ADVERTISEMENT

ಪರಿಸರ ಸಂರಕ್ಷಣೆಗೂ ನೃತ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಆ ಸಂಜೆ ಕೆಂಪಾದ ರಂಗಿನೋಕುಳಿ ಮೆತ್ತಿಕೊಂಡಿದ್ದ ಗಗನವು ಮದುಮಗಳ ಮೊಗವನ್ನು ನಾಚಿಸುವಂತಿತ್ತು. ತಂಗಾಳಿ ಹೊತ್ತುತಂದ ಹೂವಿನ ಗಂಧವನ್ನು ಮೈಗೆ ಪೂಸಿ ಚಿಗುರೆಲೆಗಳ ಮಧ್ಯೆ ಸುಳಿದು ಹೋಯಿತು. ಆ ಸುಂದರ ಮುಸ್ಸಂಜೆಯನ್ನು ಆಸ್ವಾದಿಸಲು ಮನ ಸಜ್ಜಾಗುತ್ತಿರುವ ರಸ ಸಮಯದಲ್ಲಿ   ಪುಟಾಣಿಗಳ ಕಲರವ ನಿಧಾನವಾಗಿ ಕಿವಿಯ ಮೇಲೆ ಬೀಳಹತ್ತಿತು ಜೊತೆಗೆ ಸಾವಿರ ಕನಸುಗಳನ್ನು ಹೊತ್ತು ನಿಂತ ಹುಡುಗ ಹುಡುಗಿಯರ ಗುಂಪು ತಾಳಕ್ಕೆ ತಕ್ಕ ಹೆಜ್ಜೆ ಹಾಕಲು ಹವಣಿಸುತ್ತಿತ್ತು.

ಈ ಸುಂದರ ದೃಶ್ಯ ಕಂಡುಬಂದಿದ್ದು ಕೋರಮಂಗಲದ ಸೇಂಟ್ ಜಾನ್ಸ್ ಅಡಿಟೋರಿಯಂನಲ್ಲಿ. `ಪರಿಸರ ರಕ್ಷಣೆ~ ಕುರಿತ ಸಂದೇಶವನ್ನು ವಿಭಿನ್ನವಾಗಿ ಸಾರುವ ನಿಟ್ಟಿನಲ್ಲಿ ಡ್ಯಾನ್ಸ್ ಕಲಾ ಅಕಾಡೆಮಿಯು ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಭಾರತೀಯ ಶಾಸ್ತ್ರೀಯ ಮತ್ತು ಪಾಶ್ಚಾತ್ಯ ನೃತ್ಯ ಎರಡರ ಸಮ್ಮಿಳನದ ವಿಶೇಷ ಕಾರ್ಯಕ್ರಮ ಇದಾಗಿದ್ದು, ಡ್ಯಾನ್ಸ್‌ಕಲಾ ಅಕಾಡೆಮಿಯ ಸುಮಾರು 120 ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಾಶ್ಚಾತ್ಯ, ಭಾರತೀಯ, ಬಾಲಿವುಡ್, ಜಾನಪದ ಇನ್ನಿತರ ವಿವಿಧ ನೃತ್ಯ ಕಲೆಗಳು ಪ್ರದರ್ಶನಗೊಂಡವು. ತಮ್ಮ ಮಕ್ಕಳ ನೃತ್ಯವನ್ನು ಕಣ್ತುಂಬಿಕೊಳ್ಳಲು ಹಂಬಲದಿಂದ ಬಂದ ಹೆತ್ತವರು. ತಾನೇನು ಕಡಿಮೆ ಇಲ್ಲ ಅಪ್ಪ-ಅಮ್ಮನಿಗೆ ತನ್ನ ಪ್ರತಿಭೆಯನ್ನು ತೋರಿಸುತ್ತೇನೆ ಎಂಬ ಹೆಮ್ಮೆಯಿಂದ ಆ ಪುಟಾಣಿಗಳು ವೇದಿಕೆಯ ಮೇಲೆ ಹೆಜ್ಜೆ ಇಟ್ಟರು. ಯಾವುದೇ ರೀತಿಯ ಅಳುಕು ಅವರ ಕಣ್ಣಲ್ಲಿ ಇಣುಕುತ್ತಿರಲಿಲ್ಲ.

ಪುಟಾಣಿ ಮಕ್ಕಳಿಂದ ಹಿಡಿದು ಯುವಕ-ಯುವತಿಯರು ವೇದಿಕೆಯಲ್ಲಿ ತಮ್ಮ ಹೆಜ್ಜೆ-ಗೆಜ್ಜೆಯ ಸದ್ದು ಮೂಡಿಸಿದರು. ನೆರೆದ ಪ್ರೇಕ್ಷಕ ವರ್ಗದ ಕೂಗು ಮುಗಿಲು ಮುಟ್ಟಿತ್ತು.
ಒಂದಿಷ್ಟು ಪ್ರಯತ್ನ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಆದ್ದರಿಂದ ನೃತ್ಯದ ಮೂಲಕ ಜಾಗೃತಿ ಮೂಡಿಸುವ ಸಲುವಾಗಿಯೂ ಈ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನೃತ್ಯ ಸಂಯೋಜಕಿ ಮತ್ತು ಅಕಾಡೆಮಿ ಸಂಸ್ಥಾಪಕಿ ಮನಿಶಾ ಮೆಹ್ತಾ ತಿಳಿಸಿದರು.

ಒನ್ ಲವ್, ಚಾರ್ ಬಾಜ್ ಗಯೆ,ನವರಸ್, ಧೋಲ್ನಾ, ಇಂಗ್ಲಿಷ್ ಹಿಪ್ ಹಾಪ್, ತರ್ಜಾನ್ ಅಂಡ್ ಜಾನೆ, ಚಮಕ್ ಚಲೊ, ಧೀಮ್ ತಾಲ್, ದಶಾವತಾರ್, ಗೊ ಗ್ರೀನ್ ನೃತ್ಯ ಹೀಗೆ ಹತ್ತು ಹಲವು ಬಗೆಯ ನೃತ್ಯ ಕಾರ್ಯಕ್ರಮಗಳು ಅಲ್ಲಿ ಜರುಗಿದವು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ಆಗಮಿಸಿದ್ದರು. 

ಮೆಲುದನಿಯ ಸಂಗೀತ, ತುಂಬಿ ತುಳುಕುತ್ತಿರುವ ಜನಸಾಗರ ಆ ಸಂಜೆಯ ನೃತ್ಯಕ್ಕೆ ಸಾಕ್ಷಿಯಾಗಿತ್ತು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.