ಹನುಮಂತನಗರದಲ್ಲಿ ನಮ್ಮ ಮನೆ. ಬೀದಿಯಲ್ಲಿರುವ ಮನೆಗಳ ಮಾಲೀಕರು, ಬಾಡಿಗೆದಾರರು ತಂತಮ್ಮ ಕಾರುಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಿಕೊಂಡಿದ್ದಾರೆ. ಆಚೀಚೆ ಬೀದಿಗಳ ಮನೆಗಳವರು ನಮ್ಮ ಬೀದಿಯಲ್ಲಿ ಸ್ಥಳಾವಕಾಶವಿಲ್ಲವೆಂದು ಭಾವಿಸಿ ಕಾರು, ವ್ಯಾನ್ ನಿಲ್ಲಿಸುತ್ತಾರೆ. `ಬೇಡಿ, ನಾವು ಈ ರಸ್ತೆಯ ನಿರ್ವಹಣೆಗೆ ತೆರಿಗೆದಾರರು. ನಿಮ್ಮ ನಿಮ್ಮ ವಾಹನಗಳನ್ನು ನಿಮ್ಮ ಮನೆಯ ಬಳಿಯೇ ನಿಲ್ಲಿಸಿ' ಅಂತ ಪರಿಪರಿಯಾಗಿ ಹೇಳಿದ್ದಾಗಿದೆ. ಫಲ ಮಾತ್ರ ಶೂನ್ಯ.
ಸದಾ ಬಾಗಿಲ ಮುಂದೆ ಅವರದೇ ವಾಹನಗಳು. ತಂದು ನಿಲ್ಲಿಸುವ ಸರ್ಕಸ್‌ನಲ್ಲಿ ವಿಪರೀತ ಹಾರ್ನ್ ಸದ್ದು. ಸಾಲದ್ದಕ್ಕೆ ಮನೆಯಿಂದ ಹೊರಗೆ ಹೋಗುವುದು, ಒಳ ಬರುವುದು ಬಹಳ ತ್ರಾಸವಾಯಿತು. ನಾನೊಂದು ಉಪಾಯ ಮಾಡಿದೆ.
ಕಾರು ನಿಲ್ಲುತ್ತಿದ್ದ ಸ್ಥಳದಲ್ಲಿ ಹಳೆಯ ಪಂಚೆ, ಸೀರೆ ಅಥವಾ ಬೇರಾವುದೇ ಉಡುಪನ್ನು ಒಣಗಲು ಹಾಕಿದಂತೆ ಹರಡಿದೆ. ಆಗಾಗ ಅದರ ಮೇಲೆ ನೀರು ಸಿಂಪಡಿಸುವುದನ್ನು ಮರೆಯಲಿಲ್ಲ. ಹದಿನೈದು ದಿನ ನಮ್ಮ ತಂತ್ರ ಯಶಸ್ವಿಯಾಯಿತೇನೋ ಸರಿ.
ಆದರೆ ಹದಿನಾರನೆ ದಿನ ಆಗಿದ್ದೇನು? ಮಧ್ಯಾಹ್ನದ ಯಾವುದೋ ಮುಹೂರ್ತದಲ್ಲಿ ಅದು ಚೋರನ ಪಾಲಾಗಿತ್ತು! ಈಗ ನಮ್ಮ ಮುತ್ತಾತನ ಹಳೆಯ ಬೈಸಿಕಲ್ಲನ್ನು ಅಲ್ಲಿ ನಿಲ್ಲಿಸಿ, ಪಾರ್ಕಿಂಗ್ ಪಡಿಪಾಲಿನಿಂದ (ತತ್ಕಾಲಕ್ಕೆ) ಪಾರಾಗಿದ್ದೇವೆ. ಅದರ ಮಾಯ ಯಾವ ಚೋರಲಗ್ನದಲ್ಲೋ ಕಾಣೆ!
ಪ್ರಶ್ನೆಯೆಂದರೆ, ಕಾರು ಖರೀದಿಸುವಾಗಲೇ ಅದನ್ನು ನಿಲ್ಲಿಸಲು ಜಾಗದ ವ್ಯವಸ್ಥೆ ಬಗ್ಗೆ ಜನರೇಕೆ ಆಲೋಚಿಸುವುದಿಲ್ಲ? ಕಾರು ಅಥವಾ ಮತ್ತ್ಯಾವುದೇ ವಾಹನಗಳನ್ನು ರಿಜಿಸ್ಟರ್ ಮಾಡುವಾಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು `ನೀವು ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೀರಾ' ಅಂತ ಕಟ್ಟುನಿಟ್ಟಾಗಿ ವಿಚಾರಿಸಬೇಕು. ವೀಕ್ಷಣೆ ನಡೆಸಬೇಕು.
ಪಾರ್ಕಿಂಗ್‌ನಿಂದ ನೆರೆಯವರಿಗೆ, ಓಡಾಡುವವರಿಗೆ ವೃಥಾ ತೊಂದರೆಯಾಗುತ್ತದೆ ಎಂದಾದರೆ ವಾಹನ ರಿಜಿಸ್ಟರ್ ಮಾಡಲೇಬಾರದು. ಒಬ್ಬೊಬ್ಬರ ಮನೆಯ ಗೇಟಿಗೂ `ದಯಮಾಡಿ ವಾಹನ ನಿಲ್ಲಿಸಬಾರದು' ಲಗತ್ತಾಗಿರುವುದನ್ನು ಕಂಡಾಗಲೆಲ್ಲ ಇದು ಸಾಮಾನ್ಯ ಪ್ರಜ್ಞೆ ಅಲ್ಲವೆ, ಇಂಥ ಸೂಚನೆ ಅಗತ್ಯವೆ? ಅಂತ ಬೇಸರವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.