ADVERTISEMENT

ನಮ್ಮ ಪ್ರವಾಸಿಗರು ಕಾಣದ ಹಂಪಿ

ಸ್ವಪ್ನನಗರಿ

ಎಸ್.ಆರ್.ರಾಮಕೃಷ್ಣ
Published 24 ಫೆಬ್ರುವರಿ 2013, 19:59 IST
Last Updated 24 ಫೆಬ್ರುವರಿ 2013, 19:59 IST
ವಿರೂಪಾಕ್ಷ ಗಡ್ಡಿಗೆ ಹೋಗುವ ದೋಣಿ ಕಂಡಿ
ವಿರೂಪಾಕ್ಷ ಗಡ್ಡಿಗೆ ಹೋಗುವ ದೋಣಿ ಕಂಡಿ   

ಭಾರತದಲ್ಲಿ ಪ್ರವಾಸ ಅಂದರೆ ತೀರ್ಥಯಾತ್ರೆ ಎಂದು ಮೊನ್ನೆ ಮೊನ್ನೆಯ ವರೆಗೂ ಹೇಳುತ್ತಿದ್ದರು. ಹಾಲಿಡೇ ಎಂದು ಕಾರ್ ಡ್ರೈವ್ ಮಾಡಿಕೊಂಡು ಊರೂರು ಸುತ್ತುವುದು, ಬೀಚ್ ರೆಸಾರ್ಟ್‌ಗೆ ಹೋಗಿ ಕಾಲ ಕಳೆಯುವುದು ಪಾಶ್ಚಾತ್ಯರು ಬಿಟ್ಟರೆ ಭಾರತೀಯರಲ್ಲಿ ಅತಿ ಶ್ರೀಮಂತರು ಮಾತ್ರ ಕಲ್ಪಿಸಿಕೊಳ್ಳುತ್ತಿದ್ದ  ಪ್ರವಾಸ ವಿಧಾನವಾಗಿತ್ತು.

ಇಂದು ಪ್ರವಾಸೋದ್ಯಮ ಬದಲಾಗುತ್ತಿದೆ. ರೆಸಾರ್ಟ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ, ಅಜ್ಜಿ ಮನೆಗೆ ಹೋಗಿ ಬೇಸಿಗೆ ರಜ ಕಳೆಯುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.

ಒಂದೋ ಎರಡೋ ದಿನದ ಟ್ರಿಪ್ ಅಂದರೆ ಬೆಂಗಳೂರಿನ ನಾವು ಕಡ್ಡಾಯವಾಗಿ ಮೈಸೂರಿನ ಸುತ್ತ ಇರುವ ದೇವಸ್ಥಾನಗಳನ್ನು ನೋಡಿಬರುತ್ತೇವೆ. ಬೇಲೂರು, ಹಳೇಬೀಡು, ಸೋಮನಾಥಪುರ, ತಲಕಾಡು, ಜೊತೆಗೆ ಶಿವನಸಮುದ್ರ ಮತ್ತು ಬೃಂದಾವನ್ ಗಾರ್ಡನ್ ಪ್ರದಕ್ಷಿಣೆ ಹಾಕಿಕೊಂಡು ಬರುವುದು ರೂಢಿ.

ನನ್ನ ವಾರಿಗೆಯವರು ಸ್ಕೂಲು ಕಾಲೇಜಿನಲ್ಲಿ ಓದುತ್ತಿದ್ದಾಗ ಕನಿಷ್ಠ ವರ್ಷಕ್ಕೊಮ್ಮೆ ಈ ಜಾಗಗಳಿಗೆ ಕರೆದೊಯ್ದು ಬೋರ್ ಹೊಡೆಸುತ್ತಿದ್ದರು.

ದೇವಸ್ಥಾನ ನೋಡುವುದೇ ಪ್ರವಾಸ ಅನ್ನುವ ಪದ್ಧತಿ ಎಷ್ಟು ಆಳವಾಗಿ ಬೇರೂರಿರುತ್ತದೆ ಎಂದು ನಾನಂತೂ ಯೋಚಿಸಿರಲಿಲ್ಲ. ಹಂಪಿಗೆ ನಾನು ಎರಡು ಬಾರಿ ಹೊಗಿದ್ದೆ.

ADVERTISEMENT

ಎರಡೂ ಬಾರಿ ದೇವಸ್ಥಾನ, ಪಳೆಯುಳಿಕೆ ನೋಡಿ ಬಂದಿದ್ದೇನೇ ಹೊರತು ಅಲ್ಲಿ ಬೇರೆ ಮಾದರಿಯ ಪ್ರವಾಸದ ಅವಕಾಶ ಇರಬಹುದು ಎಂದು ಊಹಿಸಿಯೇ ಇರಲಿಲ್ಲ. ಆ ಹೊಸ ಪ್ರಪಂಚವನ್ನು ನನಗೆ ಪರಿಚಯ ಮಾಡಿಸಿದವರು ಕವಿ ನಾಗತಿಹಳ್ಳಿ ರಮೇಶ್.

ಹರ್ ಬರ್ಟ್ ಸ್ತ್ರೋಬ್ ಎಂಬ ಒಬ್ಬ ಆಸ್ಟ್ರಿಯಾ ದೇಶದ ಪ್ರಜೆ ಹಂಪಿಗೆ 18 ವರ್ಷದಿಂದ ಬರುತ್ತಿದ್ದಾನೆ. ಅವನು ಇಲ್ಲಿ ಬರುವುದು ಬಂಡೆಗಳನ್ನು ಹತ್ತುವುದಕ್ಕೆ. ರಾಕ್ ಕ್ಲೈಂಬಿಂಗ್ ಇವನ ಪರಮ ವ್ಯಾಮೋಹ.

ಆಸ್ಟ್ರಿಯಾದಲ್ಲಿ ಮಕ್ಕಳಿಗೆ ಬೆಟ್ಟ ಹತ್ತುವುದನ್ನು ಕಲಿಸಿ ಸಂಪಾದಿಸುವ ಹಣವನ್ನು ಭಾರತಕ್ಕೆ ಬಂದು ಖರ್ಚು ಮಾಡುತ್ತಾನೆ.

ಹಂಪಿ, ಪುಣೆ ಮತ್ತು ಉತ್ತರ ಭಾರತದ ಕೆಲವೆಡೆ ಬೆಟ್ಟ ಹತ್ತಲು ಹೋಗುತ್ತಾನೆ. ಸುಮಾರು 35 ವರ್ಷದ ಈತ ತನ್ನ ಅಣ್ಣನಂತೆ ನೌಕರಿ, ಮದುವೆ, ಮಕ್ಕಳು ಎಂದುಕೊಂಡು ಒಂದು ಊರಿನಲ್ಲಿ ನೆಲೆಯೂರುವುದು ಸಾಧ್ಯವಿಲ್ಲ ಅನ್ನುತ್ತಾನೆ. ಇಂಥ ಸಾಹಸಿಗಳಿಗೆ ಹಂಪಿಯಲ್ಲಿ ಸಾಕಷ್ಟು ಆಕರ್ಷಣೆಗಳು ಕಾದಿವೆ.

ಇಲ್ಲಿಗೆ ಬರುವವರು ಎಲ್ಲ ಧನಿಕ ವಿದೇಶೀಯರಲ್ಲ. ಚಾರಣ, ಸಂಗೀತ, ಇತಿಹಾಸ, ಧರ್ಮದಲ್ಲಿ ಆಸಕ್ತಿಯಿರುವವರನ್ನು ಹಂಪಿ ಸೆಳೆಯುತ್ತಿದೆ. ಇಸ್ರೇಲ್ ದೇಶದಲ್ಲಿ ಮಿಲಿಟರಿ ಸೇವೆ ಕಡ್ಡಾಯ.

ಅದನ್ನು ಮುಗಿಸಿ ಮನಸು ಹಗುರ ಮಾಡಿಕೊಳ್ಳಲು ಹಲವರು ಇತ್ತ ಪ್ರಯಾಣ ಬೆಳೆಸುತ್ತಾರೆ. (ಅರವತ್ತು ಲಕ್ಷ ಜನಸಂಖ್ಯೆಯ ಇಸ್ರೇಲ್ ನಿಂದ ಸುಮಾರು ಒಂದು ಲಕ್ಷ ಜನ ಪ್ರತಿ ವರ್ಷ ಭಾರತಕ್ಕೆ ಪ್ರವಾಸದ ಸಲುವಾಗಿ ಬರುತ್ತಾರೆ). 
  
ಹಂಪಿಯ ವಿರೂಪಾಕ್ಷ ದೇವಸ್ಥಾನದ ಪಕ್ಕದಲ್ಲಿ ಒಂದು ಹೊಳೆ ಹರಿಯುತ್ತದೆ. ಅದನ್ನು ದಾಟಲು ದೋಣಿಗಳು ಸಹಾಯಮಾಡುತ್ತವೆ (ಸಂಜೆ ಆರು ಗಂಟೆ ಕಳೆದರೆ ದೋಣಿ ಸೇವೆ ನಿಂತು ಹೋಗುತ್ತದೆ.

ಹಂಪಿಗೂ, ಆ ಕಡೆಯ ವಿರೂಪಾಕ್ಷ ಗಡ್ಡಿಗೂ ಸಂಪರ್ಕ ಕಡಿದುಹೊಗುತ್ತದೆ). ಕೇವಲ ಮೂರೋ ನಾಲ್ಕೋ ನಿಮಿಷದಲ್ಲಿ ಈ ಹೊಳೆ ದಾಟಬಹುದು.

ಈಗ ನಾಲ್ಕು ವರ್ಷದ ಹಿಂದೆ, ಹೊಳೆ ದಾಟಿ ಆ ದಡದ ಮೇಲೆ ಮೊದಲ ಬಾರಿ ಕಾಲಿಟ್ಟಾಗ ನಾನು ದಂಗು ಬಡಿದು ಹೋದೆ. ಅಲ್ಲಿ ಫಲಕಗಳೆಲ್ಲ ಯಹೂದಿಯರ ಹೀಬ್ರೂ ಭಾಷೆಯಲ್ಲಿವೆ! ಅಂಗಡಿಗಳು ನಡೆಸುವ ಕನ್ನಡಿಗರು ಮತ್ತು ತೆಲುಗರು ಇಂಗ್ಲಿಷ್ ಸರಾಗವಾಗಿ ಮಾತಾಡುತ್ತಾರೆ. ಕೆಲವರು ಚೂರು ಪಾರು ಹೀಬ್ರೂ ಕೂಡ ಮಾತಾಡಬಲ್ಲರು.

ಭಾರತೀಯರಿಗಿಂತ ವಿದೇಶಿಯರೇ ಹೆಚ್ಚು ಆ ಕಡೆ ಓಡಾಡುವುದು. ಕೆಲವರು ಬೆಟ್ಟ ಗುಡ್ಡ ಹತ್ತುವ ಪರಿಕರಗಳನ್ನು ಹೊತ್ತು ರಾಮಾಯಣದ ಕಿಷ್ಕಿಂಧೆಯೆಂದು ಗುರುತಿಸಲಾಗುವ ಈ ಪ್ರದೇಶದ ಬಂಡೆಗಳ ಕಡೆಗೆ ಹೆಜ್ಜೆಯಿಡುತ್ತಾರೆ.

ಹಲವರು ಮೋಟರ್ ಸೈಕಲ್ ಬಾಡಿಗೆಗೆ ಪಡೆದು ವಿಜಯನಗರ ಸಾಮ್ರೋಜ್ಯದ ರಾಜಧಾನಿಯ ಮೂಲೆ ಮೂಲೆಗೆ ಹೋಗಿ ಬರುತ್ತಾರೆ. ಸುಮಾರು ರೂ 250ಕ್ಕೆ ಮೋಟರ್ ಸೈಕಲ್ ಸಿಗುತ್ತದೆ.  

ಹೊಳೆಯ ಈ ತೀರಕ್ಕೂ ಆ ತೀರಕ್ಕೂ ಬಹಳ ವ್ಯತ್ಯಾಸವಿದೆ. ವಿರೂಪಾಕ್ಷ ಗಡ್ಡಿಯಲ್ಲಿ ಇಸ್ರೇಲಿ, ಇಟಾಲಿಯನ್ ಊಟ ತಿಂಡಿ ಜನಪ್ರಿಯ. ಇಡ್ಲಿ ವಡೆ ಸಿಗುವುದು ಕಷ್ಟ.

ಸಂಯುಕ್ತ ರಾಷ್ಟ್ರ ಸಂಸ್ಥೆಯವರು ಜಾರಿಗೊಳಿಸಿರುವ ನಿಬಂಧನೆಗಳಿಂದ ದೇವಸ್ಥಾನದ ಹತ್ತಿರ ಇದ್ದ ಅಂಗಡಿ ಮುಂಗಟ್ಟುಗಳು ನೆಲಸಮವಾಗಿವೆ.

ಹೊಳೆ ದಾಟಿದ ಮೇಲೆ ಮ್ಯೋಜಿಕಲ್ ಅನಿಸುವ ಒಂದು ಪುಟ್ಟ ಪ್ರವಾಸಿ ಊರು ಸಷ್ಟಿಯಾಗಿದೆ. ಇದಕ್ಕೆ ಅದೇ ಪ್ರದೇಶದ ಪ್ರವಾಸೋದ್ಯಮ ಮಂತ್ರಿಯಾಗಿದ್ದ ಜನಾರ್ಧನ ರೆಡ್ಡಿಯಾಗಲಿ, ಸರ್ಕಾರವಾಗಲಿ ಕಾರಣವಲ್ಲ.

ಸರ್ಕಾರ ನಡೆಸುವ ಹಂಪಿ ಉತ್ಸವದಲ್ಲಿನ ವಾತಾವರಣಕ್ಕೂ, ವಿರೂಪಾಕ್ಷ ಗಡ್ಡಿಯ ವಾತಾವರಣಕ್ಕೂ ಅಜಗಜಾಂತರ. ಕೆಲವರು ಇದನ್ನು ವಿರೋಧಿಸುವುದೂ ಅದೇ ಕಾರಣಕ್ಕೆ.

ವಿದೇಶಿಯರ ಹಂಪಿ ನಮ್ಮ ಹಂಪಿಗಿಂತ ತೀರ ಭಿನ್ನ. ಅವರು ಅಲ್ಲಿ ಬಂದು ಹಲವು ದಿನ ತಂಗುತ್ತಾರೆ. ವಿರೂಪಾಕ್ಷ ಗಡ್ಡಿಯಲ್ಲಿ ಹಲವು ಕಾಟೇಜ್‌ಗಳಿವೆ.

ಈ ಕಾಟೇಜ್‌ಗಳು ರೆಸಾರ್ಟ್‌ನಲ್ಲಿ ಕಂಡುಬರುವ ಐಷಾರಾಮಿ ಕಾಟೇಜ್‌ಗಳಂತೆ ಇರುವುದಿಲ್ಲ. ಇಬ್ಬರು ತಂಗುವ ಒಂದು ಕಾಟೇಜ್‌ಗೆ  ರೂ 350ರಿಂದ 800 ಶುಲ್ಕ ವಿಧಿಸುತ್ತಾರೆ.

ಬಿದಿರು, ತೆಂಗಿನ ಗರಿ, ಮತ್ತು ಅಲ್ಪ ಸ್ವಲ್ಪ ಇಟ್ಟಿಗೆ ಗಾರೆ ಬಳಸಿ ಕಟ್ಟಿದಂಥ ಸರಳ ಗುಡಿಸಲುಗಳು ಇವು. ಇಲ್ಲಿ ಒಂದೆರಡು ವಾರದಿಂದ ಹಿಡಿದು ಮೂರು ತಿಂಗಳವರೆಗೂ ವಿದೇಶೀಯರು ಉಳಿದುಕೊಳ್ಳುತ್ತಾರೆ.

ನಮ್ಮ ಹಾಗೆ ಒಂದೇ ದಿನದಲ್ಲಿ ಹಂಪಿ ನೋಡಿ ಮುಗಿಸುವ ವಿದೇಶೀಯರನ್ನು ನೀವು ಕಾಣುವುದು ಕಷ್ಟ! ಆದರೆ ಇದು ಚಳಿಗಾಲದ ಪ್ರವಾಸೊದ್ಯಮ. ಬೇಸಿಗೆ ಬಂತೆಂದರೆ ವಿರೂಪಾಕ್ಷ ಗಡ್ಡಿ ಖಾಲಿಯಾಗಿ ಹೊಗುತ್ತದೆ.

ನನಗನ್ನಿಸಿದಂತೆ, ಅಲ್ಲಿ ಸೃಷ್ಟಿಯಾಗಿರುವ ಸ್ನೇಹದ, ಕುತೂಹಲದ ಪ್ರವಾಸೋದ್ಯಮ ಅಪರೂಪದ್ದು. ಎಷ್ಟೇ ದುಡ್ಡು, ಸರ್ಕಾರದ ಬೆಂಬಲ ಇದ್ದರೂ ಸೃಷ್ಟಿಯಾಗದ, ತಾನಾಗಿಯೇ ನೈಜವಾಗಿ ರೂಪುಗೊಂಡ ಪ್ರವಾಸೋದ್ಯಮ ಇದು.

ಹಿಪ್ಪಿ ಎಂದು ಒಂದು ಕಾಲಕ್ಕೆ ಖ್ಯಾತಿ ಕುಖ್ಯಾತಿ ಎರಡನ್ನೂ ಒಟ್ಟಿಗೆ ಪಡೆದಿದ್ದ ಸಂಸ್ಕತಿಯ ಜೀವನೋತ್ಸಾಹ ಹಂಪಿಯಲ್ಲಿ ಜೀವಂತವಾಗಿದೆ.

ಹಾಡುವವರು, ಗಿಟಾರ್ ಬಾರಿಸುವವರು, ಫ್ಲೂಟ್ ವಾದಕರು ಎಲ್ಲ ಸೇರಿ ವಿರೂಪಾಕ್ಷ ಗಡ್ಡಿ ಸಂಗೀತಮಯವಾಗಿದೆ. ಸೂರ್ಯ ಮುಳುಗುವ ಸಮಯ ಬಂಡೆಗಳ ಮೇಲೆ ಕೂತು ಗುಂಪು ಗುಂಪಾಗಿ ಪ್ರವಾಸಿಗರು ಹಾಡಿ ತಣಿಯುತ್ತಾರೆ. ಬೆಂಗಳೂರಿಗೂ ಅಲ್ಲಿಗೂ ಇರುವ ವ್ಯತ್ಯಾಸ ನೋಡಿ.

ನಮ್ಮ ನಗರವನ್ನು ಆಳುವ ರಾಜಕಾರಣಿಗಳು ಮತ್ತು ಕಾಯುವ ಪೊಲೀಸರು ಸೆಕ್ಯುರಿಟಿ ಹೆಸರಿನಲ್ಲಿ ಸಂಗೀತವನ್ನು ವಿರೋಧಿಸುತ್ತಿದ್ದಾರೆ. ಇಲ್ಲಿ ಪ್ರವಾಸಿಗರು ನೆರೆಯುವ ಸ್ಥಳಗಳಲ್ಲಿ ಸಂಗೀತಗಾರರು ಸೇರಿ ಜಾಮ್ ಮಾಡುವುದಕ್ಕೆ ಅವಕಾಶವೇ ಇಲ್ಲದಂತೆ ಆಗಿದೆ.  

ದಿನಕ್ಕ ನೂರು ಆಲ್ಬಮ್ ಬಿಟ್ಟಿ

ನೀವೂ ನನ್ನ ಹಾಗೆ ದಿನದಲ್ಲಿ ಹತ್ತಾರು ಗಂಟೆ ಇಂಟರ್ನೆಟ್‌ನಲ್ಲಿ ಕಳೆಯುವ ಪೈಕಿಯಾದರೆ ಫ್ಲಿಪ್ ಕಾರ್ಟ್ (www.flipkart.com) ಎಂಬ ಆನ್ಲೈನ್ ಪುಸ್ತಕದ ಅಂಗಡಿಯ ಬಗ್ಗೆ ಖಂಡಿತ ಕೇಳಿರುತ್ತೀರಿ. ಈಗ ಅಲ್ಲಿ ಪುಸ್ತಕಗಳು, ಇ-ಪುಸ್ತಕಗಳಲ್ಲದೆ  ಸಂಗೀತವನ್ನೂ ಮಾರುತ್ತಿದ್ದಾರೆ.

ಕ್ಯಾಸೆಟ್ಟು ಹೇಗೆ ಮೂಲೆ ಗುಂಪಾಯಿತೋ ಹಾಗೆಯೇ ಸಿಡಿ ಕೂಡಾ ಆಗುತ್ತದೆ ಎಂದು ಸಂಗೀತ ಉದ್ಯಮದವರು ಆತಂಕದಲ್ಲಿದ್ದಾರೆ. ಇಂದು ಜನ ಹೆಚ್ಚಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ನಲ್ಲಿ ಸಂಗೀತ ಕೇಳುತ್ತಿದ್ದಾರೆ. ಇದನೆಲ್ಲ ಗಮನದಲ್ಲಿಟ್ಟುಕೊಂಡು ಫ್ಲಿಪ್ ಕಾರ್ಟ್ ಸಂಗೀತ ಡೌನ್‌ಲೋಡ್ ಮಾಡುವ ಸೇವೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಪಡುತ್ತಿದೆ.

ಫೆಬ್ರವರಿ 28 ಅಂಗಡಿಗೆ ಒಂದು ವರ್ಷ ತುಂಬುತ್ತದೆ. ಆ ಸಂಭ್ರಮದಲ್ಲಿ ಸಾವಿರಾರು ಹಾಡುಗಳನ್ನು ಪುಕ್ಕಟೆಯಾಗಿ ಕೊಡುತ್ತಿದ್ದಾರೆ. ದಿನಕ್ಕೆ ನೂರು ಆಲ್ಬಮ್ (ಅಂದರೆ ಸುಮಾರು 700 ಹಾಡುಗಳನ್ನು) ಫ್ರೀ ಡೌನ್‌ಲೋಡ್ಸ್  ವಿಭಾಗದಲ್ಲಿ ಹಾಕುತ್ತಿದ್ದಾರೆ.

ಕನ್ನಡವೂ ಸೇರಿ ಹಲವು ಭಾಷೆಯ, ವಿವಿಧ ಶೈಲಿಯ ಸಂಗೀತ ಬಿಟ್ಟಿಯಾಗಿ ವಿತರಣೆಯಾಗುತ್ತಿರುವುದು ಸಂಗೀತ ಪ್ರೇಮಿಗಳಿಗೆ ತಿಳಿಯಲಿ ಎಂದು ಈ ಪುಟ್ಟ ಟಿಪ್ಪಣಿ. ಫೆಬ್ರವರಿ 28ರ ಒಳಗೆ ನೀವು ಆಯ್ಕೆ ಮಾಡಿಕೊಂಡು ಮಾರ್ಚ್ 3ರ ಮುನ್ನ ನಿಮ್ಮ ಕಂಪ್ಯೂಟರ್‌ಗೆ ಡೌನ್ ಲೋಡ್ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.