ADVERTISEMENT

ಪಿಯಾನೋ ಕೊಳ್ಳುವವರು ಹೆಚ್ಚಾಗಿದ್ದಾರೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಬೆಂಗಳೂರಿನಲ್ಲಿ ಮೂರು ದೊಡ್ಡ ಪಿಯಾನೋ ಅಂಗಡಿಗಳಿವೆ ಅಂದರೆ ನಿಮಗೆ ಆಶ್ಚರ್ಯವಾಗಬಹುದು. ಎರಡು ಕೊರಮಂಗಲದಲ್ಲಿವೆ, ಮೂರನೆಯದು ಇಂದಿರಾನಗರದಲ್ಲಿದೆ. ಅಷ್ಟೊಂದು ಪಿಯಾನೋ ವಾದಕರು, ವಿದ್ಯಾರ್ಥಿಗಳು ಈ ಊರಿನಲ್ಲಿದ್ದಾರೆಯೇ ಎಂದು ನೀವು ಕೇಳಬಹುದು. ಕೋರಮಂಗಲದ ಅಂಗಡಿಗಳಲ್ಲಿ ಕಡಿಮೆಯೆಂದರೆ ಹತ್ತು-ಹನ್ನೆರಡು ಪಿಯಾನೋ ಆಯ್ಕೆಗೆ ಇಟ್ಟಿರುತ್ತಾರೆ. ಬೆಂಗಳೂರಿನಲ್ಲಿ ನೂರಾರು ವರ್ಷದಿಂದ ಇರುವ `ಮ್ಯೂಸಿಕಲ್ಸ್~ ಥರದ ವಾದ್ಯದ ಅಂಗಡಿಗಳ ಬಗ್ಗೆ ನನಗೆ ಗೊತ್ತಿದ್ದರೂ, ಇಷ್ಟು ದೊಡ್ಡ ಪಿಯಾನೋ ಅಂಗಡಿಗಳಿವೆ ಎಂದು ಕಲ್ಪನೆಯೇ ಇರಲಿಲ್ಲ.

ಸಾಮಾನ್ಯವಾಗಿ ಮ್ಯೂಸಿಕಲ್ಸ್ ಥರದ ಅಂಗಡಿಗಳಲ್ಲಿ ಬೇರೆ ಬೇರೆ ವಾದ್ಯಗಳಿದ್ದರೂ, ಪಿಯಾನೋ ಇಡುವಷ್ಟು ಜಾಗವಿರುವುದಿಲ್ಲ. ಆದರೆ ಈ ಹೊಸ ಪಿಯಾನೋ ಅಂಗಡಿಗಳು ದೊಡ್ಡದಾಗಿವೆ. ಬೆಂಗಳೂರಿನವರಲ್ಲದೆ ಬೇರೆ ಊರಿನವರೂ ಬಂದು ಜನ ಇಲ್ಲಿ ಆ ವಾದ್ಯವನ್ನು ಕೊಳ್ಳುತ್ತಾರೆ.

ಈಚೆಗೆ ಪಿಯಾನೋ ಸ್ವಲ್ಪ ಹಳೆಯ ತಲೆಮಾರಿನ ವಾದ್ಯದ ಥರ ಹಲವರಿಗೆ ಕಾಣುತ್ತಿದೆ. ಬೆಂಗಳೂರು ಬ್ರಿಟಿಷರು ದಂಡು ಮಾಡಿಕೊಂಡು ನೆಲೆಸಿದ್ದ ಊರು. ಹಾಗಾಗಿ ಇಲ್ಲಿ ಯೂರೋಪಿನ ಕ್ಲ್ಯಾಸಿಕಲ್ ಸಂಸ್ಕೃತಿಯ ಉತ್ಕೃಷ್ಟ ವಿಷಯಗಳು ಕೆಲವು ಉಳಿದುಕೊಂಡಿವೆ. ಪಾಪ್ ಸಂಸ್ಕೃತಿ ಹೆಚ್ಚಾದಂತೆ ಪಿಯಾನೋ ಸಂಗೀತವನ್ನು ಸ್ವಲ್ಪ ಹಿಂದಕ್ಕೆ ತಳ್ಳಿದೆ. ತಾತ ಪಿಯಾನೋ ವಾದಕನಾಗಿದ್ದರೆ ಮೊಮ್ಮಗ ಉಗ್ರವಾಗಿ ಎಲೆಕ್ಟ್ರಿಕ್ ಗಿಟಾರ್ ಬಾರಿಸುವ ರಾಕ್ ಅಥವಾ ಮೆಟಲ್ ಕಲಾವಿದನಾಗಿರುವ ಉದಾಹರಣೆಗಳು ಇಲ್ಲಿ ತುಂಬಾ ಇವೆ. ಆದರೆ `ಕ್ಲಾಸಿಸಿಸಂ~ ಅಷ್ಟು ಸುಲಭವಾಗಿ ಮರೆಯಾಗುವುದಿಲ್ಲ ಎನ್ನುವುದಕ್ಕೆ ಪಿಯಾನೋ ಅಂಗಡಿಗಳು ಸಾಕ್ಷಿಯಾಗಿವೆ.   

ಬೆಲೆಯ ವಿಷಯದಲ್ಲಿ, ಪಿಯಾನೋ ಎಲ್ಲರೂ ಕೊಳ್ಳುವಂಥ ವಾದ್ಯವಂತೂ ಅಲ್ಲ. ಕನಿಷ್ಠ ಬೆಲೆಯ ಪಿಯಾನೋಗೆ ರೂ 1.35 ಲಕ್ಷ. ಇದು ಎಂಟ್ರಿ ಲೆವೆಲ್ ಮಾಡೆಲ್ ಅಂತಾರಲ್ಲ ಹಾಗಿರುತ್ತೆ. `ರಿಟ್ ಮುಲ್ಲರ್~ ಎಂಬ ಜರ್ಮನ್ ಹೆಸರಿರೋ ಕಂಪೆನಿ ಕಡಿಮೆ ಬೆಲೆಯ ಒಂದು ಮಾಡೆಲ್ ಮಾರುತ್ತಿದೆ. ಇಂದು ಹೆಚ್ಚು ಸಂಖ್ಯೆಯ ಪಿಯಾನೋಗಳು ಚೀನಾದಲ್ಲಿ ತಯಾರಾಗುತ್ತವೆ. `ಪರ್ಲ್ ರಿವರ್~ ಎಂಬ ಹೆಸರಿನ ಚೀನೀ ಬ್ರಾಂಡ್ ಪ್ರಪಂಚದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಪಿಯಾನೋ.

ಸುಮಾರಾಗಿರೋ ಪಿಯಾನೋ ಅಂದರೆ ಎರಡು ಲಕ್ಷ. ನಾಲ್ಕು ಲಕ್ಷ ಕೊಟ್ಟರೆ ಬಾಸ್ಟನ್ ಅನ್ನುವ ಚೆನ್ನಾಗಿರುವ ಮಾಡೆಲ್ ಸಿಗುತ್ತದೆ. `ಯಮಾಹ~, `ಕವಾಯ್~ ಪಿಯಾನೋಗಳು `ಪರ್ಲ್ ರಿವರ್~ನಂಥ ಬ್ರಾಂಡ್‌ಗಳಿಗಿಂತ ದುಬಾರಿ. `ಸ್ಟೇಯ್ನವೆ~ ಎಲ್ಲಕಿಂತ ಹೆಚ್ಚು ಬೆಲೆಯ ಪಿಯಾನೋ. ಸುಮಾರು 20 ಲಕ್ಷ ಬೆಲೆ ಬಾಳುವ ಈ ಬ್ರಾಂಡ್ ಕೂಡ ಬೆಂಗಳೂರಿನಲ್ಲಿ ಒಮ್ಮಮ್ಮೆ ಮಾರಾಟವಾಗುತ್ತಿದೆಯಂತೆ. ಬೆಂಗಳೂರಿನ ಲಿಂಗರಾಜಪುರಂ ಕಡೆ ಆಂಗ್ಲೋ ಇಂಡಿಯನ್ಸ್ ಹಾಗೂ ಮಂಗಳೂರಿನಿಂದ ಬಂದ ರೋಮನ್ ಕ್ಯಾಥೋಲಿಕ್ಸ್ ಇದ್ದಿದರಿಂದಲೋ ಏನೋ ಅಲ್ಲಿ ಸೆಕಂಡ್ ಹ್ಯಾಂಡ್ ಪಿಯಾನೋಗಳು ಸಿಗುವ ಸಾಧ್ಯತೆ ಹೆಚ್ಚು. ಕೆಲವರಂತೂ ಕೆಟ್ಟು ಹಾಳಾಗಿರುವ ಅಪ್ಪನ ಅಥವಾ ತಾತನ ಕಾಲದ ಪಿಯಾನೋಗಳನ್ನು ಇಟ್ಟುಕೊಂಡು ದೊಡ್ಡ ಬೆಲೆಯನ್ನು ನಿರೀಕ್ಷಿಸುತ್ತಿರುತ್ತಾರೆ. ಈ ವಾದ್ಯಗಳ ಹುಚ್ಚೇ ಹಾಗೆ!

ಪಿಯಾನೋ ಕೊಳ್ಳುವ ಎಲ್ಲರೂ ಸಂಗೀತಗಾರರೋ ಸಂಗೀತ ಪ್ರೇಮಿಗಳೋ ಆಗಿರಬೇಕೆಂದು ಎಂದು ನಾವು ನಂಬಿರುತ್ತೇವೆ. ಆದರೆ ಮೊನ್ನೆ ಅಂಗಡಿಯವರೊಬ್ಬರು ಹೇಳಿದ ವಿಷಯ ಕೇಳಿ- ಯಾರೋ ಬಂದು ಐದು ಲಕ್ಷ ಕೊಟ್ಟು ಒಂದು ಪಿಯಾನೋ ಕೊಂಡರಂತೆ. ಅದು ನುಡಿಸುವುದಕ್ಕಲ್ಲ, ಹೊಸ ಮನೆಯ ಸ್ಟೇರ್‌ಕೇಸ್ ಹತ್ತಿರ ಇಟ್ಟರೆ ಚೆನ್ನಾಗಿ ಕಾಣುತ್ತದೆ ಎಂದು. ಅವರಿಗೆ ಅದರ ಶಬ್ದ ಬೇಕಾಗಿರಲಿಲ್ಲ, ಅದರ ನೋಟ ಸಾಕಾಗಿತ್ತು! ಇಂಟೀರಿಯರ್ಸ್‌ ಮಾಡುವವರಿಗೂ ಪಿಯಾನೋ ಒಂದು ಅಲಂಕಾರದ ವಸ್ತುವಾಗಿ ಕಾಣುತ್ತಿದೆ.

ಇಂಥ ಪಿಯಾನೋ ಕೊಳ್ಳುವಷ್ಟು ದುಡ್ಡಿಲ್ಲದವರು ಡಿಜಿಟಲ್ ಪಿಯಾನೋಗಳನ್ನು ನೋಡಬಹುದು. ಇವು ಸುಮಾರು 20 ಸಾವಿರ ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಒಂದು ಲಕ್ಷ ಕೊಟ್ಟರೆ `ಯಮಾಹ~ ಅಥವಾ `ಕವಾಯ್~ ಕಂಪನಿಯ ಡಿಜಿಟಲ್ ಪಿಯಾನೋ ಕೊಳ್ಳಬಹುದು. ಆದರೆ ಬಜೆಟ್ ಪಿಯಾನೋಗಳನ್ನು ಮಾಡುವ ಕಂಪೆನಿಯೆಂದರೆ `ಕ್ಯಾಸಿಯೋ~.

ಡಿಜಿಟಲ್ ಪಿಯಾನೋಗೂ ಮಾಮೂಲಿ ಕೀಬೋರ್ಡ್‌ಗೂ ತುಂಬಾ ವ್ಯತ್ಯಾಸವಿರುತ್ತದೆ. ಡಿಜಿಟಲ್ ಪಿಯಾನೋ ವಿದ್ಯುತ್‌ನಿಂದ ಚಾಲನೆಯಾಗುತ್ತದೆ. ನಿಜವಾದ ಪಿಯಾನೋ ತಂತಿಗೆ ಸುತ್ತಿಗೆ ಬಡಿದು ಶಬ್ದ ಹೊರಹೊಮ್ಮಿಸುತ್ತದೆ. ಡಿಜಿಟಲ್ ಪಿಯಾನೋದ ವಿಶೇಷವೆಂದರೆ ಅದರ ಕೀಗಳು ನಿಜವಾದ ಪಿಯಾನೋದಲ್ಲಿದಂತೆಯೇ ಭಾರವಾಗಿರುತ್ತವೆ. `ಕೀಬೋರ್ಡ್~ನಲ್ಲಿ ಇರುವಂತೆ ಡಿಜಿಟಲ್ ಪಿಯಾನೋದಲ್ಲಿ ನೂರಾರು ನಮೂನೆಯ `ಟೋನ್~ಗಳಿರುವುದಿಲ್ಲ. ಏರೋಪ್ಲೇನ್ ಹಾರುವ ಶಬ್ದ, ಟೆಲಿಫೋನ್ ರಿಂಗ್ ಆಗುವ ಶಬ್ದ ಇರುವುದಿಲ್ಲ. ಡಿಜಿಟಲ್ ಪಿಯಾನೋಗೆ ನೀವು ಹೆಚ್ಚು ದುಡ್ಡು ಕೊಡುವುದು ಅದರ ಕೀಗಳ ಅನುಭೂತಿಗಾಗಿ.

ಡಬಲ್ ರೋಡ್ ದಾಟಿ ದಕ್ಷಿಣ ಬೆಂಗಳೂರಿಗೆ ಬಂದರೆ ಪಿಯಾನೋ ಕಲಿಸುವವರ ಸಂಖ್ಯೆ ಕಡಿಮೆ. ಆದರೆ ದಂಡು ಪ್ರದೇಶದಲ್ಲಿ, ಕೋರಮಂಗಲದಲ್ಲಿ ನಿಮಗೆ ಶಿಕ್ಷಕರು ಸಿಗುವ ಸಾಧ್ಯತೆ ಹೆಚ್ಚು. ಲಿಂಗರಾಜಪುರಂನಲ್ಲಿ ನೀಸಿಯ ಮೆಜೋಲಿ ಎಂಬ  ಹೆಸರಾಂತ ಪಿಯಾನೋ ವಾದಕರಿದ್ದಾರೆ. ಅವರು ಕಲಿಸುತ್ತಾರೆ ಕೂಡ. ತುಂಬಾ ಕಟ್ಟುನಿಟ್ಟಿನ ಶಿಕ್ಷಕರು. ಹಾಗೆಯೇ `ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್~ನಲ್ಲಿ ಪಿಯಾನೋ ಕಲಿಸುವ ಶಾಲೆಯೇ ಇದೆ. ಇವರಲ್ಲದೆ ಸುಮಾರು ಖಾಸಗಿ ಶಾಲೆಗಳೂ ಇವೆ.

ಟೀವಿ ಬಂದು ಕನ್ನಡದ ಗಮಕ ಕಲೆಗೆ ಇಂಬುಗೊಟ್ಟಂತೆ ಸಾಫ್ಟ್‌ವೇರ್ ಜನ ಬಂದು ಇಲ್ಲಿ ಪಿಯಾನೋ ಸಂಗೀತಕ್ಕೆ ಇಂಬುಗೊಟ್ಟಿದ್ದಾರೆಯೇ? ಹಾಗೆ ನೇರ ಸಂಬಂಧ ಇಲ್ಲದಿದ್ದರೂ ಬೆಂಗಳೂರಿನ ಕೊಳ್ಳುವ ಶಕ್ತಿ ಹೆಚ್ಚಿಸಿ ಪಿಯಾನೋ ವ್ಯಾಪಾರವನ್ನು ವೃದ್ಧಿಸಿದ್ದಾರೆಯೇ?

ಹಾಳು ಹಂಪ್ ದೃಶ್ಯ
ಅದೇನೋ ಗೊತ್ತಿಲ್ಲ, ಮತ್ತೆ ರಸ್ತೆಯ ಮಧ್ಯೆ`ಮೀಡಿಯನ್~ಗಳನ್ನು ಮುರಿದು ರಸ್ತೆ ಉಬ್ಬುಗಳನ್ನು ಮಾಡುತ್ತಿದ್ದಾರೆ. ವಾಹನಗಳ ವೇಗ ಬೆಂಗಳೂರಿನಲ್ಲಿ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆಫೀಸ್ ವೇಳೆಯಲ್ಲಿ ಹದಿನೈದು ಕಿಲೋಮೀಟರ್ ಚಲಿಸಬೇಕಾದರೆ ಒಂದು ಗಂಟೆಯಾದರೂ ಬೇಕು. ಹೀಗಿರುವಾಗ ಪ್ರತಿ ಸಣ್ಣ ಸಂದಿಗೂ ಉಬ್ಬುಗಳನ್ನು ಹಾಕಿ, ಈ ನಗರದ ಸಂಚಾರದ ಗತಿಯನ್ನು ಇನ್ನೂ ನಿಧಾನ ಮಾಡಲು ಹೊರಟಂತಿದೆ ನಮ್ಮ ನಗರಪಿತೃಗಳು. ಎಷ್ಟು ದೂರಕ್ಕೊಂದು ಉಬ್ಬು ಹಾಕಬಹುದು, ಅದರ ಎತ್ತರ ಎಷ್ಟಿರಬೇಕು ಎಂದು ಯಾವ ನಿಯಮಾವಳಿಯನ್ನೂ ಗಮನಿಸದೆ ಈ ಕಾಮಗಾರಿ ನಡೆಯುತ್ತಿದೆ. ವಾಹನ ಚಾಲಕರಿಗೆ ದಂಡ ವಿಧಿಸುವ ಹಾಗೆ ರಸ್ತೆ ಕಟ್ಟುವ ಮತ್ತು ನೋಡಿಕೊಳ್ಳುವ ನಿಯಮಗಳನ್ನು ಉಲ್ಲಂಘಿಸಿದ ಮುನಿಸಿಪಲ್ ಅಧಿಕಾರಿಗಳನ್ನೂ ಶಿಕ್ಷಿಸುವ ಹಾಗೆ ಕಾನೂನಿದ್ದರೆ ನಮ್ಮ ಊರು ಎಷ್ಟು ಚೆನ್ನಾಗಿರುತ್ತಿತ್ತೋ! 

ಬಾಲಮುರಳಿಯ ಫ್ಯೂಶನ್
ಹೋದ ಭಾನುವಾರ ಬಾಲಮುರಳಿಕೃಷ್ಣ ಅವರು ಬೆಂಗಳೂರಿನಲ್ಲಿ ಹಾಡಿದರು. ಅದೊಂದು ಫ್ಯೂಶನ್ ಕಛೇರಿ. ಇದೇ ಊರಿನ ಆದರೆ ಈಗ ಇಂಗ್ಲೆಂಡಲ್ಲಿ ನೆಲೆಸಿರುವ ಜ್ಯೋತ್ಸ್ನಾ ಶ್ರೀಕಾಂತ್ ಅವರೊಡನೆ ಸೇರಿ ಮಾಡಿದ ಕಾರ್ಯಕ್ರಮವದು. ಜ್ಯೋತ್ಸ್ನಾ ಒಳ್ಳೆಯ ವಯೋಲಿನ್ ವಾದಕಿ. ಜೊತೆಗೆ ಒಂದಿಷ್ಟು ಕೀತ್ ಪೀಟರ್ಸ್ ಥರದ ಹೆಸರುವಾಸಿ ಸಂಗೀತಗಾರರನ್ನು ರಂಗದ ಮೇಲೆ ಸೇರಿಸಿದ್ದರು. ಈ ಫ್ಯೂಶನ್ ಅನ್ನೋ ಪ್ರಕಾರ ಸುಗಮ ಸಂಗೀತದ ತರಹ ಮುಕ್ತವಾಗಿ ಪ್ರಾರಂಭವಾಗಿ ಈಗ ಅದರದ್ದೇ ಒಂದು ಸ್ವಲ್ಪ ಮಡಿವಂತಿಕೆಯ ಸ್ವರೂಪವನ್ನು ಪಡೆದುಕೊಂಡಿದೆ. `ಫ್ಯೂಶನ್ ಡ್ರೀಮ್ಸ~ ಎಂಬ ಈ ಕಾರ್ಯಕ್ರಮದಲ್ಲಿ ತುಂಬಾ ಒಳ್ಳೆ ಸಂಗೀತಗಾರರಿದ್ದರು, ಮತ್ತು ಕೆಲವು ಮಜಾ ಕ್ಷಣಗಳಿದ್ದವು. ಆದರೆ... ಫ್ಯೂಶನ್ ಬ್ಯಾಂಡ್‌ಗಳೆಲ್ಲವೂ ಹಿಂದುಸ್ತಾನಿ ರಾಗ ಜೋಗ (ಸ್ವಲ್ಪ ಕರ್ನಾಟಕದ ಸಂಗೀತದ ರಾಗ ನಾಟ ಇದ್ದ ಹಾಗೆ) ಏಕೆ ಆರಿಸಿಕೊಳ್ಳುತ್ತಾರೆ? ಎಲ್ಲರೂ ಕರ್ನಾಟಕ ಸಂಗೀತದ ತಾಳ ವೈಭವದ ಹಿಂದೆ ಏಕೆ ಅಡಗಿಕೊಳ್ಳುತ್ತಾರೆ? ಬಾಲಮುರಳಿ ಎರಡು ಪುರಂದರ ದಾಸರ ಪದಗಳನ್ನೂ ಸೇರಿದಂತೆ ಐದಾರು ಕೃತಿಗಳನ್ನು ಚೆನ್ನಾಗಿ ಹಾಡಿದರು. ಅವರಿಗೆ ಎಂಬತ್ತೊಂದು ವರ್ಷ ತುಂಬಿದೆ ಎಂದು ಯಾರೂ ಹೇಳುವಂತಿರಲಿಲ್ಲ. ಅವರ ಪ್ರಯೋಗಶೀಲತೆ ಮೆಚ್ಚಿಕೊಳ್ಳುವಂತೆಯೇ `ಸ್ಪರ್ಶ್ ವಚನ~ ಆಸ್ಪತ್ರೆಯ ಸಹಾಯಾರ್ಥ ಈ ಕಾರ್ಯಕ್ರಮ ನಡೆಸಿದ್ದನ್ನು ಕೂಡ ಸ್ಮರಿಸಬೇಕು.

ಫೈಜ್ ಅಹಮದ್ ಫೈಜ್ ಕವಿತೆ
ಎಸ್. ಬಾಗೇಶ್ರೀ ಅವರು ಅನುವಾದಿಸಿದ ಉರ್ದು ಕವಿ ಫೈಜ್ ಅಹಮದ್ ಫೈಜ್ ಅವರ ಕವನಗಳನ್ನು (`ಪ್ರೀತಿ ಮತ್ತು ಕ್ರಾಂತಿ~; ಲಂಕೇಶ್ ಪ್ರಕಾಶನ) ಪುಸ್ತಕ ರೂಪದಲ್ಲಿ ಶನಿವಾರ ಬಿಡುಗಡೆ ಮಾಡಿದರು. ಪಾಕಿಸ್ತಾನದ ಫೈಜ್ ಎಡಪಂಥೀಯ ಚಿಂತಕರೂ ಪತ್ರಕರ್ತರೂ ಆಗಿದ್ದವರು. ಸಿದ್ಧಾಂತ ಮತ್ತು ಕಾವ್ಯದ ಬಗ್ಗೆ ಚರ್ಚೆಯಾಯಿತು. ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ ತುಂಬುವಷ್ಟು ಜನ ಸೇರಿದ್ದರು. ಅನುವಾದದ ಸಂಕಟ-ಖುಷಿಯನ್ನು, ಬಾಗೇಶ್ರೀ ಅವರ ಬರವಣಿಗೆಯನ್ನು ಬರಗೂರು, ಆಶಾದೇವಿ, ವಿ.ಎಸ್. ಶ್ರೀಧರ ಮುಂತಾದವರು ವಿಮರ್ಶಾತ್ಮಕವಾಗಿ ಮೆಚ್ಚಿಕೊಂಡರು. ಅಲ್ಲಿ ಕೇಳಿದ ಅನುವಾದಗಳ ಆಧಾರದ ಮೇಲೆ ನನಗನ್ನಿಸಿದ್ದು: ತುಂಬಾ ಭಾವಗೀತಾತ್ಮಕವಾಗಿ ಬರೆಯಬಲ್ಲ ಕವಿಯತ್ರಿ ಬಾಗೇಶ್ರೀ, ಫೈಜ್ ಬಗ್ಗೆ ಹೆಚ್ಚು ಗೌರವದಿಂದ ಅನುವಾದ ಮಾಡಿದ್ದು, ಅತಿ ಭಾವಗೀತಾತ್ಮಕತೆಯನ್ನು ದೂರ ಇಟ್ಟಿದ್ದಾರೆ. ಕಾವ್ಯಪ್ರಿಯರಿಗೆ ಫೈಜ್ ಅಹಮದ್ ಫೈಜ್ ಕವಿತೆಗಳನ್ನು ಕನ್ನಡದಲ್ಲಿ ಸಿಗುವಂತೆ ಮಾಡಿದ ಬಾಗೇಶ್ರೀ ಅವರಿಗೆ ಥ್ಯಾಂಕ್ಸ್ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.