ADVERTISEMENT

ನಾಳೆ ಪಿಬಿಎಸ್ ಗೀತಸಂಜೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2011, 19:30 IST
Last Updated 11 ನವೆಂಬರ್ 2011, 19:30 IST
ನಾಳೆ ಪಿಬಿಎಸ್ ಗೀತಸಂಜೆ
ನಾಳೆ ಪಿಬಿಎಸ್ ಗೀತಸಂಜೆ   

`ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ಇವಳು ಯಾರು ಬಲ್ಲೆಯೇನು, ನಾನೇ ವೀಣೆ ನೀನೇ ತಂತಿ, ಕನ್ನಡವೇ ತಾಯ್ನುಡಿಯು~ ಹೀಗೆ ಮನವನ್ನು ಸದಾಕಾಲ ಮುದಗೊಳಿಸುವ ಹಾಡುಗಳ ಖ್ಯಾತಿಯ ಗಾಯಕ ಡಾ. ಪಿ. ಬಿ.ಶ್ರೀನಿವಾಸ್ ಅವರದು 82ರ ಇಳಿ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹ. ಅವರ ಕಂಠಸಿರಿಯಲ್ಲಿ ಮೂಡಿಬಂದ ಗೀತೆಗಳು ಕನ್ನಡ ನಾಡಿನುದ್ದಕ್ಕೆ ಇಂದೂ ಜನಪ್ರಿಯ.

ಅವರು ಹಾಡಿ ಕನ್ನಡಿಗರನ್ನು ರಂಜಿಸಿದ ಸುಮಧುರ ಚಿತ್ರಗೀತೆಗಳನ್ನು ಅವರ ಸಮ್ಮುಖದಲ್ಲಿಯೇ ಪ್ರಸ್ತುತಪಡಿಸಿ ಗೌರವಿಸುವ ಗಾನಸೌರಭ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಿದೆ ಕನ್ನಡಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದ `ಸಂಭ್ರಮ ಸೌರಭ~ ಸಂಸ್ಥೆ.

`ಹಾಡಿಸಿ ನೋಡು ಕೇಳಿಸಿ ನೋಡು ಮರೆತು ಹೋಗದು~ ಎಂಬ ಶೀರ್ಷಿಕೆಯ ಮನವ ಕಾಡುವ ಗೀತೆಗಳ ಈ ಕಾರ್ಯಕ್ರಮದಲ್ಲಿ ಎಲ್.ಎನ್.ಶಾಸ್ತ್ರಿ, ಹೇಮಂತ್, ಅನುರಾಧಾ ಭಟ್, ಎಂ. ಡಿ. ಪಲ್ಲವಿ ಅವರು ಪಿಬಿಎಸ್ ಹಾಡುಗಳನ್ನು ಹಾಡಲಿದ್ದಾರೆ.

 ಹಿರಿಯ ಕಲಾವಿದರಾದ ಲೀಲಾವತಿ, ಜಯಂತಿ, ಭಾರತಿ ವಿಷ್ಣುವರ್ಧನ್, ದ್ವಾರಕೀಶ್, ರಾಜೇಶ್, ಸುದರ್ಶನ್, ಲೋಕನಾಥ್, ಶ್ರೀನಿವಾಸಮೂರ್ತಿ, ನಿರ್ದೇಶಕರಾದ ಗೀತಪ್ರಿಯ, ಕೆ.ಎಸ್.ಎಲ್. ಸ್ವಾಮಿ, ಸಿ. ವಿ.ಶಿವಶಂಕರ್, ಗೀತ ರಚನೆಕಾರರಾದ ಎಂ. ಎನ್. ವ್ಯಾಸರಾವ್ ಸೇರಿ ಚಿತ್ರರಂಗದ ಗಣ್ಯರು ಉಪಸ್ಥಿತರಿರುತ್ತಾರೆ.

ಇದು 60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರ ಸಹಾಯಾರ್ಥ ಕಾರ್ಯಕ್ರಮ.

ಸ್ಥಳ: ಜ್ಞಾನಜ್ಯೀತಿ ಸಭಾಂಗಣ, ಸೆಂಟ್ರಲ್ ಕಾಲೇಜು, ಅರಮನೆ ರಸ್ತೆ. ಮಧ್ಯಾಹ್ನ 3.30. ಪ್ರವೇಶ ಪತ್ರಕ್ಕೆ 98452 34600, 98802 98315. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.