ADVERTISEMENT

ಬಾ ಎಂದು ಕರೆಯುವ ಬಾಗಲಗುಂಟೆ ಜಾತ್ರೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST
ಬಾ ಎಂದು ಕರೆಯುವ ಬಾಗಲಗುಂಟೆ ಜಾತ್ರೆ
ಬಾ ಎಂದು ಕರೆಯುವ ಬಾಗಲಗುಂಟೆ ಜಾತ್ರೆ   

ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಬಾಗಲಕುಂಟೆಯಲ್ಲಿ ಪುರಾತನ ಕಾಲದಿಂದಲೂ ನೆಲೆಸಿರುವ ಮಾರಮ್ಮ ದೇವಿಯ ಜಾತ್ರೆ ಪ್ರತೀ ವರ್ಷವೂ ತಪ್ಪದೇ ಆಚರಿಸಲಾಗುತ್ತಿದೆ.

ಈ ವರ್ಷ ನ.4ರಂದು ಭಾನುವಾರದಿಂದ ಮಂಗಳವಾರದವರೆಗೆ (ನ.6) ಜಾತ್ರೆಯನ್ನು   ಆಚರಿಸಲು ಬಾಗಲಗುಂಟೆ ಮತ್ತು ಅಕ್ಕಪಕ್ಕದ 7 ಗ್ರಾಮಸ್ಥರು ತೀರ್ಮಾನಿಸಿರುತ್ತಾರೆ.


ಈ ಐತಿಹಾಸಿಕ ಜಾತ್ರೆಗೆ ಅಕ್ಟೋಬರ್ 10ರಂದು ಚಾಲನೆ ನೀಡಲಾಯಿತು. ಹದಿನೈದು ದಿನಗಳ ಕಾಲ ಗ್ರಾಮಸ್ಥರು ಮತ್ತು ಭಕ್ತಾದಿಗಳು ವಿಶೇಷ ವ್ರತ ಆಚರಿಸುತ್ತಾರೆ.

ಈ ಸಂದರ್ಭದಲ್ಲಿ ಹದಿನೈದು ದಿನಗಳ ಕಾಲ ಭಕ್ತಾದಿಗಳು ತಮ್ಮ ಮನೆಯಲ್ಲಿ ಸೇವಿಸುವ ಆಹಾರಕ್ಕೆ ಒಗ್ಗರಣೆ ಹಾಕುವುದಿಲ್ಲ, ಸಸ್ಯಾಹಾರಿ ಆಹಾರ ಕ್ರಮವನ್ನು ಎಲ್ಲರೂ ಶ್ರದ್ಧಾ-ಭಕ್ತಿಯಿಂದ ಕಡ್ಡಾಯವಾಗಿ ಪಾಲಿಸುವ ಹರಕೆ ಹೊತ್ತು ಶಕ್ತಿ ಸ್ವರೂಪಳಾದ ಮಾರಮ್ಮನಿಂದ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ.

 ಭಾನುವಾರ ಮಧ್ಯಾಹ್ನ 2 ಗಂಟೆಗೆ ಮಾರಮ್ಮ ತಾಯಿಯ ಪುಣ್ಯಾಃದೊಂದಿಗೆ ಮೂರು ದಿನಗಳ ವೈಭವದ ಜಾತ್ರೆ ಆರಂಭವಾಗುತ್ತದೆ. ಅದೇ ದಿನ ಸಾಯಂಕಾಲ 7.30ಕ್ಕೆ ಸಾಲಂಕೃತ ಹೂವಿನಿಂದ ಅಲಂಕೃತಗೊಂಡ 50 ಅಡಿ ಎತ್ತರದ ಜೋಡಿ ಅಡಿಕೆ ಮರಗಳನ್ನು ದೇವರ ಮುಂದೆ ನಿಲ್ಲಿಸುತ್ತಾರೆ. ನಂತರ ನಡೆಯುವ ಸಿಡಿಮದ್ದಿನ ಕಾರ್ಯಕ್ರಮ ನೋಡಲು ಎರಡು ಕಣ್ಣು ಸಾಲದು.

ಇದಾದ ನಂತರ ಬಣ್ಣ ಬಣ್ಣದ ಹೂವಿನಿಂದ ಅಲಂಕೃತಗೊಂಡ ಜಗನ್ಮಾತೆ ಮಾರಮ್ಮ ತಾಯಿಯ ಮೆರವಣಿಗೆಯ ದೃಶ್ಯವನ್ನು ಕಣ್ಣುತುಂಬಿಕೊಳ್ಳಲು ಲಕ್ಷಾಂತರ ಭಕ್ತಾದಿಗಳು, ಸಾಲಂಕೃತ ದೀಪಗಳಿಂದ ಅಲಂಕೃತಗೊಂಡ ಬಾಗಲಗುಂಟೆಯ ಪ್ರಮುಖ ಬೀದಿಗಳಲ್ಲಿ ಸಾಲುಗಟ್ಟಿ ನಿಂತಿರುತ್ತಾರೆ. ಮಂಗಳವಾದ್ಯ, ತಮಟೆ ವಾದ್ಯ ಮತ್ತು ಜಾನಪದ ಡೋಲು ಕುಣಿತದೊಂದಿಗೆ ಅಮ್ಮನವರ ಮೆರವಣಿಗೆ ಸಾಗುತ್ತದೆ.

ನಮ್ಮ ಪ್ರಾಚೀನ ಶ್ರೀಮಂತ ಮೈಸೂರು ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಮಾರಮ್ಮನ ಮೆರವಣಿಗೆಯ ನಂತರ ರಾತ್ರಿ 11 ಗಂಟೆಗೆ ಮಾರಮ್ಮ ತಾಯಿಯ ದೇವಸ್ಥಾನದ ಮುಂದೆ ಅಗ್ನಿಕೊಂಡವನ್ನು ಸಿದ್ಧ ಪಡಿಸಲಾಗುತ್ತದೆ. ಸೋಮವಾರ ಮಧ್ಯಾಹ್ನದವರೆಗೆ ಸತತವಾಗಿ ಸುಮಾರು 20 ಗಂಟೆಗಳ ಕಾಲ ಸುಮಾರು 50 ಟನ್ ಸೌದೆಗಳನ್ನು ಬಳಸಿ ಅಗ್ನಿಕೊಂಡವನ್ನು ಭಕ್ತಾದಿಗಳು ಉರಿಸುತ್ತಾರೆ.
 

ಸೋಮವಾರ ನ.5ರಂದು ಬೆಳಿಗ್ಗೆ 9 ಗಂಟೆಗೆ ನವಗ್ರಹಗಳಿಗೆ ಬೆಲ್ಲದ ಆರತಿ, 10 ಗಂಟೆಗೆ ವೇಣುಗೋಪಾಲ ಸ್ವಾಮಿಗೆ ಬೆಲ್ಲದ ಆರತಿ ಮತ್ತು 11 ಗಂಟೆಗೆ ಆಂಜನೇಯಸ್ವಾಮಿಗೆ ಬೆಲ್ಲದ ಆರತಿ ಅರ್ಪಿಸಲಾಗುತ್ತದೆ.

ADVERTISEMENT

ಇದಕ್ಕಾಗಿ ಬಾಗಲಗುಂಟೆಯ ಪ್ರತಿಯೊಂದು ಮನೆ-ಮನೆಯ ಹೆಣ್ಣುಮಕ್ಕಳು ಹೊಸಬಟ್ಟೆ ಧರಿಸಿ ವಿಶೇಷವಾಗಿ ಹೂಗಳಿಂದ ಕಲಾತ್ಮಕವಾಗಿ ಶೃಂಗರಿಸಿದ ಆರತಿಗಳನ್ನು ಭಯ-ಭಕ್ತಿಯಿಂದ ತಲೆಯಮೇಲೆ ಹೊತ್ತು ಸಾಗುತ್ತಾರೆ.

ಬಾಗಲಗುಂಟೆಯ ಮತ್ತು ಸುತ್ತಮುತ್ತ 7 ಗ್ರಾಮಗಳಿಂದ ಹರಕೆ ಹೊತ್ತ ಭಕ್ತಾದಿಗಳು ಬಾಯಿಬೀಗ ಸೇವೆಯವರು ಮತ್ತು ಬಣ್ಣ ಬಣ್ಣದ ಹೂಗಳಿಂದ ಅಲಂಕೃತಗೊಂಡ ಗ್ರಾಮದೇವತೆ ಮಾರಮ್ಮನ ಆರತಿಗಳು ಮಧ್ಯಾಹ್ನ 1 ಗಂಟೆಗೆ ಎಲ್ಲಾ ಮನೆಯಿಂದ ಹೊರಟು 3 ಗಂಟೆಯ ಹೊತ್ತಿಗೆ ಮಾರಮ್ಮ ತಾಯಿಯ ದೇವಸ್ಥಾನದ ಮುಂದೆ ಒಟ್ಟುಗೂಡುವುದರೊಂದಿಗೆ ಜಾತ್ರೆಯು ಪ್ರಮುಖ ಘಟ್ಟಕ್ಕೆ ತಲುಪುತ್ತದೆ.

ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕೊಂಡಕ್ಕೆ ಹರಳು-ತುಪ್ಪವನ್ನು ಸಮರ್ಪಿಸಿ ಶ್ರೀ ಮಾರಮ್ಮನಿಂದ ತಮ್ಮ ಇಷ್ಠಾರ್ಥಗಳನ್ನು ಸಿದ್ದಿಸಿಕೊಳ್ಳುತ್ತಾರೆ. ನಂತರ 3 ಗಂಟೆಗೆ ಬಾಯಿಗೆ ಬೀಗ ಹಾಕಿಸಿಕೊಂಡವರು, ಆರತಿ ಹೊತ್ತವರು ಅತೀವ ಶ್ರದ್ಧಾ-ಭಕ್ತಿಯಿಂದ ಅಗ್ನಿಕೊಂಡದ ಮೇಲೆ ನಡೆದು ಪಾಪ ಮುಕ್ತರಾಗಿ ಪುನೀತರಾಗುತ್ತಾರೆ.

ಮಂಗಳವಾರ ನ.6ರಂದು ಬೆಳಗ್ಗೆ 9 ಗಂಟೆಗೆ ಬಾಗಲಗುಂಟೆಯ ಎಲ್ಲಾ ದೇವರುಗಳಿಗೆ ಮಹಾಮಂಗಳಾರತಿ ಅರ್ಪಿಸಲಾಗುತ್ತದೆ. ಇದರೊಂದಿಗೆ ಈ ಜಾತ್ರೆಯು ಅಂತಿಮ ಹಂತಕ್ಕೆ ತಲುಪಿದಂತಾಗುತ್ತದೆ. 

ನ. 5ರಂದು ಸೋಮವಾರ ರಾತ್ರಿ 9 ಗಂಟೆಗೆ ಬೆಂಗಳೂರಿನ ಮಹಿಳಾ ಕಲಾವಿದರಿಂದ `ಶ್ರೀ ಕೃಷ್ಣ ಸಂಧಾನ~ ಎಂಬ ಪೌರಾಣಿಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಮತ್ತು ಮಂಗಳವಾರ (ನ.6) ಸಂಜೆ 6 ಗಂಟೆಗೆ `ಚಾಮರಾಜ್ ಡ್ಯಾನ್ಸ್ ಗ್ರೂಪ್~ ನೃತ್ಯ ಪ್ರದರ್ಶಿಸಲಿದೆ.


ಸ್ಥಳೀಯ ಶಾಸಕ ಎಸ್. ಮುನಿರಾಜು ಮತ್ತು ಸ್ಥಳೀಯ ಬಿಬಿಎಂಪಿ ಸದಸ್ಯರು, ಬಾಗಲಗುಂಟೆ ಮತ್ತು ಅಕ್ಕ-ಪಕ್ಕ ಗ್ರಾಮದ ಮುಖಂಡರು ಬಿಬಿಎಂಪಿ ಅಧಿಕಾರಿಗಳು, ಬೆಸ್ಕಾಂನ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಯಾವುದೇ ತೊಂದರೆಗಳಾಗದಂತೆ ಈಬಾರಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಾಗಲಗುಂಟೆ ಮಾರಮ್ಮ ಜಾತ್ರೆ ಉಸ್ತುವಾರಿ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.  
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.