ಅದು ಗಾಯನ ಸಮಾಜದಲ್ಲಿ ನಡೆದ ಒಂದು ಸಂಗೀತ ಕಛೇರಿ. ಕರ್ನಾಟಕ ಸಂಗೀತದಲ್ಲಿ ಹೆಸರುವಾಸಿಯಾದ ವಿದುಷಿ ಸುಧಾ ರಘುನಾಥನ್ ಅವರ ಗಾಯನ. ಹಾಡುಗಾರಿಕೆಯಲ್ಲಿ `ತನಿಯಾವರ್ತನ~ ಭಾಗ ಬಂದಾಗ ಸರದಿಯಂತೆ ಪಿಟೀಲು, ಮೃದಂಗ, ಘಟಂ ಕಲಾವಿದರು ತಮ್ಮ ಕೈಚಳಕ ಪ್ರದರ್ಶಿಸಿದ ಬಳಿಕ ಒಬ್ಬರು ಹಿರಿಯ ವಿದ್ವಾಂಸರು ಬಾಯಿಯಲ್ಲಿ ಏನೋ ಒಂದು ಸಣ್ಣ ವಾದ್ಯ ಇಟ್ಟುಕೊಂಡು ಕೈಯ್ಯಲ್ಲಿ ಅದನ್ನು ಮೀಟುತ್ತಿದ್ದರು. ವಾದ್ಯ ಏನು ಎಂದು ಮೇಲ್ನೋಟಕ್ಕೆ ಕಾಣದಿದ್ದರೂ ಅದರ ನಾದ ಮಾತ್ರ ಬಹಳ ಇಂಪಾಗಿತ್ತು. ಈ ಪುಟಾಣಿ ಲಯ ವಾದ್ಯದ ಹೆಸರು ಮೋರ್ಚಿಂಗ್.
ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಈ ಮೋರ್ಚಿಂಗ್ ಅಥವಾ ಮೋರ್ಸಿಂಗ್ ವಾದ್ಯದ್ದೂ ಕೊಡುಗೆ ಕಡಿಮೆಯದ್ದಲ್ಲ. ಇದರ ನಾದವನ್ನು ಪ್ರತ್ಯೇಕವಾಗಿ ಸವಿಯಬೇಕಾದರೆ ಮಾತ್ರ `ತನಿಯಾವರ್ತನ~ವರೆಗೂ ಕಾಯಬೇಕಾಗುತ್ತದೆ. ಏಕೆಂದರೆ ಗಾಯಕ/ ಗಾಯಕಿ ತನಿ ಬಿಟ್ಟಾಗ ಮಾತ್ರ ಈ ಕಲಾವಿದರಿಗೆ ತಮ್ಮ ಸಾಮರ್ಥ್ಯ, ಪ್ರತಿಭೆ ಅನಾವರಣಕ್ಕೆ ಅವಕಾಶ.
`ಮೋರ್ಚಿಂಗ್ ಒಂದು ಸುಷಿರ ವಾದ್ಯ. ಕರ್ನಾಟಕ ಸಂಗೀತದಲ್ಲಿ ಮಾತ್ರವೇ ಸಹವಾದ್ಯವಾಗಿ ನುಡಿಸುವ ಒಂದು ಲಯ ವಾದ್ಯ ಪ್ರಕಾರ. ಮೃದಂಗ, ಘಟಂ ತರವೇ ಮೋರ್ಚಿಂಗ್ ಉತ್ತಮ ಲಯ ಕೊಡುತ್ತದೆ. ಇದು ಕಬ್ಬಿಣದಿಂದ ಮಾಡಿದ್ದು, ಎರಡು ಮುಖ್ಯ ಭಾಗಗಳಿರುತ್ತವೆ. ಒಂದು ವಾದ್ಯದ ಫ್ರೇಮ್, ಇನ್ನೊಂದು ಮೀಟುವ ತಂತಿ. ಇದನ್ನು ಬಾಯಿಯಲ್ಲಿ ಇಟ್ಟು ತಂತಿಯನ್ನು ಮೀಟಿದಾಗ ನಾದ ಉತ್ಪತ್ತಿಯಾಗುತ್ತದೆ. ಇದನ್ನು ಬಾಯಿಯೊಳಗೆ ಇಟ್ಟು ಸ್ವಲ್ಪ ಒತ್ತಡ ಹಾಕಿದರೆ ಸಾಕು. ನಾವು ಮಾತನಾಡುವಾಗ ಎಷ್ಟು ಒತ್ತಡ ಹಾಕುತ್ತೇವೋ ಅಷ್ಟೇ ಈ ವಾದ್ಯಕ್ಕೂ ಹಾಕಿದರೆ ಸಾಕು ಎಂದು ಮೋರ್ಚಿಂಗ್ ನುಡಿಸುವ ವಿಧಾನವನ್ನು ವಿವರಿಸುತ್ತಾರೆ ಖ್ಯಾತ ಮೋರ್ಚಿಂಗ್ ವಾದಕ ವಿದ್ವಾನ್ ರಾಜಶೇಖರ್.
`ಈ ವಾದ್ಯದ ಗಾತ್ರ ಚಿಕ್ಕದು, ಇತಿ ಮಿತಿ, ವ್ಯಾಪ್ತಿಯೂ ವಿಸ್ತಾರವಾದದ್ದಲ್ಲ ಎನ್ನುವ ಅವರು, ಇದಕ್ಕೆ ಬಹಳ ಒಳ್ಳೆಯ ನಾದ ಮಾಧುರ್ಯವಿದೆ. ಮೃದಂಗದ ಜತೆ ಸೇರಿದಾಗ ಇದರ ನಾದ, ಮನಸೆಳೆಯುವ ಲಯ ಕೇಳಲು ಬಹಳ ಸೊಗಸಾಗಿರುತ್ತದೆ ಎನ್ನುತ್ತಾರೆ.
ಹಾಗೆ ನೋಡಿದರೆ ಇದು ಬಹಳ ಪುರಾತನ ವಾದ್ಯ. ಇದನ್ನು ಹಿಂದೆ ಜಾನಪದ ಸಂಗೀತಕ್ಕೆ ಬಳಸುತ್ತಿದ್ದರು. ರಾಜಸ್ತಾನ ಕಡೆ ಈಗಲೂ ಜಾನಪದ ಸಂಗೀತಕ್ಕೆ ಬಳಸುತ್ತಾರೆ.
ಭಜನ್ಸ್‌ಗಳಲ್ಲೂ ಮೋರ್ಚಿಂಗ್ ಬಳಕೆ ಇತ್ತು. 1905ರಲ್ಲಿ ವಿದ್ವಾನ್ ಆದಿಚಪ್ಪುರಂ ಸೀತಾರಾಮ್ ಅಯ್ಯರ್ ಎಂಬ ಸಂಗೀತ ಕಲಾವಿದರು ಇದನ್ನು ಕರ್ನಾಟಕ ಸಂಗೀತಕ್ಕೆ ಮೊತ್ತ ಮೊದಲಾಗಿ ಪರಿಚಯಿಸಿ ವೇದಿಕೆಗೆ ತಂದರು. ನಂತರ ಹಂತ ಹಂತವಾಗಿ ಈ ವಾದ್ಯ ಬೆಳೆದು ಬಂತು. ಸದ್ಯ ಮೋರ್ಚಿಂಗ್‌ನಲ್ಲಿ ಹಿರಿಯ ವಿದ್ವಾಂಸರಾದ ವಿದ್ವಾನ್ ಭೀಮಾಚಾರ್ ಅವರು ಇದರಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ.
ಮೋರ್ಚಿಂಗ್ ಅನ್ನು ತಮಿಳುನಾಡಿನ ಮಧುರೆ ಸಮೀಪದ ರಾಜಪಾಳ್ಯಂ ಎಂಬ ಊರಿನಲ್ಲಿ ಮಾತ್ರ ತಯಾರಿಸುತ್ತಾರೆ. ನಮ್ಮ ದೇಶದ ಬೇರೆ ಯಾವ ಭಾಗದಲ್ಲೂ ಮೋರ್ಚಿಂಗ್ ತಯಾರಿಕೆ ಇಲ್ಲ. ರಾಜಪಾಳ್ಯಂನಲ್ಲಿ ಎನ್.ಇ. ಸಂಜೀವಿ ಆಚಾರ್ ಎಂಬವರು ಮಾತ್ರ ಇದನ್ನು ತಯಾರಿಸುವುದು. ಇದೀಗ ಇವರ ಕುಟುಂಬದ ಸದಸ್ಯರೂ ಈ ವಾದ್ಯವನ್ನು ತಯಾರಿಸುತ್ತಿದ್ದಾರೆ.
ಮೃದಂಗ ಕಲಿಯಲೇ ಬೇಕು
ಇದನ್ನು ಕಲಿಯಬೇಕಾದರೆ ಮೃದಂಗ ನುಡಿಸಲು ಕಡ್ಡಾಯವಾಗಿ ಬರಬೇಕು. ಉತ್ತಮ ಸಂಗೀತ ಜ್ಞಾನ ಇರಬೇಕು. ಲಯದ ಬಗ್ಗೆಯೂ ಅಷ್ಟೆ. ಮೃದಂಗ ಕಲಿತ ಮೇಲೇ ಇದನ್ನು ಕಲಿಯಬಹುದು. ಒಂದೊಂದು ಶ್ರುತಿಗೆ ಒಂದೊಂದು ವಾದ್ಯ ಇಟ್ಟುಕೊಳ್ಳಬೇಕು. ಒಂದೇ ವಾದ್ಯದಲ್ಲಿ ಎಲ್ಲ ಸ್ಥಾಯಿಯನ್ನು, ಶುೃತಿಯನ್ನು ತರಲು ಸಾಧ್ಯವಿಲ್ಲ. ಗಾಯಕನ ಶುೃತಿಗೆ ತಕ್ಕಹಾಗೆ ಟ್ಯೂನಿಂಗ್ ಮಾಡಿಕೊಳ್ಳಬೇಕು ಎನ್ನುತ್ತಾರೆ ವಿದ್ವಾನ್ ರಾಜಶೇಖರ್.
ಸದ್ಯ ಕರ್ನಾಟಕದಲ್ಲಿ ವಿದ್ವಾನ್ ಭೀಮಾಚಾರ್ ಹಿರಿಯ ಮೋರ್ಚಿಂಗ್ ಕಲಾವಿದರು. ವಿದುಷಿ ಭಾಗ್ಯಲಕ್ಷ್ಮಿ ಏಕೈಕ ಮಹಿಳಾ ಮೋರ್ಚಿಂಗ್ ಕಲಾವಿದೆ. ವಿದ್ವಾನ್ ಗುರುರಾಜ್, ಅರುಣ್, ಪ್ರಮಥ್ ಕಿರಣ್, ಗುರುಪ್ರಸನ್ನ, ಬಾಲಕೃಷ್ಣ, ಗಿರಿಧರ, ರಮೇಶ್ ಮೈಸೂರು ಮುಂತಾದವರು ಮೋರ್ಚಿಂಗ್‌ನಲ್ಲಿ ಹೆಸರುವಾಸಿಯಾದ ಕಲಾವಿದರು.
ಸಂಗೀತ ಪರಿಕರ ಸಿಗುವ ಎಲ್ಲ ಅಂಗಡಿಗಳಲ್ಲಿ ಮೋರ್ಚಿಂಗ್ ಸಿಗುತ್ತದೆ. ಬೆಲೆ 200 ರೂಪಾಯಿಯಿಂದ ಆರಂಭ. ಮೋರ್ಚಿಂಗ್ ಬಗ್ಗೆ ಸಮಗ್ರ ಮಾಹಿತಿಗಾಗಿ ವಿದ್ವಾನ್ ರಾಜಶೇಖರ್ ಅವರನ್ನು 94480 43176ನಲ್ಲಿ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.