ADVERTISEMENT

ಬಂಗಾರ ಸಣ್ಣ ವ್ಯಾಪಾರಿಗಳ ಭಾವುಕ ಲೋಕ

ಸುರೇಖಾ ಹೆಗಡೆ
Published 1 ಮೇ 2014, 19:30 IST
Last Updated 1 ಮೇ 2014, 19:30 IST
ಬಂಗಾರ ಸಣ್ಣ ವ್ಯಾಪಾರಿಗಳ ಭಾವುಕ ಲೋಕ
ಬಂಗಾರ ಸಣ್ಣ ವ್ಯಾಪಾರಿಗಳ ಭಾವುಕ ಲೋಕ   

ಚಿ ನ್ನವೆಂಬ ಹಳದಿ ಲೋಹಕ್ಕೆ ಬೆಲೆ ಬಂದದ್ದೇ ಹೆಣ್ಣಿನ ಆಭರಣ ವ್ಯಾಮೋಹದಿಂದ. ಆದರೆ ಇಂದು ಚಿನ್ನದ ಮೇಲೆ ಹೆಣ್ಣಿನ ದೃಷ್ಟಿ ಮಾತ್ರ ಬಿದ್ದಿಲ್ಲ. ಚಿನ್ನ ಈಗ ಬಹುದೊಡ್ಡ  ಹೂಡಿಕೆಯ ವಸ್ತುವಾಗಿ ಬದಲಾಗಿದೆ. ಚಿನ್ನದ ಮೇಲೆ ಹಣ ಹೂಡಿದರೆ ಲಾಭವೇ ಹೊರತು ನಷ್ಟದ ಮಾತಿಲ್ಲ ಎಂಬಂತಾಗಿದೆ. ಚಿನ್ನ ಖರೀದಿಯ ಹಿಂದೆ ಒಂದಿಷ್ಟು ನಂಬಿಕೆಯೂ ಬೆಸೆದುಕೊಂಡಿದೆ. ಅಕ್ಷಯ ತೃತಿಯ ದಿನ ಬಂಗಾರ ಖರೀದಿಸಿದರೆ ಬಾಳೇ ಬಂಗಾರವಾಗುತ್ತದೆ ಎಂದು ಸಾರುತ್ತಿವೆ ಆಭರಣ ಮಳಿಗೆಗಳ ಜಾಹೀರಾತುಗಳು.

ಕೆಲವರು ಆಗೀಗ ಮನಸ್ಸು ಬಂದಾಗಲೆಲ್ಲಾ ಚಿನ್ನ ಖರೀದಿಸಿದರೆ ಮಧ್ಯಮ ಹಾಗೂ ಬಡ ವರ್ಗದವರಿಗೆ ಅಕ್ಷಯ ತೃತೀಯವೇ ಚಿನ್ನ ತಂದುಕೊಡುವ ದಿನ. ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯಂದು ಬರುವ ಈ ಅಕ್ಷಯ ತೃತೀಯ ದಿನ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಅಭಿವೃದ್ಧಿ ಸಿಗುತ್ತದೆ ಎಂಬುದು ಮೊದಲಿನಿಂದಲೂ ಬಂದ ನಂಬಿಕೆ. ಆದರೆ ಇತ್ತೀಚೆಗೆ ಅಕ್ಷಯ ತೃತೀಯ ಕೇವಲ ಚಿನ್ನ ಖರೀದಿಗೆ ಶುಭದಿನ ಎಂಬಂತಾಗಿದೆ. ಅಕ್ಷಯ ತೃತೀಯ ಶುಕ್ರವಾರ ಬಂದರೆ ಶುಭವಂತೆ.

ಅಕ್ಷಯ ತೃತೀಯಕ್ಕೆ ಒಂದು ವಾರವಿರುವಾಗಲೇ ಆಭರಣದ ಅಂಗಡಿಗಳು ಸಿದ್ಧತೆಯಲ್ಲಿ ತೊಡಗುತ್ತವೆ. ಮೊದಲೇ ಬುಕ್ಕಿಂಗ್‌ ಮಾಡಿಸಲು ಪ್ರೇರಣೆ ನೀಡುವ ಜಾಹೀರಾತುಗಳನ್ನು ನೀಡುತ್ತವೆ. ವಿಶೇಷವೆಂದರೆ ಈ ದಿನ ಸನಿಹವಾದಂತೆ ಎಲ್ಲಾ ಮಳಿಗೆಗಳು ತುಂಬಿ ತುಳುಕುತ್ತವೆ. ಅನೇಕರು ಮೊದಲೇ ಹಣ ಪಾವತಿಸಿ ಆಭರಣವನ್ನು ಖರೀದಿಸಿ ಅಕ್ಷಯ ತದಿಗೆ ದಿನವೇ ಅದನ್ನು ಮನೆಗೆ ಕೊಂಡೊಯ್ಯುತ್ತಾರೆ. ಇನ್ನು ಕೆಲವರು ಅದೇ ದಿನ ಸಿಕ್ಕಿದ ಚಿನ್ನದ ಅಂಗಡಿಗೆ ನುಗ್ಗಿ ಏನಾದರೊಂದು ಆಭರಣವನ್ನು ಖರೀದಿಸಿ ಹಿಂತಿರುಗುತ್ತಾರೆ.

ಹೀಗಾಗಿಯೇ ಅಕ್ಷಯ ತೃತೀಯ ಎಂಬುದು ಆಭರಣದ ಅಂಗಡಿಯ ಮಾಲೀಕರಿಗೆ ಹಬ್ಬವಿದ್ದಂತೆ. ನಿಭಾಯಿಸಲಾಗದಷ್ಟು ಗ್ರಾಹಕರ ದಂಡೇ ಅಲ್ಲಿ ನೆರೆದಿರುತ್ತದೆ. ಗ್ರಾಹಕರ ಸಂಖ್ಯೆ ಅಕ್ಷಯವಾಗುತ್ತಲೇ ಇರುತ್ತದೆ.

ಇತ್ತೀಚೆಗೆ ಜೋಯಾಲುಕ್ಕಾಸ್‌,ಜೋಸ್ ಅಲುಕ್ಕಾಸ್, ಭೀಮಾ, ಲಲಿತಾ ಜ್ಯುವೆಲ್ಲರಿ, ಕಲ್ಯಾಣ್‌, ರಿಲಯನ್ಸ್‌, ಶುಭ್‌, ತನಿಷ್ಕ್, ಶ್ರೀಲಕ್ಷ್ಮಿ ಗೋಲ್ಡ್‌ ಪ್ಯಾಲೆಸ್‌ ...ಹೀಗೆ ದೊಡ್ಡ ದೊಡ್ಡ ಆಭರಣಗಳ ಅಂಗಡಿಗಳು ಬಂದು ಚಿಕ್ಕಪುಟ್ಟ ಅಂಗಡಿಗಳ ಕಡೆ ಜನರು ಮುಖಮಾಡುತ್ತಿಲ್ಲ. ಈ ಬಗ್ಗೆ ‘ಮೆಟ್ರೊ’ ಚಿನ್ನದ ವ್ಯಾಪಾರಿಗಳನ್ನು ಮಾತಾಡಿಸಿದಾಗ ಸಿಕ್ಕ ಮಾಹಿತಿ ಇದು...

ಆಕರ್ಷಣೆಯೇ ಹೆಚ್ಚು
‘ಇಂದಿನವರಿಗೆ ಕ್ರೇಜ್‌ ಜಾಸ್ತಿ. ಝಗಮಗ ಎನ್ನುವ ದೊಡ್ಡ ಅಂಗಡಿ ಕಂಡರೆ ಅವರು ಸಹಜವಾಗಿಯೇ ಆಕರ್ಷಿತರಾಗುತ್ತಾರೆ. ಇದು ಕೇವಲ ಚಿನ್ನದಂಗಡಿಗೆ ಸಂಬಂಧಿಸಿದ್ದಲ್ಲ. ಬಿಗ್ ಬಜಾರ್‌, ಸ್ಟಾರ್‌ ಬಜಾರ್‌, ಮಾಲ್‌, ಮಾರ್ಟ್‌ಗಳ ಹಾವಳಿಯಲ್ಲಿ ಸಣ್ಣ ಅಂಗಡಿಗಳಿಗೆ ವಿಪರೀತವಾದ ಹೊಡೆತ ಬಿದ್ದಿದೆ. ಅದೂ ಅಲ್ಲದೆ ಅವರು ಜಾಹೀರಾತುಗಳನ್ನು ನೀಡಿ ಜನರ ಮಧ್ಯೆ ಹೆಚ್ಚು ಜನಪ್ರಿಯರಾಗಿದ್ದಾರೆ.

ನಮ್ಮ ಅಂಗಡಿಗಳಲ್ಲೆಲ್ಲಾ ಮೊದಮೊದಲು ತುಂಬಾ ಜನರು ಬರುತ್ತಿದ್ದರು. ಈಗ ತೀರಾ ಕಡಿಮೆ. ದೊಡ್ಡ ಅಂಗಡಿಗಳಲ್ಲಿ ಎಲ್ಲಾ ರೆಡಿಮೇಡ್‌ ದೊರೆಯುತ್ತದೆ ಹಾಗೂ ಆಯ್ಕೆಗಳು ಹೆಚ್ಚಿವೆ. ಆದರೆ ನಾವು ಮಾಡಿಕೊಡುವ ಚಿನ್ನ ಬಾಳಿಕೆ ಬರುತ್ತದೆ’ ಎನ್ನುತ್ತಾರೆ ದೇವಯ್ಯ ಪಾರ್ಕ್ ಬಳಿಯಿರುವ ಮಂಜುನಾಥ ಜ್ಯುವೆಲ್ಲರ್ಸ್‌ ಮಾಲೀಕ ರಮೇಶ್‌ ಬಾಬು.

ದೊಡ್ಡಮಳಿಗೆಯಿಂದ ಹೊಡೆತ
ದೊಡ್ಡ ದೊಡ್ಡ ಚಿನ್ನದಂಗಡಿ ಬಂದ ಮೇಲೆ ಸಣ್ಣಪುಟ್ಟ ಅಂಗಡಿಯವರಿಗೆ ನಷ್ಟವಾಗಿದೆ. ಆದರೂ ಬೇರೆ ವ್ಯವಹಾರಕ್ಕೆ ಕೈಹಾಕುವ ಮನಸ್ಸು ಮಾಡುವುದಿಲ್ಲ, ಅದೂ ಸಾಧ್ಯವೂ ಇಲ್ಲ ಎಂಬುದು ಅನೇಕರ ಅನಿಸಿಕೆ. ತಲತಲಾಂತರದಿಂದ ಅವರ ಕುಟುಂಬ ಇದೇ ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ ಅದು ಮನೆತನದ ಬ್ಯುಸಿನೆಸ್‌ ಆಗಿಬಿಟ್ಟಿರುತ್ತದೆ. ಹೀಗಾಗಿ ಬೇರೆ ಕಡೆಗೆ ಮನಸ್ಸು ವಾಲುವುದಿಲ್ಲ. ಜೊತೆಗೆ ಬೇರೆ ಉದ್ಯಮ ಕೈಗೊಳ್ಳಲು ವಯಸ್ಸಿನ ಮಿತಿ ಇರುತ್ತದೆ ಎನ್ನುತ್ತಾರೆ ಮಲ್ಲೇಶ್ವರಂನಲ್ಲಿ ಕಳೆದ 20–25 ವರ್ಷದಿಂದ ಶ್ರೀಮರುಧರ್‌ ಜ್ಯುವೆಲ್ಲರ್ಸ್‌ ಮಳಿಗೆ ನಡೆಸುತ್ತಿರುವ ಗೌತಮ್‌ ಚಂದ್‌.

ಬೆಳ್ಳಿ ಸಮಾನುಗಳನ್ನು ಮಾರಾಟ ಮಾಡುವ ಗೌತಮ್‌ ಅಡಮಾನದ ಮೇಲೆ ಸಾಲ ಕೊಡುತ್ತಾರೆ. ಬ್ಯಾಂಕ್‌ನಿಂದಲೂ ಸಾಲ ಕೊಡುವ ವ್ಯವಸ್ಥೆ ಇತ್ತೀಚೆಗೆ ಬಂದರೂ ಅಡ ಇಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಇದು ಪಕ್ಕಾ ನಂಬಿಕೆಯ ಮೇಲೆ ನಡೆಯುವ ವ್ಯವಹಾರ ಎನ್ನುತ್ತಾರೆ ಅವರು.

ನಂಬಿಕೆಯೇ ಮುಖ್ಯ
ಕಳೆದ 60–70 ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಎಸ್‌.ಎಂ. ಜ್ಯುವೆಲ್ಲರ್ಸ್‌ನವರ ಪ್ರಕಾರ ದೊಡ್ಡ ಅಂಗಡಿಗಳಿಂದಾಗಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಆದರೆ ಅಕ್ಷಯ ತೃತೀಯ ಸಂದರ್ಭದಲ್ಲಿ ಮಾತ್ರ ಯಾವುದೇ ಕಾರಣಕ್ಕೆ ನಷ್ಟವಾಗುವುದಲ್ಲವಂತೆ. ‘ದೊಡ್ಡ ಮಳಿಗೆಗಳಲ್ಲಿ ಹೆಚ್ಚಿನ ಆಯ್ಕೆಗಳಿರುತ್ತವೆ. ಆದರೆ ಅಕ್ಷಯ ತೃತೀಯದ ದಿನ ಹೆಚ್ಚಿನ ಎಲ್ಲಾ ಚಿನ್ನದ ಅಂಗಡಿಗಳಲ್ಲಿ ಮಾರಾಟ ಭರದಿಂದ ಸಾಗುತ್ತದೆ.

ದೊಡ್ಡ ಅಂಗಡಿಗಳಲ್ಲಿ ಸರತಿ ಸಾಲಿರುವುದರಿಂದ ಎಲ್ಲಾದರೂ ಚಿನ್ನ ಸಿಕ್ಕರೆ ಸಾಕು ಎಂಬ ಮನಸ್ಥಿತಿ ಗ್ರಾಹಕರಿಗಿರುತ್ತದೆ. ಹೀಗಾಗಿ ಸಿಕ್ಕ ಸಿಕ್ಕ ಅಂಗಡಿಗಳಿಗೆ ನುಗ್ಗಿ ಚಿನ್ನ ಖರೀದಿ ಮಾಡುತ್ತಾರೆ. ನಾವು ಚಿನ್ನಾಭರಣ ಅಡ ಇಟ್ಟುಕೊಳ್ಳುತ್ತೇವೆ ಕೂಡ. ಆದರೆ ಕೇವಲ ಪರಿಚಯಸ್ಥರಿಗೆ, ಸಂಬಂಧಿಕರೊಂದಿಗೆ ನಡೆಯುವ ವ್ಯವಹಾರವಿದು.

ನಂಬಿಕೆ ಇಲ್ಲಿ ಮುಖ್ಯವಾದ್ದರಿಂದ ಬೇರೆಯವರು ಅಡ ಇಡಲು ಅವಕಾಶ ನೀಡುವುದಿಲ್ಲ. ಚಿನ್ನಾಭರಣದ ಮೇಲೆ ಸಾಲ ನೀಡುವ ಬ್ಯಾಂಕ್‌ಗಳು ಬಂದಮೇಲೆ ಅಡ ಇಡುವವರ ಸಂಖ್ಯೆಯಲ್ಲಿ ಕಡಿಮೆಯಾಗಿರಬಹುದು. ಆದರೆ ನಮ್ಮ ವ್ಯವಹಾರದಲ್ಲಿ ಏನೂ ತೊಂದರೆ ಆಗಿಲ್ಲ. ಎಲ್ಲಾ ವಿಧದಲ್ಲಿ ಸ್ಪರ್ಧೆ ಹೆಚ್ಚಾಗಿರುವುದರಿಂದ ಗಿರಾಕಿಗಳಿಗೆ ಒಳ್ಳೆಯ ಲಾಭ ಅಷ್ಟೇ’ ಎನ್ನುತ್ತಾರೆ ಪ್ರಸನ್ನ.

ಕೈಗುಣದ ನಂಬಿಕೆ
ಪಿಪ್ಪಾಡ ಜ್ಯುವೆಲ್ಲರ್ಸ್‌ ಮಾಲೀಕ ಜೈಚಂದ್‌ ಪಿಪ್ಪಾಡ ಅವರ ಪ್ರಕಾರ ಅಕ್ಷಯ ತೃತೀಯದ ವ್ಯವಹಾರ ಕೈಗುಣದ ಮೇಲೆ ನಿಂತಿದೆ. ‘ಬೇರೆ ಕಡೆ ಎಷ್ಟೇ ಬಗೆಯ ಆಭರಣಗಳು ದೊರೆಯಲಿ ಆದರೆ ಅಕ್ಷಯ ತೃತೀಯ ಮಾತ್ರ ನಂಬಿಕೆ ಹಾಗೂ ಕೈಗುಣಕ್ಕೆ ಸಂಬಂಧಿಸಿದ್ದು. ಆ ದಿನ ಖರೀದಿಸಿದ ಚಿನ್ನದಿಂದ ಅಭಿವೃದ್ಧಿಯಾಗಬೇಕು, ಅಕ್ಷಯವಾಗಬೇಕು ಎಂಬ ಕಲ್ಪನೆ ಜನರಿಗಿದೆ.

ಆ ದಿನ ಚಿನ್ನವನ್ನು ನೀಡುವುದಕ್ಕೂ ಒಂದು ರೀತಿ ನೀತಿ, ನಿಯಮಗಳಿವೆ. ಸುಮ್ಮಸುಮ್ಮನೆ ಮಾರುವುದು, ಖರೀದಿಸುವುದರಿಂದ ಚಿನ್ನ ಅಕ್ಷಯವಾಗುವುದಿಲ್ಲ. ತಾತನ ಕಾಲದಿಂದ ನಾವು ಇದೇ ವ್ಯವಹಾರದಲ್ಲಿದ್ದೇವೆ. ಅಂದಿನ ನಮ್ಮ ಗ್ರಾಹಕರ ಕುಟುಂಬದವರು ಇಂದಿಗೂ ಇಲ್ಲೇ ಬಂದು ಚಿನ್ನ ಖರೀದಿ ಮಾಡುತ್ತಾರೆ.

ಅದರಲ್ಲೂ ಅಕ್ಷಯ ತೃತೀಯದ ದಿನ ಅವರು ಬೇರೆಲ್ಲೂ ಖರೀದಿಸುವುದಿಲ್ಲ. ಮಾಲೀಕರು, ಮಾರಾಟಗಾರರು ಇಬ್ಬರೂ ನಾವೇ ಆಗಿರುವುದರಿಂದ ಸಣ್ಣ ಅಂಗಡಿಗಳವರು ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವ ಬಗ್ಗೆ ಹೆಚ್ಚು ಚಿಂತಿಸುತ್ತೇವೆ. ವ್ಯವಹಾರವೊಂದೇ ನಮಗೆ ಮುಖ್ಯವಲ್ಲ. ಒಮ್ಮೆ ಬಂದವರು ಮತ್ತೊಮ್ಮೆ ಬರಬೇಕು ಎಂಬ ಆಸೆ ನಮಗಿರುತ್ತದೆ. ಅದೂ ಅಲ್ಲದೆ ಇಂಥ ಅಂಗಡಿಗಳಲ್ಲಿ ಯಾವುದೇ ರೀತಿಯಲ್ಲೂ ಮೋಸ ಆಗುವುದೇ ಇಲ್ಲ’ ಎನ್ನುತ್ತಾರೆ ಅವರು.

1951ರಿಂದ ಪ್ರಾರಂಭವಾದ ನಮ್ಮ ಅಂಗಡಿ ಮಲ್ಲೇಶ್ವರಂನ ಮೊದಲ ಚಿನ್ನದಂಗಡಿ. ಇದಕ್ಕೂ ಆಚೆ ಬರೀ ಕಾಡಿತ್ತು. ಆಗಿನಿಂದ ಆದ ಎಲ್ಲಾ ಬೆಳವಣಿಗೆಗೂ ನಾನು ಸಾಕ್ಷಿ. ಆದರೆ ಗ್ರಾಹಕರು ಮಾತ್ರ ಅದೇ ಪ್ರೀತಿ ಉಳಿಸಿಕೊಂಡಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ ಅವರು. 

ಮದುವೆ ಆಭರಣ ಇಲ್ಲೇ ತಯಾರಾಗಿದ್ದು...
‘ಅಪ್ಪ ಮೈಸೂರಿನಲ್ಲಿರುತ್ತಾರೆ. ಆದರೂ ಅವರು ಪಿಪ್ಪಾಡಾಕ್ಕೆ ಬಂದು ಚಿನ್ನಾಭರಣ ಮಾಡಿಸುತ್ತಿದ್ದರು. ಅವರ ಮದುವೆ ಆಭರಣಗಳೂ ಇಲ್ಲೇ ತಯಾರಾಗಿದ್ದು. ಈಗ ನಾವು ಸುಮಾರು 20 ವರ್ಷಕ್ಕೂ ಹೆಚ್ಚು ವರ್ಷದಿಂದ ಇಲ್ಲೇ ಖರೀದಿ ಮಾಡುತ್ತಿದ್ದೇವೆ. ಬೇರೆಲ್ಲೂ ನಮಗೆ ಹೋಗುವ ಮನಸ್ಸಾಗುವುದಿಲ್ಲ. ಬೇರೆ ಕಡೆ ಹೋದಾಗ ಟೋಪಿ ಹಾಕಿಸಿಕೊಂಡ ಅನುಭವವಾದಮೇಲಂತೂ ಇದೇ ನಮ್ಮ ಖಾಯಂ ಅಂಗಡಿ’ ಎಂದರು ಚಿನ್ನ ಖರೀದಿಗೆ ಬಂದಿದ್ದ ಮಂಜುನಾಥ ಎಚ್‌.ಎಸ್‌. ದಂಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.