ADVERTISEMENT

ನನ್ನ ಸ್ಟೈಲ್ ಬೇರೇನೆ...

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 19:30 IST
Last Updated 5 ಜೂನ್ 2012, 19:30 IST
ನನ್ನ ಸ್ಟೈಲ್ ಬೇರೇನೆ...
ನನ್ನ ಸ್ಟೈಲ್ ಬೇರೇನೆ...   

ಅಲ್ಲಿ ಜನ ಚಿತ್ರ ನೋಡಿ ಸಿಳ್ಳೆ ಹಾಕುತ್ತಿದ್ದರು. ಖುಷಿಯಿಂದ ಕೂಗುತ್ತಿದ್ದರು. ಅಲ್ಲಲ್ಲಿ ಎದ್ದು ಡ್ಯಾನ್ಸ್ ಮಾಡುತ್ತಿದ್ದರು. ಇವೆಲ್ಲವನ್ನೂ ನೋಡುತ್ತಿದ್ದ ಪ್ರಭುದೇವ ಅರೆಕ್ಷಣ ಭಾವುಕರಾಗಿಬಿಟ್ಟಿದ್ದರು.

ಪ್ರಭುದೇವ ನಿರ್ದೇಶಿಸಿದ `ರೌಡಿ ರಾಥೋಡ್~ ಸಿನಿಮಾ ಕಳೆದ ವಾರವಷ್ಟೆ ಜನಮನ್ನಣೆ ಗಿಟ್ಟಿಸಿಕೊಂಡಿತು. ಆದರೆ ಖುದ್ದಾಗಿ ತಾವೇ ಜನರ ಪ್ರತಿಕ್ರಿಯೆ ಹೇಗಿದೆ ನೋಡಬೇಕೆಂದು ಮುಂಬೈನ ಎರಡು ಚಿತ್ರಮಂದಿರಗಳಿಗೆ ಪ್ರಭುದೇವ ಭೇಟಿ ನೀಡಿದ್ದರು. ಜನರ ಪ್ರತಿಕ್ರಿಯೆ ನೋಡಿ ಅವರಿಗೆ ಮಾತೇ ಹೊರಡದಂತಾಗಿತ್ತು. 

`ನನ್ನ ನಿರ್ದೇಶನದ `ರೌಡಿ ರಾಥೋಡ್~ ಸಿನಿಮಾಗೆ ಜನ ಈ ರೀತಿ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತಿದೆ. ಒಂದು ಸಿನಿಮಾ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವುದೇ ಜನ. ನಮ್ಮ ಸೋಲು ಗೆಲುವು ಅವರ ಅಭಿಪ್ರಾಯದ ಮೇಲೆ ನಿಂತಿದೆ.

ಅವರನ್ನು ಕೆಲವು ಗಂಟೆಗಳಾದರೂ ರಂಜಿಸಲು ನನ್ನಿಂದ ಸಾಧ್ಯವಾಗಿದೆ ಎಂದಾದರೆ ನನ್ನ ಶ್ರಮ ಸಾರ್ಥಕವಾಗಿದೆ ಎಂದರ್ಥ. ಅದನ್ನು ಈ ಸಿನಿಮಾದಲ್ಲಿ ಕಂಡಿದ್ದೇನೆ~ ಎಂದು ಸಂತಸದಿಂದ ತಮ್ಮ ಮಾತು ಹಂಚಿಕೊಂಡರು ಪ್ರಭುದೇವ.

ಇದು ರಿಮೇಕ್ ಚಿತ್ರ ಎಂಬುದರ ಬಗ್ಗೆ ಪ್ರಭುದೇವ ತಲೆಕೆಡಿಸಿಕೊಂಡಿಲ್ಲ. `ನನಗೆ ಈ ಸಿನಿಮಾ ಕತೆ ಇಷ್ಟವಾಯಿತು. ಅದನ್ನು ಮಾಡಬೇಕೆಂಬ ಮನಸ್ಸಾಯಿತು ಅಷ್ಟೆ~ ಎಂದರು. ಅಕ್ಷಯ್ ಕುಮಾರ್ ಅವರಿಗೆ ಈ ಚಿತ್ರ ಹೇಳಿಮಾಡಿಸಿದಂತಿದೆಯೇ ಎಂಬ ಪ್ರಶ್ನೆಗೆ, `ಹೌದು ಅದು ಸ್ವಲ್ಪ ಮಟ್ಟಿಗೆ ನಿಜ. ನಾನು ಚಿತ್ರದ ಬಗ್ಗೆ ಯೋಚಿಸುವಾಗ ನಾಯಕನಾಗಿ ಅಕ್ಷಯ್ ಕುಮಾರ್ ಅವರನ್ನೆ ಕಲ್ಪಿಸಿಕೊಮಡಿದ್ದೆ.

ಅವರು ನಿರೀಕ್ಷೆಗಿಂತ ಅತ್ಯುತ್ತಮವಾಗಿ ನಟಿಸಿದ್ದಾರೆ. ರೌಡಿ, ರ‌್ಯಾಥೋಡ್ ಎರಡಕ್ಕೂ ಒಪ್ಪುವಂತೆ  ಪಾತ್ರವನ್ನು ಸರಿದೂಗಿಸಿಕೊಂಡು ನಟಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಸಿನಿಮಾಗೊಂದು ಕಳೆ ಕಟ್ಟಿಕೊಟ್ಟಿದ್ದಾರೆ~ ಎಂದು ಹೊಗಳಿದರು.

ನೃತ್ಯದಲ್ಲಿ ಥೇಟ್ ನಿಮ್ಮದೇ ಶೈಲಿ ಇದೆ ಅಲ್ಲವೇ ಎಂದಾಗ, `ಹೌದು ಅದು ನನ್ನ ಸ್ಟೈಲ್. ಈ ಸಿನಿಮಾದ ನೃತ್ಯ ಸಂಯೋಜಕರಿಗೆ ನಾನು ಪೂರ್ಣ ಸ್ವಾತಂತ್ರ್ಯ ನೀಡಿದ್ದೆ. ಅಕ್ಷಯ್ ನನ್ನ ನಿರೀಕ್ಷೆಗೆ ತಕ್ಕಂತೆ ನೃತ್ಯ ಮಾಡಬೇಕು ಎಂದಷ್ಟೆ ಹೇಳಿದ್ದೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ~ ಎಂದರು ಪ್ರಭುದೇವ.

`ಒಂದು ಸಿನಿಮಾದ ನಾಯಕ ತನ್ನ ನಟನೆಯಿಂದ ಜನರೊಂದಿಗೆ ಭಾವನಾತ್ಮಕವಾಗಿ ನಂಟು ಬೆಳೆಸಿಕೊಳ್ಳುವುದು ತುಂಬಾ ಮುಖ್ಯ. ಅದು ಈ ಸಿನಿಮಾದಲ್ಲಿ ನಿಜಗೊಂಡಿದೆ. ನಟಿ ಸೋನಾಕ್ಷಿ ಸಿನ್ಹಾ ನಟನೆ ಬಗ್ಗೆಯೂ ಎರಡು ಮಾತಿಲ್ಲ. ನೃತ್ಯವನ್ನು ಬೇಗನೆ ಕಲಿತುಕೊಂಡರು. ಅತಿ ಬುದ್ಧಿವಂತ ನಟಿ ಈಕೆ~ ಎಂದು ಸೋನಾಕ್ಷಿ ಸಿನ್ಹಾಳನ್ನೂ ಹೊಗಳಿದರು.

ನಿಮ್ಮ ನಿರ್ದೇಶನದ ಸಿನಿಮಾದಲ್ಲಿ ನೀವೇ ನಾಯಕನಾಗಿ ನಟಿಸುವ  ಸಂದರ್ಭ ಮುಂದೆ ಬರುವುದೇ ಎಂಬ ಪ್ರಶ್ನೆಗೆ `ಒಂದು ಕಾಲದಲ್ಲಿ ಒಂದೇ ಕೆಲಸ ಮಾಡಲು ಇಚ್ಛಿಸುತ್ತೇನೆ. ಈಗ ಸದ್ಯ ನನ್ನ ಆಸಕ್ತಿ ನಿರ್ದೇಶನ. ಬೇರೆ ಯೋಜನೆಗಳಿಲ್ಲ. ಸಂದರ್ಭ ಹೇಗೆ ಬರುತ್ತೋ ಹಾಗೆ ಸ್ವೀಕರಿಸುತ್ತೇನೆ~ ಎಂದು ಮುಗುಳುನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.