ADVERTISEMENT

ಭೂಮಿಕಾ ಇಡ್ಲಿ ಪ್ರಿಯೆ

​ಪ್ರಜಾವಾಣಿ ವಾರ್ತೆ
Published 21 ಮೇ 2012, 19:30 IST
Last Updated 21 ಮೇ 2012, 19:30 IST
ಭೂಮಿಕಾ  ಇಡ್ಲಿ ಪ್ರಿಯೆ
ಭೂಮಿಕಾ ಇಡ್ಲಿ ಪ್ರಿಯೆ   

ಕಣ್ಣಲ್ಲಿಯೇ ವ್ಯಕ್ತಗೊಳ್ಳುವ ಭಾವ. `ಗುಡಿಯಾ~ ಎಂಬ ಅಡ್ಡಹೆಸರಿಗೆ ತಕ್ಕಂಥ ಚಹರೆ; ಗೊಂಬೆಯಷ್ಟೇ ಸುಂದರ. ಮಾತಂತೂ ಬೆಣ್ಣೆಯಲ್ಲಿ ಕೂದಲು ತೆಗೆದಂತೆ. ಪ್ರತಿ ಮಾತಿಗೊಂದು ಮುಗುಳ್ನಗೆಯ ರುಜು. ಎಲ್ಲಾ ನುಡಿಗಳೂ ನೇರ, ಸ್ಪಷ್ಟ. ನಟಿ ಭೂಮಿಕಾ ಚಾವ್ಲಾ ಮೊದಲ ನೋಟಕ್ಕೆ ದಕ್ಕುವುದು ಹೀಗೆ.

`ಬೆಂಗಳೂರು ಎಂದರೆ ನನಗೆ ತುಂಬಾನೇ ಪ್ರೀತಿ. ಇಲ್ಲಿನ ಸ್ಥಳಗಳು, ವಾತಾವರಣ, ಊಟ ನನಗೆ ಬಲು ಇಷ್ಟ. ಅದರಲ್ಲೂ ಇಡ್ಲಿ ಸಾಂಬಾರ್ ನನ್ನ ಮೆಚ್ಚಿನ ತಿಂಡಿ~ ಎಂದು ನಗೆ ಬೆರೆಸುತ್ತಲೇ `ಮೆಟ್ರೊ~ದೊಂದಿಗೆ ಮಾತಿಗಿಳಿದರು `ತೇರೇ ನಾಮ್~ ಹುಡುಗಿ ಭೂಮಿಕಾ ಚಾವ್ಲಾ.

`ಯುವಕುಡು~ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭೂಮಿಕಾ ಸುಮಾರು 30 ತೆಲುಗು, ತಮಿಳು, ಹಿಂದಿ, ಭೋಜ್‌ಪುರಿ, ಪಂಜಾಬಿ ಮತ್ತು ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. `ಖುಷಿ~, `ತೇರೆ ನಾಮ್~, `ಮಿಸ್ಸಮ್ಮಾ~, `ಗಾಂಧಿ~, `ಮೈ ಫಾದರ್~, `ಸತ್ಯಭಾಮ~ ಮುಂತಾದ ಸಿನಿಮಾಗಳಲ್ಲಿ ಭೂಮಿಕಾ ನಟನಾ ಸಾಮರ್ಥ್ಯ ಅನಾವರಣಗೊಂಡಿದೆ.

ಪಂಜಾಬಿ ಕುಟುಂಬದಲ್ಲಿ ಹುಟ್ಟಿದ ಭೂಮಿಕಾಗೆ `ಖುಷಿ~ ಚಿತ್ರದ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯೂ ಲಭಿಸಿದೆ. ಮಹೇಶ್ ಬಾಬು ಜತೆ ನಟಿಸಿದ `ಒಕ್ಕಡು~, ಜೂನಿಯರ್ ಎನ್‌ಟಿಆರ್ ನಾಯಕರಾಗಿದ್ದ `ಸಿಂಹಾದ್ರಿ~, ತಮಿಳಿನ `ಬದ್ರಿ~ ಚಿತ್ರಗಳಿಂದ ಭೂಮಿಕಾ ಯಶಸ್ಸಿನ ಏಣಿ ಏರಿದರು.

ದಕ್ಷಿಣ ಭಾರತದಲ್ಲಿ ಹಲವು ಸಿನಿಮಾಗಳಲ್ಲಿ ಗುರುತಾದ ನಂತರ ಅವರು ಬಾಲಿವುಡ್‌ನ `ತೇರೆ ನಾಮ್~ ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ, ಅದರಿಂದ ಮುಂಬೈ ಚಿತ್ರರಂಗದ ಹೆಚ್ಚಿನ ಅವಕಾಶಗಳೇನೂ ಅವರಿಗೆ ಒಲಿಯಲಿಲ್ಲ.

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ ಮಾಡುವ ಭೂಮಿಕಾಗೆ ಕನ್ನಡ ಚಿತ್ರದಲ್ಲೂ ನಟಿಸುವ ಆಸೆ ಇದೆಯಂತೆ. `ನನಗೆ ಮಾಧುರಿ ದೀಕ್ಷಿತ್, ಕಾಜೋಲ್ ಅಂದರೆ ತುಂಬಾ ಇಷ್ಟ~ ಎಂದು ಕಣ್ಣಗಲಿಸಿ ಹೇಳುವ ಭೂಮಿಕಾ, ಯೋಗಗುರು ಭರತ್ ಠಾಕೂರ್ ಪತ್ನಿ. `ದಿನಕ್ಕೆ ಒಂದು ಗಂಟೆ ಯೋಗ ಮಾಡುತ್ತೇನೆ. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯುತ್ತೇನೆ .ಇದೇ ನನ್ನ  ಫಿಟ್‌ನೆಸ್ ಗುಟ್ಟು~ ಎಂದು ಹೇಳುತ್ತಾರೆ.

ಕಾಶ್ಮೀರವನ್ನು ತುಂಬಾ ಇಷ್ಟಪಡುವ ಅವರ ಪ್ರಕಾರ ಅದೊಂದು ರೀತಿಯ ಸ್ವರ್ಗವಂತೆ. ಪದೇ ಪದೇ ಅಲ್ಲಿಗೆ ಹೋಗುವ ಮನಸ್ಸಾಗುತ್ತದೆನ್ನುವ ಅವರಿಗೆ `ಕಾಶ್ಮೀರಿ ಆ್ಯಪಲ್‌ನಂತಿದ್ದೀರಾ~ ಎಂಬ ಹೊಗಳಿಕೆಯೂ ಸಿಕ್ಕಿದೆ.

`ಮನೆಯಲ್ಲಿ ಮೊದಲು ಚಿತ್ರರಂಗಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಅಮ್ಮ ಬೆಂಬಲ ನೀಡಿದರು. ನಾನು ಹೆಚ್ಚು ಓದಲಿಲ್ಲ. ಕೇವಲ ಪಿಯುಸಿ ಮುಗಿಸಿದ್ದೇನೆ. ಆದರೆ ಈಗಿನ ಮಕ್ಕಳು ಮುಖ್ಯವಾಗಿ ಓದಿನ ಬಗ್ಗೆ ಗಮನಹರಿಸಬೇಕು. ವಿದ್ಯೆ ಇದ್ದರೆ ಎಲ್ಲಾದರೂ ಬದುಕಬಹುದು~ ಎಂಬುದು ಮಕ್ಕಳಿಗೆ ಭೂಮಿಕಾ ಹೇಳುವ ಕಿವಿಮಾತು.

ಭೂಮಿಕಾಗೆ ಚಿತ್ರಕಲೆ ಎಂದರೆ ತುಂಬಾನೇ ಇಷ್ಟವಂತೆ. ಸಮಯ ಸಿಕ್ಕಾಗಲೆಲ್ಲ ಕ್ಯಾನ್ವಾಸ್ ಮೇಲೆ ಗೆರೆ ಮೂಡಿಸಿ ಸಂತೋಷ ಪಡುವುದು, ದೂರದ ಊರಿಗೆ ಪ್ರಯಾಣಿಸುವುದು ಚೈತನ್ಯ ತುಂಬುತ್ತದೆ ಎನ್ನುತ್ತಾರೆ.

ರಾತ್ರಿ 8.30ರ ಒಳಗೆ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವ ಇವರಿಗೆ ಮಕ್ಕಳೆಂದರೆ ತುಂಬ ಇಷ್ಟವಂತೆ. `ನನಗೆ ಯಾವುದೇ ಮಗು ಹುಟ್ಟಿದರೂ ಪರವಾಗಿಲ್ಲ. ಆರೋಗ್ಯದಿಂದಿದ್ದರೆ ಸಾಕು~ ಎಂದು ಹೊಸ ಬಯಕೆಯನ್ನು ಹೊರಹಾಕಿ, ಮಾತಿಗೆ ಪೂರ್ಣವಿರಾಮ ಹಾಕಿದರು ಭೂಮಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.