ADVERTISEMENT

ಪರಿಸರ ರಕ್ಷಣೆಗೆ ಪಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಮಂತ್ರಿಯಲ್ಲಿ ಚೀಲ
ಮಲ್ಲೇಶ್ವರದ ಮಂತ್ರಿ ಮಾಲ್ ಈ ಸಲದ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ `ಮಂತ್ರಿ ಸ್ಕ್ವೇರ್ ಅರ್ಥ್ ಬ್ಯಾಗ್~ ಎಂಬ ಬಟ್ಟೆಯ ಚೀಲ ಹೊರತಂದಿದೆ.

ಶಾಪಿಂಗ್‌ಗೆ ಬರುವ ಗ್ರಾಹಕರು ಪ್ಲಾಸ್ಟಿಕ್ ಕವರ್‌ಗಳ ಬದಲು 10 ರೂಪಾಯಿಗೆ ಮಾಲ್‌ನಲ್ಲಿ ದೊರೆಯುವ ಈ ಬ್ಯಾಗ್ ಬಳಸುವಂತೆ ಉತ್ತೇಜಿಸಲಾಗುತ್ತಿದೆ. ಈ ಚೀಲಗಳ ಮಾರಾಟದಿಂದ ಬಂದ ಹಣವನ್ನು ಬಡ ಮಕ್ಕಳ ಕಲ್ಯಾಣದಲ್ಲಿ ತೊಡಗಿಸಿಕೊಂಡ `ಕ್ರೈ~ ಸಂಸ್ಥೆಗೆ ನೀಡುತ್ತಿದೆ.

ಇದಲ್ಲದೆ ಪ್ರತಿ ವಾರಾಂತ್ಯದಲ್ಲಿ `ಸಾಹಸ್, ಗ್ರೀನ್‌ಪೀಸ್, ಟ್ರೀಸ್ ಫಾರ್ ಲೈಫ್ ಮತ್ತು ಕುಪಾ~ ಮತ್ತಿತರ ಸ್ವಯಂಸೇವಾ ಸಂಸ್ಥೆಗಳಿಗೆ ತಮ್ಮ ಉತ್ಪನ್ನ ಪ್ರದರ್ಶಿಸಲು, ಚಟುವಟಿಕೆ ಕೈಗೊಳ್ಳಲು ಸ್ಥಳಾವಕಾಶ ಮಾಡಿಕೊಡುತ್ತಿದೆ.

`ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮದು ಒಂದು ಪುಟ್ಟ ಪ್ರಯತ್ನ. ಬಟ್ಟೆ ಚೀಲ ತಯಾರಿಸಿಕೊಡಲು ಸ್ವಯಂ ಸೇವಾ ಸಂಸ್ಥೆಗಳನ್ನು ಸಂಪರ್ಕಿಸುತ್ತಿದ್ದೇವೆ~ ಎನ್ನುತ್ತಾರೆ  ಮಂತ್ರಿ ಸ್ಕ್ವೇರ್‌ನ ಸಿಇಒ ಜೋನಾಥನ್ ಯಾಚ್.
 
ಮಹಿಂದ್ರಾ ರೇವಾ
ಪರಿಸರ ಸ್ನೇಹಿ ವಾಹನ ತಯಾರಿಕಾ ಕಂಪೆನಿ ಮಹಿಂದ್ರಾ ರೇವಾ, ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ `ಗೋ ಗ್ರೀನ್~ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಇದಕ್ಕಾಗಿಯೇ ರೇವಾದ ನಾಲ್ಕು ವಿದ್ಯುತ್‌ಚಾಲಿತ ಕಾರುಗಳು ಲಾಲ್‌ಬಾಗ್, ಜಯನಗರ ಬಿಡಿಎ ಕಾಂಪ್ಲೆಕ್ಸ್, ಶಾಪರ್ಸ್‌ ಸ್ಟಾಪ್ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿ ಜಾಥಾ ನಡೆಸಿದವು.

ಈ ಸಂದರ್ಭದಲ್ಲಿ ಹಿರಿಯರು ಮಾತ್ರವಲ್ಲದೆ ಪುಟ್ಟ ಮಕ್ಕಳು ಕೂಡ ಕಾರಿನ ಮೇಲೆ ಸಹಿ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಪಣ ತೊಟ್ಟರು.  ಇದನ್ನು ಫೀವರ್ ಎಫ್‌ಎಂ 104 ನೇರವಾಗಿ ಪ್ರಸಾರ ಮಾಡಿತು. ರೇವಾ ಮುಖ್ಯ ಕಾರ್ಯನಿರ್ವಾಹಕ ಆರ್.ಚಂದ್ರಮೌಳಿ ಮತ್ತಿತರರು ಪಾಲ್ಗೊಂಡಿದ್ದರು.

ಸಿನಿಪೊಲೀಸ್
ಬನ್ನೇರುಘಟ್ಟ ರಸ್ತೆಯಲ್ಲಿರುವ ಸಿನಿಪೊಲಿಸ್ ಚಿತ್ರ ಮಂದಿರ ರಾಯಲ್ ಮೀನಾಕ್ಷಿ ಮಾಲ್ ಸುತ್ತ ಮುತ್ತ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿತ್ತು. ಸಿನಿಪೊಲಿಸ್ ಸಿಬ್ಬಂದಿ `ಈ ದಿನ ನಾವು ಗಿಡ ನೆಟ್ಟೆವು; ನೀವು?~ ಎಂಬ ಸಂದೇಶದ ಟೀ ಶರ್ಟ್ ಧರಿಸಿ ಜನ ಜಾಗೃತಿ ಮೂಡಿಸಿದರು.

ವಂಡರ್‌ಲಾ
ಮೈಸೂರು ರಸ್ತೆಯ ಅಮ್ಯೂಸ್‌ಮೆಂಟ್ ಪಾರ್ಕ್ `ವಂಡರ್ ಲಾ~ ವಿಶ್ವ ಪರಿಸರ ದಿನದಂದು ಪಾರ್ಕ್‌ಗೆ ಭೇಟಿ ನೀಡಿದ ಎಲ್ಲರಿಗೂ ಸಸಿ ವಿತರಿಸಿತು. ಈ ಸಂದರ್ಭದಲ್ಲಿ ಕೈತೋಟ ಪ್ರಿಯರಿಗಾಗಿ ಸಲಹಾ ಸೇವೆಯನ್ನೂ ಒದಗಿಸಲಾಯಿತು.

`ನಾವು ಪರಿಸರ ಸಂರಕ್ಷಣೆಗೆ ಸದಾ ಆದ್ಯತೆ ನೀಡುತ್ತ ಬಂದಿದ್ದೇವೆ. ಈ ಮನೋಭಾವವನ್ನು ನಾಗರಿಕರಲ್ಲಿ ಮೂಡಿಸುವ ಸಲುವಾಗಿ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ~ ಎಂದು ವಿವರಿಸಿದರು ಸಹಾಯಕ ವ್ಯವಸ್ಥಾಪಕ ಎಚ್.ಎಸ್.ರುದ್ರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.