ADVERTISEMENT

ಪರ್ಶಿಯನ್ ಟೆರೇಸ್‌ನಲ್ಲಿ ಬೆಳದಿಂಗಳೂಟ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಬೆಂಗಳೂರಿನಲ್ಲಿ ಕೂಡ ಒಂದು ಸನ್‌ಸೆಟ್ ಪಾಯಿಂಟ್ ಇದೆ ಗೊತ್ತಾ. ಇದೇನು ನಗರವನ್ನು ಕಡಲು ಅಥವಾ ಮಲೆ ಘಟ್ಟಗಳು ಯಾವಾಗ ಸುತ್ತುವರಿದುಕೊಂಡವು ಎಂದು ಯೋಚಿಸಬೇಡಿ. ಬ್ರಿಗೇಡ್ ಗೇಟ್‌ವೇನಲ್ಲಿರುವ ಶೆರಟಾನ್ ಹೋಟೆಲ್ ಈಗ ನಗರದ ಹೊಸ ಸನ್‌ಸೆಟ್ ಪಾಯಿಂಟ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.

ಈ ತಾರಾ ಹೋಟೆಲ್‌ನ ಟೆರೇಸ್ ಮೇಲೆ ನಿಂತು ನಭೋಮಂಡಲವನ್ನು ದಿಟ್ಟಿಸಿದರೆ ತಾರೆಗಳೆಲ್ಲವೂ ಕೈಗೆಟುಕುವಂತೆ ಭಾಸವಾಗುತ್ತದೆ. ಈ ಹೋಟೆಲ್ ಸುತ್ತುವರಿದಿರುವ ಬಹುಮಹಡಿ ಕಟ್ಟಡಗಳ ನಡುವೆ ಸೂರ್ಯಾಸ್ತವನ್ನು ವೀಕ್ಷಿಸುವುದು ಒಂದು ಅನಿರ್ವಚನೀಯ ಆನಂದವನ್ನು ತಂದುಕೊಡುತ್ತದೆ.

ತನ್ನ ವಿಶಿಷ್ಟ ವಿನ್ಯಾಸ ಹಾಗೂ ಸೇವೆಯಿಂದ ಅನೇಕ ಪ್ರಶಸ್ತಿಗಳ ಗರಿ ಸಿಕ್ಕಿಸಿಕೊಂಡಿರುವ ರೆಸ್ಟೋರೆಂಟ್ `ರೂಪ್‌ಟಾಪ್ ಪರ್ಶಿಯನ್ ಟೆರೇಸ್~. ಇದು ಶೆರಟಾನ್ ಹೋಟೆಲ್‌ನ ನಾಲ್ಕನೇ ಅಂತಸ್ತಿನಲ್ಲಿದೆ.

ಈ ರೆಸ್ಟೋರಾದಲ್ಲಿ ನಿಂತು ಗಗನ ಚುಂಬಿ ಕಟ್ಟಡಗಳ ನಡುವೆ ಸೂರ್ಯ ಅಸ್ತಂಗತನಾಗುವುದನ್ನು ಕಣ್ತುಂಬಿಕೊಳ್ಳುವುದು ಖುಷಿಯ ವಿಚಾರ. ಮೇಘರಹಿತ ಆಕಾಶದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಬೆಂಗಳೂರು ಕೂಡ ಮಧ್ಯಪ್ರಾಚ್ಯದಂತೆ ಬದಲಾಗುತ್ತದೆ.
 
ಈ ವರ್ಣನೆ ಅತಿಶಯೋಕ್ತಿ ಅನಿಸಿದರೂ ಕೂಡ ನಮ್ಮ ಮನಸ್ಸಿನಲ್ಲಿ ಈ ಭಾವ ಹುಟ್ಟುತ್ತದೆ. ಸೂರ್ಯ ಮರೆಯಾಗುತ್ತಿದ್ದಂತೆ ಚಂದ್ರ ತನ್ನ ತಣ್ಣನೆಯ ನಗು ಬೀರುತ್ತಾ ಪ್ರತ್ಯಕ್ಷನಾಗುತ್ತಾನೆ. ಇಲ್ಲಿಗೆ ಬಂದವರು ಚಂದ್ರನ ಪೂರ್ಣ ಬಿಂಬವನ್ನು ನೋಡುತ್ತಾ ಬೆಳದಿಂಗಳೂಟಕ್ಕೆ ಅಣಿಯಾಗಬಹುದು.

ಹೋಟೆಲ್‌ನ ಉದ್ದಗಲಕ್ಕೂ ಹಾಸಿರುವ ಬಿಳಿ ಅಮೃತ ಶಿಲೆಯಲ್ಲಿ ಪ್ರತಿಫಲನಗೊಳ್ಳುವ ಮುಖ, ಮಧುರ ನಿನಾದವನ್ನು ಸ್ಫುರಿಸುವ ಪುಟ್ಟತೊರೆ, ಪಕ್ಕದಲ್ಲಿ ಕುಳಿತು ಕೀಬೋರ್ಡ್ ನುಡಿಸುವ ವಿದೇಶಿ ಹೆಣ್ಣು ಮಗಳು, ಆಕೆಗೆ ಗಿಟಾರ್‌ನಲ್ಲಿ ಸಾಥ್ ನೀಡುವ ನೀಲಿಕಣ್ಣಿನ ಗುಂಗುರು ಕೂದಲಿನ ಹುಡುಗ, ಹಿಂದಿನ ಗೋಡೆಯೊಳಗೆ ಕೆನ್ನಾಲಿಗೆ ಚಾಚಿರುವ ಬೆಂಕಿ ಜ್ವಾಲೆ... ವಾವ್ ಇವೆಲ್ಲದರ ನಡುವೆ ರುಚಿಕಟ್ಟಾದ ಪರ್ಶಿಯನ್ ಊಟ ಸವಿಯುವುದೇ ಮಹದಾನಂದ.
 
ಪರ್ಶಿಯನ್ ಟೆರೇಸ್ ರೆಸ್ಟೋರೆಂಟ್ ಈಗ ಕಬಾಬ್ ಮತ್ತು ಫೋಲೋಸ್ ಫುಡ್ ಫೆಸ್ಟಿವಲ್ ಅನ್ನು ಆಯೋಜಿಸಿದೆ. ಕಬಾಬ್ ಪ್ರಿಯರು ಇಲ್ಲಿಗೆ ಭೇಟಿ ನೀಡಿ ತಮ್ಮಗಿಷ್ಟವಾದ ಕಬಾಬ್ ಸವಿಯಬಹುದು.

ಸಂಪೂರ್ಣವಾಗಿ ಗಾಜಿನಿಂದ ತಯಾರಾದ ಫಳಫಳಿಸುವ ಊಟದ ಟೇಬಲ್ ಮೇಲೆ ಕುಳಿತಾಕ್ಷಣ ಕಬಾಬ್ ಉತ್ಸವಕ್ಕೆಂದು ವಿಶೇಷವಾಗಿ ತಯಾರಾದ ಪರ್ಶಿಯನ್ ಯಾಗರ್ಟ್ (ದೂಘ್-ಮೊಸರಿನಿಂದ ತಯಾರಾದ ವಿಶೇಷ ಪಾನೀಯ) ನಿಮ್ಮ ಕೈಸೇರುತ್ತದೆ.

ಮೇಲಿರುವ ಚಂದ್ರನನ್ನು ನೋಡುತ್ತಾ ಒಂದೊಂದೇ ಗುಟುಕು ಗುಟುಕರಿಸುತ್ತಾ ಅದರ ಸವಿಯನ್ನು ಆಸ್ವಾದಿಸಬಹುದು. ನಂತರದಲ್ಲಿ ಎಣ್ಣೆ, ಮದ್ಯ, ಹುಳಿ, ಸಬ್ಬಸಿಗೆ ಸೊಪ್ಪು, ಈರುಳ್ಳಿ ಸೀಳನ್ನು ಧನಿಯಾ ಮತ್ತು ಸಾಂಬಾರ ಮಿಶ್ರಣದಲ್ಲಿ ಚಿಕನ್‌ನ ತುಂಡುಗಳನ್ನು ಹಾಕಿ ತಯಾರಿಸಿದ ವಿಶೇಷ ಖಾದ್ಯ ಜೂ-ಜೇ ಕು-ಬಿ-ದೈಹ್ ನಾಲಗೆ ಮೇಲೆ ಇಟ್ಟಾಕ್ಷಣ ರುಚಿಯ ಕಚಗುಳಿ ಶುರುವಾಗುತ್ತದೆ.

ಬಕ್ಧರಿ ಕಬಾಬ್ ಕುರಿಯ ಸೊಂಟದ ಭಾಗದ ಮಾಂಸವನ್ನು ಬಳಸಿ ತಯಾರಿಸಿದ ವಿಶೇಷ ಖಾದ್ಯ. ಇದನ್ನು ಕೇಸರಿ, ಮೊಸರು ಹಾಗೂ ಸೂಮ್ಯಾಕ್ ಒಣ ಎಲೆಗಳ ಪುಡಿಯಲ್ಲಿ ಅದ್ದಿ ಕೊಡುತ್ತಾರೆ. ಶಿರಾಸ್ ಕಬಾಬ್, ಗ್ರೂಪರ್ ಎಂಬ ಒಂದು ಬಗೆಯ ಸಮುದ್ರ ಮೀನು, ಪ್ರಾನ್ಸ್ ಹಾಗೂ ಕಡಲ ಏಡಿಗಳಿಂದ ತಯಾರಾದ ವಿಶಿಷ್ಟ ತಿನಿಸು.

ಬಾಯಲ್ಲಿರಿಸಿಕೊಂಡರಷ್ಟೇ ಅಲ್ಲ ನೋಡಿದಾಕ್ಷಣ ಬಾಯಲ್ಲಿ ನೀರೂರುತ್ತದೆ. ಇವುಗಳ ಜತೆಗೆ ಇರಾನಿಯನ್ ವೆಜಿಟೇಬಲ್ ಕಬಾಬ್, ದಾಳಿಂಬೆಯನ್ನು ಅಜ್ಜಿ ಬಜ್ಜಿ ಮಾಡಿ ಅದಕ್ಕೆ ಜೇನನ್ನು ಮಿಶ್ರಣ ಮಾಡಿ ತಯಾರಿಸಿದ ಗ್ರಿಲ್ಡ್ ಸ್ಕ್ವಾಶ್ ಕಬಾಬ್, ವೆಜಿಟೇಬಲ್ ಸಲೂನಾ ಸಸ್ಯಹಾರಿ ಪ್ರಿಯರಿಗೆ ತುಂಬಾ ಇಷ್ಟವಾಗುತ್ತದೆ.

ಉತ್ತರ ಕರ್ನಾಟಕದವರಿಗೆ ರೊಟ್ಟಿ ಇರುವಂತೆ ಪರ್ಶಿಯನ್ನರಿಗೆ ಅನ್ನ ನೆಚ್ಚಿನ ಆಹಾರ. ಅವರ ಊಟದಲ್ಲಿ ಅನ್ನವನ್ನು ಧಾರಾಳವಾಗಿ ಬಳಕೆ ಮಾಡುತ್ತಾರೆ. ಇಲ್ಲಿನ ಜನರು ಬೆಳೆಯುವ ಅಕ್ಕಿ ವಿಶ್ವದ ಅನೇಕ ದೇಶಗಳಿಗೆ ರಫ್ತಾಗುತ್ತದೆ. ಮುಂದೆ ಇರಾನಿಯನ್ ಊಟದಲ್ಲಿ ಕೂಡ ಅನ್ನದ ಬಳಕೆ ಹೆಚ್ಚಾಯಿತು.

ಅವರು ಅದ್ಭುತ ರುಚಿ ಹೊಂದಿರುವ ಅಕ್ಕಿಯನ್ನು ಬಳಸಿ ವೈವಿಧ್ಯಮಯವಾದ ಅನ್ನದ ತಿನಿಸುಗಳನ್ನು ತಯಾರಿಸುತ್ತಾರೆ. ರುಚಿಕರವಾದ ಈ ಅನ್ನವನ್ನು ಒಂದು ಪ್ಲೇಟ್‌ಮೇಲೆ ಇರಿಸಿ ಅದರ ಮೇಲೆ ವಿವಿಧ ಬಗೆಯ ತರಕಾರಿಗಳು ಹಾಗೂ ಮಾಂಸ ಅಥವಾ ಮೀನನ್ನು ಸೇರಿಸಿ ತಿನ್ನುತ್ತಾರೆ.

ಇಲ್ಲಿನ ಸಾಂಪ್ರದಾಯಿಕ ಇರಾನಿ ಮತ್ತು ಪೋಲೆಂಡ್‌ನ ವೈವಿಧ್ಯಮಯ ತಿನಿಸುಗಳದ್ದು ಮತ್ತೊಂದು ವಿಶೇಷ. ಬಿಸಿ ನೀರಿಯಲ್ಲಿ ಬೇಯಿಸಿದ ತಯಾರಿಸಿದ ಕೋರೋಸ್ಟ್-ಇ ಫೆಸೆಸ್‌ಜೋನ್, ಕೋ-ರೆಷ್ ಮಹಿ ಮೊದಲಾದ ಮಾಂಸದ ತಿನಿಸುಗಳು ಮನಕದಿಯುತ್ತವೆ.
 
ಮಾಗ ಫೋಲೊ ಬಾಸುಮತಿ ರೈಸ್‌ನ ಜತೆಗೆ ಪ್ರಾನ್ಸ್, ತರಕಾರಿ ಹಾಗೂ ಕೇಸರಿ ಮಿಶ್ರಣದಿಂದ ತಯಾರಾದ ರುಚಿಕಟ್ಟಾದ ಆಹಾರ. ಜತೆಗೆ ಬಘಲಿ ಫೋಲೊ ಕೂಡ ಇಲ್ಲಿ ಲಭ್ಯವಿದೆ. ವೈನ್ ಪ್ರಿಯರಿಗೆಂದೇ ಈ ಉತ್ಸವದಲ್ಲಿ ವಿಶೇಷವಾಗಿ ವೈನ್ ಮೆನು ಕೂಡ ಸಿದ್ಧಪಡಿಸಲಾಗಿದೆ. ರೆಸ್ಟೋರಾ ಸಂಜೆ 6.30ರಿಂದ 11.30ರ ವರೆಗೆ ತೆರೆದಿರುತ್ತದೆ. ಕಾದಿರಿಸಲು 4252 1000.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.