ADVERTISEMENT

ಫೇಸ್ ಆಫ್ ಕರ್ನಾಟಕ ಅಮ್ಮಂದಿರಿಗಾಗಿ ಸ್ಪರ್ಧೆ

ಸವಿತಾ ಎಸ್.
Published 14 ಮೇ 2012, 19:30 IST
Last Updated 14 ಮೇ 2012, 19:30 IST
ಫೇಸ್ ಆಫ್ ಕರ್ನಾಟಕ ಅಮ್ಮಂದಿರಿಗಾಗಿ ಸ್ಪರ್ಧೆ
ಫೇಸ್ ಆಫ್ ಕರ್ನಾಟಕ ಅಮ್ಮಂದಿರಿಗಾಗಿ ಸ್ಪರ್ಧೆ   

ಹೆಸರಿಗೆ ಅದು ಫ್ಯಾಷನ್ ಶೋ. ಆದರೆ ಅಲ್ಲಿ ಕೆಂಪು ರತ್ನಗಂಬಳಿಯಿಲ್ಲ... ಝಗಮಗಿಸುವ ಬಣ್ಣಗಳ ಚೆಲ್ಲಾಟವಿಲ್ಲ... ತುಂಡುಡುಗೆ ತೊಟ್ಟು ಹುಸಿನಗೆ ಬೀರುವ ಬೆಡಗಿಯರ ಬಿನ್ನಾಣವಿಲ್ಲ. ಕ್ಯಾಟ್‌ವಾಕ್‌ನ `ಟಕ್ ಟಕ್~ ಸದ್ದಿಲ್ಲ.

ಹಾಗೆಂದ ಮಾತ್ರಕ್ಕೆ ಅದು ನೀರಸ ಕಾರ್ಯಕ್ರಮಅಲ್ಲ. ಅಲ್ಲಿ ಪಾಲ್ಗೊಳ್ಳುವವರು ಒಂದೋ ಎರಡೋ ಮಕ್ಕಳಾಗಿ ಮನೆ ಮತ್ತು ಕಚೇರಿ ನಡುವೆ ಚೆಲ್ಲಾಪಿಲ್ಲಿಯಾದ ಅಮ್ಮಂದಿರೋ, ಮನೆ ಬೆಳಗುತ್ತಿರುವ ಗೃಹಿಣಿಯರೋ ಆಗಿರುತ್ತಾರೆ.

ಎಲ್‌ಎಕ್ಸ್‌ಜಿ ಇಂಟರ್‌ನ್ಯಾಷನಲ್ ಆಯೋಜಿಸಿರುವ `ಫೇಸ್ ಆಫ್ ಕರ್ನಾಟಕ~ದಲ್ಲಿ ಆಯ್ಕೆಯಾಗಲಿರುವ ತಾಯಿಗೆ ಸಿಗಲಿರುವ ಪಟ್ಟ `ಮಾತೆಯರ ರಾಣಿ~ (ಕ್ವೀನ್ ಆಫ್ ಮದರ್). ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು ನಗರದ ಸಾಲಿಟೆರ್ ಹೋಟೆಲ್‌ನಲ್ಲಿ.

ಸ್ಪರ್ಧೆಗೆ ಸಿದ್ಧರಾಗಿ ಬಂದ ಬಹುತೇಕ ಅಮ್ಮಂದಿರು ಯಾವ ರೂಪದರ್ಶಿಯರಿಗೂ ಕಡಿಮೆ ಇರಲಿಲ್ಲ. ನಟ ಭುವನ್ ಹಾಗೂ ರೂಪದರ್ಶಿ ಟೀನಾ ಪೊನ್ನಪ್ಪ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಒಂದಷ್ಟು ಅಮ್ಮಂದಿರಿಗೆ ಅರ್ಜಿ ವಿತರಿಸಿದರು. `ಇಷ್ಟ~ ಚಿತ್ರದ ನಾಯಕಿ ಭೂಮಿಕಾ ಛಾಬ್ರಿಯಾ, ನಿರ್ಮಾಪಕ ಶೈಲೇಂದ್ರಬಾಬು, ವಿದ್ಯಾಶ್ರೀ, ಸುಮಿತ್ರಾ ಅಯ್ಯಂಗಾರ್ ಈ ರಸನಿಮಿಷಗಳಿಗೆ ಸಾಕ್ಷಿಯಾದರು.

`ನೂರಾರು ಪ್ರಕಾರದ ಸೌಂದರ್ಯ ಸ್ಪರ್ಧೆಗಳು ನಡೆಯುತ್ತಿದ್ದರೂ ಭಿನ್ನವಾಗಿದ್ದನ್ನು ಕೊಡಬೇಕೆಂಬ ನಮ್ಮ ಆಸೆ ಈ ಹೊಸ ಯೋಜನೆಗೆ ನೀರೆರೆಯಿತು. ವಿವಿಧ ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಒಬ್ಬ ಅತ್ಯುತ್ತಮ ಗೃಹಿಣಿಯನ್ನು ಆಯ್ಕೆ ಮಾಡಲಾಗುತ್ತದೆ. ಇತರೆ ಸ್ಪರ್ಧೆಗಳಂತೆ ಇಲ್ಲಿ ತುಂಡುಡುಗೆ ತೊಟ್ಟು ರ‌್ಯಾಂಪ್ ಶೋ, ಈಜಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿಲ್ಲ~ ಎಂಬುದು ಎಲ್‌ಎಕ್ಸ್‌ಜಿ ಇಂಟರ್‌ನ್ಯಾಷನಲ್ ಸಿಇಒ ಎಂ.ಎ. ವಾದೂದು ಅವರ ಮಾತು.

ಆಯ್ಕೆ ಹೀಗೆ...
ಅತ್ಯುತ್ತಮ ಪ್ರತಿಭೆ, ಪಾಕಶಾಸ್ತ್ರಜ್ಞೆ, ಸುಂದರ ಕೇಶ, ಮುಗುಳ್ನಗೆ, ಕಣ್ಣು, ತ್ವಚೆ, ಸುಂದರ ಶರೀರ, ವ್ಯಕ್ತಿತ್ವ ಎಂಬ ವಿಭಾಗಗಳಲ್ಲದೆ, ರನ್ನರ್ ಅಪ್ ಹಾಗೂ ಕ್ವೀನ್ ಆಫ್ ಮದರ್ ಪ್ರಶಸ್ತಿಗೆ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಜೂನ್ ಎಂಟರಂದು ಮಂಗಳೂರು, 12-13ರಂದು ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಆಡಿಷನ್ ನಡೆಯಲಿದೆ.
 
ಅಲ್ಲಿ ಆಯ್ಕೆಗೊಂಡ 30 ಮಂದಿ ಜೂನ್ 20ರಂದು ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಯುವ ಎರಡನೇ ಹಂತದ ಆಡಿಷನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊನೆ ಹಂತವಾಗಿ 24 ಮಂದಿ ಅಮ್ಮಂದಿರು ಅಂತಿಮ ಹಂತಕ್ಕೆ ಪ್ರವೇಶ ಪಡೆದು ಜುಲೈ ಆರರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆಯಲಿದ್ದಾರೆ.

`ಆಡಿಷನ್‌ಗಳಲ್ಲಿ ಫ್ಯಾಷನ್ ಶೋಗೆ ಹೆಚ್ಚು ಪ್ರಾಮುಖ್ಯ ನೀಡಲಾಗುವುದಿಲ್ಲ. ಇದ್ದರೂ ಅದು ಸೀರೆ ಅಥವಾ ಇನ್ನಿತರ ಸಾಂಪ್ರದಾಯಿಕ ಉಡುಗೆಯಲ್ಲೇ. ನಾವು ನೀಡುವ `ಬೆಸ್ಟ್ ಪರ್ಸನಾಲಿಟಿ~ ಅವಾರ್ಡ್ ಸ್ಪರ್ಧಿಯ ಮೈಕಟ್ಟಿಗೆ ಸಂಬಂಧಿಸಿದ್ದಲ್ಲ. ಮನೆ ನಿರ್ವಹಣೆಯಲ್ಲಿ ಅವರ ಪಾತ್ರ ಎಷ್ಟು ಹಾಗೂ ಹೇಗಿದೆ ಎಂಬುದಷ್ಟೇ  ಮುಖ್ಯ. ಉತ್ತಮ ಕೇಶ ವಿಭಾಗದ್ಲ್ಲಲಿ ಸ್ಪರ್ಧಿಯ ಸಹಜ ಕೂದಲು ಗಣನೆಗೆ ಬರುತ್ತದೇ ವಿನಾ ಬ್ಯೂಟಿಪಾರ್ಲರ್‌ನ ವಿನ್ಯಾಸಗಳಲ್ಲ~ ಎಂಬುದು ಆಯೋಜಕರ ವಿವರಣೆ.

`ಕಾರ್ಯಕ್ರಮ ಉದ್ಘಾಟಿಸಲು ಕರೆ ಬಂದಾಗ ಇದು ಇನ್ನೊಂದು `ಮಿಸೆಸ್ ಕರ್ನಾಟಕ~ ಕಾರ್ಯಕ್ರಮವಿರಬಹುದು ಎಂದುಕೊಂಡೆ. ಬಳಿಕ ತಿಳಿದ ಸಂಗತಿಗಳೇ ಬೇರೆ. ನಮ್ಮ ರಾಜ್ಯದ ಮಟ್ಟಿಗಂತೂ ಇದು ವಿನೂತನ ಪ್ರಯತ್ನ. ಮದುವೆಯಾದ ತಕ್ಷಣ ಬದುಕೇ ಮುಗಿಯಿತು ಎಂದುಕೊಳ್ಳುವ ಬದಲು ತಮ್ಮ ಪ್ರತಿಭೆಯ ಪ್ರದರ್ಶನಕ್ಕೂ ಮಹಿಳೆಯರಿಗಿರುವ ಉತ್ತಮ ಅವಕಾಶ ಇದು~ ಎಂದರು ನಟ ರಾಕೇಶ್.

ನಟಿ ಭೂಮಿಕಾ ಅವರದ್ದೂ ಇದೇ ಮಾತು.  `ಮಹಿಳೆ ಇಂದು ಕೇವಲ ಮನೆಕೆಲಸದವಳಾಗಿ ಉಳಿದಿಲ್ಲ. ಆಕೆಯೂ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದಾಳೆ. ಮಾಡೆಲ್ ಫಿಗರ್ ಎನಿಸಿಕೊಳ್ಳುವುದಕ್ಕಿಂತ `ಗುಡ್ ಹೋಮ್‌ಮೇಕರ್~ ಎಂದು ಗುರುತಿಸಿಕೊಳ್ಳಲು ಮಹಿಳೆಯರಿಗೆ ಇದೊಂದು ಸದವಕಾಶ. ಆಯ್ಕೆಯ ಎಲ್ಲಾ ಹಂತಗಳಲ್ಲೂ ಸಾಂಪ್ರದಾಯಿಕತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿರುವುದು ಖುಷಿ ತಂದಿದೆ~ ಎಂದರು ಅವರು.

ಅರ್ಹ ಅಮ್ಮಂದಿರು ಸಂಪರ್ಕಿಸಬೇಕಾದ ಸಂಖ್ಯೆ: 77950 00075.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.