ADVERTISEMENT

ಬಾಡಿಗೆಗೆ ಪಠ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 19:30 IST
Last Updated 14 ನವೆಂಬರ್ 2012, 19:30 IST

ಎಂಜಿನಿಯರಿಂಗ್  ವಿದ್ಯಾರ್ಥಿಗಳ ಪಠ್ಯಪುಸ್ತಕಗಳ ಬೆಲೆ ಕಡಿಮೆಯೇನಿಲ್ಲ. ಅದಕ್ಕೆ ಪರ್ಯಾಯ ಮಾರ್ಗವೆಂಬಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೊಂದುವಂಥ ಪಠ್ಯಗಳನ್ನು ವಿಶೇಷ್ ಜಯವಂತ್ ಆನ್‌ಲೈನ್ ಮೂಲಕ ಬಾಡಿಗೆಗೆ ಕೊಡುತ್ತಿದ್ದಾರೆ.

ಅಬ್ಬಾ ಓದುವಾಗ ಖರೀದಿಸಿದ್ದ ಪುಸ್ತಕಗಳೆಲ್ಲಾ ದೂಳು ಹಿಡಿದಿವೆ. ಹುಳುಗಳು ತಿಂದು ಹಾಕಿವೆ ಎಂದು ಗೊಣಗುತ್ತಾ ಬೆಂಕಿಗೆ ಹಾಕುತ್ತಿದ್ದರು ದಿನೇಶ್. ಎಂಜಿನಿಯರಿಂಗ್ ಓದುವಾಗ ಖರೀದಿಸಿದ್ದ ಇವುಗಳೆಲ್ಲಾ ಯಾರಿಗೂ ಉಪಯೋಗಕ್ಕೆ ಬರಲಿಲ್ಲ. `ಆ ಕಾಲಕ್ಕೇ ಅಪ್ಪನನ್ನು ಕಾಡಿಬೇಡಿ 12 ಸಾವಿರ ರೂ. ಬೆಲೆಯ ಪುಸ್ತಕ ಕೊಂಡಿದ್ದೆ. ಮಕ್ಕಳೂ ಎಂಜಿನಿಯರ್ ಆಗಲಿಲ್ಲ~ ಎನ್ನುತ್ತಾ ಕಣ್ಣೊರೆಸಿಕೊಂಡರು.

ಓದುವ ಮಕ್ಕಳು ಇರುವ ಹೆಚ್ಚಿನ ಮನೆಗಳಲ್ಲಿ ಈ ಗೋಳು ಖಚಿತವೆನ್ನಿ. ಇತ್ತೀಚೆಗಂತೂ ಜಾಗದ ಸಮಸ್ಯೆ ಬೇರೆ. ಅದೂ ಅಲ್ಲದೆ ಎಲ್ಲಾ ಪಠ್ಯ ಪುಸ್ತಕಗಳ ಬೆಲೆ ಹೆಚ್ಚಾಗಿರುವುದರಿಂದ ಪಾಲಕರ ಜೇಬಿಗೆ ಕತ್ತರಿ ಖಂಡಿತ.

ಈ ಸಮಸ್ಯೆಗೆ ಪರಿಹಾರ ಏನು ಎಂದು ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಹೊಸ ಕಲ್ಪನೆ ಮೂಡಿದ್ದು ವಿಶೇಷ್ ಜಯವಂತ್ ಅವರಿಗೆ. ಆನ್‌ಲೈನ್ ಗುರು ಎಜುಕೇಶನ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿಕೊಂಡಿರುವ 24 ವರ್ಷದ ಈ ಯುವಕನಿಗೆ ಹಣ ಪೋಲಾಗುತ್ತಿದೆ. ಪುಸ್ತಕಗಳು ದೂಳು ಹಿಡಿಯುತ್ತಿವೆ.

ಶಿಕ್ಷಣ ಅತ್ಯಂತ ದುಬಾರಿ ಆಗುತ್ತಿರುವುದರಿಂದ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎನಿಸಿದೆ. ಒಂದೂವರೆ ವರ್ಷ ಈ ಬಗ್ಗೆ ಸಂಶೋಧನೆ ಮಾಡಿ `ರೆಂಟ್ ಮೈ ಟೆಕ್ಸ್ಟ್~ ಎಂಬ ವಿನೂತನ ಆನ್‌ಲೈನ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ತಂದೆ ಜಯವಂತ್ ಹಾಗೂ ಅಣ್ಣ ಗೌತಮ್ ಗುಪ್ತಾ ಬೆಂಬಲ ಇವರಿಗಿದೆ.

ಕಾನೂನಾತ್ಮಕವಾಗಿಯೇ ವ್ಯವಹರಿಸಬೇಕು ಎಂಬ ಕಾಳಜಿಯಿಂದ ಆರಂಭಿಸಿರುವ ಈ ಯೋಜನೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಗತ್ಯವಾದ ಪುಸ್ತಕಗಳನ್ನು ನೀಡಲಾಗುತ್ತದೆ. ಇದೇ ವರ್ಷದ ಸೆ.1ರಂದು ಪ್ರಾರಂಭಿಸಲಾಗಿರುವ ‘www.rentmytext.in’ ಗೆ ಒಮ್ಮೆ ಭೇಟಿ ನೀಡಿದರೆ ಎಲ್ಲಾ ಮಾಹಿತಿಗಳು ಸ್ಪಷ್ಟವಾಗಿ ಸಿಗುತ್ತವೆ.

ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳು ಇವರಲ್ಲಿ ಲಭ್ಯ. ಈಗಾಗಲೇ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂಬುದು ಹೆಮ್ಮೆಯ ವಿಷಯ.
 
ವಿಶೇಷವೆಂದರೆ ಬೆಂಗಳೂರಿನಲ್ಲಷ್ಟೇ ಅಲ್ಲ, ಕರ್ನಾಟಕದ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿ ತನಗೆ ಬೇಕಾದ ಪ್ಯಾಕೇಜನ್ನು ಆನ್‌ಲೈನ್ ಮೂಲಕ ಆರಿಸಿಕೊಂಡು ವಿಳಾಸ ನೀಡಿದರೆ ಸಾಕು. ಕೆಲವೇ ದಿನಗಳಲ್ಲಿ ಪುಸ್ತಕ ನಿಮ್ಮ ಮನೆ ಮುಂದಿರುತ್ತದೆ. ಹಣ ಪಾವತಿಸಿ ಪುಸ್ತಕ ಸ್ವೀಕರಿಸಿದರಾಯಿತು.

ಸೆಮಿಸ್ಟರ್ ಪೂರ್ತಿ ಪುಸ್ತಕ ಬಳಸಿಕೊಳ್ಳಬಹುದು. ಪ್ಲಾಸ್ಟಿಕ್ ಹೊದಿಕೆ ಇರುವ ಪುಸ್ತಕದ ಮೇಲೆ ಪೆನ್ನಿನಿಂದ ಬರೆಯುವಂತಿಲ್ಲ. ಪೆನ್ಸಿಲ್ ಬಳಸಬಹುದಷ್ಟೆ. ಹಾಳೆ ಹರಿಯುವುದು ಮಡಚುವುದು ನಿಷಿದ್ಧ. ಬರೆದು ಕೊಳ್ಳುವುದಕ್ಕೆಂದೇ ಸ್ಲಿಪ್ ಇದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳು ಪುಸ್ತಕ ತೆರೆಯುತ್ತಿದ್ದಂತೆ ಎಡಗಡೆ ಕಾಣಿಸುತ್ತವೆ.
 
`ಈ ಬಗ್ಗೆ ನಾವು ತುಂಬಾ ಸ್ಟ್ರಿಕ್ಟ್ ಆಗಿದ್ದೇವೆ. ಯಾಕೆಂದರೆ ಮುಂದಿನ ಬಾರಿ ಇದೇ ಪುಸ್ತಕಗಳನ್ನು ಮತ್ತೆ ಬೇರೆಯವರಿಗೆ ನೀಡಬೇಕು. ಪುಸ್ತಕಗಳನ್ನು ಚೆಂದವಾಗಿ ಇಟ್ಟುಕೊಳ್ಳಬೇಕಾದದ್ದು ವಿದ್ಯಾರ್ಥಿಯ ಕರ್ತವ್ಯ~ ಎಂಬುದು ವಿಶೇಷ್ ಅವರ ಗಟ್ಟಿ ನಿಲುವು. ಎಂಜಿನಿಯರಿಂಗ್ ನಾಲ್ಕು ವರ್ಷ ಮುಗಿಸುವವರೆಗೆ ಪುಸ್ತಕಕ್ಕೆಂದೇ ಸುಮಾರು 20-25 ಸಾವಿರ ಖರ್ಚಾಗುತ್ತದೆ.

ಆದರೆ ನಮ್ಮ ಬಳಿ ಪಡೆದರೆ ಶೇ 60ರಷ್ಟು ಹಣ ಉಳಿತಾಯವಾಗುತ್ತದೆ ಎಂದು ವಿವರಿಸುತ್ತಾರೆ ಅವರು. ಪುಸ್ತಕದ ಬಗ್ಗೆ ಅತ್ಯಂತ ಕಾಳಜಿ ವಹಿಸಿರುವ ಇವರು ಉಚಿತವಾಗಿ ಪುಟ್ಟದೊಂದು `ಬುಕ್ ರ‌್ಯಾಕ್~ನ್ನೂ ನೀಡುತ್ತಾರೆ. ಒಂದು ವೇಳೆ ಪುಸ್ತಕದ ಹಾಳೆಗಳು ಹರಿದರೆ ಇಲ್ಲವೆ ಬೇರೆ ರೀತಿಯಲ್ಲಿ ಹಾನಿ ಮಾಡಿದರೆ ಹೊಸ ಪುಸ್ತಕವನ್ನು ಖರೀದಿಸಿ ಕೊಡಬೇಕು. ಇಲ್ಲವಾದರೆ ಮುಂದಿನ ಸೆಮಿಸ್ಟರ್‌ನಿಂದ ಪುಸ್ತಕಗಳು ನಿಮಗೆ ತಲುಪುವುದಿಲ್ಲ!

ಏನೀ ಪ್ಲಾನ್?
1) ಮೊದಲಿಗೆ 5000 ರೂ ಕಟ್ಟಬೇಕು. ನಂತರ ಪ್ರತೀ ಸೆಮಿಸ್ಟರ್‌ನಲ್ಲಿ ಪಡೆಯಲಾಗುವ ಪುಸ್ತಕಗಳ ಬೆಲೆಯ ಶೇ 20ರಷ್ಟು ಹಣವನ್ನು ಮಾತ್ರ ಪಾವತಿಸಿದರೆ ಆಯಿತು. ಕೊನೆಯಲ್ಲಿ ನಾಲ್ಕು ಸೆಮಿಸ್ಟರ್‌ನ ಹಣದ ಲೆಕ್ಕ ಹಾಕಿದರೆ 9 ಸಾವಿರ ಖರ್ಚಾಗಿರುತ್ತದೆ.
2) ಒಮ್ಮೆಲೇ 5000 ರೂ ಕಟ್ಟಲು ಸಾಧ್ಯವಾಗದವರಿಗಾಗಿ 2ನೇ ಯೋಜನೆಯನ್ನು ಮಾಡಲಾಗಿದೆ. ಮೊದಲಿಗೆ 4000 ರೂ ಕಟ್ಟಿ ನಂತರ ಪ್ರತೀ ಪುಸ್ತಕಕ್ಕೆ ಶೇ 30ರ ಬೆಲೆಯಲ್ಲಿ ಹಣ ಪಾವತಿಸಬೇಕು. ಅಲ್ಲಿಗೆ ನಾಲ್ಕು ವರ್ಷ ಮುಗಿಯುವುದರೊಳಗೆ ಸುಮಾರು 12-13 ಸಾವಿರ ರೂ ಖರ್ಚಾಗುತ್ತದೆ.

3) ಬಜೆಟ್ ಪ್ಲಾನ್‌ನಂತೆ 2500ರೂ ಹಣ ಪಾವತಿಸಿ ಶೇ 40ರ ದರದಲ್ಲಿ ಪುಸ್ತಕ ಕೊಳ್ಳಬಹುದು.

ಇವುಗಳನ್ನು ಬಿಟ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಟಿಯು/ ಅಟೊನಾಮಸ್ ಪ್ಯಾಕೇಜ್, ಪಾಪ್ಯುಲರ್ ಪ್ಯಾಕೇಜ್, ಪಿಕ್ ಅಂಡ್ ಚೂಸ್ ಎಂಬ ಅವಕಾಶಗಳೂ ಇವೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಆನ್‌ಲೈನ್‌ನಲ್ಲಿ ಲಭ್ಯ.
 
ಬೆಂಗಳೂರಿಗರಿಗೆ ಬೇಗ ಪುಸ್ತಕ ತಲುಪಿಸಲು ಸಾಧ್ಯ. ಆರ್ಡರ್ ಮಾಡಿ ಮಧ್ಯಾಹ್ನ 12 ಗಂಟೆಯೊಳಗೆ ಕರೆ ಮಾಡಿದರೆ ಒಂದೇ ದಿನದಲ್ಲಿ ಮನೆಗೆ ತಲುಪಿಸಲಾಗುತ್ತದೆ. ನಗರವನ್ನು ಹೊರತುಪಡಿಸಿ ರಾಜ್ಯದ ಬೇರೆ ಮೂಲೆಗಳಿಗಾದರೆ 5-6 ದಿನ ಬೇಕಾಗುತ್ತದಂತೆ.

ಲಾಭ?
 ಪುಸ್ತಕಕ್ಕಾಗಿ ಅಲೆಯುವ ತೊಂದರೆ ಇಲ್ಲ. ಒಂದೇ ಕ್ಲಿಕ್‌ಗೆ ಮನೆ ಮುಂದೆ ಪುಸ್ತಕ ಹಾಜರ್.

 ಕಡಿಮೆ ದರದಲ್ಲಿ ಪುಸ್ತಕ ಲಭ್ಯ.

 ಅವಶ್ಯಕವಾದ ಎಲ್ಲಾ ಮಾಹಿತಿಗಳನ್ನು ಸುಲಭವಾಗಿ ರೆಫರ್ ಮಾಡಬಹುದು.

 ಫೋಟೊ ಕಾಪಿ ಮಾಡುವುದಕ್ಕಿಂತಲೂ ಕಡಿಮೆ ಬೆಲೆ.

 ಒಂದೇ ಪುಸ್ತಕವನ್ನು ಸಾಕಷ್ಟು ಜನ ಬಳಸುವುದರಿಂದ ಮರುಮುದ್ರಣ ಮಾಡಬೇಕಾದ ಅವಶ್ಯಕತೆ ಇಲ್ಲ. ಹೀಗಾಗಿ ಮರಗಳನ್ನು ಉಳಿಸಿದಂತಾಗುತ್ತದೆ.

ಮುಂದಿನ ಯೋಜನೆ?

ಸದ್ಯಕ್ಕೆ ಮೊದಲ ಸೆಮಿಸ್ಟರ್‌ನವರೆಗೆ ಬೇಕಾಗುವ ಪುಸ್ತಕ ಲಭಿಸುವಂತೆ ಮಾಡಿದ್ದೇವೆ. ಜನವರಿ ಒಳಗೆ ನಾಲ್ಕೂ ವರ್ಷದ ಪುಸ್ತಕಗಳನ್ನು ಒದಗಿಸುವಂತೆ ಮಾಡುವ ಯೋಜನೆ ಇದೆ.

ತುಮಕೂರು, ಬಳ್ಳಾರಿ, ಹಾಸನ, ಬೆಳಗಾವಿ ಸೇರಿದಂತೆ ಕರ್ನಾಟಕದ ಎಲ್ಲಾ ಕಡೆ ಈ ಸೇವೆಯನ್ನು ಈಗಾಗಲೇ ಒದಗಿಸಲಾಗಿದ್ದು ಮುಂದಿನ ಜನವರಿ ಸಂದರ್ಭಕ್ಕೆ ಸಂಪೂರ್ಣ ದಕ್ಷಿಣ ಭಾರತದಲ್ಲೂ ಈ ಸೇವೆ ವಿಸ್ತರಿಸುವ ಆಶಯ ನಮ್ಮದು. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸೇವೆ ಪ್ರಾರಂಭಿಸಲಾಗಿದೆ. ಸದ್ಯದಲ್ಲೇ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೇವೆ ಒದಗಿಸುವುದು.

ಅಂದಹಾಗೆ, `ರೆಂಟ್ ಮೈ ಟೆಕ್ಸ್ಟ್~ಗೆ ಸಂಬಂಧಿಸಿದಂತೆ ಮಾಹಿತಿ ಬೇಕಾದಲ್ಲಿ 92437 86600 ಸಂಖ್ಯೆಗೆ ಬೆಳಿಗ್ಗೆ 9ರಿಂದ ಸಂಜೆ 10ರ ಒಳಗೆ ಕರೆ ಮಾಡಬಹುದು. ಇಲ್ಲವೆ  ಎಸ್‌ಎಂಎಸ್ ಕಳುಹಿಸಿದರೆ ಕಂಪೆನಿಯವರೇ ಕರೆ ಮಾಡಿ ಮಾಹಿತಿ ನೀಡುತ್ತಾರೆ.

ವೆಬ್‌ಸೈಟ್‌ನಲ್ಲಿ `ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್~ (ಎಫ್‌ಎಕ್ಯು) ವಿಭಾಗದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ಇಂಗ್ಲಿಷ್‌ನಲ್ಲಿ ಉತ್ತರಗಳಿದ್ದು 2-3 ವಾರಗಳಲ್ಲಿ ಕನ್ನಡದಲ್ಲೂ ಉತ್ತರ ಲಭ್ಯ.

ಭಾರತದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಯೋಜನೆ ರೂಪಿಸಿರುವ ವಿಶೇಷ್ ಬುಕ್ಸ್ ಜೊತೆ ಸೀಡಿಗಳಿದ್ದರೆ ಅದನ್ನೂ ಒದಗಿಸುತ್ತೇವೆ. ಸೆಮಿಸ್ಟರ್ ನಂತರ ಈ ಪುಸ್ತಕಗಳನ್ನು ನಮ್ಮ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿದರೆ ಸಾಕು. ವಿದ್ಯಾರ್ಥಿಗಳಿಗಾಗಿ ಎಲ್ಲ ಪ್ರಕ್ರಿಯೆಗಳನ್ನೂ ಸರಳಗೊಳಿಸಿದ್ದೇವೆ ಎಂದು ಮಾಹಿತಿ ನೀಡುತ್ತಾರೆ ವಿಶೇಷ್ ಜಯವಂತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.