ADVERTISEMENT

ಪ್ರಾಣಿ ಕಾರ್ಟೂನ್‌ಗಳ ವ್ಯಂಗ್ಯಲೋಕ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST

ಅಲ್ಲಿದ್ದ ಚಿತ್ರ, ಅದಕ್ಕೆ ಚಿಕ್ಕದಾಗಿ ಬರೆದಿದ್ದ ಒಕ್ಕಣೆ ಕಂಡು ಕಲಾಸಕ್ತರು ಬೆರಗುಗೊಳ್ಳುತ್ತಿದ್ದರೆ ಚಿತ್ತಭಿತ್ತಿ ತಣ್ಣಗೆ ಹಿಗ್ಗುತ್ತಿತ್ತು!

ಎಂ.ಜಿ. ರಸ್ತೆಯಲ್ಲಿರುವ ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆಗೆ ಶನಿವಾರ ಹೊಸ ಹುರುಪು. ಮನುಷ್ಯನ ಬದುಕಿನ ಭಾಗವೇ ಆಗಿರುವ ಪ್ರಾಣಿ ಪಕ್ಷಿಗಳ ಮುಖಾಂತರ ಹೊಸ ಸಂದೇಶ ನೀಡಲು ಮುಂದಾದ ವ್ಯಂಗ್ಯ ಚಿತ್ರಕಲಾವಿದ ಕೆ.ಎನ್. ಬಾಲರಾಜ್ ಅವರು ರಚಿಸಿದ ಕಾರ್ಟೂನ್ ಪ್ರದರ್ಶನ ಅಲ್ಲಿ.

ಬದುಕಿನ ಹಾಸ್ಯ, ಮನಸ್ಸಿನ ಲಾಸ್ಯ ಸೇರಿ ಹೊಸರೂಪ ಪಡೆಯುವ ರೇಖಾಕೃತಿಯೇ ಕಾರ್ಟೂನ್. ವ್ಯಂಗ್ಯಚಿತ್ರಕಾರನಿಗೆ ಬದುಕಿನ ಹಾಗೂ ಸನ್ನಿವೇಶದ ಅತಿಸೂಕ್ಷ್ಮ ಗ್ರಹಿಕೆ ಇರಬೇಕು ಎಂಬುದನ್ನು ಬಾಲರಾಜ್ ತಮ್ಮ ಕಲಾಕೃತಿಯ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ನಾಯಿ, ಬೆಕ್ಕು, ಕತ್ತೆ, ಗೂಬೆ, ಜಿರಲೆ, ಮೀನು, ಮೊಸಳೆ, ಆಮೆ ಹೀಗೆ ಹತ್ತು ಹಲವು ಪ್ರಾಣಿ ಪಕ್ಷಿಗಳ ಬಗ್ಗೆ ಬಾಲರಾಜ್ ಕಾರ್ಟೂನ್ ರಚಿಸಿದ್ದು, ಅವುಗಳ ಭಾವನೆಗೂ ಮಾನವನ ಮನಸ್ಥಿತಿಗೂ ಹದವರಿತು ಸಂಬಂಧ ಕಲ್ಪಿಸಿದ್ದಾರೆ.

ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಕೊಳವೆ ಬಾವಿ ಹಾಗೂ ಅದರಲ್ಲಿ ಬಿದ್ದು ಸಾಯುತ್ತಿರುವವರ ಬಗೆಗೆ ಕಾರ್ಟೂನ್ ರಚಿಸಿರುವ ಬಾಲರಾಜ್ ನೀಡಿದ ಒಕ್ಕಣಿಕೆ ಪ್ರಸ್ತುತ ಸನ್ನಿವೇಶ ಹಾಗೂ ಅಂತರ್ಜಲ ಕುಸಿಯುತ್ತಿರುವ ವಿಷಯವನ್ನು ಕಟುವಾಗಿ ಟೀಕಿಸಿದಂತಿದೆ. `‘no water, but you might find a baby’.

ಒಂದು ಮೀನು ತನ್ನ ಸಂಗಾತಿಗೆ ಪ್ರೀತಿ ನಿವೇದನೆ ಮಾಡುವ ಪರಿ ಗಮನಿಸಿದರೆ ಯಾರಿಗಾದರೂ ನಗು ಉಕ್ಕಿ ಬರದೇ ಇರಲಾರದು. ‘I need you like I need a bicycle’. ಸಾಮಾಜಿಕ ಸಂಪರ್ಕ ತಾಣದಲ್ಲಿ (ಫೇಸ್‌ಬುಕ್) `ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆಯಾಗಿಲ್ಲ (ಡಿಸ್‌ಲೈಕ್) ಎಂಬುದನ್ನು ಸೂಚಿಸುತ್ತಿದ್ದಾರೆ~ ಎಂದು ಗೂಬೆಯೊಂದು ದುಃಖ ಪಡುತ್ತಿದೆ.

ಇನ್ನೊಂದೆಡೆ, `ನಾವು ನಿಜಕ್ಕೂ ಕುದುರೆಗಳಾಗಿದ್ದೆವು. ಆದರೆ ಎಲ್ಲರೂ ಸೇರಿ ನಮ್ಮನ್ನು ಕತ್ತೆಯನ್ನಾಗಿಸಿದ್ದಾರೆ~ ಎಂದು ಎರಡು ಕತ್ತೆಗಳು ಸಂಭಾಷಣೆ ನಡೆಸುತ್ತಿವೆ.
ಕ್ರಿಕೆಟ್ ಚೆಂಡೇ ಸಿಂಧೂರ, ಹಣೆಗೆ ಇಟ್ಟ ಮೂರು ನಾಮಗಳೇ ಸ್ಟಂಪ್ಸ್, ಇಡೀ ಕ್ರೀಡಾಂಗಣ ಧರ್ಮದ ಮುಖವಾಡ ಎಂಬಂತೆ ಇನ್ನೊಂದು ಕಾರ್ಟೂನಿನಲ್ಲಿ ಚಿತ್ರಿಸಲಾಗಿದೆ.

ಗೆರೆಗಳಲ್ಲಿ ಮೂಡಿದ ಎಲ್ಲಾ ಪ್ರಾಣಿ ಪಕ್ಷಿಗಳು ತಮ್ಮ ತಮ್ಮ ಲೋಕದ ಸಾವಿರಾರು ಅರ್ಥಗಳನ್ನು ಮನುಷ್ಯರನ್ನೂ ಒಳಗೊಳ್ಳುತ್ತಾ ವ್ಯಂಗ್ಯದ ಧಾಟಿಯಲ್ಲಿ ಪ್ರಕಟಿಸುತ್ತಿದ್ದರೆ, ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ನಿರ್ಲಿಪ್ತವಾಗಿ ‘what corruption?’  ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನು ನೋಡುತ್ತಿದ್ದಂತೆ ಪ್ರಸ್ತುತ ರಾಜಕೀಯ ಸನ್ನಿವೇಶದ ವ್ಯಂಗ್ಯದಂತೆ ಭಾಸವಾಗುತ್ತದೆ.

ಫ್ರೀಲಾನ್ಸ್ ವ್ಯಂಗ್ಯಚಿತ್ರಕಾರ, ಕಾಪಿರೈಟರ್ ಮತ್ತು ಶಿಲ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಾಲರಾಜ್ ರಚನೆಯ ವ್ಯಂಗ್ಯಚಿತ್ರಗಳು `ಟೈಮ್ಸ ಆಫ್ ಇಂಡಿಯಾ~, `ಡೆಕ್ಕನ್ ಹೆರಾಲ್ಡ್~, `ಮಿಡ್ ಡೇ~, `ಬೆಂಗಳೂರು ಮಿರರ್~, `ಕ್ಯಾರವಾನ್~, `ಸಿವಿಕ್ ಸೊಸೈಟಿ~ ಮುಂತಾದ ಕಡೆಗಳಲ್ಲಿ ಪ್ರಕಟಗೊಂಡಿದೆ. ಅಲ್ಲದೆ ಬಾಲರಾಜ್ ಜಾಹೀರಾತು, ವೆಬ್‌ಸೈಟ್ ಹಾಗೂ ಅನೇಕ ಕಂಪೆನಿಗಳಿಗೂ ವ್ಯಂಗ್ಯಚಿತ್ರ ರಚಿಸಿಕೊಟ್ಟಿದ್ದಾರೆ.

ಅಲ್ಲದೆ ಇತ್ತೀಚೆಗೆ ಮಾಯಾ ಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಅವರಿಗೆ ಎರಡನೇ ಬಹುಮಾನ ಲಭಿಸಿದೆ.`ಚಿಕ್ಕಂದಿನಿಂದಲೂ ನನಗೆ ಕಾರ್ಟೂನ್‌ಗಳ ಮೇಲೆ ಎಲ್ಲಿಲ್ಲದ ಪ್ರೀತಿ. ನಾನು ರಚಿಸಿದ ಕಾರ್ಟೂನ್‌ಗಳನ್ನು ಮೊದಲ ಬಾರಿಗೆ ಪ್ರದರ್ಶಿಸಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಇದರಿಂದ ಸ್ಫೂರ್ತಿಗೊಂಡ ನಾನು ಚಿತ್ರಕಲಾ ಪರಿಷತ್‌ನಲ್ಲಿ ಕಾರ್ಟೂನ್ ಕಲೆ ಅಭ್ಯಸಿಸಿದೆ.
 
ಬೇರೆ ಚಿತ್ರಕಲೆಗಳಲ್ಲಿ ವೀಕ್ಷಕರ ಚಿಂತನೆಗೆ ತಕ್ಕಂತೆ ಯೋಚಿಸುವ ಅವಕಾಶವಿದೆ. ಆದರೆ ಕಾರ್ಟೂನ್‌ನಲ್ಲಿ ನಮ್ಮ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳಬಹುದು. ಹೀಗಾಗಿ ಕಾರ್ಟೂನೇ ನನ್ನ ನೆಚ್ಚಿನ ಆಯ್ಕೆ. ಅದರಲ್ಲೂ ಪ್ರಾಣಿ ಹಾಗೂ ಮನುಷ್ಯರ ನಡುವಿನ ಸಂಬಂಧ ನನಗೆ ತುಂಬ ಇಷ್ಟ. ಪ್ರಾಣಿಗಳ ಬಾಯಿಂದ ಮನುಷ್ಯರ ಭಾವನೆಗಳನ್ನು ಸುಲಭವಾಗಿ ಹೇಳಬಹುದು.

ಹೀಗಾಗಿ ಪ್ರಾಣಿಗಳನ್ನು ಕಾರ್ಟೂನ್ ಮಾಧ್ಯಮಕ್ಕೆ ತೆರೆದುಕೊಳ್ಳುವಂತೆ ಮಾಡಿದೆ~ ಎನ್ನುತ್ತಾರೆ ಕಲಾವಿದ ಕೆ.ಎನ್. ಬಾಲರಾಜ್.`ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ಇದುವರೆಗೆ 70 ವ್ಯಂಗ್ಯಚಿತ್ರ ಕಲಾ ಪ್ರದರ್ಶನಗಳು ಏರ್ಪಟ್ಟಿವೆ. ಹೊಸ ಚಿಂತನೆ ಹೊಂದಿರುವ ಯುವ ಕಲಾವಿದ ಬಾಲರಾಜ್ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ 71ನೇ ಕಲಾಪ್ರದರ್ಶನ ಎಂಬುದು ಹೆಮ್ಮೆಯ ವಿಷಯ~ ಎಂಬುದು ವ್ಯವಸ್ಥಾಪಕ ಟ್ರಸ್ಟಿ ವಿ.ಜಿ. ನರೇಂದ್ರ ಅವರ ಅಭಿಮಾನದ ಮಾತು.

ಆಗಸ್ಟ್ 5ರವರೆಗೆ ನಡೆಯಲಿರುವ ಈ ವ್ಯಂಗ್ಯಚಿತ್ರ ಪ್ರದರ್ಶನವನ್ನು ಶನಿವಾರ ಪ್ರಾಣಿ ಪ್ರಿಯ ಹಾಗೂ ರಂಗಕರ್ಮಿ ಪ್ರೇಮ್ ಕೋಶಿ ಉದ್ಘಾಟಿಸಿದರು. ಮನುಷ್ಯನ ಬದುಕಿನ ಮುಖ್ಯ ಅಂಗ ಎನಿಸಿರುವ ಪ್ರಾಣಿಗಳ ಬಗ್ಗೆ ವ್ಯಂಗ್ಯಚಿತ್ರ ರಚಿಸಿರುವುದು ಪ್ರಶಂಸನೀಯ. ಅವುಗಳ ಭಾವನೆಗೂ ಮನುಷ್ಯನ ಭಾವನೆಗೂ ಇರುವ ಸಾಮ್ಯತೆಯನ್ನು ಗ್ರಹಿಸಿ ಚಿತ್ರಿಸಿರುವುದು ವಿಶೇಷ ಎಂದು ಅವರು ಶ್ಲಾಘಿಸಿದರು. ಜಪಾನ್ ಮೂಲದ ವ್ಯಂಗ್ಯಚಿತ್ರಕಾರ ಕಗಾಯ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇನ್ನೊಂದು ವಿಶೇಷ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.