ADVERTISEMENT

ಪಟ್ ಪಟ್ ಪಟಾಕಿ

ರೋಹಿಣಿ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ದೀಪಾವಳಿಗೆ ಹದಿನೈದು ದಿನ ಬಾಕಿ ಇರುವಾಗಲೇ ಅಮ್ಮನ ಬಳಿ ಗೋಗರೆದು ಹಣ ಪಡೆದು, ಪಕ್ಕದ ಮನೆಯ ಗೆಳೆಯರೊಟ್ಟಿಗೆ ಅಂಗಡಿಗೆ ಹೋಗಿ ತುಂಡು ಪಟಾಕಿ ತಂದು ಸಿಡಿಸಿ ಖುಷಿ ಪಡುವ ಮಕ್ಕಳು ಮಹಾನಗರದಲ್ಲಿಂದು ಕಾಣಸಿಗರು.
 
ದೀಪಾವಳಿಯನ್ನು `ಪಟಾಕಿ ಹಬ್ಬ~ ಎಂದೇ ಕರೆದುಕೊಂಡಿದ್ದ, ಪಟಾಕಿ ಸಿಡಿಸುವುದನ್ನು ಮನದುಂಬಿ ಸುಖಿಸುತ್ತಿದ್ದ, ಪಟಾಕಿ ಶಬ್ದಕ್ಕೆ ಮೈಕಿವಿಯಾಗಿಸಿಕೊಳ್ಳುತ್ತಿದ್ದ ಮಕ್ಕಳೂ ಇಂದು ಇಲ್ಲ. ಕಾರಣ ಇಂದು ಪಟಾಕಿ ಸಿಡಿಸಲು ದೀಪಾವಳಿ ಹಬ್ಬ ಬರಬೇಕೆಂದೂ ಇಲ್ಲ.

ರಾಜಕಾರಣಿಗಳ ಹುಟ್ಟುಹಬ್ಬ, ಚುನಾವಣೆಯ ಗೆಲುವು, ಕ್ರಿಕೆಟ್ ಗೆಲುವು, ತಮ್ಮ ನೆಚ್ಚಿನ ಸ್ಟಾರ್‌ಗಳ ಸಿನಿಮಾ ಬಿಡುಗಡೆ, ಅಣ್ಣಮ್ಮ ದೇವಿಯ ಉತ್ಸವ, ಗಣೇಶೋತ್ಸವ ಗಳಲ್ಲಿಯೂ ಪಟಾಕಿಗಳನ್ನು ಹೇರಳವಾಗಿ ಸುಡುವ ಪ್ರಕ್ರಿಯೆ ಆರಂಭವಾಗಿ ವರ್ಷಗಳೇ ಆಗಿವೆ.
ಅದರಿಂದ ಪಟಾಕಿ ಮಕ್ಕಳಲ್ಲಿ ಅಂಥ ಉತ್ಸಾಹವನ್ನೇನೂ ಉಂಟು ಮಾಡುತ್ತಿಲ್ಲ. ಅದರಲ್ಲೂ ಪಟಾಕಿ ಉತ್ಸವ ಮಹಾನಗರಗಳಲ್ಲಿ ಸಾಮಾನ್ಯ ಎಂಬಂತಾಗಿವೆ.
 
ಆದರೆ ಅಪರೂಪಕ್ಕೆ ಪಟಾಕಿ ಸಿಡಿಸಿ ಪುಳಕಗೊಳ್ಳುತ್ತಿದ್ದ ಅಂದಿನ ಖುಷಿ ಇಂದು ಇಲ್ಲ ಎಂದೇ ಹೇಳಬೇಕು. ಅಂದು ಅಪ್ಪ ಅಮ್ಮನನ್ನು ಗೋಗರೆದು ಪಟಾಕಿಗಳನ್ನು ತಂದು ಸಿಡಿಸಿ, ಮಾರನೇ ದಿನ ಟುಸ್ ಆದ ಪಟಾಕಿಗಳನ್ನು ಹುಡುಕಿ ಹೊರಡುವ ಸಡಗರ ಇರುತ್ತಿತ್ತು.

ಸುಟ್ಟ, ಅರೆಸುಟ್ಟ ಪಟಾಕಿಗಳ ಮದ್ದನ್ನು ಸಂಗ್ರಹಿಸಿ ಕಾಗದದ ಮೇಲೆ ಹಾಕಿ ಅದಕ್ಕೆ ಬೆಂಕಿ ಕೊಟ್ಟು ಕಿಡಿ ಹಾರುವುದನ್ನು ಕಂಡು ಕುಣಿಯುವ ಮಕ್ಕಳಿದ್ದರು. ನರಕ ಚರ್ತುದರ್ಶಿಯಂದು ಶಾಲೆಗೆ ರಜೆ ಇರುತ್ತಿದ್ದ ಕಾರಣ ಹಬ್ಬದ ಸಂಭ್ರಮದಲ್ಲಿ ಮಿಂದ ಮಕ್ಕಳಿಗೆ ಲಕ್ಷ್ಮಿ ಪೂಜೆಯಂದು ಶಾಲೆಯ ಹೋಗಬೇಕಾದ ಸಂದರ್ಭ ಬರುತ್ತಿತ್ತು.

ಹ್ಯಾಪು ಮೋರೆ ಹಾಕಿಕೊಂಡು ಶಾಲೆ ಕಡೆಗೆ ಹೆಜ್ಜೆ ಹಾಕಿ ತರಗತಿಯೊಳಗೆ ದೂರದಲ್ಲೆಲ್ಲೋ ಸಿಡಿಯುವ ಪಟಾಕಿ ಶಬ್ದವನ್ನು ಕೇಳಿಸಿಕೊಂಡು ಮುದಗೊಂಡ ಸಂಜೆಯನ್ನು ಕಾಯುತ್ತಿದ್ದರು. ಕೊನೆಯ ಗಂಟೆ ಬಾರಿಸುತ್ತಿದ್ದ ಹಾಗೆಯೇ ಮನೆಗೆ ಓಡಿ ಬಂದು, ಚೀಲ ಬಿಸಾಕಿ ಪಟಾಕಿ ಹುಡುಕಾಟ ನಡೆಸುತ್ತಿದ್ದರು.

ಮಾರನೇ ದಿನದ ಬಲಿಪಾಡ್ಯಮಿಗೆ ಮನೆಯ ಹೆಂಗೆಳೆಯರು ಸಿದ್ಧಗೊಳ್ಳುತ್ತಿದ್ದರೆ ಮಕ್ಕಳ ಮನದ ತುಂಬಾ ಪಟಾಕಿಯದೇ ಸದ್ದು. ಬೆಳಿಗ್ಗೆ ಎದ್ದು ಎಣ್ಣೆ  ಸ್ನಾನ ಮಾಡಿ, ಹಬ್ಬದೂಟ ಉಂಡು ಸಂಭ್ರಮಿಸುವುದಕ್ಕಿಂತ ಹೆಚ್ಚಾಗಿ ಸಂಜೆ ಹೊಡೆಯ ಬೇಕಾದ ಪಟಾಕಿಗಳ ಲೆಕ್ಕಾಚಾರ ನಡೆಯುತ್ತಿತ್ತು.

ಇಂದು ಮನೆ ಮನೆಯಲ್ಲೂ ಪಟಾಕಿ ಚೀಟಿ ಹಾಕಿಕೊಂಡ ಗೃಹಿಣಿಯರಿದ್ದಾರೆ. ಹಬ್ಬಕ್ಕೆ ಒಂದು ವಾರ ಮುಂಚೆ ಮನೆಗೆ ಬಂದು ಬೀಳುವ ಪಟಾಕಿ ಬಾಕ್ಸ್‌ಗಳು  ಅಂದು ಗೋಗರೆದು ಪಟಾಕಿ ಕೊಡಿಸಿಕೊಳ್ಳುತ್ತಿದ್ದ ಸಂತಸವನ್ನು ಕಿತ್ತುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.