ADVERTISEMENT

ಭುವನ ಸುಂದರಿಯ ದಾರಿಯಲ್ಲಿ

ಮೇರಿ ಜೋಸೆಫ್
Published 8 ಆಗಸ್ಟ್ 2011, 19:30 IST
Last Updated 8 ಆಗಸ್ಟ್ 2011, 19:30 IST
ಭುವನ ಸುಂದರಿಯ ದಾರಿಯಲ್ಲಿ
ಭುವನ ಸುಂದರಿಯ ದಾರಿಯಲ್ಲಿ   

ಈಕೆ ಮೈಸೂರಿನ ಹುಡುಗಿ. ಮೊನ್ನೆ ಮೊನ್ನೆ ಈ ಹುಡುಗಿ ಮಿಸ್ ಏಷ್ಯಾ ಪೆಸಿಫಿಕ್ ವಲ್ಡ್ ಇಂಡಿಯಾ 2011 ಆಗಿ ಆಯ್ಕೆ ಆಗುವುದರೊಂದಿಗೆ ಸುದ್ದಿ ಮಾಡಿದವರು. ಆ ಖುಷಿಯಲ್ಲಿ `ಮೆಟ್ರೊ~ ಜತೆ ತನ್ನ ಅನುಭವ, ಕನಸು ಹಂಚಿಕೊಂಡರು.

ಅಂದ ಹಾಗೆ ಈಕೆ ತನ್ವಿ ಸಿಂಗ್ಲ. ಮೈಸೂರಿನ ಹುಡುಗಿಯಾದರೂ ಹುಟ್ಟಿದ್ದು ಹರಿಯಾಣದ ಪಾಣಿಪತ್‌ನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಊಟಿಯಲ್ಲಿ ಮುಗಿಸಿದ ತನ್ವಿ ಬಳಿಕ  ನೇರವಾಗಿ ಬಂದದ್ದು ಮೈಸೂರಿಗೆ.

ಕಳೆದ ಹನ್ನೆರಡು ವರ್ಷಗಳಿಂದ ಇವರ ಕುಟುಂಬ ಮೈಸೂರಲ್ಲಿ ನೆಲೆನಿಂತಿದೆ. ತನ್ವಿ ಈಗ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯಲ್ಲಿ ಬಿಸಿನೆಸ್ ಎಂಟರ್‌ಪ್ರಿನರ್‌ಶಿಪ್ ಕೋರ್ಸ್‌ನ ಅಂತಿಮ ಪದವಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಯಾವ ಹಮ್ಮು ಬಿಮ್ಮು ಇಲ್ಲದೆ ತನ್ವಿ ನೇರವಾಗಿ ಕನ್ನಡದ್ಲ್ಲಲೇ ಮಾತನಾಡಲು ಆರಂಭಿಸಿದಾಗ ಆಕೆ ನೆರೆಮನೆಯ ಹುಡುಗಿಯಂತೆಯೇ ಕಂಡರು. ಮಿಸ್ ಏಷ್ಯಾ ಪೆಸಿಫಿಕ್ ಆಗಿ ಆಯ್ಕೆ ಆದಾಗ ಏನನ್ನಿಸಿತು ಎಂದರೆ, `ಇತರರಿಗಿಂತ ಭಿನ್ನವಾಗಿರಬೇಕೆಂದು ಸಾಮಾನ್ಯವಾಗಿ ಎಲ್ಲರೂ  ಬಯಸುತ್ತಾರೆ.

ನನಗೂ ಅಷ್ಟೆ. ನೋಡಿ ನಿನ್ನೆ ಮೊನ್ನೆ ಸಾಮಾನ್ಯ ಹುಡುಗಿಯಂತಿದ್ದ ನಾನು ಈಗ ಏಷ್ಯಾ ಪೆಸಿಫಿಕ್ ಆಗುವುದರೊಂದಿಗೆ ಎಲ್ಲರೂ ನನ್ನನ್ನು ಗುರುತಿಸುವಂತೆ ಆಯಿತು~ ಎಂದು ಹೆಮ್ಮೆಪಟ್ಟರು.

`ಇನ್ನು ನನ್ನ ಮುಂದಿನ ಗುರಿ ಅಕ್ಟೋಬರ್ 15ರಂದು ದಕ್ಷಿಣ ಕೊರಿಯದಲ್ಲಿ ನಡೆಯಲಿರುವ ಗ್ರಾಂಡ್ ಫಿನಾಲೆಯಲ್ಲಿ ಜಯ ಗಳಿಸುವುದು. ನಾನು ವಿಜಯಿಯಾಗಿ ಬರುತ್ತೇನೆ ಎಂಬ ಭರವಸೆ ನನಗಿದೆ.

ಅಂಥ ವಿಶ್ವಾಸ ಖಂಡಿತಾ ಇರಲೇಬೇಕು ಕೂಡ. ಏಕೆಂದರೆ ಸಮಸ್ತ ಭಾರತೀಯರ ಪ್ರತಿನಿಧಿಯಾಗಿ ನಾನು ತೆರಳುತ್ತಿದ್ದೇನೆ. ಅವರೆಲ್ಲರೂ ನನ್ನ ಮೇಲೆ ನಂಬಿಕೆ ಇರಿಸಿದ್ದಾರೆ~ ಎನ್ನುವಾಗ ಅವರಲ್ಲಿ ಆತ್ಮವಿಶ್ವಾಸ ತುಳುಕುತ್ತಿತ್ತು. 

ಸಿನಿಮಾಕ್ಕೆ ಕರೆ ಬಂದರೆ ಎಂದು ಕೇಳಿದಾಗ `ಈಗಂತೂ ನನ್ನ ಪ್ರಥಮ ಆದ್ಯತೆ ಮಿಸ್ ಯೂನಿವರ್ಸ್ ಗೆಲ್ಲುವುದು. ನಮ್ಮದೇ ಆದ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ತಂಡ ಇದೆ. ನಾನು ಸಿನಿಮಾಕ್ಕೆ ಫಿಟ್ ಅಂತ ಅನ್ನಿಸಿದ್ರೆ ಸೇರ‌್ಕೊಳ್ಳಬಹುದು. ಆದರೆ ಸದ್ಯಕ್ಕಂತೂ ಇಲ್ಲ~ ಎಂದು ಖಡಾಖಂಡಿತವಾಗಿ ಹೇಳಿದರು.

ತನ್ನ ಪದವಿ ಕಲಿಕೆ ಬಗ್ಗೆ ಮಾತನಾಡುತ್ತ `ಕಲಿತದ್ದು ಯಾವಾಗಲಾದರೂ ಪ್ರಯೋಜನಕ್ಕೆ ಬರುತ್ತದೆ. ಅದು ಎಂದೂ ವ್ಯರ್ಥ ಆಗದು. ನಾನು ಉದ್ಯಮಿ ಆಗಬೇಕೆಂದು ಬಯಸಿದ್ದೆ. ಮುಂದೆ ವ್ಯಾಪಾರ ವ್ಯವಹಾರ ಮಾಡುವುದಾದರೂ ಅದು ಪ್ರಯೋಜನಕ್ಕೆ ಬರುತ್ತದೆ~ ಎಂದರು.

  `ನಿನಗೇನಿಷ್ಟವೋ ಅದನ್ನು ಮಾಡು. ಯಾವುದು ತಪ್ಪು, ಯಾವುದು ಸರಿ ಎಂದು ನಿರ್ಣಯಿಸುವ ಶಕ್ತಿ ನಿನಗಿದೆ~ ಎಂದು ಅಮ್ಮ ಹೇಳುತ್ತಿದ್ದರು ಎಂದು ತನ್ವಿ ತಾಯಿ ನೀಡಿದ ಪ್ರೋತ್ಸಾಹವನ್ನು ಹಂಚಿಕೊಂಡರು.

ಅಂಚೆಚೀಟಿ ಸಂಗ್ರಹ, ಮಾಡೆಲಿಂಗ್, ಹಾಡು, ನೃತ್ಯ ಮುಂತಾದವುಗಳು ತನ್ವಿಯ ಹವ್ಯಾಸಗಳಾದರೂ ನಾಯಿಗಳೆಂದರೆ ಪಂಚಪ್ರಾಣ. ಅಷ್ಟೇ ಅಲ್ಲ, ಕರಾಟೆ ಚಾಂಪಿಯನ್ ಕೂಡ.

ಇಷ್ಟೇ ಅಲ್ಲ. ಈ ಹುಡುಗಿಗೆ ಅನ್ನ ಮತ್ತು ರಸಂ ಎಂದರೆ ಭಾರೀ ಇಷ್ಟವಂತೆ. ಜತೆಗೆ ಹಪ್ಪಳ ಮತ್ತು ಉಪ್ಪಿನಕಾಯಿ ಇದ್ದರೆ ಬೇರೇನೂ ಬೇಡ ಎನ್ನುವಾಗ ಈಕೆ ಕನ್ನಡತಿಯಲ್ಲ ಎಂದು ಯಾರು ತಾನೆ ಹೇಳಲು ಸಾಧ್ಯ?  

ಕಾಲೇಜು ತನಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ ಎನ್ನುವ ತನ್ವಿ ಅಲ್ಲಿನ ಅಧ್ಯಾಪಕರು ಮತ್ತು ಆಡಳಿತವರ್ಗಕ್ಕೆ ಆಭಾರಿಯಾಗಿದ್ದಾರೆ. ತನ್ವಿಗೆ ಇನ್ನೂ 19ರ ಹರೆಯ. ಅಂತೆಯೇ ಜೀವನದಲ್ಲಿ ಸಾಧಿಸಬೇಕಾದ್ದು ಬೇಕಾದಷ್ಟಿದೆ. ಅದಕ್ಕಿಂತಲೂ ಮೊದಲು ಮುಂದೆ ನಡೆಯಲಿರುವ ಸ್ಪರ್ಧೆಗೆ ಆಲ್ ದಿ ಬೆಸ್ಟ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.