ADVERTISEMENT

ಪರಿಸರ ಪ್ರೀತಿ ಮನುಷ್ಯ ಸಂಬಂಧದ ರೀತಿ

ಶಶಿಧರ ಭಾರಿಘಾಟ್
Published 17 ಮಾರ್ಚ್ 2013, 19:59 IST
Last Updated 17 ಮಾರ್ಚ್ 2013, 19:59 IST
`ಪಿನೋಕಿಯೊ' ನಾಟಕದ ದೃಶ್ಯ
`ಪಿನೋಕಿಯೊ' ನಾಟಕದ ದೃಶ್ಯ   

`ಸಂಚಾರಿ ಥಿಯೇಟರ್' ಬೆಂಗಳೂರು ಹವ್ಯಾಸಿ ರಂಗಭೂಮಿ ಬೆಳವಣಿಗೆಯಲ್ಲಿ ಶ್ರಮಿಸುತ್ತಿರುವ ರಂಗತಂಡ. ಎಂಟು ವರ್ಷಗಳಿಂದ ಸಂಚಾರಿ ಹತ್ತಾರು ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದೆ. ರಂಗಭೂಮಿಗೆ ಯುವ ಪೀಳಿಗೆಯನ್ನು ಕ್ರಮಬದ್ಧ ಕಲಿಕೆಯ ಮೂಲಕ ಪರಿಚಯಿಸುತ್ತಿರುವ ಅದು ಮಕ್ಕಳ ರಂಗಭೂವಿಯಲ್ಲಿ ವಿಶೇಷವಾಗಿ ತೊಡಗಿಕೊಂಡಿದೆ.

ಮಕ್ಕಳ ರಂಗತರಬೇತಿ ಶಿಬಿರದ ಜೊತೆಗೆ `ಪೂರ್ವರಂಗ' ಎಂಬ ಹೆಸರಿನ ನಿರಂತರ ರಂಗತರಬೇತಿಯನ್ನು ಯುವಕರಿಗೆ ನಡೆಸುತ್ತಿರುವ ಸಂಚಾರಿಯ ನೇತಾರರು ಎನ್. ಮಂಗಳಾ. ರಂಗಾಯಣದಲ್ಲಿ ಅಪಾರ ಶ್ರದ್ಧೆಯಿಂದ ಕಲಿಕೆ, ರಂಗಭೂಮಿಯ ಎಲ್ಲಾ ಆಯಾಮಗಳನ್ನು ಯುವ ಪೀಳಿಗೆಗೆ ದಾಟಿಸುವ ಪ್ರಕ್ರಿಯೆ- ಪೂರ್ವರಂಗ.

ರಂಗಭೂಮಿಯ ನೇಪಥ್ಯಕಲೆ, ರಂಗ ಸಂಗೀತ ಮುಂತಾದ ವಿಷಯಗಳಲ್ಲಿ  ತಜ್ಞರಿಂದ ತರಬೇತಿ ಕೊಡಿಸುವುದರ ಜೊತೆಗೆ ಸ್ವತಃ ಮಂಗಳಾ ಅವರೇ ಅಭಿನಯ, ಚಲನೆ, ಧ್ವನಿಬಳಕೆ, ವಸ್ತ್ರವಿನ್ಯಾಸದ ತರಬೇತಿಯನ್ನು ನೀಡಿ, ಯುವಕರಲ್ಲಿ ವೃತ್ತಿಪರತೆಯನ್ನು ಬೆಳೆಸುತ್ತಿದ್ದಾರೆ.
ಪೂರ್ವರಂಗ ಒಂದು ವಿಶಿಷ್ಠ ರಂಗಾಧ್ಯಯನ ಶಿಬಿರವೆಂದು ಅನುಭವಕ್ಕೆ ಬಂದಿದ್ದು, ಇತ್ತೀಚೆಗೆ ಕೆ.ಎಚ್. ಕಲಾಸೌಧದಲ್ಲಿ  ಪ್ರದರ್ಶಿತವಾದ `ಪಿನೋಕಿಯೊ' ನಾಟಕದ ಮೂಲಕ.

ಇಟಲಿಯ ಸುಪ್ರಸಿದ್ಧ ರಮ್ಯಕಥಾನಕ ಕಾರ್ಲೊ ಕಲಾಡಿ ಅವರ  ಪಿನೋಕಿಯೊ, ಎನ್.ಪ್ರಹ್ಲಾದರಾವ್ ಅವರ ಸಹಜ ಸುಂದರವಾದ ಅನುವಾದದ ಮೂಲಕ ಕನ್ನಡಕ್ಕೆ ಬಂದಿದೆ. ಎನ್.ಮಂಗಳಾ ಈ ಕಥಾನಕವನ್ನು ರಂಗರೂಪಕ್ಕೆ ಅಳವಡಿಸಿ ವಸ್ತ್ರವಿನ್ಯಾಸ ಮಾಡಿ, ನಾಟಕ ಪ್ರಯೋಗವನ್ನು ಸಂಘಟಿಸಿದ್ದಾರೆ.
ಕಾಡಿಗೆ ಮರ ಕಡಿಯಲು ಬಂದ ಬಡಗಿ, ಮರದ ಕೊರಡೊಂದಕ್ಕೆ ಗೊಂಬೆ ರೂಪ ನೀಡಿ,

ಜೀವಕೊಡುವ ಕಲ್ಪನೆಯೊಂದಿಗೆ ಆರಂಭವಾಗುವ ಈ ನಾಟಕ ಪರಿಸರ ಪ್ರೀತಿಯ ಜೊತೆಗೆ, ಮನುಷ್ಯ ಸಂಬಂಧಗಳು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸನ್ನಿವೇಶಗಳನ್ನು ಹದವಾಗಿ ಮಿಶ್ರಣ ಮಾಡುತ್ತಾ, ಫ್ಯಾಂಟಸಿಯ ಲೋಕದಲ್ಲಿ  ವಿಹರಿಸುವಂತೆ ಮಾಡುತ್ತದೆ. ಏಕಕಾಲಕ್ಕೆ ಮಕ್ಕಳು ಹಾಗೂ  ದೊಡ್ಡವರನ್ನು ಆಕರ್ಷಿಸುವ ಗುಣ ಹೊಂದಿರುವ ಈ ಪ್ರಯೋಗವನ್ನು ವಿಸ್ಮಯಕಾರಿಯಾಗಿ ನಿರ್ದೇಶಿಸಿದ್ದು ಬಿ.ವಿಜಯ್ ಎಂಬ ತರುಣ.

ಸಂಚಾರಿ ತಂಡದ ನಟನಾಗಿ, ನಾಟಕ ಕಟ್ಟುವ ಕಲೆಯನ್ನು ಕಲಿಯುತ್ತಾ ಬೆಳೆದ ವಿಜಯ್- ಪಿನೋಕಿಯೊ ನಾಟಕ ನಿರ್ದೇಶಿಸುವ ಮೂಲಕ ತಮ್ಮ ಕಲಾತ್ಮಕ ನಟನೆಯ ಜೊತೆಗೆ ನಿರ್ದೇಶನದ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ದೊಡ್ಡವರು ಮಕ್ಕಳಿಗಾಗಿ ನಾಟಕ ಆಡುವುದು ಕಷ್ಟದ ಕಾರ್ಯ. ಈ ಕಾರ್ಯವನ್ನು ಸುಲಲಿತವಾಗಿ ಮಾಡಿರುವ ವಿಜಯ್, ಆಂಗಿಕ ಅಭಿನಯ, ಚಲನೆಗೆ ಹೆಚ್ಚು ಒತ್ತು ಕೊಟ್ಟು, ಮಕ್ಕಳ ಮನೋಲೋಕವನ್ನು ವಿಸ್ತರಿಸುತ್ತಾರೆ.

ಪಿನೋಕಿಯೊ, ಪ್ರಯೋಗದುದ್ದಕ್ಕೂ ಒಂದು ಘಟನೆಯಿಂದ ಮತ್ತೊಂದು ಘಟನೆಯಲ್ಲಿ ಪಾಲ್ಗೊಳ್ಳುತ್ತಾ, ಪ್ರತಿಕ್ರಿಯಿಸುತ್ತಾ, ಅನೇಕ ಸ್ವಯಂಕೃತ ತಪ್ಪುಗಳಿಂದಾಗಿ ಸಮಸ್ಯೆಗಳಿಗೆ ಸಿಲುಕುತ್ತಾ ಮುಗ್ಧತೆಯಿಂದ ಪರಿತಪಿಸುತ್ತಾ, ನೋಡುಗರ ಕನಿಕರಕ್ಕೆ ಪಾತ್ರನಾಗುತ್ತಾನೆ. ಒಟ್ಟು ನಾಟಕವನ್ನು ಗ್ರಹಿಸುವಲ್ಲಿ  ಬಿ.ವಿಜಯ್ ಅಪಾರವಾಗಿ ಶ್ರಮಿಸಿದ್ದಾರೆ. ತಮ್ಮ ಆಶಯಕ್ಕೆ ತಕ್ಕಂತೆ ನಾಟರನ್ನು ದುಡಿಸಿಕೊಂಡಿದ್ದಾರೆ.

ಇವರ ಯಶಸ್ಸಿಗೆ ಪೂರಕವಾಗಿ ಮಂಗಳಾ ಅವರ ವಸ್ತ್ರವಿನ್ಯಾಸ, ಗಜಾನನ ಟಿ. ನಾಯ್ಕರ ಸಂಗೀತ, ವಿನಯ್‌ಚಂದ್ರರ ಬೆಳಕು, ರಾಮಕೃಷ್ಣ ಕನ್ನರಪಾಡಿ ಅವರ ಪ್ರಸಾಧನಗಳು ಸಹಾಯಕವಾಗಿವೆ.ಪ್ರಯೋಗದ ಕಾಲಾವಧಿಯನ್ನು ಸ್ವಲ್ಪ ಕಡಿಮೆ ಮಾಡಿ, ಪುನರಾವರ್ತನೆಗಳನ್ನು ನಿವಾರಿಸಿ, ರಂಗಸಜ್ಜಿಕೆಯಲ್ಲಿ ಮತ್ತಷ್ಟು ನಿಖರತೆಯನ್ನು ಸಾಧಿಸಿದಲ್ಲಿ ಈ ನಾಟಕ ಮತ್ತಷ್ಟು ಮನೋಜ್ಞವಾಗುವುದು ಸಾಧ್ಯವಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.