ADVERTISEMENT

ಭಕ್ತಿರಸದ ಸಂಗೀತ ಸಿಂಚನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ಳೆ ಮುಗಿಲು ಕಪ್ಪುಗಟ್ಟಿತ್ತು. ಇನ್ನೇನು ಸಂಗೀತ ಕಛೇರಿ ಆರಂಭವಾಗಬೇಕು ಎನ್ನುವಷ್ಟರಲ್ಲಿ ಸಂಗೀತಕ್ಕೆ ಸಾಥ್ ನೀಡಲೋ ಎಂಬಂತೆ ಮಳೆರಾಯನೂ ರಾಗ ಆರಂಭಿಸಿದ. ಮುಸ್ಸಂಜೆಯ ಸುಮಧುರ ಭಕ್ತಿ ಪ್ರಧಾನ ‘ಯಮನ್’ ರಾಗವನ್ನು ಆಲಾಪ ಮಾಡುತ್ತಿದ್ದಂತೆ ಮಳೆಹನಿಗಳ ಶಬ್ದವೂ ತಾರಕಕ್ಕೇರಿತ್ತು. ಹೊರಗೆ ಮಳೆರಾಯನ ಆರ್ಭಟ ಜಾಸ್ತಿಯಾಗುತ್ತಿದ್ದಂತೆ ಸಂಗೀತವೂ ಅತಿ ತಾರಕಕ್ಕೇರಿ ಒಂದು ರೀತಿಯ ಸಂಗೀತ- ಮಳೆ ಜುಗಲ್‌ಬಂದಿಯಂತಾಗಿತ್ತು ಆ ಸಂಗೀತ ಕಛೇರಿ.

ಬನ್ನೇರುಘಟ್ಟ ರಸ್ತೆ ಅರಕೆರೆಯಲ್ಲಿರುವ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಈಚೆಗೆ ಗಣೇಶೋತ್ಸವ ಪ್ರಯುಕ್ತ ಹಿಂದೂಸ್ತಾನಿ ಗಾಯಕ ಅನಂತ ಹೆಗಡೆ ಅವರ ಭಕ್ತಿ ಸಂಗೀತ ಕಛೇರಿ ನಡೆಯಿತು. ಕಛೇರಿಯ ಆರಂಭದಲ್ಲಿ ಯಮನ್ ರಾಗದಲ್ಲಿ ವಿಘ್ನವಿನಾಯಕ ಗಣೇಶನನ್ನು ಕುರಿತ ‘ವಂದಿಪೆ ನಿನಗೆ ಗಣನಾಥ’ವನ್ನು ಹಿತಮಿತವಾದ ಸ್ವರಗಳನ್ನು ಸೇರಿಸಿ ಹಾಡಿದರು.

ಮುಂದಿನ ರಾಗ ಬ್ರಹ್ಮಾನಂದ ದಾಸರ ‘ಜೈ ಗಣಪತಿ ಗಣವದನ ವಿನಾಯಕ..’ ಇದು ಭೂಪಾಲಿ ರಾಗದಲ್ಲಿತ್ತು. ಔಡವ ಸ್ವರ ಸಮೂಹವುಳ್ಳ ಸುಮಧುರ ರಾಗ ಭೂಪಾಲಿ ಸುಪ್ರಸಿದ್ಧ ರಾಗ. ಈ ರಚನೆಯನ್ನು ರಸವತ್ತಾಗಿ ಹಾಡಿದರು. ಇದರೊಂದಿಗೆ ಮೂಡಿಬಂದ ಸ್ವರ ತಾನ್, ಆಕಾರ್ ತಾನ್‌ಗಳು ಕೇಳುಗರನ್ನು ಮೋಡಿ ಮಾಡಿದವು.

ನಂತರದ ಆಯ್ಕೆ ಮಾಲ್‌ಕೌಂಸ್ ರಾಗದ ‘ಶರಣು ಸಿದ್ಧಿವಿನಾಯಕ’. ಗಣೇಶನ ಮೇಲೆಯೇ ಇರುವ ಈ ಎಲ್ಲ ರಚನೆಗಳು ಸಾಂದರ್ಭಿಕವಾಗಿದ್ದವು, ಕಛೇರಿಯ ಏಕತಾನತೆ ಮರೆಸಲು ಅನಂತ ಹೆಗಡೆ ನಂತರ ಹಾಡಿದ್ದು ಅಪರೂಪವೆನಿಸುವ ಪಟ್‌ದೀಪ್ ರಾಗದ ವಚನ. ಎಲ್ಲ ವರ್ಗದ ಕೇಳುಗರಿಗೂ ಇಷ್ಟವಾಗುವ ಈ ವಚನ ಅರ್ಥಪೂರ್ಣ ಸಾಹಿತ್ಯ ಹೊಂದಿದ್ದು, ಉತ್ತಮ ಆಯ್ಕೆ ಎನಿಸಿತು.

ಹಾಡಿನಲ್ಲಿ ಮತ್ತೆ ಗಣೇಶನೇ ಬಂದ. ಶುದ್ಧಸಾರಂಗ ರಾಗದಲ್ಲಿ ‘ಗಜವದನ ಬೇಡುವೆ ಗೌರೀ ತನಯ’ ಹಾಡಿದರು. ಇದನ್ನೂ ಅನುಭವಿಸಿ ಹಾಡಿದಾಗ ಗಾಯಕರ ಅತಿ ತಾರಕ ಸ್ಥಾಯಿ ಕೇಳಿ ಕೇಳುಗರು ಇನ್ನಷ್ಟು ಕೇಳುವ ಉಮೇದು ತೋರಿಸಿದರು. ಹೀಗಾಗಿ ನಂತರ ಸುಪ್ರಸಿದ್ಧ ಮೀರಾ ಭಜನ್ ‘ಪಾಯೋಜಿ ಮೈನೆ ರಾಮ ರತನ್’ ಅನ್ನು ಕಮಾಚ್ ರಾಗದಲ್ಲಿ ಪ್ರಸ್ತುತಪಡಿಸಿದರು. ಕೊನೆಯಲ್ಲಿ ಹಾಡಿದ ಭೈರವಿ ರಾಗದ ‘ಮತ್‌ಜಾ ಜೋಗಿ’ ಕೂಡ ಅದ್ಭುತವಾಗಿ ಮೂಡಿಬಂತು.

ಹಾರ್ಮೋನಿಯಂನಲ್ಲಿ ಪಂ. ಹೆಗ್ಗಾರ ರಾಜಾರಾಮ ಹೆಗಡೆ, ತಬಲಾದಲ್ಲಿ ನಾಗರಾಜ ಹೆಗಡೆ, ತಾಳದಲ್ಲಿ ಶ್ರೇಯಸ್ ಮತ್ತು ತಂಬೂರದಲ್ಲಿ ಅಕ್ಷಿತ್ ಕುಮಾರ್ ಸಮರ್ಥವಾದ ಸಾಥ್ ನೀಡಿ ಸಂಗೀತ ಕಛೇರಿಯನ್ನು ಕಳೆಕಟ್ಟಿಸಿದರು. ಮಳೆ ಬಂದಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಕೇಳುಗರು ಗಾಯಕರಿಗೆ ಸ್ಫೂರ್ತಿ ತುಂಬಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.