ADVERTISEMENT

ನಂಜುಂಡಿಯ ಕಾಮಿಡಿ ಕಲ್ಯಾಣ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ಶ್ರಾವ್ಯಾ
ಶ್ರಾವ್ಯಾ   

ಎಲ್ಲರೂ ದುಡ್ಡು ಹಾಕಿ ಸಿನಿಮಾ ಮಾಡುತ್ತಾರೆ. ಕಡ್ಲೆಬೀಜ ಹಾಕಿ ಚಿತ್ರ ನಿರ್ಮಿಸಲು ಸಾಧ್ಯವಿಲ್ಲ’

–ಹೀಗೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ದ್ವಂದ್ವ ನಿಲುವಿನ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದು ನಿರ್ದೇಶಕ ರಾಜೇಂದ್ರ ಕಾರಂತ್. ಯು.ಎಫ್‌.ಓ, ಕ್ಯೂಬ್‌ ಕಂಪನಿಗಳಿಂದ ತಲೆದೋರಿದ್ದ ಬಿಕ್ಕಟ್ಟಿನ ವೇಳೆ ಮಾಡಿಕೊಂಡಿದ್ದ ಒಪ್ಪಂದ ಪಾಲನೆಯಾಗಿಲ್ಲ ಎನ್ನುವುದೇ ಮಂಡಳಿ ವಿರುದ್ಧ ಅವರ ಅಸಹನೆಗೆ ಮೂಲ ಕಾರಣ.

ಅವರೇ ನಿರ್ದೇಶಿಸಿರುವ ‘ನಂಜುಂಡಿ ಕಲ್ಯಾಣ’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಚಿತ್ರವೊಂದರ ಸೋಲು, ಗೆಲುವು ಯಾರ ಮೇಲೂ ಪರಿಣಾಮ ಬೀರಲ್ಲ. ಆದರೆ, ಮಂಡಳಿ ಮಾತ್ರ ಮಾತಿಗೆ ತಪ್ಪಿದೆ. ಎಲ್ಲಾ ಸಮಸ್ಯೆ ಎದುರಿಸಿಯೂ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಿದ್ದೇವೆ’ ಎಂದರು ರಾಜೇಂದ್ರ ಕಾರಂತ್.

ADVERTISEMENT

‘ಸಿನಿಮಾ ಮೂಲಕ ಯಾವುದೇ ಸಂದೇಶ ಹೇಳಲು ಹೊರಟಿಲ್ಲ. ಪ್ರೇಕ್ಷಕರಿಗೆ ಖುಷಿ ನೀಡುವುದೇ ನಮ್ಮ ಉದ್ದೇಶ’ ಎಂದರು.

ರಂಗಭೂಮಿ ಕಲಾವಿದರೇ ಈ ಚಿತ್ರದಲ್ಲಿ ಹೆಚ್ಚಿದ್ದಾರಂತೆ. ಇದು ಹಾಸ್ಯ ಪ್ರಧಾನ ಚಿತ್ರ. ಕಾಮಿಡಿ ಹೇಳಲು ಯಾವುದೇ ಮಡಿವಂತಿಕೆ ತೋರಿಲ್ಲ. ಕನ್ನಡದ ಸಾಹಿತ್ಯ ಗೊತ್ತಿದ್ದವರಿಗೆ ಹಾಸ್ಯದ ಸತ್ವ ಅರ್ಥವಾಗಲಿದೆಯಂತೆ. ಅಮ್ಮ ತನ್ನ ಮಗನಿಗೆ ಹೆಣ್ಣು ಹುಡುಕಿ ಮದುವೆ ಮಾಡಿಸಲು ಪಡುವ ಸಾಹಸವೇ ಚಿತ್ರದ ಕಥಾಹಂದರ.

ನಾಯಕ ನಟ ತನುಷ್‌ ಪರದೆ ಮೇಲೂ ಮದುವೆಯಾಗುವ ಜೊತೆಗೆ ನಿಜಜೀವನದಲ್ಲೂ ಮದುವೆಯಾಗುವ ತಯಾರಿಯಲ್ಲಿದ್ದಾರೆ. ಈ ಖುಷಿಯಲ್ಲಿ ತೇಲುತ್ತಿರುವುದಾಗಿ ಅವರೇ ಹೇಳಿಕೊಂಡರು.

ಅವರ ಮಾತು ಕೂಡ ವಾಣಿಜ್ಯ ಮಂಡಳಿಯತ್ತಲೇ ತಿರುಗಿತು. ‘ಸಿನಿಮಾ ಮಾಡುವುದು ಎಲ್ಲರ ಕನಸು. ಅವರವರ ಕನಸಿಗೆ ತಕ್ಕಂತೆ ಬಜೆಟ್‌ ಇರುತ್ತದೆ. ಮಂಡಳಿಯು ಒಪ್ಪಂದಕ್ಕೆ ತಕ್ಕಂತೆ ನಡೆದುಕೊಂಡಿಲ್ಲ. ಇದರಿಂದ ನಾನು ನಷ್ಟ ಅನುಭವಿಸುವಂತಾಗಿದೆ’ ಎಂದು ಅಳಲು ತೋಡಿಕೊಂಡರು.

ತನುಷ್‌ಗೆ ಜ್ಯೋತಿಷ ಮತ್ತು ಸಂಖ್ಯಾ ಶಾಸ್ತ್ರದಲ್ಲಿ ನಂಬಿಕೆ ಹೆಚ್ಚಂತೆ. ಹಾಗಾಗಿಯೇ, ಏಪ್ರಿಲ್‌ 6ರಂದು ಸಿನಿಮಾ ಬಿಡುಗಡೆಗೆ ನಿರ್ಧರಿಸಿದ್ದಾರಂತೆ. ಪ್ರತಿ ದೃಶ್ಯದಲ್ಲೂ ಕಾಮಿಡಿ ಇದೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ನಗುವುದು ಗ್ಯಾರಂಟಿ ಎನ್ನುವುದು ಅವರ ನಂಬಿಕೆ. ‘ಚಿತ್ರದಲ್ಲಿ ಕಾಮಿಡಿಯ ಜೊತೆಗೆ, ಭಾವನಾತ್ಮಕ ಸನ್ನಿವೇಶಗಳೂ ಇವೆ’ ಎಂದರು.

ಶ್ರಾವ್ಯಾ ಚಿತ್ರದ ನಾಯಕಿ. ಮಂಜುನಾಥ ಹೆಗಡೆ, ಪದ್ಮಜಾ ರಾವ್‌, ಕುರಿ ಪ್ರತಾಪ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.