ADVERTISEMENT

ಪುಟ್ಟ ವಿಜ್ಞಾನಿ ಸಚಿನ್‌ಗೆ ಯೂಟ್ಯೂಬ್ ಮನ್ನಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ವಿಜ್ಞಾನ ಕುರಿತು ಇಂದು ಅನೇಕ ಪ್ರಯೋಗಗಳು ನಡೆಯುತ್ತಿವೆ. ವಿಶೇಷವೆಂದರೆ ವಿದ್ಯಾರ್ಥಿಗಳ್ಲ್ಲಲಿ ಸಹ ಬಾಹ್ಯಕಾಶ ವಿಜ್ಞಾನಕ್ಕೆ ಸಂಬಂಧಿಸಿದಂತೆ ಒಲವು ಹೆಚ್ಚಾಗುತ್ತಿದೆ. ಇದು ಯೂಟ್ಯೂಬ್ ವೆಬ್‌ತಾಣ ಆಯೋಜಿಸಿದ್ದ `ಗ್ಲೋಬಲ್ ಯೂಟ್ಯೂಬ್ ಸ್ಪೇಸ್ ಲ್ಯಾಬ್~ ಎಂಬ ಸ್ಪರ್ಧೆಯಲ್ಲಿ ಸಾಬೀತಾಗಿದೆ.

ಗೂಗಲ್‌ನ ಯೂಟ್ಯೂಬ್ ವೆಬ್‌ತಾಣ ಜಾಗತಿಕ ಮಟ್ಟದ ಯೂಟ್ಯೂಬ್ ಸ್ಪೇಸ್ ಲ್ಯಾಬ್ ವಿಜ್ಞಾನ ಸ್ಪರ್ಧೆಯನ್ನು 2011 ಅಕ್ಟೋಬರ್ 10 ರಿಂದ ಏರ್ಪಡಿಸಿತ್ತು. ಪ್ರಪಂಚದಾದ್ಯಂತ 80 ದೇಶಗಳ ಎರಡು ಸಾವಿರ ವಿದ್ಯಾರ್ಥಿಗಳು ಬಾಹ್ಯಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಅನ್ವೇಷಣಾ ವಿಡಿಯೊ ಕ್ಲಿಪ್‌ಗಳನ್ನು ಯೂಟ್ಯೂಬ್ ವೆಬ್‌ಸೈಟ್‌ಗೆ ಕಳುಹಿಸಿದ್ದರು. ಸ್ಪರ್ಧೆಯ ಅಂತಿಮ ಸುತ್ತಿಗೆ ಆರು ಮಂದಿ ಆಯ್ಕೆಯಾಗಿದ್ದಾರೆ.

ಸಂತಸದ ವಿಷಯವೆಂದರೆ ಏಷ್ಯಾ ಪೆಸಿಫಿಕ್‌ನಿಂದ ನಗರದ ಬಸವನಗುಡಿಯ ಸಚಿನ್ ಕುಕ್ಕೆ ಈ ಆರು ಮಂದಿಯಲ್ಲಿ ಒಬ್ಬನಾಗಿ ಆಯ್ಕೆಯಾಗಿದ್ದಾರೆ. 17ರಿಂದ 18ವರ್ಷದವರ ವಿಭಾಗದಲ್ಲಿ ಆಯ್ಕೆಯಾಗಿರುವ ಸಚಿನ್ ಕುಕ್ಕೆ, `ಗುರುತ್ವಾಕರ್ಷಣೆ ರಹಿತ ಬಾಹ್ಯಕಾಶದಲ್ಲಿ ಶಾಖದ ಹರಿವು~ ಎಂಬ ವಿಷಯ ಕುರಿತು ನಡೆಸಿದ ಪ್ರಯೋಗವು ಸ್ಪರ್ಧೆಯಲ್ಲಿ ಯಶಸ್ಸು ಕಂಡಿದೆ. ಕುಕ್ಕೆ ತಮ್ಮ ಪ್ರಯೋಗವನ್ನು 2 ನಿಮಿಷದ ವಿಡಿಯೊ ರೂಪದಲ್ಲಿ ಚಿತ್ರಿಸಿ ಯೂಟ್ಯೂಬ್‌ಗೆ ಕಳಿಸಿದ್ದರು.

`ಫೆರೊಫ್ಯುಯಿಡ್ಸ್~ ಎಂದು ಕರೆಯಲಾಗುವ ವಿಶೇಷ ಆಯಸ್ಕಾಂತೀಯ ದ್ರವಗಳಲ್ಲಿ ಉಷ್ಣ ಹೇಗೆ ವರ್ಗಾವಣೆಯಾಗುತ್ತದೆ ಎಂಬುದನ್ನು ಅಧ್ಯಯನ ಮಾಡುವುದರ ಬಗ್ಗೆ ಸಚಿನ್ ಆಸಕ್ತಿ ಹೊಂದಿದ್ದಾರೆ.

ಭೂಮಿಯ ಮೇಲೆ ಸುಧಾರಿತ ತಂಪುಕಾರಕ ವ್ಯವಸ್ಥೆ ಅಭಿವೃದ್ಧಿಪಡಿಸಲು ಈ ಅಪರೂಪದ ದ್ರವಗಳನ್ನು ಬಳಸಲು ಸಾಧ್ಯವೇ? ಅಂತರಿಕ್ಷದಲ್ಲಿ ಇನ್ನೂ ದೂರಕ್ಕೆ ಅವನ್ನು ಕೊಂಡಯ್ಯಲು ಸಾಧ್ಯವೇ? ಎಂಬುದು ಅವರ ಪ್ರಯೋಗದ ವಸ್ತು.

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಸಚಿನ್‌ಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಇದೆ. `ಬಹಳ ದಿನಗಳ ಪರಿಶ್ರಮದಿಂದ ಈ ಪ್ರಯೋಗ ನಡೆಸ್ದ್ದಿದೇನೆ. ಅದು ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗುವ ಮೂಲಕ ನನ್ನ ಕನಸಿಗೆ ನೀರೆರೆದಂತಾಗಿದೆ~ ಎನ್ನುತ್ತಾರೆ ಸಚಿನ್. ಮುಂದೆ ಏರೊಸ್ಪೇಸ್ ಎಂಜಿನಿಯರಿಂಗ್ ವಿಷಯ ಅಭ್ಯಾಸ ಮಾಡುವ ತುಡಿತದಲ್ಲಿದ್ದಾರೆ.

ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ, ವಿಜ್ಞಾನದ ಕುರಿತು ಆಸಕ್ತಿ ಹೆಚ್ಚಿಸುವ ಸಲುವಾಗಿ ಯೂಟ್ಯೂಬ್ ಲೆನೊವೊ ಮತ್ತು ಸ್ಪೇಸ್ ಅಡ್ವೆಂಚರ್ಸ್‌ ಜಂಟಿಯಾಗಿ `ಯೂಟ್ಯೂಬ್ ಸ್ಪೇಸ್ ಲ್ಯಾಬ್ ಸ್ಪರ್ಧೆ~ ಆಯೋಜಿಸಿದ್ದವು. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಗೂಗಲ್ ಇಂಡಿಯಾ ಪ್ರಾಂತೀಯ ಮಾರುಕಟ್ಟೆ ಮುಖ್ಯಸ್ಥ ನಿಖಿಲ್ ರುಂಗ್ಟ.

ಸ್ಪರ್ಧೆಯಲ್ಲಿ 60 ಮಂದಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಅವರಲ್ಲಿ ಆರು ಮಂದಿ ವಿಜೇತರಾಗಿದ್ದಾರೆ. 14ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳು ಪ್ರಯೋಗ ಮಾಡಿದ ವಿಡಿಯೊಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು.

 ನಾಸಾ, ದಿ ಯುರೋಪಿಯನ್ ಸ್ಪೇಸ್ ಏಜೆನ್ಸಿ (ಜೆಎಎಕ್ಸ್‌ಎ) ಬಾಹ್ಯಾಕಾಶ ಸಂಸ್ಥೆಗಳು ಆರು ಮಂದಿಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ಇಬ್ಬರು ವಿದ್ಯಾರ್ಥಿಗಳ ಅನ್ವೇಷಣೆಗಳನ್ನು ಜಾಗತಿಕ ಮಟ್ಟದ ಅಂತರಿಕ್ಷ ಪ್ರಯೋಗದಲ್ಲಿ ಬಳಸಿಕೊಳ್ಳಲಿವೆ.

ಪ್ರಪಂಚದಾದ್ಯಂತ ಒಂದೂವರೆ ಲಕ್ಷ ಯೂಟ್ಯೂಬ್ ವೀಕ್ಷಕರು ತಮ್ಮ ನೆಚ್ಚಿನ ಪ್ರಯೋಗಗಳನ್ನು ಮತ ಚಲಾಯಿಸುವ ಮೂಲಕ ಗುರ್ತಿಸಿದ್ದರು. ಜೊತೆಗೆ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಸೇರಿದಂತೆ ಪರಿಣತ ಬಾಹ್ಯಾಕಾಶ ವಿಜ್ಞಾನಿಗಳು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ವಿಶೇಷವೆಂದರೆ ಭಾರತದಿಂದ ಶೇ 40ರಷ್ಟು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ವಾಷಿಂಗ್ಟನ್ ಡಿಸಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಅಂತಿಮ ಸುತ್ತಿನಲ್ಲಿರುವ ಆರು ವಿದ್ಯಾರ್ಥಿಗಳ ವಿಡಿಯೊ ತುಣುಕುಗಳನ್ನು ಯೂಟ್ಯೂಬ್ ಡಾಟ್ ಕಾಮ್‌ನಲ್ಲಿ (youtube.com/space lab channel) ವೀಕ್ಷಿಸಬಹುದು. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.