ADVERTISEMENT

ನ್ಯಾನೋ ಹತ್ತಿ ದೇಶ ಸುತ್ತಿ...

​ಪ್ರಜಾವಾಣಿ ವಾರ್ತೆ
Published 15 ಮೇ 2012, 19:30 IST
Last Updated 15 ಮೇ 2012, 19:30 IST
ನ್ಯಾನೋ ಹತ್ತಿ ದೇಶ ಸುತ್ತಿ...
ನ್ಯಾನೋ ಹತ್ತಿ ದೇಶ ಸುತ್ತಿ...   

ಜಗತ್ತಿನ ಲಿಲಿಪುಟ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ನ್ಯಾನೊ~ದ ಶಕ್ತಿಯನ್ನು ಭಾರತದ 110 ನಗರ/ಪಟ್ಟಣಗಳಲ್ಲಿ ಜಾಹೀರು ಮಾಡುವ ಹೊಣೆ ಹೊತ್ತು ಮುಂಬೈನಲ್ಲಿ ಕಾರು ಹತ್ತಿದ್ದಾರೆ ಜೇಕಬ್ ಥಾಮಸ್.

ಅವರು 62ರ ಏರು ಜವ್ವನಿಗ! ದೇಶವೋ ವಿದೇಶವೋ ಅಲ್ಲಿ ತನ್ನ ಚಾಲನಾ ಸಾಮರ್ಥ್ಯದೊಂದಿಗೆ ನೆಚ್ಚಿನ ಕಾರಿನ ಎಂಜಿನ್ ಸಾಮರ್ಥ್ಯವನ್ನೂ ಒರೆಗೆ ಹಚ್ಚುವ ಛಲದಂಕ ಮಲ್ಲ! ಹೀಗಾಗಿ ಈಗಾಗಲೇ ಹತ್ತಾರು ಅಮೆರಿಕ, ಕೊಲ್ಲಿ ರಾಷ್ಟ್ರ, ಕೆನಡಾ, ಲಂಡನ್, ಸಿಂಗಪೂರ್, ಮಲೇಷ್ಯಾ, ಓಮನ್, ಶ್ರೀಲಂಕಾ ಮುಂತಾದ ರಸ್ತೆಗಳಲ್ಲೂ ಹೈಸ್ಪೀಡ್‌ನಲ್ಲಿ ಕಾರು ಓಡಿಸಿದ ಚಾಲನಾಪ್ರೇಮಿ!

ಜೇಕಬ್ ಅವರೇ ಹೇಗಿದ್ದೀರಿ? ರಾಂಚಿ ಹೇಗಿದೆ?
ಹೈಕ್ಲಾಸಾಗಿದ್ದೀನಿ. ಚೆನ್ನಾಗಿದ್ದೀನಿ. ಇದೀಗ ತಾನೇ ಜೆಮ್‌ಶೆಡ್‌ಪುರ ಮಾರ್ಗವಾಗಿ ರಾಂಚಿ ತಲುಪಿದ್ದೇನೆ. ಸಂಜೆ 5.30 ಆಯ್ತಲ್ವಾ; ಇವತ್ತಿನ ಡ್ರೈವ್ ಮುಗಿಯಿತು. ವಾತಾವರಣ ಸ್ವಲ್ಪ ಬಿಸಿಯಾಗಿಯೇ ಇದೆ. ಆದರೆ ಪಾಟ್ನಾಗಿಂತ ಪರವಾಗಿಲ್ಲ.

 

ಬೆಂಗಳೂರು ಬಗ್ಗೆ...

`1970ರಲ್ಲಿ ನಾನು ಮೊದಲ ಬಾರಿ ಬೆಂಗಳೂರಿಗೆ ಬಂದಾಗ ನಯನಮನೋಹರವಾಗಿತ್ತು. ಎಲ್ಲಿ ನೋಡಿದ್ರೂ ಹಸಿರು, ಮರ, ವಿಕ್ಟೋರಿಯಾ ಶೈಲಿಯ ಕಟ್ಟಡಗಳು. ಗಾರ್ಡನ್ ಸಿಟಿ ಹೆಸರು ನಿಜಕ್ಕೂ ಸಾರ್ಥಕ. ಈಗ ಬರೇ ಕಾಂಕ್ರೀಟ್ ಜಂಗಲ್. ಆಗ ಬೆಂಗಳೂರಿಗೆ ಬರೋ ಅವಕಾಶಕ್ಕಾಗಿ ಕಾಯುತ್ತಿದ್ದೆ. ಈಗ ಒಬ್ಬ ತಂದೆಯಾಗಿ ಜವಾಬ್ದಾರಿಯಿಂದ ಬರುತ್ತೇನೆ.
ಹೇಳೋದು ಮರ‌್ತೆ. ನನ್ನ ಮಗ ಬೆಂಗಳೂರಿನಲ್ಲಿ ಕಂಪ್ಯೂಟರ್ ಗೇಮಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾನೆ.

ಮದುವೆಯಾಗೋವರೆಗೂ ನಮ್ಗೆ ಜವಾಬ್ದಾರಿ ಇದೆಯಲ್ಲ ಅದಕ್ಕಾಗಿ ಆಗಾಗ ಬರುತ್ತಿರುತ್ತೇನೆ. ಬೆಂಗಳೂರು ಬದಲಾಗಿದ್ದರೂ ನನಗೆ ನೆಚ್ಚಿನ ಸಿಟಿ ಬೆಂಗಳೂರೇ.
ಆಗಲೇ ಹೇಳಿದಂತೆ ನಾನು ಆಹಾರಪ್ರೇಮಿ ಅಲ್ಲ. ಆದರೆ ಬೆಂಗಳೂರಿನ ಕೋರಮಂಗಲದ ಮನೆಗೆ ಬಂದಾಗ ನನ್ನ ನೆಚ್ಚಿನ ಕೇರಳದ ಆಹಾರವನ್ನೇ ತಯಾರಿಸುತ್ತಾಳೆ ನನ್ನ ಹೆಂಡತಿ, ಹ್ಹಹ್ಹ...~

ADVERTISEMENT

ಯಾರು ದಣಿದಿರೋದು, ನೀವೋ ನ್ಯಾನೊ ಎಂಜಿನ್ನೋ?
ಇಬ್ಬರೂ ಅಲ್ಲ... ಹ್ಹಹ್ಹಹ್ಹ ಇಬ್ಬರೂ ದಣಿಯೋದೂ ಇಲ್ಲ ಬಿಡಿ. (ಆ ಕ್ಷಣಕ್ಕೆ ಅವರು ಕ್ರಮಿಸಿದ್ದ ದೂರ 2392 ಕಿ.ಮೀ. ಅಂದಹಾಗೆ, ನ್ಯಾನೊ ಯೋಜನೆಯಂತೆ ಅವರು ಕ್ರಮಿಸಬೇಕಾಗಿರುವ ದೂರ 23,356 ಕಿ.ಮೀ!)

ಇಷ್ಟು ಸುದೀರ್ಘವಾದ ಡ್ರೈವನ್ನು ಅಂದುಕೊಂಡ ಅವಧಿಗೇ ಮುಗಿಸುವ ವಿಶ್ವಾಸವಿದೆಯಾ?
ವೈ ನಾಟ್! ಮೋಟಾರು ವಾಹನ ಚಾಲನೆ ನನ್ನ ನೆಚ್ಚಿನ ಹವ್ಯಾಸ. ವಿದೇಶದಲ್ಲೂ ಜಾಲಿ ಡ್ರೈವ್ ಮಾಡದೇ ಹಿಂತಿರುಗಿದ್ದೇ ಇಲ್ಲ, ಗೊತ್ತಾ? ಇಟ್ಸ್ ಮೈ ಲೈಫ್! ಹೀಗಾಗಿ ಟಾಟಾ ಮೋಟಾರ್ಸ್‌ನವರ ಕನಸಿನ ಯೋಜನೆ `ನ್ಯಾನೊ ಅಡ್ವೆಂಚರ್ ಡ್ರೈವ್~ ಜೊತೆ ಹೆಮ್ಮೆಯಿಂದಲೇ ಕೈಜೋಡಿಸಿದೆ.

ಈ ಸಾಹಸ ಯಾನಕ್ಕೆ ಮೇ ಮೂರರಂದು ಮುಂಬೈನಲ್ಲಿ ಚಾಲನೆ ನೀಡಲಾಯಿತು. 75 ದಿನಗಳಲ್ಲಿ ಭಾರತದ 110 ಪ್ರಮುಖ ನಗರ/ಪಟ್ಟಣಗಳನ್ನು ಕ್ರಮಿಸುವ ಗುರಿ. ಪ್ರತಿದಿನವೂ  ಒಂದೊಂದು ರಾಜ್ಯದ ರಾಜಧಾನಿಯನ್ನು ತಲುಪಬೇಕು. ಒಂದರಿಂದ ಇನ್ನೊಂದಕ್ಕೆ ಎಷ್ಟೇ ದೂರವಿರಲಿ ದಣಿವಿನ ಕಾರಣಕ್ಕೆ ವಿರಮಿಸಲಾರೆ. ಇವತ್ತಿನವರೆಗೂ ಶೆಡ್ಯೂಲ್‌ನಲ್ಲಿದ್ದೇನೆ. ಜುಲೈ 18ಕ್ಕೆ ಮುಂಬೈಗೆ ಮರಳುವ ಮೂಲಕ ನ್ಯಾನೊ ಯಾತ್ರೆ ಮುಕ್ತಾಯವಾಗುತ್ತದೆ.

ದಿನಚರಿ ಮತ್ತು ಆಹಾರ...
ಬೆಳಿಗ್ಗೆ 6.30ಕ್ಕೆ ದಿನದ ಯಾನ ಆರಂಭ. ಹಗುರವಾದ ಉಪಾಹಾರ ಸೇವಿಸಿ ಚಾಲನೆ ಶುರು. ಹೆಚ್ಚು ತಿಂದರೆ ಆಯಾಸ ಹೆಚ್ಚು. ನನ್ನ ಹೆಂಡತಿ ಗೀತಾ ಗುವಾಹಟಿವರೆಗೂ ಜೊತೆಗಿರುತ್ತಾಳೆ. (ಅಲ್ಲಿಂದ ಕೋಲ್ಕತ್ತಾವರೆಗೆ ನನ್ನ ಸಹೋದರ ಇರುತ್ತಾನೆ).

ಅವಳಿರೋವರೆಗೂ ಊಟೋಪಚಾರದ ಚಿಂತೆಯಿಲ್ಲ. ಯಾಕೆ ಗೊತ್ತಾ? ಅವಳು ಚಪಾತಿಯಂಥ ಬೆಂಗಾಲಿ ರೋಟಿ ಬುತ್ತಿ ತಂದಿದ್ದಾಳೆ, ಮಧ್ಯಾಹ್ನದ ಊಟಕ್ಕಾಗಿ. ಬಹುಶಃ ನೂರಾರು ರೋಟಿಗಳಿವೆ. ಡ್ರೈಫ್ರೂಟ್ಸ್ ಇವೆ.
 
ಹೇರಳವಾಗಿ ನೀರು ಕುಡಿಯುತ್ತೇನೆ. ಮಧ್ಯೆ ಒಮ್ಮೆ ಸೇಬಿನ ರಸ. ರಾತ್ರಿ ಯಾವ ಊರಿನಲ್ಲಿ ತಂಗುತ್ತೇವೋ ಅಲ್ಲಿ ಹೋಟೆಲ್‌ನಲ್ಲಿ ರಾತ್ರಿಯೂಟ, ವಿಶ್ರಾಂತಿ. ಎಷ್ಟೇ ಹಸಿವಾದರೂ ಕತ್ತರಿಸಿ ಇರಿಸಿದ ಹಣ್ಣುಗಳನ್ನು ತಿನ್ನೊಲ್ಲ. ನಾನು ಫುಡ್ಡೀ ಅಲ್ಲ. ಭಾರತದ ಯಾವುದೇ ಪ್ರದೇಶದ ಆಹಾರ ನನಗೆ ಅಚ್ಚುಮೆಚ್ಚು.

ಈ ಸುದೀರ್ಘ ಯಾತ್ರೆಯನ್ನು ನಿರ್ವಿಘ್ನವಾಗಿ ನಿಮ್ಮ ನ್ಯಾನೊ ಪೂರೈಸುತ್ತಾ?
ನ್ಯಾನೊ ಕಾರು, ಪುಟ್ಟ ಎಂಜಿನ್ನು ಮತ್ತು ಲೈಟ್‌ವೇಟ್ ಅನ್ನೋ ಕಾರಣಕ್ಕೆ ಅದರ ಬಾಳಿಕೆ ಕಡಿಮೆ, ದೂರ ಪ್ರಯಾಣಕ್ಕೆ ಹೇಳಿದ್ದಲ್ಲ, ಏರುದಾರಿಯನ್ನು ಅದು ಹತ್ತುವುದೇ ಇಲ್ಲ ಎಂಬುದೆಲ್ಲಾ ಬರೀ ಸುಳ್ಳು. ಪ್ರಸಕ್ತ ಸಾಹಸ ಯಾನದಲ್ಲಿ ಲೇಹ್ ಬಳಿಯ ಖರ್ದುಂಗ್ ಲಾ ವನ್ನೂ ಏರಲಿದ್ದೇನೆ. ಅದು ವಿಶ್ವದಲ್ಲೇ ಅತ್ಯಂತ ಎತ್ತರದ `ಮೋಟಾರ್ ಪಾಸ್~. ಇದರಲ್ಲೇನೂ ಗಿಮಿಕ್ ಇಲ್ಲ. ನ್ಯಾನೊ ಎಷ್ಟು ದೂರವನ್ನೂ, ಎಂತಹ ಮಾರ್ಗವನ್ನಾದರೂ ಅದು ಕ್ರಮಿಸಬಲ್ಲದು.

ಈ ವಯಸ್ಸಿನಲ್ಲಿ?!
ಹೌದು, 62 ಅಂದ್ರೆ ನಿವೃತ್ತಿ ಅಂತ ತಾನೇ ನೀವು ಹೇಳೋದು? ನೋ. ವಯಸ್ಸಿಗೂ ಚಾಲನಾ ಸಾಮರ್ಥ್ಯಕ್ಕೂ ಏನೂ ಸಂಬಂಧವಿಲ್ಲ. ಇದು ನನ್ನ ಹವ್ಯಾಸ. ನಿಮಗೆ ಜೀವನಪ್ರೀತಿ ಇದ್ದರೆ ಯಾವ ವಯಸ್ಸಿನಲ್ಲೂ ಏನನ್ನಾದರೂ ಸಾಧಿಸಬಹುದು. ಏನಂತೀರಿ? ಬೆಳಿಗ್ಗೆ 6.30ರಿಂದ ನಿರಂತರವಾಗಿ ಡ್ರೈವ್ ಮಾಡುತ್ತೇನೆ.

ಮಧ್ಯಾಹ್ನದ ಊಟದ ಮೇಲೆ ಎರಡು ಗಂಟೆ ವಿಶ್ರಾಂತಿ. ಕೆಲವೊಮ್ಮೆ ಅದೂ ಇಲ್ಲ. ಇದೇ ಶೆಡ್ಯೂಲ್ ಜುಲೈ 18ರವರೆಗೂ ಮುಂದುವರಿಸುತ್ತೇನೆ ನೋಡ್ತಾ ಇರಿ. ಬೆಂಗಳೂರಿಗೆ ಬಂದಾಗ ಸಿಗೋಣ... ಬೈ...

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.