ADVERTISEMENT

ನೋಕಿಯಾದಲ್ಲಿ ಮಧುಮೇಹ ಅಭಿಯಾನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನೋಕಿಯಾ ಇಂಡಿಯಾ ಸಹಯೋಗದಲ್ಲಿ ಅಮೆರಿಕ ಮೂಲದ ಸ್ವಯಂಸೇವಾ ಸಂಸ್ಥೆ `ಆರೋಗ್ಯ ವರ್ಲ್ಡ್~ ಮತ್ತು ದೇಶಾದ್ಯಂತ ಮಧುಮೇಹ ಜಾಗೃತಿ ಆಂದೋಲನ ನಡೆಸುತ್ತಿದೆ. ಈ ಮೂಲಕ 10 ಲಕ್ಷ ಜನರನ್ನು ತಲುಪುವ ಗುರಿ ಹೊಂದಿದೆ.

ಮುಂದಿನ 2 ವರ್ಷಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ನೋಕಿಯಾ ಮೊಬೈಲ್ ಬಳಕೆದಾರರನ್ನು ಎಸ್‌ಎಂಎಸ್ ಮುಖೇನ ತಲುಪುವ ಈ ಕಾರ್ಯಕ್ರಮ ಸಂವಹನ ಮಾಧ್ಯಮದ ಕ್ರಾಂತಿಯನ್ನು ಆರೋಗ್ಯ ಜಾಗೃತಿಗೆ ಬಳಸಿಕೊಳ್ಳುತ್ತಿರುವ ವಿನೂತನ ಪ್ರಯೋಗ. ಡಯಾಬಿಟಿಸ್ ಕುರಿತು ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊಬೈಲ್ ಒಂದು ಅತ್ಯುತ್ತಮ ಸಾಧನವಾಗಿ ರೂಪುಗೊಳ್ಳಲಿದೆ.

ಇತ್ತೀಚಿನ ದಿನಗಳಲ್ಲಿ ಭಾರತ ಡಯಾಬಿಟಿಸ್‌ನ ದೇಶ ಎಂಬ ಕುಖ್ಯಾತಿಗೆ ಒಳಗಾಗಿದೆ. ದೇಶದಲ್ಲಿ 5 ಕೋಟಿ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ ಮಧುಮೇಹ 10 ಲಕ್ಷ ಭಾರತೀಯರ ಸಾವಿಗೆ ಕಾರಣವಾಗುತ್ತಿದೆ. ಆದರೆ  ಈ ಬಗ್ಗೆ ಸಾಕಷ್ಟು ಜಾಗೃತಿ ಇಲ್ಲ. ಬಹುತೇಕ ಮಂದಿಗೆ ಮಧುಮೇಹವನ್ನು ಮುನ್ನೆಚ್ಚರಿಕೆಯಿಂದ ತಡೆಯಬಹುದು ಎಂಬ ಅರಿವಿಲ್ಲ.

ತಂಬಾಕು ಸೇವನೆ ನಿಲ್ಲಿಸುವುದು, ದೇಹರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವುದು ಹಾಗೂ ವ್ಯಾಯಾಮ ಮಾಡುವುದರಿಂದ ಮಧುಮೇಹವನ್ನು ಶೇ 80 ನಿಯಂತ್ರಣಕ್ಕೆ ತರಬಹುದು.

ಆರೋಗ್ಯ ವರ್ಲ್ಡ್ ಇದರ ಅಂಗವಾಗಿ ನೋಕಿಯಾ ಮೊಬೈಲ್ ಬಳಸುತ್ತಿರುವ ಗ್ರಾಹಕರಿಗೆ 6 ತಿಂಗಳು ಮಧುಮೇಹ ಜಾಗೃತಿ ಹಾಗೂ ರೋಗ ತಡೆಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕುರಿತ ಸಂದೇಶಗಳನ್ನು ರವಾನಿಸಲಿದೆ.   

ವಾರದಲ್ಲಿ 2 ದಿನ ಸಂದೇಶಗಳು 12 ಭಾಷೆಗಳಲ್ಲಿ ಮೊಬೈಲ್ ಮೂಲಕ ತಲುಪಲಿವೆ. ಈ ಅಭಿಯಾನ ಮುಗಿದ ನಂತರ ಉಚಿತ ಸಂದೇಶ ರವಾನೆ ನಿಲ್ಲುತ್ತದೆ. ಆಸಕ್ತರು ಇಚ್ಛೆಯಿದ್ದಲ್ಲಿ ನಿರ್ದಿಷ್ಟ ಶುಲ್ಕ ತೆತ್ತು ಸಂದೇಶವನ್ನು ಪಡೆಯಬಹುದಾಗಿದೆ.

`ಮೊಬೈಲ್‌ಗಳು ಆಧುನಿಕ ಯುಗದ ಸಂಪರ್ಕ ಕೊಂಡಿ. ಮೊಬೈಲ್‌ನಿಂದಾಗಿ ಮಾಹಿತಿ, ಮನರಂಜನೆ ಎಲ್ಲವೂ ಅಂಗೈನಲ್ಲಿ ಲಭ್ಯ. ಜಾಗತಿಕ ಮನ್ನಣೆ ಪಡೆದುಕೊಂಡಿರುವ ಮೊಬೈಲ್ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಸಂತಸದ ವಿಚಾರ.

ನಾವು ನಮ್ಮ ವಿಶೇಷ ಆಸ್ಥೆ ವಹಿಸಿ ನೋಕಿಯಾ ಲೈಫ್ ಟೂಲ್ ಫ್ಲಾಟ್‌ಫಾರಂ ಮುಖಾಂತರ ಜಾಗೃತಿ ಸಂದೇಶಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇವೆ~ ಎನ್ನುತ್ತಾರೆ ನೋಕಿಯಾ ಇಂಡಿಯಾ ಎಮರ್ಜಿಂಗ್ ಮಾರ್ಕೆಟ್ ಸರ್ವಿಸ್ ನಿರ್ದೇಶಕ ಬಿ.ವಿ.ನಟೇಶ್.

`ಆರೋಗ್ಯ ವರ್ಲ್ಡ್ ಅಭಿವೃದ್ಧಿಶೀಲ ದೇಶದ ಜನರ ಆರೋಗ್ಯ ಶೈಲಿಯನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಬಂಧ ನಾವು ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನೋಕಿಯಾದೊಂದಿಗೆ ಕೈಜೋಡಿಸಿದ್ದೇವೆ. ನಾವು ಮಧುಮೇಹ ಕಾಯಿಲೆ ಕುರಿತು ಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ಯಶಸ್ವಿಯಾಗುತ್ತೇವೆ~ ಎನ್ನುತ್ತಾರೆ ಆರೋಗ್ಯ ವರ್ಲ್ಡ್ ಸಂಸ್ಥಾಪಕಿ ನಳಿನಿ ಸಾಲಿಗ್ರಾಮ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.