ADVERTISEMENT

ಬೆನ್ನುನೋವಿಗೆ ಉಪಚಾರ

ಗೋಪಾಲಕೃಷ್ಣ ದೇಲಂಪಾಡಿ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST
ಬೆನ್ನುನೋವಿಗೆ ಉಪಚಾರ
ಬೆನ್ನುನೋವಿಗೆ ಉಪಚಾರ   

ನೆಲದ ಮೇಲೆ ನಿಂತುಕೊಂಡು ಎರಡೂ ಕೈಗಳನ್ನು ಮೇಲೆ ಮಾಡಿ ಪಾರ್ಶ್ವಕ್ಕೆ ಬಾಗುವ ಭಂಗಿಯೇ ಪಾರ್ಶ್ವ ತಾಡಾಸನ. ಈ ಆಸನ ತೂಗಾಡುವ ಚಲನೆಯ ರೀತಿಯಲ್ಲಿರುತ್ತದೆ.

ಯೋಗ ಸಾಧನೆಯ ಮೂರನೇ ಮೆಟ್ಟಿಲು ಆಸನ. ಸ್ಥಿರಂ, ಸುಖಂ, ಆಸನಂ ಅಂದರೆ ಸ್ಥಿರವಾದ, ಸುಖಕರವಾದ, ಶರೀರದ ವಿವಿಧ ಭಂಗಿಗಳು ಅಥವಾ ಸ್ಥಿತಿಗಳು ಯೋಗಾಸನಗಳೆನಿಸಿವೆ.

ಇಲ್ಲಿ ದೇಹವನ್ನು ಶಿಸ್ತುಬದ್ಧವಾಗಿ, ಕ್ರಮವತ್ತಾಗಿ, ನಿಧಾನವಾಗಿ, ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು, ತಿರುಗಿಸುವುದು, ಚಲಿಸುವಿಕೆ ಇತ್ಯಾದಿ ಮಾಡುವುದರಿಂದ ದೇಹದ ಒಳಗಿನ ಅಂಗಗಳಿಗೂ, ಮಾಂಸಖಂಡಗಳಿಗೂ ನರಮಂಡಲಕ್ಕೂ ಪ್ರಚೋದನೆ ಮತ್ತು ವಿಶ್ರಾಂತಿ ದೊರಕಿ ರಕ್ತ ಪರಿಚಲನೆ, ಪಚನಕ್ರಿಯೆ ಇತ್ಯಾದಿ ಸಮರ್ಪಕವಾಗಿ ನಡೆಯುವುದಲ್ಲದೆ ನರಮಂಡಲವೂ ಮಾಂಸಖಂಡಗಳೂ ಪೆಡಸಾಗಿರದೆ ಶಕ್ತಿಯುತವಾಗುವುವು ಮತ್ತು ಚೈತನ್ಯಭರಿತವಾಗುವುವು.

ADVERTISEMENT

ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಪ್ರಥಮವಾಗಿ ತಾಡಾಸನ ಭಂಗಿಗೆ ಬರಬೇಕು. ಆನಂತರ ಕಾಲುಗಳಲ್ಲಿ ಎರಡು ಅಡಿಗಳಷ್ಟು ಅಂತರ ಇರಿಸಬೇಕು. ಆಮೇಲೆ ಎರಡು ಕೈಗಳ ಬೆರಳುಗಳನ್ನು ಹೆಣೆದುಕೊಂಡು ತಲೆಯ ಮೇಲಕ್ಕೆ ತರಬೇಕು. ಉಸಿರನ್ನು ಒಳಕ್ಕೆ ತೆಗೆದುಕೊಂಡು ಆಮೇಲೆ ಉಸಿರನ್ನು ಬಿಡುತ್ತಾ ಸೊಂಟದ ಮೇಲ್ಭಾಗದಿಂದ ಬಲಕ್ಕೆ ಭಾಗಿಸಬೇಕು ಈ ಸ್ಥಿತಿಯಲ್ಲಿ ಇಪ್ಪತ್ತು ಸೆಕೆಂಡ್‌ ಸಮ ಉಸಿರಾಟದಲ್ಲಿ ನೆಲೆಸಬೇಕು. ಆಮೇಲೆ ಉಸಿರನ್ನು ತೆಗೆದುಕೊಳ್ಳತ್ತಾ ಮೊದಲಿನ ಸ್ಥಿತಿಗೆ ಬರಬೇಕು.

ಅದೇರೀತಿ ಈ ಆಸನವನ್ನು ಇನ್ನೊಂದು ಬದಿಯಲ್ಲಿಯೂ ಅಭ್ಯಾಸ ಮಾಡಬೇಕು. ಇದನ್ನು ಸುಮಾರು ಮೂರರಿಂದ ನಾಲ್ಕು ಬಾರಿ ಅಭ್ಯಾಸ ಮಾಡಬಹುದು. ಈ ಆಸನ ಮಾಡುವಾಗ ದೇಹವನ್ನು ಬಿಗಿಗೊಳಿಸದೆ ಹಾಯಾಗಿ ಅಭ್ಯಾಸ ಮಾಡಬೇಕು. ಆರಂಭದಲ್ಲಿ ಕಲಿಯುವಾಗ ಸಾಧ್ಯವಾಗುವಷ್ಟೇ ಬಾಗಬೇಕು.

ಪ್ರಯೋಜನಗಳು: ತುಂಬಾ ಹೊತ್ತು ಕುಳಿತುಕೊಂಡು ಕೆಲಸ ನಿರ್ವಹಿಸುವರಿಗೆ ಸಹಜವಾಗಿ ಕಾಡುವ ಬೆನ್ನು ನೋವು, ಸೊಂಟ ನೋವು ಹಾಗೂ ಬಿಗಿತ ಇರುವರಿಗೆ ಈ ಆಸನ ಉಪಯುಕ್ತವಾಗಿದೆ. ಈ ಆಸನದಲ್ಲಿ ಬೆನ್ನು, ಭುಜ ಹಾಗೂ ಕಾಲಿನ ಮಾಂಸ ಖಂಡಗಳು ಬಲಗೊಳ್ಳುತ್ತವೆ.

ಸೊಂಟ, ಬೆನ್ನು ಹಾಗೂ ತೊಡೆಗಳು ಹದಗೊಳ್ಳುತ್ತವೆ. ಈ ರೀತಿ ತೂಗಾಡುವ ಚಲನೆಯಿಂದ ಒಂದು ರೀತಿ ಹಗುರವಾದ ಭಾವನೆ ಮೂಡುತ್ತದೆ. ಸಾಮಾನ್ಯ ದಿನದ ಯಾವುದೇ ಹೊತ್ತಿನಲ್ಲಿ ಈ ಆಸನವನ್ನು ಅಭ್ಯಾಸ ಮಾಡಬಹುದು. ದೈಹಿಕ, ಮಾನಸಿಕ ಬಿಗುವಿನಿಂದ ಬಿಡುಗಡೆ ಹೊಂದಲು ಈ ಆಸನ ಸಹಕಾರಿ. ಮೂಲಧಾರ ಮತ್ತು ಮಣಿಪುರ ಸುಸ್ಥಿತಿಗೆ ಇದು ಸಹಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.