಿಕೆ ವಿತರಿಸಿದರು.

ನಂದಿತಾ ರಾವ್, ಸ್ಮಿತಾ ರಾವ್, ಅನಿರುದ್ಧ ಭಂಡಾರ‌್ಕರ್, ಪ್ರದೀಪ್ ಕುಮಾರ್, ಎಂ. ಶರತ್, ಮಣಿಕಂಠನ್, ಪಲ್ಲವ್ ಪೈನ್ಯುಲಿ ಹಾಗೂ ಸಿಕಂದರ್ ಸಿಂಗ್ ಈಗಾಗಲೇ ಒಂದು ತಿಂಗಳ ಸಂಬಳ ಸಂಪಾದಿಸಿ, ಇತರರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬುದನ್ನು ಸಾಬೀತುಮಾಡಿದ್ದಾರೆ.

ಆಶಾ ಸೆಂಟರ್ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗಾಗಿ ನಡೆಸುತ್ತಿರುವ ಪಾಠಶಾಲೆ. 45 ಮಕ್ಕಳಿರುವ ಈ ಕೇಂದ್ರದಲ್ಲಿ ಮಕ್ಕಳಿಗೆ ಕಂಪ್ಯೂಟರ್, ಯೋಗ, ಸ್ಪೀಚ್ ಥೆರಪಿ, ಮ್ಯೂಸಿಕ್ ಥೆರಪಿ ಕುರಿತು ಹೇಳಿಕೊಡಲಾಗುತ್ತದೆ.

ಮಾನಸಿಕ ಹಾಗೂ ದೈಹಿಕವಾಗಿ ಅಸಮರ್ಥರಾಗಿರುವ ಎಂಟು ಮಕ್ಕಳು `ಜಸ್ಟ್ ಬೇಕ್~ ಬೇಕರಿಯಲ್ಲಿ ಕೆಲಸ ಮಾಡಿ ತಮ್ಮ ಮೊದಲ ಸಂಬಳವನ್ನು ತೆಗೆದುಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಲು ದಾರಿಯಾಗಿದೆ ಎಂದು ಹೇಳುತ್ತಾರೆ ಪ್ರಾಂಶುಪಾಲರಾದ ಮೀರಾ ರವಿಚಂದರ್.

ಹದಿನೆಂಟರಿಂದ ಮೂವತ್ತೆರಡು ವರ್ಷ ವಯಸ್ಸಿನವರು ಅನೇಕ ಕೆಲಸಗಳನ್ನು ಮಡುವ ಸಾಮರ್ಥ್ಯ ಹೊಂದಿದ್ದು, ಜಸ್ಟ್‌ಬೇಕ್‌ನಲ್ಲಿ ಅಲ್ಲದೇ ಕಾಫಿ ಶಾಪ್‌ನಲ್ಲಿ ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ 9.30ರಿಂದ 1.30, ಮಧ್ಯಾಹ್ನ 1.30ರಿಂದ ಸಂಜೆ 4 ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ನಾಲ್ಕು ತಂಡಗಳಾಗಿ ಒಬ್ಬರು ನಾಲ್ಕು ಗಂಟೆ ಕೆಲಸ ಮಾಡುತ್ತಾರೆ.

ರಜೆ ದಿನಗಳಲ್ಲಿ ಈ ಮಕ್ಕಳಿಗೆ ಹಣಕಾಸು ವ್ಯವಹಾರದ ಬಗ್ಗೆ ಹಾಗೂ ಉದ್ಯೋಗ ಕೌಶಲಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಆ ಮೂಲಕ ಅವರಲ್ಲಿರುವ ಖಿನ್ನತೆಯನ್ನು ತೊಲಗಿಸಿ ತಾವೂ ಬೇರೆಯವರಂತೆ ಬದುಕಲು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.

ಆರ್‌ಎಸ್‌ಐ ಸಹಯೋಗದೊಂದಿಗೆ ಜಸ್ಟ್‌ಬೇಕ್ ಬೇಕರಿ ಆರಂಭಿಸುವ ಸಲಹೆಯನ್ನು ನೀಡಿದವರು ಜಸ್ಟ್‌ಬೇಕ್‌ನ ಅಧ್ಯಕ್ಷ ರಾಮರೆಡ್ಡಿ. ಅದರಂತೆ ಜಸ್ಟ್‌ಬೇಕ್ ಪಾರ್ಲರ್ ಆರಂಭಿಸುವ ಮೂಲಕ ಅಂಗವಿಕಲ ಮಕ್ಕಳ ಪಾಲಿಗೆ ಬೆಳಕಾಗಿದ್ದಾರೆ. ಈ ಬೇಕರಿಯಿಂದ ಬರುವ ಆದಾಯದಲ್ಲಿ ಶೇ 50ರಷ್ಟು ಹಣವನ್ನು ಆಶಾ ಸೆಂಟರ್‌ಗೆ ದೇಣಿಗೆ ನೀಡುವುದಾಗಿ ರೆಡ್ಡಿ ಅವರು ಹೇಳಿದ್ದಾರೆ.

ಬೇಕರಿಗೆ ಬರುವ ಗ್ರಾಹಕರಿಗೆ ಅವರಿಗಿಷ್ಟದ ತಿನಿಸುಗಳನ್ನು ಸರ್ವ್ ಮಾಡುವ ಈ ದೈಹಿಕ ಸಮಸ್ಯೆಗೊಳಗಾದ ಮಕ್ಕಳ ನಗುಮುಖದಲ್ಲಿ ಆತ್ಮವಿಶ್ವಾಸದ ಅಲೆ ಸುಳಿದು ಹೋಗುತ್ತಿತ್ತು.

ಚಿತ್ರಗಳು: ಬಿ.ಎಚ್.ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.