ADVERTISEMENT

ಭರವಸೆಯ ಕೊರಳು

ಪ್ರೊ.ಮೈ.ವಿ.ಸು
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ರಾಜಧಾನಿಯಲ್ಲಿ ಈಗ ಸುಗಮ ಸಂಗೀತ ಕಲಿಸುವ ಅನೇಕ ಶಾಲೆಗಳಿವೆ. ಅವು ಸಂಗೀತದ ಕ್ರಮಬದ್ಧವಾದ ಶಿಕ್ಷಣ ನೀಡುತ್ತಿವೆ. ಅಲ್ಲದೆ, ಕಿರಿಯ ಕಲಾವಿದರಿಗೆ ವೇದಿಕೆ ನಿರ್ಮಿಸಿ, ನಾದ ಸಸಿಗಳು ಚಿಗುರಲು ನೆರವಾಗುತ್ತಿವೆ.

ಅಂಥ ಸಂಸ್ಥೆಗಳಲ್ಲಿ ಒಂದಾದ `ಸಂಗೀತಧಾಮ~ ತನ್ನ 8ನೆಯ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು. 9 ಕಿರಿಯ ಕಲಾವಿದರ ಸೀಡಿಗಳನ್ನು ಹೊರತಂದು `ಭರವಸೆಯ ಕೊರಳುಗಳು~ ಹೊಮ್ಮಲು ಕಾರಣೀಭೂತವಾಯಿತು.

ಅಷ್ಟೇನೂ ಪರಿಚಿತರಲ್ಲದ 8 ಉದಯೋನ್ಮುಖ ಗಾಯಕರು, ಹೆಚ್ಚಾಗಿ ಪರಿಚಿತರಲ್ಲದ 8 ಕವಿಗಳ ಗೀತೆಗಳನ್ನು ಸೀ ಡಿ ರೂಪದಲ್ಲಿ ಅನಾವರಣಗೊಳಿಸಿದ್ದು  ಅಭಿನಂದನೀಯ. ಈ ಕನ್ನಡ ಗೀತೆಗಳಿಗೆ ಮೃತ್ಯುಂಜಯ ದೊಡ್ಡವಾಡರು ಮಧುರವಾದ ರಾಗ ಸಂಯೋಜನೆ ಮಾಡಿದ್ದಾರೆ. ಅವುಗಳನ್ನು ಈ ಕಲಾವಿದರು  ಸಂಗೀತಧಾಮ  ಸಂಭ್ರಮದಲ್ಲಿ ಹಸನಾಗಿ ಹಾಡಿದರು.

ಮೈಸೂರಿನ ಶ್ರೀದೇವಿ ಕುದೆನೂರು ಅವರು ನಾರಾಯಣ ಭಟ್ಟರ  `ಮನಸು ಮಲ್ಲಿಗೆ~  ಇಂಪಾಗಿ ಹಾಡಿದರೆ, ತನ್ಮಯಿ ಕೃಷ್ಣಮೂರ್ತಿ ಅವರು ಬಾಗೂರು ಮಾರ್ಕಂಡೇಯರ  `ನೀಲ ನಭಣೆ~  ಮಧುರವಾಗಿ ಪ್ರಸ್ತುತಪಡಿಸಿದರು.

ಆಕಾಂಕ್ಷಾ ಬದಾಮಿ  `ಓ ಪ್ರೇಮ ಸಾಗರವೆ~  (ಡಾ. ಎಲ್.ಜಿ. ಮೀರಾ) ಆಯ್ದರೆ, ಅನೂಸೂಯ ಶರ್ಮ  `ಎಲ್ಲ ನೋವನು ಮರೆಸೋ~  (ಕೆ. ಈಶ್ವರ ಪ್ರಸಾದ್) ಬಳಸಿಕೊಂಡರು. ಡಾ. ಎಚ್.ಕೆ. ಮಳಲಿ ಗೌಡರ ಭಿನ್ನ ರೀತಿಯ ಕವನವನ್ನು (ಲೆಕ್ಕ ಇಡಲಿಲ್ಲ) ಗಣೇಶ ಶರ್ಮ ಹಾಡಿದರೆ, ಕೆ ಸುಮ ಅವರು ಬಿ.ವಿ. ಅರಳಪ್ಪನವರ  `ಶರಣ ತಾಯೆ~ ಸರಳವಾಗಿ ನಿರೂಪಿಸಿದರು.
 
ಅನುಷಾ ಸಿಂಗ್‌ರ  `ಕಳೆದು ಹೋಗಿದೆ ಬಾಲ್ಯ~ ವನ್ನು ರಮ್ಯ ಸೂರಜ್ ಆರಿಸಿಕೊಂಡರೆ, ಡಾ. ಚಂದ್ರಶೇಖರ್ ತಾಳ್ಯ ಅವರ  `ಒಂದು ಸಂಜೆಗೆ~ ಯನ್ನು ನವ್ಯ ನಾಗರಾಜ್ ಆಯ್ದರು. ಇವರಲ್ಲಿ ಬಹುಮಂದಿ ಹೊಸದನಿಗಳು. ಶ್ರದ್ಧೆ ಉತ್ಸಾಹ ಉಳ್ಳವರು. ಅದರೊಂದಿಗೆ ಶಿಕ್ಷಣ ಸಾಧನೆಗಳೂ ಸೇರಿದರೆ, ಯಶಸ್ವೀ ಗಾಯಕರಾಗಬಹುದು.

ನೃತ್ಯದಲ್ಲಿ ನೀಲಮೇಘಶ್ಯಾಮ
ನಗರದ ನತ್ಯಾಸಕ್ತರಿಗೆ ಚಿತ್ರಾ ಅರವಿಂದ್ ಹೊಸಬರೇನಲ್ಲ. ನೂಪುರವಲ್ಲದೆ ನೃತ್ಯ ಕಲಾ ಮಂದಿರ ಮತ್ತು ಸಂಪ್ರತಿಗಳಲ್ಲೂ ಶಿಕ್ಷಣ ಪಡೆದು ಭರತನಾಟ್ಯ ಚೆನ್ನಾಗಿ ಅಭ್ಯಸಿಸಿದ್ದಾರೆ. ಕೆಲ ಇತರ ಪ್ರಕಾರಗಳಲ್ಲೂ ಕಲಿಕೆ ನಡೆದಿದೆ. ಇದರಿಂದ ಇಂಗ್ಲೆಂಡ್, ಅಮೆರಿಕ, ಯೂರೋಪ್‌ಗಳಲ್ಲಿ ಭರತನಾಟ್ಯ, ಕಥಕ್, ನವ್ಯ ನೃತ್ಯ ಪ್ರದರ್ಶನಗಳನ್ನೂ ನೀಡಲು ನೆರವಾಗಿದೆ.

ಹಾಲಿ ಕಾರ್ಯಕ್ರಮವನ್ನು ತಿಶ್ರದ ಅಲರಿಪುವಿನೊಂದಿಗೆ ಪ್ರಾರಂಭಿಸಿದರು. ರಾಗಮಾಲಿಕೆಯಲ್ಲಿ ಮೂಡಿದ  `ನೀಲಮೇಘಶ್ಯಾಮ ಸುಂದರನ~ದಲ್ಲಿ ನಾಯಕನ ಅಗಲಿಕೆಯ ಭಾವ ಗಾಢವಾಗಿ ಹೊಮ್ಮಿತು. ಅವರ ತಾಳ ತಿಳಿವಳಿಕೆ ಚೆನ್ನಾಗೇ ಇದೆ. ಆದರೆ ಮಧ್ಯದಲ್ಲಿ ಅನಿಬದ್ಧವಾಗಿ ಮುಂದುವರೆದದ್ದು ಸಭಿಕರಿಗೆ ಸ್ವಲ್ಪ ಭಿನ್ನ ಅನುಭವ ನೀಡಿತು.

ಎತ್ತುಗಡೆಯನ್ನು ದ್ರುತ ಕಾಲದಲ್ಲಿ ತೆಗೆದುಕೊಂಡು ಕಾವು ತುಂಬಿದರು. ಜೂಡರೆ  ಪದದಲ್ಲಿ ಸಾಮಾನ್ಯ ನಾಯಿಕೆಯ ಭಾವ ಹಾಗೂ ಪಾಪನಾಶಂ ಶಿವನ್‌ರ ಕೃತಿ ಪ್ರಬಲವಾಗಿ ಮನಮುಟ್ಟಿತು. ಜನಪ್ರಿಯ ಅಷ್ಟಪದಿ  `ರತಿಸುಖ ಸಾರೆ~  ಮತ್ತು ಹಿಂದೋಳ ತಿಲ್ಲಾನಗಳೊಂದಿಗೆ ಮುಕ್ತಾಯ.
 
ಒಟ್ಟಿನಲ್ಲಿ ಚಿತ್ರಾ ಅರವಿಂದ್‌ರ ಬೆಳವಣಿಗೆ ಸಗೋಚರವಾಯಿತು. ಹಿನ್ನೆಲೆಯ ಗಾಯನದಲ್ಲಿ ಬಾಲಸುಬ್ರಹ್ಮಣ್ಯ ಶರ್ಮ, ನಟುವಾಂಗದಲ್ಲಿ ಸುಮಾ ಕೃಷ್ಣಮೂರ್ತಿ, ಮೃದಂಗದಲ್ಲಿ ಗುರುಮೂರ್ತಿ, ಕೊಳಲಿನಲ್ಲಿ ಮಥುರಾ ಹಾಗೂ ಪಿಟೀಲಿನಲ್ಲಿ ಆದಿತ್ಯ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.