ADVERTISEMENT

ಬಯಲಲ್ಲಿ ವ್ಯಾಯಾಮ ಶಾಲೆ

ಸತೀಶ ಬೆಳ್ಳಕ್ಕಿ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST
ಬಯಲಲ್ಲಿ ವ್ಯಾಯಾಮ ಶಾಲೆ
ಬಯಲಲ್ಲಿ ವ್ಯಾಯಾಮ ಶಾಲೆ   

ನಗರದಲ್ಲಿ ಈಗಾಗಲೇ ಸಾಕಷ್ಟು ಜಿಮ್‌ಗಳಿವೆ. ಆದರೂ, ಉದ್ಯಾನ ನಗರಿಯಲ್ಲಿ ತಿಂಗಳಿಗೊಂದರಂತೆ ಸುಸಜ್ಜಿತ ಜಿಮ್‌ಗಳು ತಲೆ ಎತ್ತುತ್ತಲೇ ಇರುತ್ತವೆ. ಈಗ ನಗರಕ್ಕೆ ಮತ್ತೊಂದು ಜಿಮ್ ಸೇರ್ಪಡೆಗೊಂಡಿದೆ. ಆದರೆ ಈ ಜಿಮ್ ಎಲ್ಲ ಜಿಮ್‌ನಂತಲ್ಲ. ಇದು ಇತರೆ ಜಿಮ್‌ಗಳಿಗಿಂತ ಭಿನ್ನ. ಹೇಗೆ ಅಂತೀರಾ? ಇದು ನಾಲ್ಕು ಗೋಡೆಗಳ ಮಧ್ಯೆ ಇರುವ ಜಿಮ್ ಅಲ್ಲ. ಬದಲಾಗಿ ಔಟ್‌ಡೋರ್ ಜಿಮ್ (ಹೊರಾಂಗಣ ವ್ಯಾಯಾಮ ಶಾಲೆ). ಜತೆಗೆ ಇಲ್ಲಿ ಬಂದು ವ್ಯಾಯಾಮ ಮಾಡಿದರೆ ಹಣ ಕೊಡಬೇಕಿಲ್ಲ, ಸಂಪೂರ್ಣ ಉಚಿತ. ಇದೇ ಈ ಜಿಮ್‌ನ ವಿಶೇಷ. ಅಂದಹಾಗೆ, ಸದಾಶಿವನಗರದಲ್ಲಿರುವ `ಲೋ ಲೆವೆಲ್ ಪಾರ್ಕ್~ನಲ್ಲಿ ಈ ಜಿಮ್ ತಲೆ ಎತ್ತಿದೆ.

ಲೋ ಲೆವೆಲ್ ಪಾರ್ಕ್‌ನ ಒಳಾಂಗಣದಲ್ಲಿರುವ ಜಿಮ್ ನಗರದ ಪ್ರಪ್ರಥಮ ಔಟ್‌ಡೋರ್ ಜಿಮ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ದೊಡ್ಡ ವೃತ್ತಾಕಾರದಲ್ಲಿರುವ ಈ ಜಿಮ್‌ನಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಇರಿಸಲಾಗಿದೆ. ಸ್ಕೈ ವಾಕರ್, ಡ್ಯುಯೆಲ್ ವಾಕಿಂಗ್ ಸಾಧನ, ಸೊಂಟದ ವ್ಯಾಯಾಮ ಮಾಡುವ ಸಾಧನ, ಕಾಲು ಮತ್ತು ಭುಜಕ್ಕೆ ವ್ಯಾಯಾಮ ಒದಗಿಸುವ ಸಾಧನ, ತೋಳು ವಿಸ್ತರಣೆ ಹಾಗೂ ತಾಲೀಮು ನಡೆಸುವ ಸಾಧನ, ಕಾಲುಗಳ ಸ್ನಾಯುಗಳನ್ನು ಸಮರ್ಥಗೊಳಿಸುವ ಸಾಧನ... ಹೀಗೆ ಸದ್ಯಕ್ಕೆ ಹತ್ತು ಬಗೆಯ ವ್ಯಾಯಾಮ ಉಪಕರಣಗಳನ್ನು ಇಲ್ಲಿ ಇರಿಸಲಾಗಿದೆ. ವ್ಯಾಯಾಮ ಉಪಕರಣಗಳೆಲ್ಲವೂ ಇಸ್ತಾನ್‌ಬುಲ್ ಮತ್ತು ಟರ್ಕಿಯಿಂದ ತಂದಂಥವು. ದೇಶದ ಪ್ರಮುಖ ಕಾರ್ಪೊರೇಟ್ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆ ಆರ್‌ಎಂಝಡ್ ಕಾರ್ಪ್ ಈ ಉಪಕರಣಗಳನ್ನು ಅಳವಡಿಸಲು ನೆರವಾಗಿದೆ. ಜತೆಗೆ ಬಿಬಿಎಂಪಿ ಇದಕ್ಕೆ ಸಹಕಾರ ನೀಡಿದೆ. `ನಗರದಲ್ಲಿ ಮೊದಲ ಬಾರಿಗೆ ತೆರೆಯಲಾಗಿರುವ ಹೊರಾಂಗಣ ಜಿಮ್‌ನ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಮುಂದೆ ನಗರದ ಇನ್ನಿತರ ಉದ್ಯಾನದಲ್ಲೂ ಇದೇ ಮಾದರಿಯ ಉಚಿತ ಜಿಮ್‌ಗಳನ್ನು ತೆರೆಯುತ್ತೇವೆ~ ಎನ್ನುತ್ತಾರೆ ಆರ್‌ಎಂಝಡ್ ಕಾರ್ಪ್ ಸಂಸ್ಥಾಪಕ ಅರ್ಜುನ್ ಎಂ.ಮೆಂಡಾ.

`ಸ್ಯಾಂಕಿ ಕೆರೆ, ಅಲ್ಲಿನ ರಸ್ತೆಬದಿಗಳು, ಲೋ ಲೆವೆಲ್ ಪಾರ್ಕ್ ಇದುವರೆಗೂ ಕೇವಲ ವಾಕಿಂಗ್ ಹಾಗೂ ಜಾಗಿಂಗ್‌ಗೆ ಮಾತ್ರ ಸೀಮಿತವಾಗಿತ್ತು. ಹಾಗೆಯೇ ಮಕ್ಕಳು ಸಂಜೆ ವೇಳೆ ಇಲ್ಲಿಗೆ ಬಂದು ಆಟವಾಡಿಕೊಳ್ಳುತ್ತಿದ್ದರು. ವಯಸ್ಸಾದವರಿಗೆ, ಹರಟುವವರಿಗೆ, ಪ್ರೇಮಿಗಳಿಗೆ ಏಕಾಂತ ಒದಗಿಸುತ್ತಿದ್ದ ಲೋ ಲೆವಲ್ ಉದ್ಯಾನದಲ್ಲಿ ಹೊರಾಂಗಣ ಜಿಮ್ ಆರಂಭಗೊಂಡಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಆದರೆ ಇಲ್ಲಿರುವ ಅತ್ಯಾಧುನಿಕ ವ್ಯಾಯಾಮ ಉಪಕರಣಗಳು ಹಾಳಾಗದಂತೆ ನಿಗಾ ವಹಿಸುವತ್ತಲೂ ಸಂಬಂಧಪಟ್ಟವರು ಗಮನ ಹರಿಸಬೇಕು~ ಎನ್ನುತ್ತಾರೆ ಈ ಉದ್ಯಾನಕ್ಕೆ ನಿತ್ಯ ವಾಕಿಂಗ್‌ಗೆ ಬರುವ ಹಿರಿಯ ನಾಗರಿಕರೊಬ್ಬರು.

ADVERTISEMENT

`ಉದ್ಯಾನ ನಿರ್ವಹಣೆಗೆ ಸದಾಶಿವನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಹಾಗೂ ಬಿಬಿಎಂಪಿ ಒಟ್ಟಾಗಿ ಕೈಜೋಡಿಸಲಿದೆ. ಜತೆಗೆ ನಾಗರಿಕರು ಈ ಉದ್ಯಾನದ ಸಂರಕ್ಷಣೆಗೆ ಕೈ ಜೋಡಿಸಬೇಕು~ ಎಂಬುದು ಸದಾಶಿವನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ರಾಮ್‌ನಾಥ್ ಅವರ ಅಪೇಕ್ಷೆ.

ಲೋ ಲೆವೆಲ್ ಉದ್ಯಾನದಲ್ಲಿ ಹಸಿರು ನಳನಳಿಸುತ್ತಿದೆ. ಮೂಲ ಸೌಕರ್ಯಗಳು ತಕ್ಕಮಟ್ಟಿಗೆ ಚೆನ್ನಾಗಿಯೇ ಇದೆ. ಸುತ್ತಲೂ ಇರುವ ಹಸಿರು, ಬೀಸುವ ತಂಗಾಳಿ ಸೇವಿಸುತ್ತಾ ಪುರುಷರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸ್ವಾಭಾವಿಕವಾಗಿ ಇಲ್ಲಿ ಮೈ ಬೆವರಿಳಿಸಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು. ಅದೂ ಉಚಿತವಾಗಿ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.