ADVERTISEMENT

‘ನಮ್ಮ ಅನ್ನ ನಾವೇ ದುಡ್ಕೊಬೇಕು’

ಕಲಾವತಿ ಬೈಚಬಾಳ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST
ವೇಣುಗೋಪಾಲ್‌
ವೇಣುಗೋಪಾಲ್‌   

ನನ್ನ ಹೆಸರು ವೇಣುಗೋಪಾಲ. ನನಗೀಗ 52 ವರ್ಷ. ಇಂದಿರಾ ನಗರದ ನಿವಾಸಿ. ಚಿಕ್ಕ ವಯಸ್ಸಿನಿಂದಲೂ ಸ್ಕೂಲ್-ಕಾಲೇಜು, ಲಗೇಜ್ ಬ್ಯಾಗ್‍ಗಳ ರಿಪೇರಿ ಕೆಲಸ ಮಾಡಕೊಂಡೆ ಬೆಳೆದಿದ್ದೀನಿ.

ಚಿಕ್ಕಂದಿನಲ್ಲೇ ಅಪ್ಪ-ಅಮ್ಮ ತೀರಿ ಹೋದ್ರು, ನನ್ನ ಮತ್ತು ತಮ್ಮನ್ನ ಅಜ್ಜಿನೇ ತಾಯಿಯಾಗಿ ಸಾಕಿ ಬೆಳಸಿದರು. ನಮ್ಮ ತಾತನೂ ಸೇನೆಯಲ್ಲಿ ಪಾರ್ಟ್‍ಟೈಂ ಕೆಲಸ ಮಾಡ್ತಿದ್ದರು. ಅದನ್ನ ಮುಗಿಸಿಕೊಂಡು ಬಂದ ಮೇಲೆ ಮನೇಲಿ ಈ ಕೆಲಸ ಮಾಡ್ತಿದ್ರೂ, ನಮಗೂ ಹೇಳಿಕೊಡ್ತಾ ಇದ್ರು. ಅವರಿಂದಲೇ ಈ ಕೆಲಸ ಅಚ್ಚುಕಟ್ಟಾಗಿ ಕಲಿತೆ. ಇವತ್ತು ಇದೇ ನನ್ನ ಸಂಸಾರಕ್ಕೆ, ತುತ್ತು ಅನ್ನ ತಿನ್ನೋಕೆ ನೆರವಾಗಿ ನಿಂತಿರೋದು.

ಎಸ್‍ಎಸ್‍ಎಲ್‍ಸಿವರೆಗೂ ಓದಿದ್ದೀನಿ. ಚಿಕ್ಕಂದಿನಿಂದಲೂ ನನಗೆ ಸೇನೆ ಸೇರಬೇಕು, ದೇಶ ಸೇವೆ ಮಾಡಬೇಕು ಅಂತಾ ತುಂಬಾ ಆಸೆ ಇತ್ತು. ಹಾಗಾಗಿ ಸೇನೆ ಸೇರೊಕೆ ಸಾಕಷ್ಟು ಕಸರತ್ತುಗಳನ್ನು ಮಾಡಿದೆ. ಕೊನೆಗೆ ಆಯ್ಕೆನೂ ಆದೆ. 17 ವರ್ಷ ಸೇವೆ ಸಲ್ಲಿಸುವೆ ಅಂತಾನೂ ಬರ್ಕೊಟ್ಟಿದ್ದೆ. ಆದ್ರೆ ತಾತ-ಅಜ್ಜಿ ನನ್ನನ್ನ ಕಳಿಸೋಕೆ ಒಪ್ಪಲಿಲ್ಲ. ನಾವಿರೋವಾಗ ನೀನು ಅಷ್ಟು ದೂರ ಹೋಗೊದು ಬೇಡ ಅನ್ನೋದು ಅವರ ವಾದವಾಗಿತ್ತು. ಸಾಕಿ ಬೆಳಸಿದವರ ಮಾತು ಮೀರೊಕಾಗಲಿಲ್ಲ.

ADVERTISEMENT

ಚಿಕ್ಕಂದಿನಿಂದ ಕಲಿತುಕೊಂಡು ಬಂದ ಬ್ಯಾಗ್ ರಿಪೇರಿ ಕೆಲಸಕ್ಕೆ ಮತ್ತೆ ಮುಂದಾದೆ.

ಅಜ್ಜಿನೆ ಹಲಸೂರಿನಲ್ಲಿ ಅಂಗಡಿ ಹಾಕಿಕೊಟ್ಟರು. ತಿಂಗಳಿಗೆ ₹5000 ಬಾಡಿಗೆ ಕಟ್ತೀನಿ. ಕಷ್ಟಪಟ್ಟು ದುಡಿದೆ. ಸದ್ಯ ನನಗೆ 45 ವರ್ಷಗಳ ನಂಟು ಈ ಕೆಲಸದೊಂದಿಗಿದೆ. 1992ರಲ್ಲಿ ನನ್ನ ಮದುವೆ ಆಯ್ತು. ಹೆಂಡ್ತಿ ಟಿಸಿಎಚ್ ಓದಿದ್ದಾರೆ. ದೊಡ್ಡ ಮಗ ಹುಟ್ಟು ಅಂಗವಿಕಲ. ಅವನನ್ನು ನೋಡಕೊಳ್ಳೊಕೆ ಅಂತಾ ನನ್ನ ಹೆಂಡ್ತಿ ಮನೆಲೇ ಇರ್ತಾರೆ. ಇನ್ನೊಬ್ಬ ಮಗ ಮೈಕ್ರೊಲ್ಯಾಂಡ್‍ನಲ್ಲಿ ಸಾಫ್ಟವೇರ್ ಆಗಿ ಕೆಲಸ ಮಾಡ್ತಿದ್ದಾನೆ. ಇನ್ನೂ ಮದುವೆ ಮಾಡಿಲ್ಲ. ಎರಡು ವರ್ಷಗಳ ಹಿಂದೆ ಅಜ್ಜ- ಅಜ್ಜಿನೂ ತೀರಿಹೋದ್ರು.

ನನ್ನ ತಮ್ಮನೂ ಡಿಪ್ಲೋಮೊ ಇನ್ ಪಾಲಿಟೆಕ್ನಿಕ್ ಓದಿದ್ದಾನೆ. ನಮ್ಮ ಮಾವ ಅವನಿಗೆ ಅಂಗಡಿ ಹಾಕಿ ಕೊಟ್ಟರು. ಸದ್ಯ ಅವನೂ ಹಲಸೂರಿನ ಜೋಗಪಾಳ್ಯದಲ್ಲಿ ಇಂತಹದ್ದೇ ಅಂಗಡಿ ಇಟ್ಟುಕೊಂಡಿದ್ದಾನೆ. ಬೇರೆ ಮನೆನೂ ಮಾಡ್ಕೊಂಡಿದ್ದಾನೆ. ಅವನ ಸಂಸಾರಕ್ಕೂ ಇದೇ ಆಧಾರ.

ಗ್ರಾಹಕರು ಬಂದಷ್ಟೇ ನಮ್ಮ ದುಡಿಮೆ. ಮೇಜೆಸ್ಟಿಕ್, ಶಿವಾಜಿ ನಗರದಿಂದ ಅಗತ್ಯ ಸಾಮಗ್ರಿ, ಕಚ್ಚಾವಸ್ತುಗಳನ್ನು ತರ್ತೇನೆ. ಒಂದಿನಕ್ಕೆ ಇಂತಿಷ್ಟೇ ದುಡಿತೀವಿ ಅಂತಾ ಹೇಳೊಕ್ಕಾಗಲ್ಲ. ಕನಿಷ್ಟ 500 ರೂಪಾಯಿಯಂತೂ ಸಂಪಾದನೆ ಆಗತ್ತೆ.

ನಾನ್ ಯಾವತ್ತೂ ಕಷ್ಟ ಅಂತ ಕೂತವನಲ್ಲ. ಇಷ್ಟ ಪಟ್ಟೆ ಈ ಕೆಲಸ ಮಾಡ್ತಿದ್ದೀನಿ. ಹಿರಿ ಮಗನೂ ಎಲ್ಲರಂತೆ ಚೆನ್ನಾಗಿ ಓಡಾಡ್ ಕೊಂಡಿದಿದ್ದಿದ್ರೆ ಚೆನ್ನಾಗಿರ್ತಾ ಇತ್ತು. ಮಗ ಆಟ ಆಡೋವಾಗ ಜಿನುಗೊ ಕಣ್ಣೀರಿಗೂ ಅವನ ಸ್ಥಿತಿ ನೋಡೊಕಾಗ್ತಿರ್ಲಿಲ್ಲ, ಅಂಗವಿಕಲ ಅನ್ನೋದೆ ಬೆಟ್ಟದಂತಹ ಚಿಂತೆ ನಮಗೆ.

ಎಲ್ಲರಿಗೂ ಅವರವರದ್ದೇ ಆದ ಚಿಂತೆ ಇದ್ದಿದ್ದೇ. ಅದನ್ನೆಲ್ಲ ಹೇಳ್ಕೊಳ್ಳೊಕ್ಕಾಗಲ್ಲ. ಹಾಗಂತ ತಲೆ ಮೇಲೆ ಕೈಹೊತ್ತು ಕೂರೊದಲ್ಲ. ‘ನಮ್ಮ ಅನ್ನ ನಾವೇ ದುಡ್ಕೊಬೇಕು’. ಯಾರೂ ಕಷ್ಟಕ್ಕಾಗಲ್ಲ. ಕಷ್ಟ ಪಟ್ಟು ದುಡಿದ್ರೆ, ಹೇ ಅವನು ಭಾರೀ ಹಾರ್ಡ್‍ವರ್ಕರ್, ತುಂಬಾ ಕಷ್ಟ ಪಡ್ತಾನೆ ಅಂತಾರೆ ವಿನಃ, ಯಾರೂ ಸಹಾಯಕ್ಕೆ ನಿಲ್ಲಲ್ಲ. ಕಷ್ಟದ ಬೆಂಕಿಲಿ ಬೇಯೊರು ನಾವೇ ಆಗಿರ್ತೀವಿ. ಯಾರ ಮೇಲೂ ಅವಲಂಬಿತರಾಗದೆ ಸ್ವಾಭಿಮಾನದಿಂದ ದುಡೀಬೇಕು ಅನ್ನೊದು ನನಗೆ ನನ್ನ ಬದುಕು ಹೇಳಿ ಕೊಟ್ಟ ಅನುಭವದ ಪಾಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.