ADVERTISEMENT

ಪ್ರಾಣ ಸಿದ್ಧಿ ಯೋಗದ ಅಜ್ಜ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಮನಸ್ಸಿನ ಏಕಾಗ್ರತೆ, ದೈಹಿಕ ಸದೃಢತೆಗಾಗಿ ಕೆಲವರು ಯೋಗಾಭ್ಯಾಸ ಮಾಡುತ್ತಾರೆ. ಆದರೆ ಇದರಿಂದಲೂ ಅನೇಕ ಸಲ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇಂತಹ ಚಂಚಲತೆಯಿಂದ ಹೊರಬಂದು ದೃಢ ಮತ್ತು ಸಮಚಿತ್ತದಿಂದ ಇರಲು `ಪ್ರಾಣ ಸಿದ್ಧಿ ಯೋಗ~ ಅಭ್ಯಾಸ ಉಪಯುಕ್ತ ಮಾರ್ಗ ಎಂಬುದು ಹಲವರ ಅಭಿಪ್ರಾಯ.

ಮನಸ್ಸಿನ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಅವಕಾಶ ಪ್ರಾಣ ಸಿದ್ಧಿ ಯೋಗದಿಂದ ಸಾಧ್ಯವಿದೆ ಎನ್ನುತ್ತಾರೆ 72 ವರ್ಷದ ರಾಜಯೋಗಿ, ಜ್ಯೋತಿಷಿ ಎನ್.ಆರ್.ಕೆ. ರಾವ್.

`ಮನಸ್ಸು ದಿನದ 24 ಗಂಟೆಯೂ ಚಲನೆಯಲ್ಲಿರುತ್ತದೆ. ಇದು ಅವರವರ ನಿತ್ಯ ಜೀವನದಲ್ಲಿ ಒಳ್ಳೆಯ ಅಥವಾ ಕೆಟ್ಟ ಚಿಂತನೆಗಳನ್ನು ಮಾಡುತ್ತದೆ. ಇಂತಹ ಜಂಜಡಗಳನ್ನು ಬಗೆಹರಿಸಲು ಇರುವ ಮಾರ್ಗ ಒಂದೇ ಯೋಗ. ಅದರಲ್ಲೂ ಪ್ರಾಣ ಸಿದ್ಧಿ ಯೋಗ ಎನ್ನುತ್ತಾರೆ ರಾವ್.

ಎಪ್ಪತ್ತೆರಡು ವರ್ಷದ ರಾವ್ ಅವರು ಯೋಗದಲ್ಲಷ್ಟೇ ಅಲ್ಲದೇ ಜೋತಿಷ ಶಾಸ್ತ್ರದಲ್ಲೂ ಪರಿಣತಿ ಸಾಧಿಸಿದ್ದಾರೆ. ಅದರಲ್ಲೂ ನಾಡಿಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಯಾವುದೇ ವ್ಯಕ್ತಿಯೊಬ್ಬನ ಹುಟ್ಟಿದ ದಿನಾಂಕ, ಸ್ಥಳ ಹಾಗೂ ಸಮಯವನ್ನು ನೀಡಿದ್ದಲ್ಲಿ ಅವುಗಳ ಆಧಾರದಿಂದ ಅವರ ಭೂತ, ವರ್ತಮಾನ ಹಾಗೂ ಭವಿಷ್ಯಗಳ ಮಾಹಿತಿಯನ್ನು ತಿಳಿಸುತ್ತಾರೆ. `ಹುಟ್ಟಿದ ದಿನಾಂಕ ಗೊತ್ತಿಲ್ಲದವರಿಗೆ ಹಸ್ತಸಾಮುದ್ರಿಕದ ಮೂಲಕ ಜ್ಯೋತಿಷ ಹೇಳುತ್ತೇನೆ~ ಎನ್ನುತ್ತಾರೆ.

`ಪುರಾತನ ನಾಡಿಶಾಸ್ತ್ರದ ಭಾವ ರಹಸ್ಯಗಳು~, `ಜಾತಕ ನಿರೂಪಣೆ~, `ಅಗೋಚರ ಜ್ಞಾನಶಕ್ತಿ~, ಇಂಗ್ಲಿಷ್ ಭಾಷೆಯಲ್ಲಿ `ದಿ ಸ್ಪಿರಿಚುಯಲ್ ಅವೇಕನಿಂಗ್ ಇನ್ ಇಂಡಿಯಾ~ ಸೇರಿದಂತೆ  ಜ್ಯೋತಿಷ ಹಾಗೂ ಯೋಗಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ರಾವ್ ಅವರು ತಾವು ಕಲಿತ `ಪ್ರಾಣ ಸಿದ್ಧಿ~ ಯೋಗ ಹಾಗೂ ನಾಡಿ ಜೋತಿಷ ಶಾಸ್ತ್ರದ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಆಸಕ್ತರಿಗೆ ತಿಳಿಯಪಡಿಸುವ ಉದ್ದೇಶದೊಂದಿಗೆ ತರಬೇತಿ ಶಿಬಿರ ಆಯೋಜಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಾರೆ.

ಶಿಬಿರದ ಸ್ಥಳ: ಕೈರಳಿ ನಿಲಯಂ ಪ್ರೌಢ ಶಾಲೆ, ಎಚ್‌ಎಎಲ್ ಅಂಚೆ ಕಚೇರಿ ಸಮೀಪ, ಹಳೆ ಏರ್ ಪೋರ್ಟ್ ರಸ್ತೆ. ಮಾಹಿತಿಗೆ: 94488 51360.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.