ADVERTISEMENT

ಮತ್ತೆ ಅನುಸಂಧಾನದ ದಿನಗಳು

ಬಸೀರ ಅಹ್ಮದ್ ನಗಾರಿ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST
ಮತ್ತೆ ಅನುಸಂಧಾನದ ದಿನಗಳು
ಮತ್ತೆ ಅನುಸಂಧಾನದ ದಿನಗಳು   

ಇಸ್ಲಾಂ ಧರ್ಮದ ಪ್ರಕಾರ ರಂಜಾನ್ ಅನ್ನು ಪುಣ್ಯ ಸಂಪಾದಿಸುವ, ಆತ್ಮದ ಮೇಲೆ ನಿಯಂತ್ರಣ ಸಾಧಿಸುವ ಹಾಗೂ ಸಂಯಮ ರೂಢಿಸಿಕೊಳ್ಳುವ ತಿಂಗಳು ಎಂದೇ ಪರಿಗಣಿಸಲಾಗುತ್ತದೆ. ಇಸ್ಲಾಂನ ಐದು ಕಡ್ಡಾಯ ನಿಯಮಗಳಲ್ಲಿ ಒಂದಾದ ರೋಜಾ ರಂಜಾನ್ ಮಾಸದ ಪ್ರಮುಖ ಆಚರಣೆ. ಶತಮಾನಗಳಿಂದ ಮುಸ್ಲಿಂ ಬಾಂಧವರು ಪ್ರತಿ ವರ್ಷ ಒಂದು ತಿಂಗಳಿನ ಉಪವಾಸ ಮಾಡುತ್ತ ಬರುತ್ತಿದ್ದಾರೆ. ಅನ್ನ–ನೀರು ಬಿಟ್ಟು ಈ ಅವಧಿಯಲ್ಲಿ ಉಪವಾಸ ಇರುವುದು ಏಕೆ?

ಜಗತ್ತಿನಲ್ಲಿ ತಾಯಿಯ ಪ್ರೀತಿಯನ್ನು ಮೀರಿಸುವ ಪ್ರೀತಿ ಮತ್ತೊಂದಿಲ್ಲ. ಆದರೆ, ಅಲ್ಲಾಹು 70 ಅಮ್ಮಂದಿರಷ್ಟು ತನ್ನ ಭಕ್ತರನ್ನು ಪ್ರೀತಿ ಮಾಡುತ್ತಾನೆ. ಹೀಗಿದ್ದೂ ಆತ ಭಕ್ತರ ಮೇಲೆ ಊಟ–ನೀರು ತ್ಯಜಿಸುವಂಥ ಉಪವಾಸವನ್ನು ಜಾರಿಗೊಳಿಸಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತದೆ.

‘ಉಪವಾಸ ಮಾಡುವುದರಿಂದ ವಿಶ್ವದ ಬಡ ಜನರ ಹಸಿವು ಹಾಗೂ ಕಷ್ಟಗಳನ್ನು ಅರಿತುಕೊಳ್ಳಬಹುದು. ಜೊತೆಗೆ ಅಡಿಯಿಂದ ಮುಡಿಯ ತನಕ ದೇಹದ ಎಲ್ಲ ಅಂಗಾಂಗಳು ಪಾಪಕೃತ್ಯದಿಂದ ದೂರ ಉಳಿದು, ಪಾವಿತ್ರ್ಯ ದಕ್ಕಿಸಿಕೊಳ್ಳಲಿ ಎಂಬುದು ಇದರ ಹಿಂದಿನ ಉದ್ದೇಶ. ಯಾಕೆಂದರೆ, ವೇಗದ ಜೀವನದಲ್ಲಿ ನಾವೆಲ್ಲ ಪುಣ್ಯ ಸಂಪಾದಿಸುವ ಮಾರ್ಗ ಹಾಗೂ ಜೊತೆಗಿರುವ ಬಡವರ ಕಷ್ಟಗಳನ್ನು ಮರೆತೇ ಬಿಡುತ್ತೇವೆ. ರಂಜಾನ್ ಅಂಥ ಕಷ್ಟವನ್ನು ಅರಿತುಕೊಳ್ಳುವ ಸಮಯ’ ಎಂದು ಮೌಲ್ವಿಗಳು ಉತ್ತರಿಸುತ್ತಾರೆ.

ADVERTISEMENT

ಬರೀ ಉಪವಾಸ ಅಲ್ಲ
ಉಪವಾಸ ಇದ್ದು ಮತ್ತೊಬ್ಬರ ಕಷ್ಟಗಳನ್ನು ಅರಿಯುವ ಜೊತೆಗೆ ಸ್ವ ನಿಯಂತ್ರಣ ಮಾಡಿಕೊಳ್ಳುವುದೂ ರೋಜಾದ ಒಂದು ಭಾಗ. ಮುಂಜಾವಿನಿಂದ ಕತ್ತಲೆಯಾಗುವ ತನಕ ಬರೀ ನೀರು, ಆಹಾರ ತ್ಯಜಿಸಿ ಜೀವಿಸುವುದಕ್ಕೆ ಉಪವಾಸ ಸೀಮಿತವಲ್ಲ. 14, 16 ಗಂಟೆಗಳ ಈ ಸುದೀರ್ಘ ಅವಧಿಯಲ್ಲಿ ತಪ್ಪು ಘಟಿಸದಂತೆ, ಪಾಪಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ.

ಕುರಾನ್‌ನಲ್ಲಿ ‘ಸೌಮ್‌’ ಹಾಗೂ ‘ಸಿಯಾಮ್‌’ ಎಂಬ ಎರಡು ಪದಗಳ ಬಳಕೆ ಮಾಡಲಾಗಿದೆ. ಈ ಎರಡೂ ಪದಗಳಲ್ಲಿ ಪುಟ್ಟ ವ್ಯತ್ಯಸವಿದೆ. ‘ಸೌಮ್‌’ ಅಂದರೆ ಅನ್ನ–ನೀರು ತ್ಯಜಿಸುವುದು. ‘ಸಿಯಾಮ್‌’ ಅಂದರೆ, ಅಡಿಯಿಂದ ಮುಡಿಯ ತನಕ, ಎಲ್ಲ ಅಂಗಾಂಗಳ ಉಪವಾಸ!

ಬುದ್ಧಿ ಕೆಟ್ಟದ್ದನ್ನು ಯೋಚಿಸದಂತೆ, ಕಣ್ಣು ಕೆಟ್ಟದರತ್ತ ಆಕರ್ಷಣೆಯಾಗದಂತೆ ನೋಡಿಕೊಳ್ಳಬೇಕು. ಕಿವಿಗಳು ಕೆಟ್ಟದ್ದನ್ನು ಕೇಳದಂತೆ, ನಾಲಿಗೆ ಅನ್ನ–ನೀರಿನ ಜೊತೆಗೆ ಬೈಗಳ, ಚಾಡಿ, ಸುಳ್ಳುಗಳಿಂದ ದೂರ ಉಳಿಯುವಂತೆ ನಿಯಂತ್ರಿಸಬೇಕು. ಕೈಗಳು ತೂಕದಲ್ಲಿ ಮೋಸ, ತಪ್ಪು ಫೈಲ್‌ಗಳಿಗೆ ಸಹಿ ಮಾಡದಂತೆ, ಲಂಚ ಪಡೆಯದಂತೆ, ಇನ್ನೊಬ್ಬರ ಮೇಲೆ ಕೈ ಎತ್ತದಂತೆ, ಮನಸ್ಸು ಮತ್ತೊಬ್ಬರ ಬಗ್ಗೆ ಕೆಡಕು ಬಗೆಯದಂತೆ, ಕಾಲುಗಳು ದರ್ಪದಂತೆ ನಡೆಯದಂತೆ ನಿಯಂತ್ರಿಸುವುದು... ಹೀಗೆ ಮನಸ್ಸು, ದೇಹವನ್ನು ಭವದ ಬಂಧದಿಂದ ಮುಕ್ತಗೊಳಿಸುವ ಮೂಲಕ ಅಲ್ಲಾಹುವಿನತ್ತ, ಚಿತ್ತಹರಿಸುವುದು ಉಪವಾಸದ ಒಂದು ಭಾಗ.

ಒಂದು ತಿಂಗಳ ಕಾಲ ಇಂಥ ವೃತಾಚರಣೆ ಮಾಡಿದರೆ, ಇನ್ನುಳಿದ 11 ತಿಂಗಳು ಮತ್ತೊಬ್ಬರ ಕಷ್ಟಗಳನ್ನು ಅರಿಯುವ ಸಂವೇದನೆ, ಆತ್ಮ ನಿಯಂತ್ರಣ, ದೇಹ ನಿಯಂತ್ರಣ ಸಾಧ್ಯವಾಗಿ, ನಿಜ ಮನುಜ ಪಥದಲ್ಲಿ ಸಾಗಲು ನೆರವಾಗುತ್ತದೆ ಎಂಬುದು ಒಟ್ಟಾರೆ ರಮ್ಜಾನ್‌ ಉಪವಾಸದ ತಿಂಗಳ ಸಾರ.

ಕುರಾನ್ ಪಠಣಕ್ಕೆ ಆದ್ಯತೆ
ರಂಜಾನ್ ಮಾಸದಲ್ಲಿ ಉಪವಾಸ ಹೊರತು ಪಡಿಸಿದರೆ, ಕುರಾನ್‌ ಪಠಣಕ್ಕೆ ಮೊದಲ ಆದ್ಯತೆ. ಅದಕ್ಕಾಗಿಯೇ ತರಾವೀಹ್ ಎಂಬ ವಿಶೇಷ ನಮಾಜ್ ಮಾಡಲಾಗುತ್ತದೆ. ತರಾವೀಹ್‌ ನಮಾಜ್‌ನಲ್ಲಿ ಒಂದು ನಿತ್ಯ ಒಂದು ಜೂಜ್‌ನಂತೆ(ಕುರಾನ್‌ 30 ಖಂಡಗಳನ್ನು ಹೊಂದಿದೆ. ನಿತ್ಯ ಒಂದೊಂದು ಖಂಡಗಳನ್ನು ತರಾವೀಹ್‌ಯಲ್ಲಿ ಪಠಿಸಲಾಗುತ್ತದೆ) ತಿಂಗಳಿಡಿ ಕುರಾನ್‌ ಪಠಣ ನಡೆಯುತ್ತದೆ. ಕುರಾನ್ ಓದಬಲ್ಲವರು ಈ ತಿಂಗಳ ಅವಧಿಯಲ್ಲಿ ತಮ್ಮ ಶಕ್ತ್ಯಾನುಸಾರ ಒಂದರಿಂದ ಐದು ಬಾರಿ ಕುರಾನ್‌ ಪುನರಾವರ್ತಿಸುತ್ತಾರೆ.

ಜಕಾತ್‌ ಕಡ್ಡಾಯ
ಇಸ್ಲಾಂನ ಐದು ಕಡ್ಡಾಯ ನಿಯಮಗಳಲ್ಲಿ ಒಂದಾದ ಜಕಾತ್‌ಗೂ(ದಾನ) ಕೂಡ ರಂಜಾನ್‌ನಲ್ಲಿ ಆದ್ಯತೆ ನೀಡಲಾಗುತ್ತದೆ. ಜಕಾತ್‌ ಇಂದಿನ ಆಧುನಿಕ ತೆರಿಗೆ ಪದ್ಧತಿಗಿಂತ ಭಿನ್ನವೇನೂ ಅಲ್ಲ. ಈ ಜಕಾತ್ ಶಿಸ್ತನ್ನು ಶತಮಾನಗಳಿಂದ ರೂಢಿಸಿಕೊಂಡು ಬಂದಿರುವುದು ಇಸ್ಲಾಂನ ವಿಶೇಷವೂ ಹೌದು.

ಜಕಾತ್‌ ಮೂಲಕ ಕ್ರೋಡೀಕರಿಸಿದ ಹಣವನ್ನು ಬಡವರು, ದೀನ–ದುರ್ಬಲರಿಗೆ ವಿನಿಯೋಗಿಸುತ್ತಾರೆ.

ಜಕಾತ್‌ ಮಾಡುವ ಕುರಿತು ಕುರಾನ್‌ನಲ್ಲಿ 80ಕ್ಕೂ ಹೆಚ್ಚು ಬಾರಿ ಪ್ರಸ್ತಾಪ ಮಾಡಲಾಗಿದೆ. ಇದು ದಾನದ ಕುರಿತ ಇಸ್ಲಾಂನಲ್ಲಿ ಮಹತ್ವಕ್ಕೆ ಕೈಗನ್ನಡಿ.

ಯಾವುದೇ ವ್ಯಕ್ತಿ ತನ್ನ ಗಳಿಕೆಯ ಉಳಿಕೆಯ ಭಾಗದ ಶೇಕಡಾ 2.5ರಷ್ಟು ಹಣವನ್ನು ದಾನ ಮಾಡಬೇಕು ಎಂದು ಮುಸ್ಲಿಂ ಕಾನೂನು ಷರಿಯತ್‌ ಹೇಳುತ್ತದೆ. 

ರಂಜಾನ್ ಅವಧಿ ಬದಲಾಗಲು ಕಾರಣ..
ಮುಸ್ಲಿಂ ಕ್ಯಾಲೆಂಡರಿನಲ್ಲಿ ಬರುವ ಒಂಬತ್ತನೇ ತಿಂಗಳಿನ ಹೆಸರು ರಂಜಾನ್. ಇದು ಕುರಾನ್‌ನಲ್ಲಿ ಪ್ರಸ್ತಾಪವಿರುವ ಏಕೈಕ ತಿಂಗಳಿನ ಹೆಸರೂ ಹೌದು. ಮುಸ್ಲಿಂ ಕ್ಯಾಲೆಂಡರ್‌ ಚಂದ್ರಮಾನ ಆಧಾರಿತವಾಗಿದ್ದು, ಪ್ರತಿ ತಿಂಗಳ ಚಂದ್ರ ಕಾಣುವ ಜೊತೆಗೆ ತಿಂಗಳು ಆರಂಭಗೊಳ್ಳುತ್ತದೆ. ಹೀಗಾಗಿಯೇ ವಿಶ್ವದ ಹಲವೆಡೆ ಬೇರೆ–ಬೇರೆ ದಿನ ರಮ್ಜಾನ್ ಮಾಸ ಆರಂಭಗೊಂಡು ಭಿನ್ನ ದಿನಗಳಲ್ಲಿಯೇ ಮುಗಿಯುತ್ತದೆ.

ಸೌರಮಾನ ಆಧಾರಿತ ತಿಂಗಳುಗಳಿಗೆ ಹೋಲಿಸಿದರೆ, ಚಂದ್ರಮಾನ ಆಧಾರಿತ ತಿಂಗಳುಗಳ ಅವಧಿ ಕಡಿಮೆ. ಜಾರ್ಜಿಯನ್‌ ಕ್ಯಾಲೆಂಡರ್‌ಗೆ ಹೋಲಿಸಿದರೆ, ರಮ್ಜಾನ್‌ ತಿಂಗಳು ಪ್ರತಿ ವರ್ಷ ಸರಾಸರಿ 11 ದಿನ ಮೊದಲೇ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.