ಕಳೆದ ವರ್ಷದ ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್ ನೇರಳೆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಂಡಿದ್ದ ಬಗ್ಗೆ ಭಾರಿ ವಿವಾದ, ಟೀಕೆ ಉಂಟಾಗಿತ್ತು. ಈ ಬಾರಿ ಅವರು ಯಾವ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಳ್ಳುತ್ತಾರೆ ಎಂಬುದು ಕುತೂಹಲದ ವಿಷಯವಾಗಿತ್ತು.
ಕಳೆದ ಬಾರಿಯ ಟೀಕೆಗಳಿಗೆ ಈ ಬಾರಿ ಐಶ್ವರ್ಯಾ ಸರಿಯಾಗಿ ಉತ್ತರಿಸಿದ್ದಾರೆ. ಹೇಗೆ ಅಂತೀರಾ? ಅದೇ ನೇರಳೆ ಬಣ್ಣದ ಲಿಪ್‌ಸ್ಟಿಕ್‌ನ್ನು ಇನ್ನಷ್ಟು ಗಾಢ ಬಣ್ಣದಲ್ಲಿ ಹಚ್ಚಿಕೊಂಡು ಕಾನ್ ಕೆಂಪು ಹಾಸಿನಲ್ಲಿ ನಡೆಯಲು ಸಿದ್ಧರಾಗಿರುವ ಫೋಟೊ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಲೋರಿಯೆಲ್ ಪ್ಯಾರಿಸ್ ಪ್ರಸಾಧನ ಕಂಪೆನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲವು ವರ್ಷಗಳಿಂದ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಐಶ್ವರ್ಯಾ ಅದೇ ಬ್ರ್ಯಾಂಡ್‌ನ ಅದೇ ಬಣ್ಣದ ಲಿಪ್‌ಸ್ಟಿಕ್ ಅನ್ನು ಹಚ್ಚಿಕೊಳ್ಳುವ ಮೂಲಕ ಟೀಕೆಗಳಿಗೆ ನಾನು ತಲೆಬಾಗುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಮೇಕಪ್ ಕಲಾವಿದೆ ಚಾರ್ಲೆಟ್ ವಿಲ್ಲರ್, ಐಶ್ವರ್ಯಾ ಅವರ ಹೊಸ ಲುಕ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2016ರ ಕಾನ್ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಐಶ್ವರ್ಯಾ ನೇರಳೆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಂಡಿದ್ದರು. ಈ ಬಾರಿಯೂ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ, ಟೀಕೆ ವ್ಯಕ್ತವಾಗುತ್ತದೆಯೇ ಕಾದು ನೋಡಬೇಕು. ನಿಮಗೆ ನೆನಪಿದೆಯೇ? ತಿಳಿನೇರಳೆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿದ್ದಕ್ಕೆ ಕೆಲವರು ‘ಏಷಿಯನ್ ಪೇಂಟ್ಸ್ ಪ್ರಾಯೋಜಿತ ಬಣ್ಣ’ ಎಂದೂ ಇನ್ನು ಕೆಲವರು ‘ಕಾಲಾ ಖಟ್ಟಾ ಗೋಲಾ’ ಎಂಬ ಕ್ಯಾಂಡಿ ತಿಂದಿದ್ದಕ್ಕೆ ತುಟಿಯ ಬಣ್ಣ ಹಾಗಾಗಿದೆಯೇ ಎಂದೂ ಗೇಲಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.