ADVERTISEMENT

ಪರಿಶ್ರಮದ ಪಟ್ಟು ಮಾಡೆಲ್ ಗತ್ತು

ಪ್ರಜಾವಾಣಿ ವಿಶೇಷ
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST
ಪರಿಶ್ರಮದ ಪಟ್ಟು ಮಾಡೆಲ್ ಗತ್ತು
ಪರಿಶ್ರಮದ ಪಟ್ಟು ಮಾಡೆಲ್ ಗತ್ತು   

ಒಬ್ಬ ಒಳ್ಳೆಯ ಮಾಡೆಲ್‌ಗೆ ಇರಬೇಕಾದ ಅರ್ಹತೆ ಏನು?
ನೋಡಲು ಚೆನ್ನಾಗಿರಬೇಕು, ಎತ್ತರ ಇರಬೇಕು. ಅವನು ಏನೇ ತೊಟ್ಟರು ಸ್ಟೈಲಿಶ್ ಆಗಿರಬೇಕು.

ನಿಮ್ಮ ಪ್ರಕಾರ ಫ್ಯಾಷನ್?
ಬಟ್ಟೆಯಿಂದ ವ್ಯಕ್ತಿತ್ವ ಅಳೆಯಬಾರದು. ನಾವು ಯಾವುದೇ ಡ್ರೆಸ್ ಹಾಕಿದರೂ ಮುಖದಲ್ಲಿ ನಗುವಿರಬೇಕು, ಆತ್ಮವಿಶ್ವಾಸವಿರಬೇಕು. ದಿನದ 24 ಗಂಟೆ ಸಲೂನ್‌ನಲ್ಲಿ ಕಾಲಕಳೆಯುವುದು, ಬ್ರಾಂಡೆಡ್ ಕ್ರೀಮ್ ಹಚ್ಚಿಕೊಳ್ಳುವುದು ಫ್ಯಾಷನ್ ಅಲ್ಲ. ನಾವು ಹೇಗೆ ಇರುತ್ತೇವೆಯೋ ಅದನ್ನು ಒಪ್ಪಿಕೊಂಡು ಹೋಗುವುದು ಫ್ಯಾಷನ್.

ಮನೆಯಲ್ಲಿ ಪ್ರತಿಕ್ರಿಯೆ ಹೇಗಿತ್ತು?
ಅಪ್ಪ ಮೊದಲು ಒಪ್ಪಲಿಲ್ಲ. ಓದಿಗೆ ಹೆಚ್ಚು ಪ್ರಾಮುಖ್ಯ ಎಂದರು. ಊರು ಭದ್ರಾವತಿ, ಆದರೆ ಬೆಳೆದಿದ್ದು ಬೆಂಗಳೂರಿನಲ್ಲಿ. ಕೆಎಲ್‌ಇ ಕಾಲೇಜಿನಲ್ಲಿ  ಓದುತ್ತಿರುವಾಗಲೇ ಫ್ಯಾಷನ್ ಜಗತ್ತಿನೆಡೆಗೆ ಮನ ತುಡಿಯುತ್ತಿತ್ತು. ಅಪ್ಪ ಮಾತ್ರ ಓದಿಗೆ ಬೆಂಬಲವಾಗಿ ನಿಂತಿದ್ದರು. ಓದು ಬಿಟ್ಟು ಮಾಡೆಲಿಂಗ್ ಆಯ್ಕೆ ಮಾಡಿಕೊಂಡಾಗ ಸಿಟ್ಟಾಗಿದ್ದರು. ಈ ಕ್ಷೇತ್ರದಲ್ಲಿ ನನ್ನ ಹೆಸರು, ಸಾಧನೆ ನೋಡಿ ಈಗ ಮೆಚ್ಚುತ್ತಾರೆ.

ಮಾಡೆಲಿಂಗ್‌ನಲ್ಲಿ ಹುಡುಗಿಯರಿಗೆ ಸಿಗುವಷ್ಟು ಅವಕಾಶ ಹುಡುಗರಿಗೆ ಇದೆಯಾ?
ಹುಡುಗಿಯರಿಗೆ ಸಿಗುವಷ್ಟು ಅವಕಾಶ ಹುಡುಗರಿಗೆ ಸಿಗಲ್ಲ. ಹಾಗಂತ ಅವಕಾಶವೇ ಇಲ್ಲವೆಂದೇನಲ್ಲ. ಸನ್‌ಗ್ಲಾಸ್, ಬ್ಯಾಗ್, ಬನಿಯನ್ ಇದೆಲ್ಲಾ ಶೋ ಹುಡುಗರಿಗೆ ಸಿಗುತ್ತದೆ. ನಮ್ಮನ್ನು ನಾವು ಯಾವ ರೀತಿ ಪ್ರೆಸೆಂಟ್ ಮಾಡಿಕೊಳ್ಳುತ್ತೇವೆಯೋ ಅದರ ಆಧಾರದ ಮೇಲೆ ಅವಕಾಶಗಳು ಸಿಗುತ್ತವೆ.

ಯಾವ ರೀತಿ ಬಟ್ಟೆ ನಿಮಗೆ ಇಷ್ಟ?
ಜೀನ್ಸ್, ಟೀ ಶರ್ಟ್ ಇಷ್ಟವಾಗುತ್ತದೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ನಿಮಗೆ ಇಷ್ಟವಿರುವುದು, ಇಷ್ಟವಾಗದಿರುವುದು ಯಾವುದು?
ಇಷ್ಟವಿಲ್ಲದ್ದು ಯಾವುದೂ ಇಲ್ಲ. ಯಾಕೆಂದರೆ ನನಗೆ ವಹಿಸಿದ ಕೆಲಸವನ್ನು ನಾನು ಇಷ್ಟಪಟ್ಟು ಮಾಡುತ್ತೇನೆ. ಬೇರೆ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಮಾಡೆಲಿಂಗ್‌ನಲ್ಲಿ ಏನಿಷ್ಟ?
ನನಗೆ ರ‌್ಯಾಂಪ್ ವಾಕ್‌ಗಿಂತ ಜಾಹೀರಾತುಗಳಲ್ಲಿ ಭಾಗವಹಿಸುವುದು ಇಷ್ಟವಾಗುತ್ತದೆ. ಕ್ಯಾಮೆರಾ ಮುಂದೆ ಇರುವುದು ನನಗೆ ಅಚ್ಚುಮೆಚ್ಚು.

ಸಿನಿಮಾದಿಂದ ಅವಕಾಶಗಳು ಬಂದಿವೆಯಾ?
ಹೌದು. ಬಾಲಿವುಡ್ ಹಾಗೂ ಕಾಲಿವುಡ್‌ನಿಂದ ಅವಕಾಶ ಬಂದಿದೆ. ಆದರೆ, ತೂಕವಿಲ್ಲದ ಪಾತ್ರವಾದ್ದರಿಂದ ಅವುಗಳನ್ನು ನಿರಾಕರಿಸಿದೆ.

ನಗರದ ಮಾಡೆಲಿಂಗ್ ಜಗತ್ತಿಗೂ, ಮುಂಬೈ ಮಾಡೆಲಿಂಗ್ ಜಗತ್ತಿಗೂ ನೀವು ಕಂಡುಕೊಂಡ ವ್ಯತ್ಯಾಸ?
ಉದ್ಯಾನನಗರಿಯಲ್ಲಿ ಈಗ ಅವಕಾಶಗಳು ಹೆಚ್ಚಿವೆ. ಆದರೆ ಮುಂಬೈನಲ್ಲಿ ರ‌್ಯಾಂಪ್ ವಾಕ್ ಮಾಡಲು ಹೆಸರಿನ ಬೆಂಬಲ ಬೇಕು ಜತೆಗೆ ನೋಡಲು ಚೆನ್ನಾಗಿರಬೇಕು. ಪ್ರತಿಭೆ ಇದ್ದರೂ ಅಲ್ಲಿ ಅವಕಾಶಗಳು ಕೈಗೆ ಸಿಗುವುದು ಕಡಿಮೆ.

ನಟನೆಗೆ ಯಾವ ರೀತಿ ತಯಾರಿ ಮಾಡಿಕೊಂಡ್ದ್ದಿದೀರಿ?
ನನಗೆ ಗಾಡ್‌ಫಾದರ್ ಯಾರೂ ಇಲ್ಲ. ಇಷ್ಟರವರೆಗೆ ಏನೇ ಹೆಸರು ಮಾಡಿದ್ದರೂ ಅದು ಸ್ವಂತ ಪರಿಶ್ರಮದಿಂದಲೇ. ಮನೆಯವರ ಬೆಂಬಲ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಸಮಯ ಸಿಕ್ಕಾಗಲೆಲ್ಲ ನಾಟಕಗಳನ್ನು ನೋಡುತ್ತೇನೆ. ರಂಗಭೂಮಿಯಲ್ಲಿ ನಟನೆಗೆ ಬೇಕಾದ ಪಟ್ಟುಗಳನ್ನು ಕಲಿಯಬಹುದು. ಪುಸ್ತಕ ಓದುತ್ತೇನೆ. ನನಗೆ ರಾಜ್‌ಕುಮಾರ್ ತುಂಬಾ ಇಷ್ಟ. ಹಿಂದಿಯ ಶ್ರೀದೇವಿ, ಕರೀನಾ ಇಷ್ಟವಾಗುತ್ತಾರೆ.

ಕನ್ನಡ ಸಿನಿಮಾದಲ್ಲಿ ಅವಕಾಶಗಳು ಬಂದಿವೆಯಾ?
ಸದ್ಯಕ್ಕೆ ಇಲ್ಲ. ನಾನು ಕನ್ನಡದ ಹುಡುಗ. ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಖಂಡಿತಾ ಮಾಡುತ್ತೇನೆ.

ನಿಮಗೆ ಇಷ್ಟವಾಗುವ ಸಂಗತಿಗಳು ಯಾವುದು?
ಸುಮ್ಮನೇ ಕುಳಿತಾಗ ಹಳೆಯ ಕನ್ನಡ ಹಾಡುಗಳನ್ನು ಕೇಳುತ್ತೇನೆ. ಈಗಿನ ಹಾಡುಗಳಿಗೆ ಹೋಲಿಸಿದರೆ ಹಳೆಯ ಹಾಡುಗಳು ಅರ್ಥಪೂರ್ಣವಾಗಿವೆ. ಜೀವನದ ಸಾರ ಹಳೆಯ ಹಾಡುಗಳಲ್ಲಿ ಇದೆ.. ಡಾನ್ಸ್ ಮಾಡುವುದು, ಪ್ರವಾಸ ನನಗಿಷ್ಟ.

ವರ್ಕ್‌ಔಟ್ ಹೇಗೆ ಮಾಡುತ್ತಿರಿ?
ಡಯೆಟ್ ಮಾಡಲ್ಲ. ಆದರೆ ಹುಡುಗರು ಒಳ್ಳೆಯ ರೀತಿಯಲ್ಲಿ ದೇಹವನ್ನು ಕಾಪಾಡಿಕೊಳ್ಳುವುದು ಮುಖ್ಯ. ಚೆನ್ನಾಗಿ ತಿನ್ನುತ್ತೇನೆ. ಸಮಯ ಸಿಕ್ಕಾಗ ಯೋಗ, ಜಿಮ್ ಮಾಡುತ್ತೇನೆ ಅಷ್ಟೆ.

ನಿಮ್ಮ ಜೀವನದ ಗುರಿ?
ಒಬ್ಬ ಒಳ್ಳೆಯ ವ್ಯಕ್ತಿ ಆಗುವುದರ ಜತೆಗೆ ಉತ್ತಮ ನಟನಾಗಬೇಕು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.