ADVERTISEMENT

ಬಗೆಬಗೆ ಬುರ್ಖಾ

​ಯೋಗಿತಾ ಬಿ.ಆರ್‌.
Published 14 ಜುಲೈ 2015, 19:53 IST
Last Updated 14 ಜುಲೈ 2015, 19:53 IST

ಇಸ್ಲಾಂ ಧರ್ಮದ ಮಹಿಳೆಯರಲ್ಲಿ ಈ ತಿಂಗಳು ಸಂತಸ ಹಾಗೂ ಸಂಭ್ರಮ ಮನೆಮಾಡಿರುತ್ತದೆ. ವರ್ಷಕ್ಕೊಮ್ಮೆ ಬರುವ ಪವಿತ್ರವಾದ ಹಬ್ಬ ರಂಜಾನ್‌ಗೆ ಹೊಸ ಹೊಸ ಬಟ್ಟೆಗಳನ್ನು ಖರೀದಿಸಿ, ಸಡಗರದಿಂದ ಆಚರಿಸಲು ಈಗಾಗಲೇ ಎಲ್ಲ ತಯಾರಿಗಳೂ ನಡೆಯುತ್ತಿವೆ. ಚೂಡಿದಾರ್ ಹಾಗೂ ಸೀರೆಗಳ ಖರೀದಿ ಒಂದೆಡೆಯಾದರೆ, ತಮ್ಮ ಸಂಪ್ರದಾಯದ ಅರಿವೆ ಬುರ್ಖಾದ ಖರೀದಿ ಮತ್ತೊಂದೆಡೆ.

ತನ್ನ ಪತಿಯನ್ನು ಹೊರತುಪಡಿಸಿ ಇತರರಿಗೆ ತನ್ನ ಸೌಂದರ್ಯ ಪ್ರದರ್ಶಿಸುವುದು ತರವಲ್ಲ. ಹಾಗಾಗಿ ತಂದೆ, ತಾಯಿ, ಮಕ್ಕಳು, ಸ್ನೇಹಿತರು ಹಾಗೂ ತಮ್ಮ ಕುಟುಂಬಕ್ಕೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಇತರರ ಎದುರಿಗೆ ಅಂದರೆ  ಸಾರ್ವಜನಿಕವಾಗಿ ಹೊರಬಂದಾಗ ಬುರ್ಖಾದಲ್ಲಿ ತಮ್ಮ ದೇಹ ಹಾಗೂ ಮುಖವನ್ನು ಮುಚ್ಚಿಕೊಳ್ಳಬೇಕು ಎಂದು ಇಸ್ಲಾಂ ಧಾರ್ಮಿಕ ಗ್ರಂಥ ಕುರಾನ್‌ನಲ್ಲಿ ತಿಳಿಸಲಾಗಿದೆ. ಕೆಲ ಇಸ್ಲಾಂ ಸಂಪ್ರದಾಯದ ಹೆಣ್ಣುಮಕ್ಕಳಿಗೆ ಬುರ್ಖಾ ಧರಿಸುವುದು  ಕಡ್ಡಾಯವಾದರೆ, ಈ ಸಂಪ್ರದಾಯವನ್ನು ಅನೇಕ ಮಹಿಳೆಯರು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದಾರೆ.

ಈ ವರ್ಷದ ರಂಜಾನ್ ವಿಶೇಷ ಬುರ್ಖಾಗಳು ಯಾವುವು? ಎಷ್ಟು ಬಗೆಯ ನೂತನ ವಿನ್ಯಾಸದ ಬುರ್ಕಾಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ? ಅತಿ ಹೆಚ್ಚು ಬೇಡಿಕೆ ಇರುವುದು ಯಾವ ವಿನ್ಯಾಸಕ್ಕೆ? ಅವುಗಳ ಬೆಲೆ ಎಷ್ಟು? ಎಂಬೆಲ್ಲಾ ವಿಷಯಗಳ ಕುರಿತ ಮಾಹಿತಿ ಇಲ್ಲಿದೆ.

ನೂತನ ವಿನ್ಯಾಸಕ್ಕೆ ಬೇಡಿಕೆ
‘ಕಳೆದ ನಾಲ್ಕೈದು ವರ್ಷಗಳ ಹಿಂದೆ ಬುರ್ಖಾಗಳ ವಿನ್ಯಾಸಗಳಿಗೆ ಇಷ್ಟೊಂದು  ಬೇಡಿಕೆ ಇರಲಿಲ್ಲ. ಸಾದಾ ಬುರ್ಖಾಗಳನ್ನೇ ಎಲ್ಲರೂ ಕೊಂಡುಕೊಳ್ಳುತ್ತಿದ್ದರು. ಸರಳವಾದ ಮ್ಯಾಕ್ಸಿ ಟೈಪ್ ಬುರ್ಖಾಗಳೇ ಹೆಚ್ಚು ಮಾರಾಟಗೊಳ್ಳುತ್ತಿದ್ದವು. ಆದರೆ ಇಂದು ಬುರ್ಖಾದಲ್ಲಿಯೂ ವಿನ್ಯಾಸಗಳಿಗೆ ಬೇಡಿಕೆ ಹೆಚ್ಚಿದೆ. ನಮ್ಮ ಕಾರ್ಖಾನೆಯಲ್ಲಿ ಬುರ್ಖಾ ವಿನ್ಯಾಸಗೊಳಿಸಲೆಂದೇ ಒಬ್ಬ ವಿನ್ಯಾಸಕಾರನನ್ನೂ ನೇಮಿಸಿಕೊಂಡಿದ್ದೇವೆ’ಎನ್ನುತ್ತಾರೆ ಕಮರ್ಷಿಯಲ್ ಸ್ಟ್ರೀಟ್‌ನ ಬುರ್ಖಾ ಮಾರಾಟ ಮಳಿಗೆಯ ಮಾಲೀಕ ಸಾದಿಕ್.

‘ಈಗಿನ ಮಹಿಳೆಯರಿಗೆ ಕೈಕುಸುರಿಯಿಂದ ತಯಾರಿಸಲಾಗುವ ಸ್ಟೋನ್ ವರ್ಕ್‌ಗಳು ಹಾಗೂ ಪ್ಯಾಚ್‌ವರ್ಕ್ ಬುರ್ಖಾಗಳು ಹೆಚ್ಚು ಮೆಚ್ಚುಗೆಯಾಗುತ್ತವೆ. ಮೊದಲೆಲ್ಲಾ ಕಪ್ಪು ಬಣ್ಣದ ಬುರ್ಖಾಗಳನ್ನು ಮಾತ್ರ ಕೊಂಡುಕೊಳ್ಳುತ್ತಿದ್ದರು. ಆದರೆ ಈಗ ಬುರ್ಖಾಗಳಲ್ಲಿ ಬಣ್ಣಗಳಿಗೂ ಮನ್ನಣೆ ಇದೆ. ಕಪ್ಪು ಬಣ್ಣ ಹೊರತುಪಡಿಸಿ ಪರ್ಪಲ್, ಸ್ಕೈ ಬ್ಲೂ ಹಾಗೂ ಮರೂನ್ ಬಣ್ಣಗಳಿಗೂ ಬೇಡಿಕೆ ಹೆಚ್ಚುತ್ತಿದೆ’ ಎಂದು ಏಳು ವರ್ಷದ ತಮ್ಮ ಅನುಭವ ಬಿಚ್ಚಿಡುತ್ತಾರೆ ಇವರು.

ವಿವಿಧ ಬಗೆಯ ಬುರ್ಖಾಗಳು
ಸುಮಾರು ಹತ್ತರಿಂದ ಹದಿನೈದು ಬಗೆಯ ಬುರ್ಖಾಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ಮ್ಯಾಕ್ಸಿ ಬುರ್ಖಾ, ಫ್ಲೈಯರ್, ಕಫ್ತಾನ್ (ಬಟರ್‌ಫ್ಲೈ), ಫಿಶ್ ಕಟ್ ಬುರ್ಖಾ ಹೀಗೆ ಅನೇಕ ಬಗೆಯ ಬುರ್ಖಾಗಳಿವೆ. ಅಂಗೈ, ಕತ್ತು ಹಾಗೂ ಕಾಲಿನ ಬಳಿ ಆಕರ್ಷಕ ಹ್ಯಾಂಡ್ ವರ್ಕ್‌ಗಳನ್ನು ಮಾಡಲಾಗುತ್ತದೆ. ಸಾವಿರ ರೂಪಾಯಿಯಿಂದ ಹದಿಮೂರು ಸಾವಿರದವರೆಗಿನ ಬುರ್ಖಾಗಳು ಮಾರುಕಟ್ಟೆಯಲ್ಲಿ ಲಭ್ಯ.

‘ಅವರವರ ವಯಸ್ಸಿಗೆ ತಕ್ಕಂತೆ ಮಹಿಳೆಯರು ಬುರ್ಖಾ ಖರೀದಿಸುತ್ತಾರೆ. ಯುವತಿಯರು ವಿಭಿನ್ನ ವಿನ್ಯಾಸದ ಸ್ಟೈಲಿಷ್ ಬುರ್ಖಾಗಳ ಮೊರೆಹೋದರೆ, ನಲವತ್ತರ ಗಡಿ ದಾಟಿದವರು ಮ್ಯಾಕ್ಸಿಯಂತಹ ಸರಳ ಬುರ್ಖಾಗಳನ್ನು ಕೊಂಡುಕೊಳ್ಳುತ್ತಾರೆ. ಹ್ಯಾಂಡ್ ಮೇಡ್ ವರ್ಕ್ ಇರುವ ಬಟ್ಟೆಗಳಿಗೆ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ.

ನಮ್ಮ ಅಂಗಡಿಯಲ್ಲಿ ಆಸ್ಟ್ರೇಲಿಯಾದ ಸೊರಾಸ್ಕಿ ಸ್ಟೋನ್ ಬಳಸಿ ತಯಾರಿಸುವ ಬುರ್ಖಾಗೆ ಹೆಚ್ಚು ದರ. ಇದನ್ನು ಹೊರತುಪಡಿಸಿದರೆ ಮಷಿನ್ ವರ್ಕ್ ಬುರ್ಖಾಗಳು ನಾಲ್ಕರಿಂದ ಐದು ಸಾವಿರದವರಿನ ಬೆಲೆಯಲ್ಲಿ ಸಿಗುತ್ತದೆ. ಹಿಜಾಬ್, ಹೆಡ್ ಕ್ಯಾಪ್, ನಿಖಾಬ್, ಗ್ಲೌವ್ಸ್‌ ಕೂಡ ಬುರ್ಖಾ ಜೊತೆ ಕೊಡಲಾಗುತ್ತದೆ. ಬೇಡವೆಂದವರು ಪ್ರತ್ಯೇಕವಾಗಿಯೂ ಇವುಗಳನ್ನು ಕೊಂಡುಕೊಳ್ಳಬಹುದು’ ಎನ್ನುತ್ತಾರೆ ಸಾದಿಕ್.

‘ಅನೇಕ ಕಾಲೇಜು ಹಾಗೂ ಕಚೇರಿಗಳಲ್ಲಿ ಬುರ್ಖಾ ಧರಿಸುವುದು ನಿಷಿದ್ಧ. ಹಾಗಾಗಿ ಸ್ಟೈಲಿಷ್ ವಿನ್ಯಾಸದ ಇರಾನಿಯನ್ ಕೋಟ್ (ಡೆನಿಮ್ ಬುರ್ಖಾ) ಅನ್ನು ಪರಿಚಯಿಸಿದ್ದೇವೆ. ಇದರಲ್ಲಿ ಥ್ರೀ ಫೋರ್ತ್ ಕೂಡ ಲಭ್ಯವಿದೆ’ ಎನ್ನುತ್ತಾರೆ ಇವರು.

ದುಬೈನಿಂದ ಬಟ್ಟೆಗಳ ಆಮದು
‘ದುಬೈನಿಂದ ಮಟೀರಿಯಲ್‌ಗಳನ್ನು ತರಿಸುತ್ತೇವೆ. ನಾವು ಬುರ್ಖಾ ತಯಾರಿಸುವುದು ಕೊರಿಯನ್ ಮಟೀರಿಯಲ್‌ ಬಳಸಿ. ಬೆಂಗಳೂರಿನ ವಾತಾವರಣಕ್ಕೆ ಕೊರಿಯನ್ ಬಟ್ಟೆ ಹೆಚ್ಚು ಹೊಂದಿಕೊಳುತ್ತದೆ. ಅಲ್ಲಿಂದ ಬಟ್ಟೆಗಳನ್ನು ತರಿಸುತ್ತೇವೆ ಅಷ್ಟೆ. ಫ್ರೇಜರ್‌ಟೌನ್ ಬಳಿ ಇರುವ ನಮ್ಮ ಕಾರ್ಖಾನೆಯಲ್ಲಿ ಬುರ್ಖಾಗಳ ವಿನ್ಯಾಸಕ್ಕೆಂದೇ ವಿಶೇಷ ವಿನ್ಯಾಕಸರಿದ್ದಾರೆ. ಅಲ್ಲಿಯೇ ವಿನ್ಯಾಸಗಳನ್ನು ಮಾಡಲಾಗುತ್ತದೆ. ರಂಜಾನ್ ತಿಂಗಳಲ್ಲಿ ನಮಗೆ ಹೆಚ್ಚು ವ್ಯಾಪಾರ’ ಎನ್ನುತ್ತಾರೆ ಇವರು. 
*
ಬೇರೆ ಧರ್ಮೀಯರಿಗೂ ಬುರ್ಖಾ
ಇಸ್ಲಾಂ ಧರ್ಮೇತರರು ಕೂಡ ನಮ್ಮ ಮಳಿಗೆಯಲ್ಲಿ ಬುರ್ಖಾ ಖರೀದಿಸುತ್ತಾರೆ. ನಗರದಿಂದ ಕೆಲಸದ ನಿಮಿತ್ತ ಸೌದಿಗೆ ಹೋಗುವ ಅನೇಕರು ಇಲ್ಲಿ ಬಂದು ಬುರ್ಖಾ ಖರೀದಿ ಮಾಡುತ್ತಾರೆ. ಸೌದಿಯ ವಿಮಾನನಿಲ್ದಾಣದಲ್ಲಿ ಬುರ್ಖಾ ಧರಿಸುವುದು ಕಡ್ಡಾಯವಾದ್ದರಿಂದ ಮುಸಲ್ಮಾನರಲ್ಲದ ಮಹಿಳೆಯರೂ  ಕೊಂಡುಕೊಳ್ಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT