ADVERTISEMENT

ಬಣ್ಣಗಳಲ್ಲಿ ಹಸಿರು ಐಸಿರಿ

ಚಂದ್ರಹಾಸ ಕೋಟೆಕಾರ್
Published 24 ಮೇ 2018, 19:30 IST
Last Updated 24 ಮೇ 2018, 19:30 IST
ವೈಜಯಂತಿ ಅವರ ಕಲಾಕೃತಿಗಳು
ವೈಜಯಂತಿ ಅವರ ಕಲಾಕೃತಿಗಳು   

ಹಸಿರ ಉಸಿರಲ್ಲಿ ಮೈ ತಳೆದು ನಿಂತಿರುವ ಮರಗಳು, ತಳಿರು ತೋರಣದಂತೆ ಶುಭ ಕೋರುವ ರೆಂಬೆ ಕೊಂಬೆಗಳ ಆ ಚೆಲುವು, ತೆಳ್ಳನೆ ಬಳುಕುವ ಗಿಡಗಳು ನಾಟ್ಯವಾಡಿದಂತೆ ನಳ ನಳಿಸುವ ವರ್ಣಮಯ ಸೊಬಗು ಹೊತ್ತ ಕಲಾಕೃತಿಗಳು ಕಲಾಸಕ್ತರ ಮನಸ್ಸಿಗೆ ಆಹ್ಲಾದಕರ ಭಾವ ನೀಡುತ್ತವೆ. ಇವು ಎಲ್ಲಿ ಎಂದು ಕೇಳುತ್ತೀರಾ?

ಬೆಂಗಳೂರಿನ ಕಲಾವಿದೆ ವೈಜಯಂತಿ ಬಿ.ದೇಸಾಯಿ ಅವರ ಕಲಾಕೃತಿಗಳ ಅದ್ಬುತವಾದ ಸೊಬಗು. ಜುಳು ಜುಳು ಹರಿಯುವ ನೀರಲ್ಲಿ ಮರಗಳ ಪ್ರತಿಬಿಂಬ, ಸರಳ ಬಣ್ಣಗಳಲ್ಲಿ ಸಹಜವಾಗಿ ಮೂಡಿ ಬಂದಿರುವ ಅವರ ಕಲಾಕೃತಿಗಳು ಜಲ ವರ್ಣ, ತೈಲ ವರ್ಣದಲ್ಲಿವೆ.

ಇಲ್ಲಿನ ಚಿತ್ರಗಳಲ್ಲಿನ ಹಸಿರು ಚಿತ್ತಾರದ ಚೆಲುವು ಕಣ್ಮನ ಸೆಳೆಯುತ್ತವೆ. ಸಮೂಹ ಕಲಾ ಚಿತ್ರಗಳಲ್ಲಿ ಗೋಚರವಾಗುವ ಚಿಲಿಪಿಲಿ ಗುಟ್ಟುವ ಪಕ್ಷಿಗಳ ವರ್ಣಮಯ ಕಲಾಕೃತಿಗಳು ಗಮನ ಸೆಳೆಯುತ್ತವೆ.

ADVERTISEMENT

ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ, ಇಂಡಿಯನ್‌ ರೋಲರ್‌, ಸ್ಥಳೀಯವಾಗಿ ಕಾಣ ಸಿಗುವ ಬೆಳ್ಳಕ್ಕಿಗಳು, ಮೈನಾ ಪಕ್ಷಿಗಳ ಚಿತ್ರಗಳ ಚೆಲುವು ನೈಜತೆಯ ಮೆರುಗು ನೀಡುತ್ತವೆ. ಕುಂಚದಲ್ಲಿ ಮೂಡಿರುವ ಪುಟ್ಟ ಪುಟ್ಟ ಪಕ್ಷಿಗಳ ಚಿತ್ರಣ ಕಲಾಸಕ್ತರ ಮನಗೆಲ್ಲುತ್ತವೆ. ಅಮೆರಿಕದ ಶೀತ ವಲಯಗಳಲ್ಲಿ ಕಾಣಿಸುವ ಬಣ್ಣಗಳಲ್ಲಿ ಮೇಳೈಸಿರುವ ಬಗೆ ಬಗೆಯ ಮರಗಳ ಹಸಿರು ಸಿರಿಯನ್ನು ಕುಂಚದಲ್ಲಿ ಸೆರೆ ಹಿಡಿದಿರುವ ಪರಿ ನೋಡುಗರ ಕಣ್ಣುಗಳಿಗೆ ನೈಜತೆಯ ಸ್ಪರ್ಶವನ್ನು ದಕ್ಕಿಸಿಕೊಡುತ್ತವೆ. ಜಲ ವರ್ಣ ಮತ್ತು ತೈಲ ವರ್ಣದ ಚಿತ್ರ ಛಾಯಾಚಿತ್ರಗಳಂತೆಯೇ ಕಾಣಿಸುವಷ್ಟು ನೈಜವಾಗಿವೆ.

ಬಾಲ್ಯದಲ್ಲಿಯೇ ಚಿತ್ರಕಲೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡ ವೈಜಯಂತಿ ಅವರ ಕಲಾಸಕ್ತಿ ದ್ರೋಣಾಚಾರ್ಯನಿಲ್ಲದೆ ವಿದ್ಯೆ ಕಲಿತ ಏಕಲವ್ಯನಂತಿಹುದು.

ಗುರುವಿಲ್ಲದೆ ಕಲೆಯನ್ನು ಮೈಗೂಡಿಸಿಕೊಂಡ ಅವರು ಅಲ್ಲಿ ಇಲ್ಲಿ ನೋಡಿ, ಓದಿ ತಿಳಿದು ಕಲೆಯ ಬಗೆಗೆ ಮನನ ಮಾಡಿ ಕಲೆಯ ಒಳ ಹೊರಗು ತಿಳಿದವರು.

ತೈಲ ವರ್ಣ, ಜಲ ವರ್ಣ, ಪೇಟಿಂಗ್ ಮಾಧ್ಯಮಗಳಲ್ಲಿ ಕಲಾಕೃತಿಗಳನ್ನು ರಚಿಸಿರುವ ವೈಜಯಂತಿ ‘ಲ್ಯಾಂಡ್ ಸ್ಕೇಪ್’ ಕಲಾ ಪ್ರಕಾರದಲ್ಲೂ ತೊಡಗಿಕೊಂಡು ಗೆದ್ದವರು.

ಚಿತ್ರ ಕಲಾ ಪರಿಷತ್‌ನಲ್ಲಿ ಈಚೆಗೆ ನಡೆದ ‘ಕಲರ್ಸ್‌ ಆಫ್‌ ಲೈಫ್‌’ ಸಮೂಹ ಕಲಾ ಪ್ರರ್ದಶನದಲ್ಲಿ ಇವರ ಹಲವಾರು ಕಲಾಕೃತಿಗಳು ಪ್ರರ್ದಶನಗೊಂಡಿವೆ.

ಮೆಟ್ರೊ ರಂಗೋಲಿ, ಮೈಸೂರು, ಧಾರಾವಾಡ, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

ತೈಲ ವರ್ಣದಲ್ಲಿ ಬಿಡಿಸಿದ ಇವರ ಹೆಚ್ಚಿನ ಕಲಾಕೃತಿಗಳಿಗೆ ಪ್ರಕೃತಿ, ಪರಿಸರಗಳೇ ಮುಖ್ಯ ವಿಷಯವಸ್ತುಗಳಾಗಿವೆ.

ಈಗಾಗಲೇ ವೈಜಯಂತಿ ಅವರು ಕಲಾಕೃತಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿವೆ. ಹಲವಾರು ಕಲಾಕೃತಿಗಳಿಗೆ ಪ್ರಶಸ್ತಿಗಳು ಕೂಡಾ ಅರಸಿ ಬಂದಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.