ADVERTISEMENT

ಪುಟ್ಟಗೌರಿಗೆ ಟ್ರೋಲ್‌ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ಪುಟ್ಟಗೌರಿಗೆ ಟ್ರೋಲ್‌ ಸುರಿಮಳೆ
ಪುಟ್ಟಗೌರಿಗೆ ಟ್ರೋಲ್‌ ಸುರಿಮಳೆ   

ಈಗ ಎಲ್ಲೆಲ್ಲೂ ಪುಟ್ಟಗೌರಿಯದ್ದೇ ಮಾತು. ಕಷ್ಟದ ಮೇಲೆ ಕಷ್ಟ ಬಂದರೂ ಗೆದ್ದುಬರುವ ಆಕೆ, ಈಗ ಯಮನನ್ನೂ ಸೋಲಿಸಿ ಬರುವ ಕಲಿಯುಗದ ದಿಟ್ಟ ಮಹಿಳೆಯಾಗಿದ್ದಾಳೆ. ಇಷ್ಟು ದಿನ ಸಾಗರಿ ಹಾಗೂ ಧರ್ಮನ ಮೋಸದ ಬಲೆಯನ್ನು ಇಂಚಿಂಚಾಗಿ ತುಂಡರಿಸುತ್ತಾ ಆಕೆ ಗೆದ್ದುಬಂದಿದ್ದಳು.

ಈಗ ಪುಟ್ಟಗೌರಿಯನ್ನು ಸಾಗರಿ ಬೆಟ್ಟದಿಂದ ತಳ್ಳಿದ ಮೇಲೆ ಸೀರಿಯಲ್‌ ಮುಗಿಯುವ ಕಾಲ ಸನ್ನಿಹಿತವಾಯಿತು ಎಂದು ಅನೇಕರು ಅಂದುಕೊಂಡರು. ಆದರೆ ಪುಟ್ಟಗೌರಿಯ ಸಾಹಸದ ಮತ್ತೊಂದು ಮುಖ ಇಲ್ಲಿ ದರ್ಶನವಾಯಿತು. ಬಹು ಎತ್ತರದ ಬೆಟ್ಟದಿಂದ ಬಿದ್ದರೂ ಆಕೆ ಸಾಯುವುದ ಅಂತಿರಲಿ, ಆಕೆಯ ಮೇಕಪ್ ಸಹ ಮಾಸಲಿಲ್ಲ.

ಮರಕ್ಕೆ ನೇತಾಡುತ್ತಾ ಜೀವ ಉಳಿಸಿಕೊಂಡು ಸಮಾಧಾನಿಸಿಕೊಂಡಳು. ಆ ಹೊತ್ತಿಗೆ ಎದುರಾಗಿದ್ದು ಹಾವು. ಆಕೆ ಪಠಿಸಿದ ಮಂತ್ರಕ್ಕೆ ಹಾವೂ ಮಾಯ. ಕೊನೆಗೆ ಎದುರಾಗಿದ್ದು ಹುಲಿ. ಅದಕ್ಕಿಂತಲೂ ವೇಗವಾಗಿ ಓಡಿ ಲೇಡಿ ರಜನಿಕಾಂತ್‌ ಕೂಡ ಆಗಿಬಿಟ್ಟಳು ಪುಟ್ಟಗೌರಿ. ಕೊನೆಗೆ ಬಾವಿಯಲ್ಲಿ ಬಿದ್ದ ಹುಲಿಯನ್ನು ರಕ್ಷಿಸಿ ಮಾನವೀಯತೆಯನ್ನೂ ಮೆರೆದಳು. ಸದ್ಯ ಕಾಡು ಜನರ ಆತಿಥ್ಯದಲ್ಲಿರುವ ಆಕೆಯನ್ನು ಬಲಿ ಕೊಡುವ ದೃಶ್ಯ ಇದೀಗ ಪ್ರಸಾರವಾಗುತ್ತಿದೆ. ಅಲ್ಲಿಂದಲೂ ಆಕೆ ತಪ್ಪಿಸಿಕೊಳ್ಳುತ್ತಾಳೆ ಎಂಬ ಬಗ್ಗೆ ಪ್ರೇಕ್ಷಕರಲ್ಲಿ ಸಂಶಯವೇ ಉಳಿದಿಲ್ಲ. ಆದರೆ ಹೇಗೆ ತಪ್ಪಿಸಿಕೊಳ್ಳುತ್ತಾಳೆ ಎಂಬ ನಿರೀಕ್ಷೆಯಲ್ಲಿಯೇ ಹಲವು ಟೀವಿ ಮುಂದೆ ಕೂತಿದ್ದಾರೆ.

ADVERTISEMENT

ಪುಟ್ಟಗೌರಿಯ ಸಾಹಸಗಳು ಈಗ ಹಾಸ್ಯದ ವಸ್ತುಗಳಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗಳ ಸುರಿಮಳೆಯಾಗುತ್ತಿದೆ. ಜನರ ಸೃಜನಶೀಲತೆ ತನ್ನದೇ ಆದ ರೀತಿಯಲ್ಲಿ ಧಾರಾವಾಹಿಯ ಪಾತ್ರವನ್ನು ಮೀರಿ ಬೆಳೆಯುತ್ತಿದೆ.

‘ಜಗತ್ತಿನ 100 ದಿಟ್ಟ ಮಹಿಳೆಯರಲ್ಲಿ ಪುಟ್ಟಗೌರಿಯೂ ಒಬ್ಬಳು’ ಎಂದು ಫೋರ್ಬ್ಸ್‌ ನಿಯತಕಾಲಿಕೆಯ ಮುಖಪುಟದಲ್ಲಿರುವಂತೆ ಬಿಂಬಿಸಲಾಗಿದೆ. ‘ಕಾಡಿನಾಗ ಹುಲಿ, ಹಾವುಗಳಿಗೆ ಸಿಕ್ಕಿದ್ರೂ ಸಾಯ್ಲಿಲ್ಲ ಎಂದಮೇಲೆ ಇನ್ನುಮುಂದೆ ಕಾಡಿನ ರಾಣಿ ಪುಟ್ಟಗೌರಿಯೇ' ಎಂಬ ಟ್ರೋಲ್‌ ವಾಟ್ಸಾಪ್‌ಗಳಲ್ಲಿ ಸದಾ ಸಂಚಾರಿ.

‘ದಾರಿತಪ್‌ ಕಾಡಿಗ್‌ ಬಂದೇನಿ, ನಾ ಹೆಂಗ್‌ ವಾಪಸ್‌ ಮನಿಗ ಹೋಗ್ಲಿ’ ಎಂದು ಬಾಬಾ ರಾಮ್‌ದೇವ್‌ ಅವರಿಗೇ ಪುಟ್ಟಗೌರಿ ಫೋನ್ ಮಾಡಿ ಕೇಳ್ತಾಳೆ. ಅದಕ್ಕೆ ಬಾಬಾ ಅವರು, ‘ವಾಪಸ್‌ ಮನೆಗ್‌ ಬರೋ ಮೊದಲು ಕೆಲವು ಬೇರುಗಳ ಹೆಸರು ಹೇಳ್ತೀನಿ. ತಗೊಂಡ್‌ ಬಾ, ಪೇಸ್ಟ್‌ ಮಾಡೋಕೆ ಕಮ್ಮಿ ಆಗಿವೆ’ ಎಂದು ಉತ್ತರಿಸುತ್ತಾರೆ.

‘ಪುಟ್ಟಗೌರಿನ ಸಾಯ್ಸಾಕ ಕಾಡಿಗೆ ಯಾಕ್‌ ಕಳಿಸ್ಬೇಕಿತ್ತು, ನಮ್ಮೂರ ರಸ್ತೆಯಾಗ ಕಳಿಸಿದ್ರು ಸಾಕಿತ್ತು...’ ಎಂದು ಗುಂಡಿಬಿದ್ದ ರಸ್ತೆಗಳ ಜೊತೆಗೆ ಪುಟ್ಟಗೌರಿಯನ್ನೂ ಲೇವಡಿ ಮಾಡುವ ಮೀಮ್‌ಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಸದ್ಯದ ಮಟ್ಟಿಗಂತೂ ಪುಟ್ಟಗೌರಿ ಹಾಸ್ಯ ಮನೋಭಾವವರ ಫೇವರೀಟ್ ನಟಿಯಾಗಿರುವುದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.