ADVERTISEMENT

ಧ್ಯಾನದ ಮೂಲಕ ಒತ್ತಡ ನಿಯಂತ್ರಿಸಿ

ಗೋಪಾಲಕೃಷ್ಣ ದೇಲಂಪಾಡಿ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST
ವಜ್ರಾಸನ
ವಜ್ರಾಸನ   

ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಕಾರ್ಯಗಳಲ್ಲಿ ಪದೇಪದೇ ಒತ್ತಡಕ್ಕೆ ಒಳಗಾಗುವವರು ಸರಳ ಧ್ಯಾನದ ಮೂಲಕ ಒತ್ತಡವನ್ನು ನಿಯಂತ್ರಿಸಬಹುದು. ಆಧುನಿಕ ಜೀವನ ಶೈಲಿಯ ವಿಧಾನದಲ್ಲಿ ನಿದ್ರೆ, ಆಹಾರ, ವಿಹಾರ ವಿಚಾರಗಳಲ್ಲಿ ಕೆಲವೊಮ್ಮೆ ವ್ಯತ್ಯಾಸವಾಗುತ್ತದೆ. ಮನಸಿನ ಆಳ ವಿಶ್ರಾಂತಿಗಾಗಿ ಮತ್ತು ಶಾಂತ ಸ್ಥಿತಿಗಾಗಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಸರಳ ಧ್ಯಾನ ಬಹಳಷ್ಟು ಸಹಕಾರಿಯಾಗುತ್ತದೆ.

ಪತಂಜಲಿ ಋಷಿ ಮುನಿ ತಿಳಿಸಿದ ಅಷ್ಟಾಂಗ ಯೋಗದ ಏಳನೇ ಮಾರ್ಗವೇ ಧ್ಯಾನ.

ಸರಳ ಧ್ಯಾನ ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ವಜ್ರಾಸನ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿಸಿ. ಕೈಗಳು ಚಿನ್ಮುದ್ರೆ ಭಂಗಿಯಲ್ಲಿರಬೇಕು. ಮುಖದಲ್ಲಿ ಪ್ರಸನ್ನತೆ, ಸೌಮ್ಯ ಭಾವವಿರಬೇಕು. ಸಾಮಾನ್ಯ ಉಸಿರಾಟದಲ್ಲೇ ನೆಲೆಸಬೇಕು. ಆಮೇಲೆ ಮನಸ್ಸಿನಿಂದ ಸಾಮಾನ್ಯ ಉಸಿರಾಟವನ್ನು ಗಮನಿಸುತ್ತಾ ಲೆಕ್ಕ ಹಾಕಬೇಕು. (ಸಾಮಾನ್ಯ ಉಸಿರು ಮೇಲೆ, ಕೆಳಗೆ ಹೋಗುವುದು ಒಂದು. ಅಂದರೆ ಪೂರಕ, ರೇಚಕ ಒಂದು) ಈ ರೀತಿ ಸುಮಾರು ಆರಂಭದಲ್ಲಿ 25 ರಿಂದ 50ರ ತನಕ ಉಸಿರನ್ನು ಲೆಕ್ಕ ಹಾಕುತ್ತಾ ಇರಿ. ಅನಂತರ ವಿಶ್ರಮಿಸಿ.

ADVERTISEMENT

ಆರಂಭದಲ್ಲಿ ಚಿಕ್ಕ ಧ್ಯಾನ ಸಾಕು. ಅಭ್ಯಾಸ ಆದ ನಂತರ ಅವಧಿಯನ್ನು ಹೆಚ್ಚಿಸಬಹುದಾಗಿದೆ.

ಉಪಯೋಗಗಳು: ಬಲು ಬೇಗನೆ ಮನಸ್ಸಿಗೆ ನೆಮ್ಮದಿ, ಶಾಂತಿ, ಆಳ ವಿಶ್ರಾಂತಿ ದೊರಕುತ್ತದೆ. ಒತ್ತಡ ನಿಯಂತ್ರಣವಾಗುತ್ತದೆ. ಮನೋಬಲ, ಆತ್ಮಬಲ ಹೆಚ್ಚುವುದು. ಮನಸ್ಸು ಶುದ್ಧವಾಗಿ ಸಹಜ ಸ್ಥಿತಿಯಾದ ಆನಂದ ಸ್ವರೂಪವನ್ನು ಪಡೆಯಲು ಈ ರೀತಿಯ ಸರಳ ಧ್ಯಾನದಿಂದ ಸಾಧ್ಯವಾಗುತ್ತದೆ.

ಸೂಚನೆ: ವಜ್ರಾಸನದಲ್ಲಿ ಕಷ್ಟವಾಗುವವರು ಕುರ್ಚಿಯಲ್ಲಿ ಕುಳಿತು ಬೆನ್ನು ಕುತ್ತಿಗೆ ಶಿರಸ್ಸು ನೇರಮಾಡಿ ಚಿನ್ಮುದ್ರೆಯಲ್ಲಿ ಅಭ್ಯಾಸ ಮಾಡಿರಿ. ಧ್ಯಾನದ ವೇಳೆ ಮನಸ್ಸು ಪೂರ್ಣಎಚ್ಚರ ಸ್ಥಿತಿಯಲ್ಲಿರಬೇಕು. ನಿದ್ರಿಸಬಾರದು. ಬೇರೆ ಬೇರೆ ವಿಷಯಗಳ ಆಲೋಚನೆ, ಚಿಂತೆ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.