ADVERTISEMENT

ಫ್ಯಾಷನ್‌ ಅಂದ್ರೆ ಹೊಸ ಟ್ರೆಂಡ್‌

ಸುಮನಾ ಕೆ
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST
ತೇಜಸ್ವಿನಿ ಶರ್ಮಾ
ತೇಜಸ್ವಿನಿ ಶರ್ಮಾ   

ಷನ್‌ ಅಂದ್ರೆ ಈಗ ಟ್ರೆಂಡ್‌ ಸೆಟ್ಟಿಂಗ್‌. ನನ್ನ ವಿನ್ಯಾಸಗಳ ಮೂಲಕ ಫ್ಯಾಷನ್‌ ಲೋಕದಲ್ಲಿ ಹೊಸತುಗಳ ಟ್ರೆಂಡ್‌ ಸೆಟ್‌ ಮಾಡಬೇಕು ಎಂಬುದೇ ನನ್ನ ಆಸೆ...’

ಫ್ಯಾಷನ್‌ ಜಗತ್ತಿನ ಕುರಿತ ತನ್ನ ದೃಷ್ಟಿಕೋನಕ್ಕೆ ಹೀಗೆ ವ್ಯಾಖ್ಯಾನ ನೀಡಿದವರು ಸೆಲೆಬ್ರಿಟಿ ವಸ್ತ್ರ ವಿನ್ಯಾಸಕಿ ಶಿಲ್ಪಾಪೂಜಾರಿ. ಕಿರುತೆರೆ, ಹಿರಿತೆರೆ ನಟ, ನಟಿಯರಿಗೆ ವಸ್ತ್ರವಿನ್ಯಾಸ ಮಾಡುತ್ತಿರುವ ಶಿಲ್ಪಾ ಒಂಬತ್ತು ವರ್ಷಗಳಿಂದ ಫ್ಯಾಷನ್‌ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ.

‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಖಳನಾಯಕಿ ‘ಚಂದ್ರಿಕಾ’ ಪಾತ್ರಧಾರಿ ಪ್ರಿಯಾಂಕಾ, ನಟಿಯರಾದ ವೈಷ್ಣವಿ, ಉಷಾ ಭಂಡಾರಿ, ನಿರೂಪಕಿ ಅನುಶ್ರೀ, ತೇಜಸ್ವಿನಿ ಶರ್ಮಾ ವಸ್ತ್ರವಿನ್ಯಾಸ ಮಾಡಿದ್ದಾರೆ.

ADVERTISEMENT

‘ಈಗ ಪ್ರತಿದಿನವೂ ಫ್ಯಾಷನ್ ಜಗತ್ತು ಅಪ್‌ಡೇಟ್ ಆಗುತ್ತಿರುತ್ತದೆ. ನಾವು ದಿನವೂ ಅಪ್‌ಡೇಟ್ ಆಗಿರಬೇಕು. ಹಳೇ ಫ್ಯಾಷನ್‌ ಅನುಕರಿಸದೇ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಬೇಕು. ಅದು ಟ್ರೆಂಡ್‌ ಆಗಿ ಬದಲಾದರೆ ಅಲ್ಲಿಗೆ ನಮ್ಮ ವಿನ್ಯಾಸ ಯಶಸ್ವಿಯಾದ ಹಾಗೆಯೇ ಸರಿ. ನಾನು ಬಗೆಬಗೆ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತೇನೆ’ ಎಂದು ತಮ್ಮ ಲೋಕದ ಪರಿಚಯ ಮಾಡಿಕೊಡುತ್ತಾರೆ ಅವರು.

ಶಿಲ್ಪಾ ಅವರ ಬಹುತೇಕ ಪ್ರಯೋಗಗಳು ಇಂಡೋ– ವೆಸ್ಟರ್ನ್‌ ಶೈಲಿಯಲ್ಲಿವೆ. ಈಚೆಗೆ ಕೆಲ ಹಳೇ ಫ್ಯಾಷನ್‌ಗಳೇ ಮತ್ತೆ ಚಾಲ್ತಿಯಲ್ಲಿವೆ. ‘ಫ್ಯಾಷನ್‌ ಲೋಕದಲ್ಲಿ ಈಜಿ ಜಯಿಸಬೇಕು ಎಂದರೆ ಜನರು ಒಪ್ಪಿಕೊಂಡಿರುವ ಫ್ಯಾಷನ್‌ಗಳನ್ನೇ ಹೊಸ ರೀತಿಯಲ್ಲಿ ಅವರಿಗೆ ಒಪ್ಪುವಂತೆ ಮಾಡಬೇಕು. ಅದೇ ನಮ್ಮೆದುರಿನ ಸವಾಲು’ ಎಂಬುದು ಶಿಲ್ಪಾ ಮಾತು.

(ಶಿಲ್ಪಾ)

ಶಿಲ್ಪಾ ಮಂಗಳೂರಿನವರು. ಅಲ್ಲಿನ ನಿಟ್ಟೆ ಫ್ಯಾಷನ್‌ ಡಿಸೈನ್‌ ಕಾಲೇಜಿನಲ್ಲಿ ಓದು ಮುಗಿಸಿದ ಅವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದರು. ಇಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಅನುಭವಗಳ ಮೂಟೆ ಕಟ್ಟಿಕೊಂಡರು. ಎರಡೇ ವರ್ಷಕ್ಕೆ ಡೆನ್ಮಾರ್ಕ್‌ನ ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್‌ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ ಹುಡುಕಿಕೊಂಡು ಬಂತು. ಅಲ್ಲಿಯೂ 2–3 ವರ್ಷ ಪ್ರತಿಷ್ಠಿತ ಬ್ರಾಂಡ್‌ಗಳಿಗೆ ಕೆಲಸ ಮಾಡಿದರು. ನಂತರ ಮದುವೆಯಾದ ಬಳಿಕ ಬೆಂಗಳೂರಿಗೆ ವಾಪಸಾದರು.

ಮಗುವಾದ ಬಳಿಕ ಶಿಲ್ಪಾ ಈ ಕ್ಷೇತ್ರದಿಂದ ಕೊಂಚ ದೂರವುಳಿದಿದ್ದರು. ನಂತರ ಫ್ಯಾಷನ್‌ ಕ್ಷೇತ್ರದ ಬೇಡಿಕೆ ಗಮನಿಸಿಕೊಂಡು ಸ್ವಂತ ಫ್ಯಾಷನ್‌ ಸಂಸ್ಥೆ ಆರಂಭಿಸುವ ಯೋಚನೆ ಮಾಡಿದರು. ಶ್ರುತಿ ಶೆಟ್ಟಿ ಅವರ ಜೊತೆಗೂಡಿ ಬಸವೇಶ್ವರ ನಗರದಲ್ಲಿ ಟೈನಾಟ್ ಕಂಪೆನಿ ಆರಂಭಿಸಿದರು. ಶ್ರುತಿ ಆನ್‌ಲೈನ್‌ ವ್ಯಾಪಾರ ನೋಡಿಕೊಂಡರೆ, ಶಿಲ್ಪಾ ವಸ್ತ್ರವಿನ್ಯಾಸ ಕಡೆಗೆ ಗಮನ ನೀಡುತ್ತಾರೆ.

ತುಳು ಭಾಷೆಯ ಅಪ್ಪೆ ಟೀಚರ್‌, ಬೈಲಾ, ರಾಮಧಾನ್ಯ ಸಿನಿಮಾಗಳಲ್ಲಿ ನಟಿಯರಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ. 2018ರ ಮಿಸ್ಟರ್‌ ಇಂಡಿಯಾ ಫ್ಯಾಷನ್‌ ಷೋಗೂ ವಸ್ತ್ರವಿನ್ಯಾಸ ಮಾಡಿದ್ದು ಇವರೇ.

‘ನಟಿಯರಿಗೆ ವಸ್ತ್ರವಿನ್ಯಾಸ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಅವರ ದೇಹಾಕಾರ, ಯಾವ ಉಡುಗೆ ಒಪ್ಪುತ್ತದೆ ಎಂಬ ನಕಾಶೆ ಮೊದಲು ಸಿದ್ಧಪಡಿಸಿಕೊಳ್ಳುತ್ತೇನೆ. ಯಾವ ಕಾರ್ಯಕ್ರಮ ಎಂಬುದನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸ ಮಾಡುತ್ತೇನೆ’ ಎನ್ನುತ್ತಾರೆ ಅವರು.

‘ಬಾಲಿವುಡ್‌ನಲ್ಲಿ ಶ್ರೀದೇವಿ ಅವರ ಫ್ಯಾಷನ್ ಸೆನ್ಸ್‌ ಇಷ್ಟ’ ಎಂದು ಎಂದು ಹೇಳುವ ಇವರು, ಕನ್ನಡ ಚಿತ್ರರಂಗದ ಖ್ಯಾತ ತಾರೆಯರಿಗೆ ವಸ್ತ್ರ ವಿನ್ಯಾಸ ಮಾಡುವ ಕನಸು ಇಟ್ಟುಕೊಂಡಿದ್ದಾರೆ.

ಸಂಪರ್ಕಕ್ಕೆ: ಮೊ 97436 81571

**

‘ಗಾಢ ವರ್ಣದ ಬಟ್ಟೆಗಳು ಎಲ್ಲ ಸಂದರ್ಭಕ್ಕೂ ಸರಿ ಹೊಂದುವುದಿಲ್ಲ. ನಾನು ತೀರಾ ಅಗತ್ಯ ಇದ್ದಾಗ ಮಾತ್ರ ಗಾಢಬಣ್ಣಗಳ ವಿನ್ಯಾಸ ಮಾಡುತ್ತೇನೆ. ತಿಳಿಬಣ್ಣಗಳಲ್ಲೇ ಎದ್ದು ಕಾಣುವ ಹಾಗೆ ವಸ್ತ್ರವಿನ್ಯಾಸ ಮಾಡುವುದು ನನಗಿಷ್ಟ.

ಶಿಲ್ಪಾ, ವಸ್ತ್ರ ವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.