ADVERTISEMENT

ನಿರ್ದೇಶಕರ ಸಾಲಿಗೆ ಕಿರಣ್‌ರಾಜ್‌

ಸುಮನಾ ಕೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
777 ಚಾರ್ಲಿ ಸಿನಿಮಾದ ದೃಶ್ಯ
777 ಚಾರ್ಲಿ ಸಿನಿಮಾದ ದೃಶ್ಯ   

ರಕ್ಷಿತ್‌ ಶೆಟ್ಟಿ ನಿರ್ಮಾಣದ ‘777 ಚಾರ್ಲಿ’ ಸಿನಿಮಾ ಕಿರಣ್‌ರಾಜ್‌ ನಿರ್ದೇಶನದ ಚೊಚ್ಚಿಲ ಚಿತ್ರ. ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕತೆಯನ್ನೊಳಗೊಂಡ ಈ ಚಿತ್ರ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ


* ‘777 ಚಾರ್ಲಿ’ ಚಿತ್ರದ ಬಗ್ಗೆ ಹೇಳಿ...
‘ಕಿರಿಕ್‌ ಪಾರ್ಟಿ’ ಬಳಿಕ ರಕ್ಷಿತ್‌ ಶೆಟ್ಟಿ ಅವರ ಪರಂ ಬ್ಯಾನರ್‌ನಿಂದಲೇ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಇದು. ಮನುಷ್ಯ ಹಾಗೂ ನಾಯಿಯ ಪ್ರೀತಿ, ಬಾಂಧವ್ಯದ ಜೊತೆಗೆ ದೀರ್ಘ ಪ್ರಯಾಣದ ಭಿನ್ನ ಕತೆ ಈ ಸಿನಿಮಾದ್ದು. ಕನ್ನಡದಲ್ಲಿ ಈ ರೀತಿಯ ಚಿತ್ರ ಬಂದಿದ್ದರೂ, ಈ ಚಿತ್ರದ ಕತೆ ವಿಭಿನ್ನವಾಗಿದೆ. ರಕ್ಷಿತ್‌ ಶೆಟ್ಟಿ ಅವರ ಬಳಿ ಹಾಗೇ ಸುಮ್ಮನೆ ಕತೆ ಹೇಳಿದೆ. ನಮ್ಮ ಬ್ಯಾನರ್‌ನಡಿಯಲ್ಲೇ ನಿರ್ಮಾಣ ಮಾಡೋಣ ಎಂದರು. ಈಗ ಚಿತ್ರಕತೆ (ಸ್ಕ್ರಿಪ್ಟ್) ಸಿದ್ಧವಾಗುತ್ತಿದೆ.

* ಪಾತ್ರಗಳು...
‘ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ಎರಡನೇ ನಾಯಕರಾಗಿದ್ದ ಅರವಿಂದ್‌ ಅಯ್ಯರ್‌ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನು ನಾಯಿಯೇ ಮತ್ತೊಂದು ಮುಖ್ಯ ಪಾತ್ರ. ಈ ಚಿತ್ರದಲ್ಲಿಯೂ ಪೋಷಕ ಪಾತ್ರಗಳಿವೆ. ಆದರೆ ಅದಕ್ಕೆ ತುಂಬಾ ಪ್ರಾಮುಖ್ಯತೆ ಇಲ್ಲ.

ADVERTISEMENT

* ‘ಕಥಾಸಂಗಮ’ ಚಿತ್ರದ ಬಗ್ಗೆ ಹೇಳಿ
ರಿಷಬ್‌ ಶೆಟ್ಟಿ ನಿರ್ಮಾಣದ ‘ಕಥಾ ಸಂಗಮ’ ಎಂಬ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದೇನೆ. ‘ಕಥಾಸಂಗಮ’ ಎಂಬುದು ಏಳು ಕಿರುಚಿತ್ರಗಳ ಸಂಗಮ. ಇದು ಏಳು ನಿರ್ದೇಶಕರು ಏಳು ಕಿರುಚಿತ್ರಗಳನ್ನು ಒಳಗೊಂಡಿದೆ. ಇದರಲ್ಲಿ ನನ್ನ ಕಿರುಚಿತ್ರವೂ ಒಂದು. ಏಳೂ ಚಿತ್ರಗಳು ಭಿನ್ನ ಪ್ರಕಾರದವು ಎಂಬುದು ಮತ್ತೊಂದು ವೈಶಿಷ್ಟ್ಯ. ನನ್ನ ಕಿರುಚಿತ್ರ ಸಸ್ಪೆನ್ಸ್‌ ಥ್ರಿಲ್ಲರ್‌ ಕತೆಯನ್ನೊಳಗೊಂಡಿದೆ. ಈ ಕಿರುಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದಲ್ಲಿ ಹರಿಪ್ರಿಯಾ ಹಾಗೂ ರಿಷಬ್‌ ಶೆಟ್ಟಿ ನಟಿಸಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ.

* ಈ ಪ್ರಯತ್ನ ಕನ್ನಡಕ್ಕೆ ಹೊಸದಲ್ವಾ?
ಈ ರೀತಿಯ ಸಿನಿಮಾಗಳು ಬಾಲಿವುಡ್‌, ಮಾಲಿವುಡ್‌ನಲ್ಲಿ ಬಿಡುಗಡೆಯಾಗಿವೆ. ಖ್ಯಾತ ನಟರೇ ಇದರಲ್ಲಿ ಅಭಿನಯಿಸಿದ್ದರು. ಇದಕ್ಕೆ ಉತ್ತಮ ಪ್ರಶಂಸೆಯೂ ವ್ಯಕ್ತವಾಗಿದೆ. ಇದರಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ನಾವು ಇಂತಹ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡದಲ್ಲಿಯೂ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ನಮ್ಮದು.

* ‘ಕಬ್ಬಿನಹಾಲು’ ಕಿರುಚಿತ್ರಕ್ಕೆ ಉತ್ತಮ ಚಿತ್ರ ಎಂಬ ಪ್ರಶಸ್ತಿ ಸಿಕ್ಕಿದೆ. ಅದರ ಬಗ್ಗೆ ಹೇಳಿ
‘ಕಬ್ಬಿನಹಾಲು’ 12 ನಿಮಿಷದ ಕಿರುಚಿತ್ರ. ಈ ಚಿತ್ರ ದಕ್ಷಿಣ ಭಾರತದ ಕಿರುಚಿತ್ರ ಉತ್ಸವದಲ್ಲಿ ಪ್ರಥಮ ಉತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಇದಾದ ಬಳಿಕ ಬೊಂಬೆಯಾಟದ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿದೆ.

* ಚಿತ್ರರಂಗಕ್ಕೆ ಹೇಗೆ ಬಂದಿರಿ?
ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ನಿರ್ದೇಶಕ ಜಯತೀರ್ಥ ಅವರು ತಮ್ಮ ‘ಎಂದೆಂದಿಗೂ’ ಚಿತ್ರದಲ್ಲಿ ನನ್ನನ್ನು ಸಹಾಯಕ ನಿರ್ದೇಶಕನಾಗಿ ಸೇರಿಸಿಕೊಂಡರು. ಆಕಸ್ಮಿಕವಾಗಿ ರಿಷಬ್‌ ಶೆಟ್ಟಿ ಅವರನ್ನು ಭೇಟಿ ಮಾಡಿ, ‘ರಿಕ್ಕಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗುವ ಅದೃಷ್ಟ ಸಿಕ್ಕಿತು. ಅದಾದ ಬಳಿಕ ‘ಕಿರಿಕ್‌ ಪಾರ್ಟಿ’ಯಲ್ಲೂ ಕೆಲಸ ಮಾಡಿದೆ. ಈಗ ಹೊಸ ಚಿತ್ರ  ‘777 ಚಾರ್ಲಿ’ ಮೂಲಕ ಸ್ವತಂತ್ರ ನಿರ್ದೇಶಕನಾಗಲು ಹೊರಟಿದ್ದೇನೆ.

*

ಕಿರಣ್‌ ರಾಜ್‌ ಪರಿಚಯ
ಕಿರಣ್‌ ರಾಜ್‌ ಕಾಸರಗೋಡಿನವರು. ನಟನೆಯ ಗೀಳು ಬೆಳೆಸಿಕೊಂಡಿದ್ದ ಅವರು 10ನೇ ತರಗತಿ ಮುಗಿದ ಬಳಿಕ ಮಂಗಳೂರಿಗೆ ಕೆಲಸಕ್ಕಾಗಿ ಹೋದರು. ಅಲ್ಲಿ ನಾಟಕ ತಂಡಗಳಲ್ಲಿ ಅಭಿನಯಿಸಲು ಆರಂಭಿಸಿದರು. ಮಂಗಳೂರಿನ ಅಪೂರ್ವ ಕಲಾವಿದರ ಜೊತೆ ಸೇರಿಕೊಂಡು ಅಭಿನಯಿಸಿದ ನಾಟಕ ಸುಮಾರು 50ಕ್ಕೂ ಹೆಚ್ಚು ಬಾರಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನವಾಯಿತು. 20ನೇ ವಯಸ್ಸಿನಲ್ಲಿ ಸಿನಿಮಾದಲ್ಲಿ ಅವಕಾಶ ಅರಸಿಕೊಂಡು ಬೆಂಗಳೂರಿಗೆ ಬಂದರು.  ಇಲ್ಲಿ  ಗುರು ದೇಶಪಾಂಡೆ ‘ಸ್ಟಾರ್‌ ಕ್ರಿಯೇಟರ್ಸ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌’ನಲ್ಲಿ ಅಭಿನಯ ತರಗತಿಗಳಿಗೆ ಸೇರಿಕೊಂಡರು.

ಇಲ್ಲಿ ಕಿರಣ್‌ರಾಜ್‌ ಅವರ ಶಿಕ್ಷಕರಾಗಿದ್ದವರು ನಿರ್ದೇಶಕ ಜಯತೀರ್ಥ ಅವರು. ಅವರಿಂದ ನಟನೆ, ನಿರ್ದೇಶನದ ಬಗ್ಗೆ ತಿಳಿದುಕೊಂಡರು. ಕೋರ್ಸ್‌ ಮುಗಿದ ಬಳಿಕ ಕಿರಣ್‌ ರಾಜ್‌ ವಾಪಸ್‌ ಊರಿಗೆ ಹೋಗಿ ‘ಕಾವಳ’ ಎಂಬ ಒಂದೂವರೆ ಗಂಟೆಯ ಟೆಲಿಫಿಲ್ಮ್‌ ಮಾಡಿದರು. ಈ ಸಿನಿಮಾಕ್ಕೆ ನಿರೀಕ್ಷೆಗಿಂತಲೂ ಅದ್ಭುತ ಪ್ರತಿಕ್ರಿಯೆ ಬಂತು. ಸಾಮಾಜಿಕ ಜಾಗೃತಿಯ ಈ ಚಿತ್ರ ಅನೇಕ ಶಾಲಾ– ಕಾಲೇಜುಗಳಲ್ಲಿ ಪ್ರದರ್ಶನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.