ADVERTISEMENT

ಬದುಕಿನ ದಿಕ್ಕು ಬದಲಿಸಿದ `ವಾಯ್ಸ'

ಸುರೇಖಾ ಹೆಗಡೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST
ವಾಯ್ಸ ಆಫ್ ಬೆಂಗಳೂರು ವಿಜೇತ ಸಂತೋಷ್ ವೆಂಕಿ
ವಾಯ್ಸ ಆಫ್ ಬೆಂಗಳೂರು ವಿಜೇತ ಸಂತೋಷ್ ವೆಂಕಿ   

ಇಳಿಬಿಟ್ಟ ಗುಂಗುರು ಕೂದಲು. ನಕ್ಕರೆ ಎದ್ದುಕಾಣುವ ಕೆನ್ನೆಯ ಗುಳಿ. ಕಣ್ಣಲ್ಲಿ ಮುಗ್ಧತೆ. ಹೆಚ್ಚಿನ ಪ್ರಶ್ನೆಗಳು ಬಂದರೆ ನಕ್ಕು ಮೌನಕ್ಕೆ ಜಾರುವ ಇವರನ್ನು ಯಾರು ಬೇಕಾದರೂ ಗುರುತಿಸಬಲ್ಲರು. ಅರೆ, ರಿಯಾಲಿಟಿ ಶೋಗಳಲ್ಲಿ ಹಾಡಲು ಬರುತ್ತಿದ್ದ ಸಂತೋಷ್ ಅಲ್ವಾ ಇವರು ಎನ್ನುವಷ್ಟು ಪರಿಚಿತರು.

ಸ್ಟಾರ್ ಸಿಂಗರ್ ಸ್ಪರ್ಧೆ ಪ್ರಾರಂಭವಾದಾಗ ದಿನಕ್ಕೊಂದು ಅವತಾರ, ವಿವಿಧ ಕೇಶವಿನ್ಯಾಸ ಮಾಡಿಕೊಂಡು ಬರುತ್ತಿದ್ದ ಇವರನ್ನು ನೋಡಿ `ಇವನೇನು ಹಾಡುತ್ತಾನೆ' ಎಂದು ಅಸಡ್ಡೆ ಮಾಡಿದವರೇ ಹೆಚ್ಚು. ಆದರೆ ವೇದಿಕೆ ಏರಿ ಕಣ್ಮುಚ್ಚಿ ಹಾಡೋಕೆ ಶುರುವಿಟ್ಟುಕೊಂಡಾಗ ಮಾತ್ರ `ದೇಖನೇ ಮೆ ತೊ ಬೂರಾ ಲಗತಾ ಹೈ ಅಚ್ಛೆ ಗಾತಾ ಹೈ ಯಾರ್' ಅಂತ ಸಂತೋಷಪಟ್ಟಿದ್ದರು.

ಅದೇ ಸಂತೋಷ್ ವಾಯ್ಸ ಆಫ್ ಬೆಂಗಳೂರು ಸೀಸನ್ 2ನಲ್ಲಿ ವಿಜೇತರಾಗಿ ಸಂಗೀತ ಸಂಯೋಜಕರ ಮನಗೆದ್ದರು. ಹಿಂದಿಯಲ್ಲಿ ಪ್ರಸಾರವಾಗುವ `ಸಾರೆಗಮಪ' ಕಾರ್ಯಕ್ರಮದಲ್ಲೂ ಶಹಬ್ಬಾಸ್‌ಗಿರಿ ಪಡೆದು ಟಾಪ್ 20ಯಲ್ಲಿ ಒಬ್ಬರಾಗಿದ್ದರು. ಅಮೆರಿಕದಲ್ಲಿ ನಡೆದ ಸಾಗರದಾಚೆ ಸಪ್ತಸ್ವರದಲ್ಲೂ ಭಲೇ ಎನಿಸಿಕೊಂಡವರು ಇವರು. ಚಾಮರಾಜಪೇಟೆಯವರಷ್ಟೇ ಏಕೆ ಬೆಂಗಳೂರಿಗರೆಲ್ಲಾ ಕನ್ನಡದ ಹುಡುಗ ಚೆನ್ನಾಗಿ ಹಾಡುತ್ತಾನೆ ಎಂದು ಹೇಳುವಷ್ಟು ಪ್ರತಿಭೆ ಮೆರೆದರು.

ಮೊದಲು ಟ್ರ್ಯಾಕ್ ಸಿಂಗರ್ ಆಗಿ ಕೆಲಸ ಮಾಡಿದ್ದ ಸಂತೋಷ್ ಇದೀಗ ಹಿನ್ನೆಲೆ ಗಾಯಕ. ಹರಿಕೃಷ್ಣ, ಗುರುಕಿರಣ್, ರಾಜೇಶ್ ರಾಮನಾಥ್, ವಿ.ಮನೋಹರ್, ಜೆಸ್ಸಿ ಗಿಫ್ಟ್ ಮುಂತಾದ ಸಂಗೀತ ದಿಗ್ಗಜರ ಸಂಯೋಜನೆಯ ಹಾಡುಗಳಿಗೆ ದನಿಯಾದವರು.

`ಇದುವರೆಗೆ ಸುಮಾರು 50-60 ಹಾಡುಗಳನ್ನು ಹಾಡಿದ್ದೇನೆ. ನಾನು ಹಾಡಿದ ಹಾಡನ್ನು ಜನರು ಮೆಚ್ಚಿದಾಗ ಎಲ್ಲಿಲ್ಲದ ಖುಷಿ ಆಗುತ್ತದೆ. ಪ್ರಕಾಶ್ ಸೊಂಟಕ್ಕಿ, ಬಿ.ವಿ.ರಾಧಾಕೃಷ್ಣ, ಕಾಶಿನಾಥ ಪತ್ತಾರ್ ಹಾಡು ಕಲಿಸಿದ ಗುರುಗಳು. ವಾಯ್ಸ ಆಫ್ ಬೆಂಗಳೂರು ರಿಯಾಲಿಟಿ ಶೋ ಗೆದ್ದಮೇಲೆ ನನ್ನ ಪ್ರತಿಭೆಯನ್ನು ಗುರುತಿಸುತ್ತಿದ್ದಾರೆ. ಮಲಯಾಳಂನ `ಕ್ರಿಸ್ಪಿ ಚಿಕನ್' ಹಾಗೂ ತೆಲಗು ಸಿನಿಮಾ `ಓ ಮಧುರಿಮವೆ' ಹಾಡಿಗೆ ದನಿಯಾಗುವ ಅವಕಾಶ ಸಿಕ್ಕಾಗ ತುಂಬಾ ಖುಷಿ ಆಯ್ತು. ಭಾಷಾ ಸಮಸ್ಯೆ ಸ್ವಲ್ಪ ಕಾಡಿದರೂ ಪ್ರೋತ್ಸಾಹ ಬಹುವಾಗಿ ಹಿಡಿಸಿತು' ಎನ್ನುತ್ತಾರೆ ಸಂತೋಷ್.

`ರಿಯಾಲಿಟಿ ಶೋಗಳಿಂದ ನಮ್ಮನ್ನು ಗುರುತಿಸುತ್ತಾರೆ ಅಷ್ಟೆ. ಆದರೆ ನಿಜವಾದ ಸವಾಲು ಪ್ರಾರಂಭವಾಗೋದು ನಂತರವೇ. ಪ್ರತಿ ಕ್ಷಣವೂ ಮುಖ್ಯ. ಸಿಕ್ಕ ಪುಟ್ಟ ಅವಕಾಶದಲ್ಲೂ ಸೈ ಎನಿಸಿಕೊಂಡರಷ್ಟೇ ಇಲ್ಲಿ ಬದುಕು. ಈಗ ಸಂಪೂರ್ಣವಾಗಿ ಸಂಗೀತಕ್ಕೆ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಆದರೆ ನನ್ನ ಬದುಕಿನ ಶೈಲಿ ಬದಲಾಗಿಲ್ಲ. ಎಲ್ಲರೂ ಆಸೆ ಪಡುವಂತೆ ರೆಹಮಾನ್ ಹಾಗೂ ರಾಜೇಶ್ ಸರ್ ಮುಂತಾದ ಶ್ರೇಷ್ಠ ಸಂಯೋಜಕರ ಹಾಡುಗಳನ್ನು ಹಾಡಬೇಕು ಎಂಬ ಕನಸಿದೆ' ಎಂದು ಮನಸಿನ ಮಾತು ತೆರೆದಿಟ್ಟರು ಸಂತೋಷ್.

`ಕಿರಾತಕ ಸಿನಿಮಾದ `ಡಮ್ಮಾ ಡಮ್ಮಾ', ಧನ್‌ಧನಾಧನ್ ಸಿನಿಮಾದ `ಕವನಗೀಚಿ ಹಾಡಲೇ', `ಮೈ ಹಾರ್ಟ್ ಈಸ್ ಬೀಟಿಂಗ್' ಹಾಡುಗಳು ಇವರನ್ನು ಗುರುತಿಸುವಂತೆ ಮಾಡಿವೆ.

ಬಿಗ್ ಮ್ಯೂಸಿಕ್ ಕನ್ನಡ ಅವಾರ್ಡ್ಸ್‌ನಲ್ಲಿ ಸಂತೋಷ್‌ಗೆ ಉದಯೋನ್ಮುಖ ಹಾಡುಗಾರ ಎಂಬ ಬಿರುದೂ ಸಿಕ್ಕಿದೆ. ಅವರು ಹಾಡಿರುವ 10ಕ್ಕೂ ಹೆಚ್ಚು ಸಿನಿಮಾಗಳು ತೆರೆಕಾಣುವ ತವಕದಲ್ಲಿವೆ. ಸಂಗೀತವನ್ನೂ ಪ್ರೀತಿಸುತ್ತೇನೆ. ಬದುಕೋಕೆ ಹಣ ಬೇಕು. ಅದು ಹಾಡಿನಿಂದ ಸಿಗುತ್ತದೆ ಎಂದು ನೇರವಾಗಿ ಮಾತಾಡುವ ಸಂತೋಷ್ ಅವರ ಸಂಗೀತ ಪಯಣಕ್ಕೆ ಆಲ್ ದಿ ಬೆಸ್ಟ್.

ನಿತ್ಯಾ ಮಾಮಿ
ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಾಸ್ತುಶಾಸ್ತ್ರ ವಿಭಾಗದಲ್ಲಿ ಓದುತ್ತಿರುವ ಕೇರಳದ ನಿತ್ಯಾ ಅವರದ್ದು ಮೃದುನುಡಿ. ಸಣ್ಣಗೆ ನಗುಸೂಸುವ ಇವರು ವಾಯ್ಸ ಆಫ್ ಬೆಂಗಳೂರು ಸ್ಪರ್ಧೆಯಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ್ದರು. ಭಾಷೆ ತಿಳಿಯದಿದ್ದರೂ ಶ್ರದ್ಧೆಯಿಂದ ಹಾಡುಗಳನ್ನು ಒಪ್ಪಿಸುತ್ತಿದ್ದ ನಿತ್ಯಾ ಮಾಮಿಗೆ ಕನ್ನಡದ `ಪರಾರಿ' ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದೆ.

`ನೀ ಎಂದರೂ ನಾನೇ'ಗೆ ದನಿಯಾಗಿರುವ ಅವರಿಗೆ ಕನ್ನಡದ `ನಗು ಎಂದಿದೆ' ಹಾಡು ಎಂದರೆ ಪಂಚಪ್ರಾಣವಂತೆ. `ಸೋನು ನಿಗಂ ಹಾಡುಗಳು ನನಗಿಷ್ಟ. ಅವರು ಹಾಡು ಕೇಳುತ್ತಿದ್ದಂತೆ ನನಗೂ ಕನ್ನಡದಲ್ಲಿ ಹಾಡುವ ಬಯಕೆ ಆಯಿತು. ರಿಯಾಲಿಟಿ ಶೋನಲ್ಲಿ ಸಿಕ್ಕಿದ ಪ್ರೋತ್ಸಾಹ, ಮಾರ್ಗದರ್ಶನ ಬದುಕಿನ ದಾರಿಗೆ ನೆರವಾಗುವ ಖುಷಿ ನನಗಿದೆ' ಎಂಬುದು ಅವರ ನುಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.