ADVERTISEMENT

ಪ್ರವೃತ್ತಿಯೇ ಬದುಕಿಗೆ ಆಸರೆಯಾಯಿತು

ಸುಮನಾ ಕೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಪವಿತ್ರಾ ವಿನ್ಯಾಸ ಮಾಡಿರುವ ಟೆರ್‍ರಾಕೋಟ ಆಭರಣ
ಪವಿತ್ರಾ ವಿನ್ಯಾಸ ಮಾಡಿರುವ ಟೆರ್‍ರಾಕೋಟ ಆಭರಣ   

ಮಹಿಳೆಯ ಆಭರಣಗಳ ಪೆಟ್ಟಿಗೆಯಲ್ಲಿ ಈಚೆಗೆ ಟೆರ್‍ರಾಕೋಟ ಆಭರಣಗಳು ಸ್ಥಾನ ಪಡೆದಿವೆ. ಈ ಮಣ್ಣಿನ ಆಭರಣಗಳು ಧರಿಸಲೂ ಹಗುರ. ಸಲ್ವಾರ್‌, ಸೀರೆ, ಲೆಹಂಗಾ, ಜೀನ್ಸ್‌ನಂತಹ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸದ ಉಡುಪುಗಳಿಗೆ ಸರಿ ಹೊಂದುತ್ತವೆ.

ಆವೆ ಮಣ್ಣನ್ನು ಹದಗೊಳಿಸಿ, ಅದನ್ನು ಬೇಕಾದ ಆಕಾರಕ್ಕೆ ತಂದು ಅದಕ್ಕೆ ಆಭರಣ ರೂಪ ಕೊಡುವುದು ಒಂದು ಕಲೆ. ಗಿರಿನಗರದ ಎ.ಪವಿತ್ರಾ  ಅವರು ತಮಗೆ ಗೊತ್ತಿದ್ದ ವಿದ್ಯೆಯನ್ನೇ ಬಂಡವಾಳವಾಗಿಸಿಕೊಂಡು ಮನೆಯಲ್ಲೇ ಟೆರ್‍ರಾಕೋಟ ಆಭರಣಗಳನ್ನು ರೂಪಿಸಿ, ಮಾರುತ್ತಿದ್ದಾರೆ.

ಪವಿತ್ರಾ ಅವರ ಅಪ್ಪ ಮರದ ಕೆತ್ತನೆ ಕೆಲಸ ಮಾಡುತ್ತಿದ್ದರಿಂದ ಅದನ್ನು ನೋಡುತ್ತಾ ಬೆಳೆದಿದ್ದ ಪವಿತ್ರಾ ಅವರಿಗೂ ಕಲೆ ಬಗ್ಗೆ ಆಸಕ್ತಿ ಬೆಳೆಯಿತು. ಸಣ್ಣ ವಯಸ್ಸಿನಲ್ಲಿ ಅಮ್ಮ ಕಲಸಿಟ್ಟ ಚಪಾತಿ ಹಿಟ್ಟಿನಲ್ಲಿ ತಮ್ಮ ಕಲ್ಪನೆಯ ಹೂವು, ಹಣ್ಣು, ಮನುಷ್ಯಾಕೃತಿಗಳನ್ನು ಮಾಡುತ್ತಿದ್ದರು ಅವರು.

ADVERTISEMENT

ಪವಿತ್ರಾ ಓದಿದ್ದು ಅಡ್ಮಿನಿಸ್ಟ್ರೇಟಿವ್‌ ಸೆಕ್ರೆಟೆರಿಯಲ್‌ ಪ್ರಾಕ್ಟೀಸ್‌ನಲ್ಲಿ ಡಿಪ್ಲೋಮಾ ಕೋರ್ಸ್‌. ನಾಲ್ಕು ವರ್ಷಗಳ ಕಾಲ ಕಂಪೆನಿಯೊಂದರಲ್ಲಿ ಕೆಲಸ ಮಾಡಿದರು. ಆದರೆ ಅವರಿಗೆ ಆ ಕೆಲಸದಲ್ಲಿ ಮುಂದುವರಿಯುವುದು ಇಷ್ಟವಾಗಲಿಲ್ಲ. ಬಳಿಕ ಅವರ ಮನಸ್ಸು ಈ ಹವ್ಯಾಸದತ್ತ ಹೊರಳಿತು.

ಪವಿತ್ರಾ ಅವರಿಗೆ ಟೆರ್‍ರಾಕೋಟ ಆಭರಣಗಳ ಬಗ್ಗೆ ತಿಳಿದಿದ್ದರೂ, ಅದನ್ನು ಮಾಡುವ ಬಗ್ಗೆ  ಗೊತ್ತಿರಲಿಲ್ಲ. ಮನೆ ಸಮೀಪದಲ್ಲಿನ ಟೆರಾಕೋಟ ಆಭರಣ ವಿನ್ಯಾಸ ಕಾರ್ಯಾಗಾರದಲ್ಲಿ ಒಂದು ದಿನ ಭಾಗವಹಿಸಿ ಆಭರಣ ತಯಾರಿಕೆಯ ಬಗ್ಗೆ ಪ್ರಾಥಮಿಕ ತಿಳುವಳಿಕೆ ಪಡೆದುಕೊಂಡರು. ಸ್ನೇಹಿತರು ಹಾಗೂ ಯೂಟ್ಯೂಬ್‌ ಮೂಲಕ ಹೊಸ ಸಾಧ್ಯತೆಗಳನ್ನು ಅರಿತುಕೊಂಡರು. ಹೊಸ ಪ್ರಯೋಗಗಳನ್ನು ಮಾಡುತ್ತಾ ಹೋದರು.

ಗಣೇಶ, ಲಕ್ಷ್ಮಿ, ನವಿಲು...ಹೀಗೆ ಭಿನ್ನ ವಿನ್ಯಾಸಗಳಿರುವ ಸರ, ಉಂಗುರ, ಕಿವಿಯೋಲೆ, ಪೆಂಡೆಂಟ್‌ಗಳನ್ನು ರೂಪಿಸಿದ್ದಾರೆ. ಆರಂಭದಲ್ಲಿ ತಾವು ಮಾಡಿದ ಆಭರಣಗಳ ಚಿತ್ರಗಳನ್ನು ಫೇಸ್‌ಬುಕ್‌ಗೆ ಪೋಸ್ಟ್‌ ಮಾಡುತ್ತಿದ್ದರು. ಇದನ್ನು ಮೆಚ್ಚಿ ಅನೇಕರು ಕೊಂಡುಕೊಂಡರು. ಈಗ ಈ ಹವ್ಯಾಸದ ಮೂಲಕವೇ ತಿಂಗಳಿಗೆ ಸಾವಿರಾರು ರೂಪಾಯಿ ದುಡಿಯುತ್ತಿದ್ದಾರೆ.

‘ಟೆರ್‍ರಾಕೋಟದಲ್ಲಿ ಕಾಲೇಜು ಹುಡುಗಿಯರು ಅವರ ಬಟ್ಟೆಗಳಿಗೆ ಹೊಂದುವ ರೀತಿಯಲ್ಲಿ ಆಧುನಿಕ ವಿನ್ಯಾಸಗಳನ್ನೇ ಹೆಚ್ಚು ಕೇಳುತ್ತಾರೆ. ಈಗ ಚಿನ್ನದಲ್ಲಿ ಆಂಟಿಕ್, ಟೆಂಪಲ್ ವಿನ್ಯಾಸಕ್ಕೆ ಹಚ್ಚು ಬೇಡಿಕೆಯಿದೆ. ಮಧ್ಯಮ ವಯಸ್ಸಿನ ಮಹಿಳೆಯರು ಅಂತಹ ಆಭರಣ, ಉದ್ದ ಸರಗಳನ್ನು ಟೆರ್‍ರಾಕೋಟದಲ್ಲಿ ಖರೀದಿಸಲು ಇಷ್ಟಪಡುತ್ತಿದ್ದಾರೆ. ಉದ್ಯೋಗಸ್ಥ ಮಹಿಳೆಯರು ಕಾಟನ್‌ ಸೀರೆಗಳಿಗೆ ಸರಿ ಹೊಂದುವ, ಮಾಮೂಲು ವಿನ್ಯಾಸಗಳ ಟೆರಾಕೋಟ ಆಭರಣ ಖರೀದಿಸುತ್ತಾರೆ’ ಎಂಬುದು ಪವಿತ್ರಾ ಅನುಭವ.

ಈ ಎಲ್ಲಾ ಆಭರಣಗಳನ್ನು ಮಾಡಲು ಆವೆ ಮಣ್ಣು ಮುಖ್ಯ. ಇದನ್ನು ಗಿರಿನಗರದ ಸ್ಟೋರ್ಸ್‌ನಿಂದ ತರಿಸಿಕೊಳ್ಳುತ್ತಾರೆ. ಟೆರ್‍ರಾಕೋಟ ಆಭರಣದ ಬಗ್ಗೆ ಆಸಕ್ತಿ ಇದ್ದವರಿಗೆ 1 ವಾರ, 10 ದಿನಗಳ ತರಗತಿ ಹಾಗೂ ಕಾರ್ಯಾಗಾರಗಳನ್ನು ನಡೆಸುತ್ತಾರೆ.

*

ಪವಿತ್ರಾ, ಸಂಪರ್ಕ ಸಂಖ್ಯೆ: 97413 91023

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.