ತುಂಬು ತೋಳಿನ ರವಿಕೆ ಹೊಸ ಫ್ಯಾಷನ್ ಸ್ಟೇಟ್‌ಮೆಂಟ್ ಬರೆಯುತ್ತಿರುವುದನ್ನು ಕಂಡೆವು. ಅದೇ ವಿನ್ಯಾಸದ ಮುಂದುವರಿದ ಭಾಗವಾಗಿ ಕಾಣುವುದು ಹೈನೆಕ್ ಬ್ಲೌಸ್/ಜಾಕೆಟ್.
ಹೆಸರಾಂತ ಗಾಯಕಿಯರಾದ ಆಶಾ ಭೋಂಸ್ಲೆ ಮತ್ತು ಉಷಾ ಉತ್ತುಪ್ ಅವರು ಲಾಗಾಯ್ತಿನಿಂದ ಹೈನೆಕ್ ಬ್ಲೌಸ್ ಧರಿಸುತ್ತಲೇ ಬಂದವರು. ಟ್ರೆಂಡ್ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಒಂದರ್ಥದಲ್ಲಿ ನೋಡಿದರೆ ಹೈನೆಕ್ ಬ್ಲೌಸ್‌ಗೆ ಇವರು ತಮ್ಮದೇ ಇಮೇಜ್ ಸೇರಿಸಿದರೆನ್ನಬಹುದು. ಬಾಲಿವುಡ್ ಚಿರಸುಂದರಿ ರೇಖಾ ಕೂಡಾ ಆಗೀಗ ಹೈನೆಕ್ ಬ್ಲೌಸ್ ಧರಿಸಿ ಗಮನ ಸೆಳೆಯುತ್ತಿದ್ದರು.
ಬೇಸಿಗೆಗೂ ಸೈ, ಚಳಿಗಾಲಕ್ಕೂ ಜೈ ಅನ್ನುವಂತೆ ಹೊಂದಿಕೊಳ್ಳುವುದು ಹೈನೆಕ್ ಬ್ಲೌಸ್‌ನ ಹೆಗ್ಗಳಿಕೆ. ಬೇಸಿಗೆಯಲ್ಲಿ ಬೆನ್ನು, ಕತ್ತು ಸೂರ್ಯನ ಝಳಕ್ಕೆ ಮಂಕಾಗದಿರಲಿ ಎಂದು ಧರಿಸಿದರೆ, ಚಳಿಗಾಲದಲ್ಲಿ ಚಳಿಯಿಂದ, ಒಣ/ಶೀತ ಗಾಳಿಯಿಂದ ಪಾರಾಗಲು ಹೈನೆಕ್ ವಿನ್ಯಾಸ ನೆರವಾಗುತ್ತದೆ. ಹಾಗಂತ ಎಲ್ಲಾ ಬಗೆಯ ಫ್ಯಾಬ್ರಿಕ್ ಹೈನೆಕ್ ಬ್ಲೌಸ್‌ಗೆ ಹೊಂದುವುದಿಲ್ಲ. ತೆಳು, ಮೆತ್ತನೆ ಮತ್ತು ರೇಷ್ಮೆಯ ಬಟ್ಟೆ ಇದಕ್ಕೆ ಸೂಕ್ತ. ಲೈಟ್ ವೇಟ್ ಅಂತೀವಲ್ಲ, ಹಗುರವಾದ ಬಟ್ಟೆಯನ್ನೆ ಆರಿಸುವುದು ಸರಿ.
ಹೊಸ ಟ್ರೆಂಡ್‌ಗಳಿಗೆ ಪ್ರಯೋಗಶಾಲೆಯಂತಿರುವ ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ, ವಿದ್ಯಾ ಬಾಲನ್, ಕರೀನಾ ಕಪೂರ್ ಅವರು ಹೈನೆಕ್ ಬ್ಲೌಸ್ ಧರಿಸಿ ಎಲ್ಲರ ಗಮನ ಸೆಳೆದದ್ದಿದೆ. ಡಿಸೈನರ್ ಬ್ಲೌಸ್‌ಗಳನ್ನು ಇತರ ಉಡುಪುಗಳಿಗೂ ಸರಿಹೊಂದುವಂತೆ ವಿನ್ಯಾಸ ಮಾಡುವುದು, ಹೊಲಿಯುವುದು ಹೊಸ ಟ್ರೆಂಡ್. ಹೀಗಾಗಿ ಸೀರೆಯೊಂದಿಗೆ ಮಾತ್ರವಲ್ಲ ಲೆಹೆಂಗಾ, ಸೆಮಿ ಸೀರೆ, ಲಾಂಗ್ ಸ್ಕರ್ಟ್, ಸ್ಕರ್ಟ್, ಮಿಡಿಗೆ ಬೇಕಾದರೂ ಈ ಜಾಕೆಟ್‌ಗಳನ್ನು ಧರಿಸಬಹುದು.
ವಿಕ್ಟೋರಿಯನ್ ಇಮೇಜು
ಹೈನೆಕ್ ಬ್ಲೌಸ್‌ಗಳು ವಿಕ್ಟೋರಿಯನ್ ಫ್ಯಾಷನ್‌ನ್ನು ಮರಳಿ ಪರಿಚಯಿಸುತ್ತಿವೆ. ಯಾವುದೇ ಸಂದರ್ಭಕ್ಕೂ ಒಪ್ಪುವ ಈ ಬ್ಲೌಸ್‌ಗಳು ಬಾಲಿವುಡ್‌ನ ವಿಶೇಷ ಸಮಾರಂಭಗಳಲ್ಲಿ ಹೊಸ ಸ್ಟೈಲ್ ಸ್ಟೇಟ್‌ಮೆಂಟ್ ಬರೆಯುತ್ತಿವೆ.
ಬಾಲಿವುಡ್ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹುಟ್ಟುಹಬ್ಬವನ್ನು ತಪ್ಪಿಸಿಕೊಳ್ಳಲು ಬಾಲಿವುಡ್‌ನಲ್ಲಿ ಯಾರೂ ಬಯಸುವುದಿಲ್ಲ. ಅವರ ಹುಟ್ಟುಹಬ್ಬಕ್ಕೆ ದೀಪಿಕಾ ಪಡುಕೋಣೆ ಅನಾಮಿಕ ಖನ್ನಾ ವಿನ್ಯಾಸದ ಸೀರೆ ಮತ್ತು ಹೈನೆಕ್ ಬ್ಲೌಸ್ ಧರಿಸಿ ಬಂದಾಗ ಎಲ್ಲರ ಮೆಚ್ಚುಗೆಯ ನೋಟ ಅವರ ಮೇಲಿತ್ತು. ಕನಿಷ್ಠ ಆಭರಣ ಧರಿಸಿದ್ದರು ಅವರು. ಆದರೆ ಅವರು ಇಡೀ ಸಭೆಯಲ್ಲಿ ಕೇಂದ್ರಬಿಂದುವಾಗಿ ಮಿಂಚಲು ಕಾರಣವಾದದ್ದು ಅವರ ಹೈನೆಕ್ ಬ್ಲೌಸ್. ಇಷ್ಟೇ ಯಾಕೆ? 66ನೆಯ ಕಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಂತದ ಬಣ್ಣದ ಸೀರೆ ಮತ್ತು ಕಂದು ಬಣ್ಣದ ರವಿಕೆಯಲ್ಲಿ ಮಿಂಚಿದ ವಿದ್ಯಾ ಬಾಲನ್ ಅವರ ಗೆಟಪ್ ಮರೆಯಲುಂಟೆ?
ಇದಾದ ನಂತರ ಹಿರಿಯ ನಟಿ ಶ್ರೀದೇವಿ ಹೈನೆಕ್ ಬ್ಲೌಸ್‌ನಲ್ಲಿ ಚಿತ್ರರಂಗದ ಸಮಾರಂಭವೊಂದರಲ್ಲಿ ಕಾಣಿಸಿಕೊಂಡರೆ, ನರ್ಗಿಸ್ ಫಕ್ರಿ ಮತ್ತು ದಿಯಾ ಮಿರ್ಜಾ ಕೂಡಾ ಈ ಟ್ರೆಂಡ್ ತಮಗಿಷ್ಟವಾಗಿದೆ ಎಂದು ತೋರಿಸಿಕೊಟ್ಟರು. ಆರು ಮೊಳದ ಸೀರೆಗಿಂತಲೂ ಹೆಚ್ಚಿನ ಚಮತ್ಕಾರಗಳನ್ನು ರವಿಕೆಯ ವಿನ್ಯಾಸದಲ್ಲಿ ಮಾಡಲು ಸಾಧ್ಯ’.
– ಪ್ರಿಯಾ ಕಟಾರಿಯಾ ಪುರಿ, ಹೆಸರಾಂತ ವಸ್ತ್ರವಿನ್ಯಾಸಕಿ
ಈ ಅಂಶ ಗಮನದಲ್ಲಿರಲಿ
ಹೈನೆಕ್ ಬ್ಲೌಸ್ ಆಯ್ಕೆ ಮಾಡಿಕೊಳ್ಳುವ ಮುನ್ನ ಒಂದಿಷ್ಟು ವಿಚಾರಗಳನ್ನು ಗಮನಿಸಬೇಕು.
*ಕುಳ್ಳಗಿದ್ದರೂ ಎತ್ತರವಿದ್ದರೂ ಹೈನೆಕ್ ಒಪ್ಪುತ್ತದೆ. ಆದರೆ ಕತ್ತನ್ನು ಪೂರ್ತಿ ಮುಚ್ಚುವ ಕಾಲರ್ ಕುಳ್ಳಗಿನವರನ್ನು ಇನ್ನಷ್ಟು ಕುಳ್ಳಗೆ ಕಾಣಿಸುತ್ತದೆ. ಎತ್ತರ ಇದ್ದರೆ, ಕತ್ತು ಉದ್ದ ಇದ್ದರೆ ಅಗಲ ಕಾಲರ್ ಕೂಡಾ ಓಕೆ.
*ಹೈನೆಕ್‌ಗೆ ಲೇಸ್ ಡಿಸೈನ್ ಕೊಟ್ಟರೆ ಶ್ರೀಮಂತ ಲುಕ್ ಕೊಡುತ್ತದೆ.
*ಹೈನೆಕ್ ಬ್ಲೌಸ್ ಎಲ್ಲಾ ರೀತಿಯ ದೇಹಾಕಾರಗಳಿಗೂ ಒಪ್ಪುತ್ತದೆ. ದಪ್ಪಗಿರುವವರೂ, ತೆಳ್ಳಗಿರುವವರೂ ಈ ಬ್ಲೌಸ್ ಧರಿಸಬಹುದು. ಆದರೆ ಸಿಗರೇಟ್ ಪ್ಯಾಂಟ್‌ಗಳು ಅಥವಾ ಪಲ್ಲಾಜೊಗಳ ಮೇಲೆ ಈ ರವಿಕೆಯನ್ನು ಧರಿಸಿದರೆ ಹೊಸ ಲುಕ್ ನಿಮ್ಮದಾಗುತ್ತದೆ.
*ಹೈನೆಕ್‌ಗೆ ತುಂಬು ತೋಳೂ ಚಂದ ಕಾಣುತ್ತದೆ. ಅರೆತೋಳು, ತ್ರೀ ಫೋರ್ತ್, ಕ್ಯಾಪ್ ಸ್ಲೀವ್ಸ್, ಮೆಗಾ ಸ್ಲೀವ್ಸ್, ಸ್ಲೀವ್‌ಲೆಸ್ ಸಹ ಟ್ರೆಂಡಿಯಾಗಿರುತ್ತದೆ.
*ಕತ್ತಿನ ಸುತ್ತ ಜರಿ ಕಸೂತಿ/ಜರಿ ಲೈನ್ ಅಥವಾ ಸ್ಟೋನ್ ವರ್ಕ್ ಕೊಟ್ಟರೆ ರವಿಕೆಗೆ ವಿಶೇಷ ಸ್ಪರ್ಶ ಕೊಟ್ಟಂತಾಗುತ್ತದೆ.
*ಹೈನೆಕ್ ರವಿಕೆ ತೊಟ್ಟಾಗ ಆದಷ್ಟೂ ಕಡಿಮೆ ಒಡವೆ ಧರಿಸಬೇಕು. ಒಡವೆ ಬೇಡವೆಂದರೂ ಸೈ. ಆದರೆ ಕಾನ್ ಚಿತ್ರೋತ್ಸವದಲ್ಲಿ ವಿದ್ಯಾ ಬಾಲನ್ ತೊಟ್ಟಂತೆ ಹತ್ತಾರು ಎಳೆಯ ಹಾರ ಧರಿಸಿದರೆ ಅದೇ ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಆದೀತು.
*ಹೈನೆಕ್‌ನೊಂದಿಗೆ ತುಂಬು ತೋಳು ಬೇಕೆಂದರೆ ಸಡಿಲವಾಗಿರದಂತೆ ನೋಡಿಕೊಳ್ಳುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.