ADVERTISEMENT

ಬಿಗ್ ಎಫ್‌ಎಂನಲ್ಲಿ ಪುಟಾಣಿ ಜೋಡಿ

ರೋಹಿಣಿ ಮುಂಡಾಜೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST
ಸ್ಕಂದ
ಸ್ಕಂದ   

ಕೆಲದಿನಗಳ ಹಿಂದೆ 92.7 ಬಿಗ್ ಎಫ್‌ಎಂನಲ್ಲಿ ಬೆಳಿಗ್ಗೆ 8ರಿಂದ 11ರವರೆಗೆ `ಬಿಗ್ ಕಾಫಿ' ಕಾರ್ಯಕ್ರಮಕ್ಕೆ ಕಿವಿಯಾನಿಸೋಣ ಎಂದುಕೊಂಡಿದ್ದ ಶ್ರೋತೃಗಳಿಗೆ ಪುಟಾಣಿಯೊಬ್ಬ ಚಟ್‌ಪಟ್ ಅಂತ ಮಾತನಾಡಿ ಅಚ್ಚರಿ ಮೂಡಿಸಿದ್ದ. ಅವನ ಮಾತು, ಲಯ, ವೇಗ ಥೇಟ್ ವೃತ್ತಿಪರ ಆರ್‌ಜೆಯಂತಿತ್ತು.

`ಹಲೋ ಬೆಂಗಳೂರು ನಾನು ನಿಮ್ಮ ಕನ್ನಡದ ಕಂದ- ಸ್ಕಂದ' ಎಂದು ಒಂದೇ ಉಸಿರಿನಲ್ಲಿ ನೂರು ಪದಗಳನ್ನು ಉಸುರುತ್ತಿದ್ದರೆ ಪಕ್ಕದ ಮೈಕ್ ಮುಂದೆ ಕುಳಿತಿದ್ದ ಆರ್‌ಜೆ `ಪಟ್‌ಪಟ್ ಪಟಾಕಿ' ಶ್ರುತಿ ಮಾತು ಮರೆತು ಕುಳಿತಿದ್ದರಂತೆ. ಹಾಗೆ ಚಮಕ್ ಚಮಕ್ ಅಂತ ಮಾತನಾಡಿದ ಬಾಲಕ, ಕತ್ರಿಗುಪ್ಪೆಯ 11ರ ಹರೆಯದ ಸ್ಕಂದ ಎಂ. ಪ್ರಸಾದ್.

ಎಫ್‌ಎಂ ಸ್ಟೇಷನ್‌ಗೆ ಬಂದ ಯಾರೋ ಪುಟಾಣಿಗಳು ಮಾತನಾಡಿರಬೇಕು ಎಂದುಕೊಂಡು ಸುಮ್ಮನಾದ ಶ್ರೋತೃಗಳು ಅದೇ ದಿನ ಸಂಜೆ 5ಕ್ಕೆ ರೋಹಿತ್ ಮಾತಿಗೆ ಕಿವಿಯಾಗೋಣ ಎಂದು ಟ್ಯೂನ್ ಮಾಡಿದರೆ ಪುಟ್ಟ ಹುಡುಗಿಯ ಧ್ವನಿ!`ಹಲೋ ಬೆಂಗಳೂರು...' ಎಂದು ನಿರ್ಭಯವಾಗಿ ಮಾತನಾಡಲು ಶುರು ಮಾಡಿದ ಆ ಬಾಲಕಿ ಒಂಬತ್ತರ ಹರೆಯದ ಸೃಜನಾ.
ಉದುರಿದ ಆರು ಹಾಲು ಹಲ್ಲುಗಳ ಪೈಕಿ ಮೂರು ಮಾತ್ರ ಮೂಡಿದ್ದರೆ, ಒಂದೊಂದರ ಮಧ್ಯೆಯೂ ತಲಾ ಒಂದೊಂದು ಇನ್ನಷ್ಟೇ ಬರಬೇಕಾಗಿದೆ. ಆದರೆ ಮಾತಿನ ಓಘಕ್ಕೆ ಅಡೆತಡೆಯಿಲ್ಲ.

ಜೂನಿಯರ್ ಆರ್‌ಜೆಗಳಾಗಿ...
ಬೆಂಗಳೂರಿನ ಎಫ್‌ಎಂ ಇತಿಹಾಸದಲ್ಲೇ ಮೊದಲ ಬಾರಿಗೆ ಕಿರಿಯ ರೇಡಿಯೊ ಜಾಕಿಗಳಿಗೆ ವೇದಿಕೆ ಒದಗಿಸುತ್ತಿರುವ 92.7 ಬಿಗ್ ಎಫ್‌ಎಂ ವಾಹಿನಿಯಲ್ಲಿ ಪ್ರಾಯೋಗಿಕ ಶೋ ನೀಡಿದ ಈ ಇಬ್ಬರು ಚಿಣ್ಣರು `ಮೆಟ್ರೊ'ದೊಂದಿಗೆ ಮಾತ್ರ ನಾಚುತ್ತಲೇ ಮಾತು ಪೋಣಿಸಿದರು.

`ಶಾಲೆ, ಬಿಟ್ಟರೆ ಆಟ ಅನ್ನೋ ವಯಸ್ಸು ನಿಮ್ಮದು. ಆರ್‌ಜೆ ಆಗೋದು ಬೇಕಿತ್ತಾ?' ಅಂತ ಕೇಳಿದ್ರೆ, `ಮಾತನಾಡೋದು ಅಂದ್ರೆ ನನಗೆ ಇಷ್ಟ. ನನ್ನಲ್ಲೊಂದು ಪ್ರತಿಭೆ ಇದೆ. ಅದನ್ನು ಎಫ್‌ಎಂ ಮೂಲಕ ಎಲ್ಲರಿಗೂ ತೋರಿಸ್ಬೇಕು ಅಂತ ಆಸೆ' ಅಂತ ಇಬ್ಬರೂ ಏಕಭಾವದಿಂದ ಹೇಳುತ್ತಾರೆ.

ಕಾಕತಾಳೀಯವೆಂಬಂತೆ ಇಬ್ಬರಿಗೂ ಈ ಅವಕಾಶ ಸಿಕ್ಕಿದ ರೀತಿಯೂ ಒಂದೇ ಮಾದರಿಯಲ್ಲಿ. ಒಂದು ಕಡೆ ಸ್ಕಂದ ತನ್ನ ತಂದೆ ಮಂಜು ಪ್ರಸಾದ್ ಮತ್ತು ತಾಯಿ ಸರಸ್ವತಿ ಅವರೊಂದಿಗೆ ಕಾರಲ್ಲಿ ಎಲ್ಲೋ ಹೋಗುತ್ತಿದ್ದಾಗ 92.7 ಬಿಗ್ ಎಫ್‌ಎಂ ನಲ್ಲಿ ಪ್ರಸಾರವಾದ ಪ್ರಕಟಣೆ ಕಿವಿಮೇಲೆ ಬಿತ್ತು. ಸೃಜನಾಳ ಎಫ್‌ಎಂ ಪಯಣ ಶುರುವಾದದ್ದೂ ಹೀಗೆಯೇ.

`ನಾವೆಲ್ಲೋ ಮದುವೆಗೆ ಹೋಗ್ತಿದ್ವಿ. ಕಾರಲ್ಲಿ ಬಿಗ್‌ಎಂ ಚಾಲೂ ಇತ್ತು. ಜೂನಿಯರ್ ಆರ್‌ಜೆ ಹಂಟ್ ನಡೆಸ್ತಿದ್ದೀವಿ. ಆಸಕ್ತ ತಂದೆ ತಾಯಿಗಳು ತಮ್ಮ ಮಕ್ಕಳ ವಿವರವನ್ನು ಕಳುಹಿಸಿಕೊಡಬಹುದು ಅಂತ ಪ್ರಕಟಣೆ ಕೊಡ್ತಿದ್ರು. ತಕ್ಷಣ ಪಪ್ಪ ಮತ್ತು ಅಮ್ಮ ನನ್ನ ಹೆಸರು ಕಳಿಸಿದ್ರು. ಆಮೇಲೆ ಎಲ್ಲಾ ಸುತ್ತಿನಲ್ಲೂ ಉತ್ತಮ ಪ್ರದರ್ಶನ ತೋರಿ ಆಯ್ಕೆಯಾದೆ' ಎಂದು ವಿವರಿಸುತ್ತಾಳೆ ಸೃಜನಾ.

ಮಾತಿನ ಪ್ರತಿಭೆ
ಓದಿನಲ್ಲಿ ನಿರಾಸಕ್ತಿ ವಹಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ನಿರ್ವಹಣೆ ತೋರುವ ಮಕ್ಕಳಲ್ಲ ಇವರು. ಇಬ್ಬರೂ ತರಗತಿಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡು ಬರುತ್ತಿರುವುದು ಗಮನಾರ್ಹ. ಸೃಜನಾ, ರೇಸ್‌ಕೋರ್ಸ್ ರಸ್ತೆಯ ಬಳಿಯಲ್ಲಿರುವ ಸೋಫಿಯ ಹೈಸ್ಕೂಲ್‌ನಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿ. ಸ್ಕಂದ ಎಂ. ಪ್ರಸಾದ್ ಓದುತ್ತಿರುವುದು ಜಯನಗರದ ಸುದರ್ಶನ ವಿದ್ಯಾಮಂದಿರದಲ್ಲಿ.

ಸೃಜನಾಳಿಗೆ ಯಾವುದೇ ಸಾಂಸ್ಕೃತಿಕ ಹಿನ್ನೆಲೆಯಿಲ್ಲ. ಆದರೆ `ನಾಲಿಗೆಯಲ್ಲಿ ಮಾತು ಹೊರಳಿದಾಗಿನಿಂದಲೂ ಅವಳು ಸಿಡಿಸಿದ್ದು ಪಟಾಕಿಯೇ. ಇವತ್ತಿಗೂ ರಾತ್ರಿ ಮಲಗುವಾಗ ಎಷ್ಟೇ ಹೊತ್ತು ಆಗಿದ್ದರೂ ಅವಳು ಅರ್ಧ ಗಂಟೆ ಮಾತಾಡಿ, ನಗಿಸಿಯೇ ನಿದ್ದೆ ಮಾಡೋದು' ಅಂತ ನಗುತ್ತಾರೆ ಅವಳ ಅಪ್ಪ ನವೀನ್ ಮತ್ತು ಅಮ್ಮ ಹೇಮಾ.

ಸ್ಕಂದನ ನಟನಾ ಯಾನ
ಸ್ಕಂದನಿಗೆ ಅಭಿನಯದ ಹಿನ್ನೆಲೆಯಿರುವುದು ಅವನ ಪ್ರತಿಭೆ ಸುಲಭವಾಗಿ ಅಭಿವ್ಯಕ್ತಿಗೊಳ್ಳಲು ನೆರವಾಗಿದೆ. ಸಣ್ಣ ವಯಸ್ಸಿನಲ್ಲೇ ಅವನು `ಹನುಮಂತನಗರ ಬಿಂಬ'ದಲ್ಲಿ ಅಭಿನಯ ತರಬೇತಿಗೆ ಸೇರಿಕೊಂಡಿದ್ದ' ಎನ್ನುತ್ತಾರೆ ಅವನ ತಾಯಿ ಸರಸ್ವತಿ. 

`ಚಿತ್ರನಟ ಶ್ರೀನಗರ ಕಿಟ್ಟಿ ನನ್ನ ಚಿಕ್ಕಪ್ಪ. `ಬಿಂಬ'ದಲ್ಲಿ ಮಕ್ಕಳ ಶಿಬಿರದಲ್ಲಿಯೂ ಪಾಲ್ಗೊಂಡಿದ್ದೇನೆ. ಹೀಗಾಗಿ ನನಗೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗಲೂ ಭಯ ಆಗಲಿಲ್ಲ. ಹಾಗೆ ನೋಡಿದ್ರೆ ನನಗೆ ಸಣ್ಣ ವಯಸ್ಸಿನಿಂದಲೂ ಎಕ್ಸ್‌ಪೋಸ್ ಸಿಕ್ಕಿತು.  ಬಿಲ್‌ಗೇಟ್ಸ್ ಪ್ರತಿಷ್ಠಾನದವರು ಸಾಮಾಜಿಕ ಕಳಕಳಿಯ ಉದ್ದೇಶದಿಂದ ತಯಾರಿಸಿದ್ದ ಸಾಕ್ಷ್ಯಚಿತ್ರವೊಂದರಲ್ಲಿ ಅಭಿನಯಿಸಿದ್ದೆ. ಬಿ ಸುರೇಶ್ ಅವರ ಕೆಲವು ಚಲನಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ವೊಡಾಫೋನ್‌ನ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದೇನೆ. ಆದರೆ ಈ ಯಾವುದೇ ಚಟುವಟಿಕೆಗಳಿಂದ ಓದಿಗೆ ತೊಂದರೆಯಾಗದಂತೆ ಯೋಜಿಸಿಕೊಳುತ್ತಿದ್ದೆ' ಎಂದು ಹೇಳುತ್ತಾನೆ ಸ್ಕಂದ.

ಅದೆಲ್ಲ ಸರಿ, ದೊಡ್ಡವರಾದ ಮೇಲೆ ಏನಾಗುತ್ತೀರಾ ಎಂದು ಕೇಳಿದ್ರೆ ಇಬ್ಬರೂ `ಡಾಕ್ಟರ್' ಅಂತಾರೆ. ಆದರೆ ಇಬ್ಬರಿಗೂ ಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಸಿದೆ. `ವೃತ್ತಿಯ ಜತೆಗೇ ಆರ್‌ಜೆಗಳಾಗಿ ಮುಂದುವರಿಯುತ್ತೇವೆ' ಎಂದು ಹೇಳಲು ಮರೆಯುವುದಿಲ್ಲ ಈ ಕಿರಿಯ ಆರ್‌ಜೆಗಳು. ಹೀಗೆ, ವಿಭಿನ್ನ ಪ್ರತಿಭೆಗಳನ್ನು ಒಡಮೂಡಿಸಿಕೊಂಡ ಈ ಮಕ್ಕಳು ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದೊತ್ತಿ ಆಯ್ಕೆಯಾಗಿದ್ದಾರೆ.

ಶ್ಲೋಕದೊಂದಿಗೆ ಸ್ಕಂದ ಮೊದಲ ಕಾರ್ಯಕ್ರಮವನ್ನು ಶುರು ಮಾಡಿದರೆ ಸೃಜನಾ ತೋಚಿದಂತೆ ರಸವತ್ತಾಗಿ ಮಾತನಾಡಿ `ಲೈಫ್ ಸೂಪರ್ ಗುರೂ' ಅನ್ನುವ ಹೊತ್ತಿಗೆ ಶ್ರೋತೃಗಳು ತಲೆದೂಗುವಂತೆ ಮಾಡಿದ್ದರು. ಇನ್ನು ಮುಂದೆ, 92.7 ಬಿಗ್ ಎಫ್‌ಎಂ ನಿಯೋಜಿಸಿದಂತೆ ಪ್ರತಿ ಭಾನುವಾರ ಇವರು ಪಟಾಕಿ ಸಿಡಿಸುವುದನ್ನು ಕಿವಿತುಂಬಿಕೊಳ್ಳಬಹುದು.

ಒಟ್ಟಿನಲ್ಲಿ, ಎಫ್‌ಎಂ ಲೋಕದಲ್ಲಿ ಇಬ್ಬರು ಪುಟಾಣಿ ಹೆಜ್ಜೆಗಳನ್ನಿಟ್ಟು ಆ ಕ್ಷೇತ್ರದಲ್ಲೂ ಕಿರಿಯರ ಪ್ರವೇಶಕ್ಕೆ ನಾಂದಿ ಹಾಡಿದ್ದಾರೆ. ಶುಭಮಸ್ತು ಅನ್ನೋಣವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.