ADVERTISEMENT

ಬೌ ಬೌ... ಹುಷಾರ್...

ಸಂತೋಷ ಜಿಗಳಿಕೊಪ್ಪ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ಬೌ ಬೌ... ಹುಷಾರ್...
ಬೌ ಬೌ... ಹುಷಾರ್...   

ಈಚೆಗೆ ನಾಯಿದಾಳಿಯಿಂದ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದು ಸುದ್ದಿಯಾಗಿದೆ. ಬೀದಿನಾಯಿಗಳದ್ದಾದರೆ ಬಿಬಿಎಂಪಿಯವರನ್ನು ದೂರಬಹುದಿತ್ತು. ಆದರೆ ಒಬ್ಬ ಮಹಿಳೆಯು ತನ್ನ ಭರ್ತಿ ಒಂದು ಡಜನ್‌ ನಾಯಿಗಳೊಂದಿಗೆ ವಾಯುವಿಹಾರಕ್ಕೆ ಬಂದದ್ದೂ ಅಲ್ಲದೆ, ಎಚ್ಚರಿಕೆ ನೀಡಿದವರ ಮೇಲೆಯೇ ಹರಿಬಿಟ್ಟಿದ್ದಾಳೆ.

ನಾಯಿಗಳನ್ನು ಸಾಕುವುದು ಅವರ ವೃತ್ತಿಯಿರಬಹುದು, ಇಲ್ಲವೇ ಷೋಕಿ ಇರಬಹುದು. ಆದರೆ ನಾಯಿಗಳನ್ನು ಇನ್ನೊಬ್ಬರ ಮೇಲೆ ಛೂ ಬಿಟ್ಟು, ಅವು ದಾಳಿ ಮಾಡುವುದನ್ನು ನೋಡುತ್ತ ನಿಲ್ಲುವವರದ್ದು ಎಂಥ ಮನಃಸ್ಥಿತಿ?

ನಾಯಿಗಳೇನೋ ಮಾಲೀಕರ ಸೂಚನೆಯಂತೆ ಇನ್ನೊಬ್ಬರ ಮೇಲೆರಗಬಹುದು. ಆದರೆ ಮತ್ತೊಬ್ಬರು ಈ ದಾಳಿಯಿಂದ ಒದ್ದಾಡುವಾಗ ನಿಂತು ನೋಡುವ ಪಾಶವೀ ಮನೋಸ್ಥಿತಿಯ ಮಾಲೀಕರು ಇರುತ್ತಾರೆಯೇ?

ADVERTISEMENT

ಯಲಹಂಕದ ರಾಯನ್ ಇಂಟರ್‌ನ್ಯಾಷನಲ್ ಶಾಲೆ ಎದುರಿನ ಮೈದಾನದಲ್ಲಿ ಜೂನ್ 1ರಂದು ವಾಯುವಿಹಾರಕ್ಕೆ ಹೋಗಿದ್ದ ಕೈಗಾರಿಕಾ ಭದ್ರತಾ ಪಡೆಯ ಸಬ್‌ ಇನ್‌ಸ್ಪೆಕ್ಟರ್‌ (ಎಸ್‌ಐ) ಎಸ್. ರಾಘವೇಂದ್ರ ಮೇಲೆಯೇ ಮಹಿಳೆಯೊಬ್ಬರು, ತಮ್ಮ 12 ನಾಯಿಗಳನ್ನು ಛೂ ಬಿಟ್ಟಿದ್ದರು. ಏಕಕಾಲದಲ್ಲಿ ನಾಯಿಗಳು ದಾಳಿ ಮಾಡಿದ್ದರಿಂದ ರಾಘವೇಂದ್ರ ಅವರ ದೇಹದ ಮೇಲೆ 13 ಕಡೆ ಕಚ್ಚಿದ ಗಾಯಗಳಾಗಿವೆ. ಈ ಬಗ್ಗೆ ಯಲಹಂಕ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಮಹಿಳೆಗಾಗಿ ಹುಡುಕಾಟ ನಡೆದಿದೆ.

ಆ ಮಹಿಳೆ, ಮನೆಯಲ್ಲೇ 12 ಶ್ವಾನಗಳನ್ನು ಸಾಕಿದ್ದಾರೆ. ಅಕ್ಕ–ಪಕ್ಕದ ಮನೆಯವರಿಗೂ ಕಿರಿಕಿರಿ ಕೊಡುತ್ತಿದ್ದಾರೆ. ಎಲ್ಲೇ ಹೋದರೂ ನಾಯಿಗಳ ಸಮೇತವೇ ಮಹಿಳೆ ಹೋಗುತ್ತಾರೆ. ಯಾರಾದರೂ ಏನಾದರೂ ಹೇಳಿದರೆ, ನಾಯಿಗಳನ್ನು ಛೂ ಬಿಡುವುದನ್ನೇ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಎಷ್ಟು ನಾಯಿ ಸಾಕಬಹುದು?: ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಮನೆಗೊಂದು ನಾಯಿ ಹಾಗೂ ಸ್ವತಂತ್ರ ಮನೆಗಳಿದ್ದರೆ ಮೂರು ನಾಯಿಗಳನ್ನು ಸಾಕಲು ಅವಕಾಶವಿದೆ. ಈ ನಿಯಮ ಉಲ್ಲಂಘಿಸಿದರೆ, ₹1,000 ದಂಡ ತೆರಬೇಕಾಗುತ್ತದೆ.

2018ರ ಫೆಬ್ರುವರಿಯಲ್ಲೇ ಬಿಬಿಎಂಪಿ ಹೊಸ ನಿಯಮ ರೂಪಿಸಿದೆ. ಆ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಆನಂದ್, ‘ನಾಯಿ ಸಾಕುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವುಗಳಿಂದ ಹಲವೆಡೆ ಮನುಷ್ಯರ ಪ್ರಾಣಕ್ಕೂ ಕುತ್ತು ಬರುತ್ತಿದೆ. ನಾಯಿಗಳ ದಾಳಿಯಿಂದ ಗಾಯಗೊಂಡಿರುವ ಕೆಲ ಮಕ್ಕಳು ಹಾಗೂ ವೃದ್ಧರು ಇಂದಿಗೂ ಚೇತರಿಸಿಕೊಂಡಿಲ್ಲ. ಹೀಗಾಗಿ,  ನಾಯಿ ಸಾಕುವ ಬಗ್ಗೆ ನಿಯಮ ರೂಪಿಸಲಾಗಿದೆ’ ಎಂದರು.

‘ನಾಯಿ ತಳಿಗಳನ್ನು ಎರಡು ಪ್ರಕಾರದಲ್ಲಿ ವಿಂಗಡಿಸಿ, ಅವುಗಳ ಸಾಕುವ ಬಗೆಯನ್ನು ವಿವರಿಸಿದ್ದೇವೆ. ಒಂದು ಪ್ರಕಾರದಲ್ಲಿ 8 ತಳಿಗಳಿದ್ದು, ಅವುಗಳಿಗೆ ಮಾಸ್ಕ್‌ ಹಾಗೂ ಮೈಕ್ರೋ ಚಿಪ್‌ ಅಳವಡಿಸುವುದು ಕಡ್ಡಾಯ. ಇನ್ನೊಂದು ಪ್ರಕಾರದಲ್ಲಿ 64 ತಳಿಗಳಿವೆ. ಈ ನಾಯಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಲ–ಮೂತ್ರ ವಿಸರ್ಜನೆ ಮಾಡಿದರೆ ಮಾಲೀಕರೇ ಸ್ವಚ್ಛಗೊಳಿಸಬೇಕು’ ಎಂದು ಆನಂದ್‌ ಹೇಳಿದರು.

‘ನಾಯಿಗೆ ಪರವಾನಗಿ ಪಡೆಯುವುದು ಕಡ್ಡಾಯ. ವರ್ಷಕ್ಕೊಮ್ಮೆ ನವೀಕರಣವನ್ನೂ ಮಾಡಿಸಬೇಕು. ನಿಗದಿಗಿಂತ ಹೆಚ್ಚು ನಾಯಿಗಳು ಇದ್ದರೆ, ದಂಡ ವಿಧಿಸುತ್ತೇವೆ. ಹೆಚ್ಚುವರಿ ನಾಯಿಯನ್ನು ಬೇರೆಡೆ ಕಳುಹಿಸಲು ಕಾಲಾವಕಾಶ ಕೊಡುತ್ತೇವೆ. ಅದನ್ನೂ ಪಾಲಿಸದಿದ್ದರೆ, ಕಠಿಣ ಕ್ರಮ ಜರುಗಿಸುತ್ತೇವೆ. 

ಯಾರಿಗಾದರೂ ಕಚ್ಚಿದರೆ, ಅವರು ಪೊಲೀಸರಿಗೆ ದೂರು ನೀಡಬಹುದು’ ಎಂದರು.

ಯಲಹಂಕ ಉಪವಿಭಾಗದ ಎಸಿಪಿ ಪ್ರಭಾಕರ್ ಬಾರ್ಕಿ, ‘ಮನುಷ್ಯನ ಪ್ರಾಣಕ್ಕೆ ಅಪಾಯ ಉಂಟು ಮಾಡುವುದು ಅಪರಾಧ. ಯಲಹಂಕ ಪ್ರಕರಣದಲ್ಲಿ, ಮಹಿಳೆಯು ನಾಯಿಗಳನ್ನು ಕರೆತಂದಾಗ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಅವರ ನಿರ್ಲಕ್ಷ್ಯದಿಂದಲೇ ನಾಯಿಗಳು ಎಸ್‌ಐ ಮೇಲೆ ದಾಳಿ ಮಾಡಿದ್ದವು. ನಿರ್ಲಕ್ಷ್ಯ ಆರೋಪದಡಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದರು.

**

‘ಬಿಬಿಎಂಪಿಯದ್ದು ಸಂವಿಧಾನ ವಿರೋಧಿ ನಿಯಮ’

‘ನಾಯಿ ಸಾಕುವ ಸಂಬಂಧ ಬಿಬಿಎಂಪಿ ಜಾರಿಗೆ ತಂದಿರುವ ನಿಯಮ ಸಂವಿಧಾನ ವಿರೋಧಿ ಆಗಿದೆ. ಅಂಥ ನಿಯಮ ರೂಪಿಸುವ ಅಧಿಕಾರ ಯಾವುದೇ ಸ್ಥಳೀಯ ಸಂಸ್ಥೆಗಿಲ್ಲ’ ಎಂದು ಪೀಪಲ್‌ ಫಾರ್‌ ಕ್ಯಾಟಲ್‌ ಇನ್‌ ಇಂಡಿಯಾ ಕರ್ನಾಟಕ ಘಟಕದ ನಿರ್ದೇಶಕಿ ರಿತಿಕಾ ಗೋಯೆಲ್‌ ದೂರುತ್ತಿದ್ದಾರೆ.

‘ನಾಯಿಯು ಕುಟುಂಬದ ಸದಸ್ಯನಂತೆ. ಅದನ್ನು ನಾವೆಲ್ಲರೂ ಜತೆಗಿಟ್ಟುಕೊಳ್ಳಬಹುದು. ಪ್ರಾಣಿಗಳನ್ನು ಸಾಕುವುದು ನಮ್ಮ ಮೂಲಭೂತ ಹಕ್ಕು
ಹೌದು. ಅಂಥ ಹಕ್ಕನ್ನು ಬಿಬಿಎಂಪಿ ಕಸಿದು ಕೊಳ್ಳುತ್ತಿದೆ. ಇದರ ವಿರುದ್ಧ ಹಲವು ಸರ್ಕಾರೇತರ ಸಂಘಟನೆಗಳು (ಎನ್‌ಜಿಒ) ನ್ಯಾಯಾಲಯದ ಮೊರೆ ಹೋಗಲು ತಯಾರಿ ನಡೆಸಿವೆ. ಸದ್ಯದಲ್ಲೇ ರಿಟ್‌ ಸಹ ದಾಖಲು ಮಾಡಲಿವೆ’ ಎಂದಿದ್ದಾರೆ.

‘ಈಗಾಗಲೇ ಸಿಂಗಪುರದಲ್ಲಿ ಇರುವ ನಿಯಮವನ್ನೇ ಯಥಾಪ್ರಕಾರ ಬೆಂಗಳೂರಿನಲ್ಲಿ ಜಾರಿಗೊಳಿಸಲಾಗಿದೆ. ಆದರೆ, ಅಲ್ಲಿ ನಾಯಿಗಳಿಗೆ ನೀಡಿರುವ ಸೌಲಭ್ಯವನ್ನು ಇಲ್ಲಿ ಕೊಟ್ಟಿಲ್ಲ. ಹಣ ಗಳಿಸುವ ಉದ್ದೇಶದಿಂದ ಈ ನಿಯಮ ರೂಪಿಸಲಾಗಿದೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ’ ಎಂದು ರಿತಿಕಾ ದೂರುತ್ತಿದ್ದಾರೆ.

‘ನಿಯಮದಲ್ಲಿ ಸೂಚಿಸಿದ 64 ತಳಿಗಳಲ್ಲಿ ಬಹುಪಾಲು ತಳಿಗಳು ಭಾರತದಲ್ಲಿ ಇಲ್ಲ. ಇಲ್ಲಿರುವ ತಳಿಗಳನ್ನು ಅವರು ಗಣನೆಗೆ ತೆಗೆದು ಕೊಂಡಿಲ್ಲ. ಅಧ್ಯಯನ ನಡೆಸದೆ ಈ ನಿಯಮ ರೂಪಿಸಲಾಗಿದೆ’ ಎಂದು ಹೇಳುತ್ತಾರೆ.

(ರಿತಿಕಾ ಗೋಯೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.