ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಅಲ್ಲದೇ ಜವಾಬ್ದಾರಿಯೂ ಹೌದು. ನಾವು ನೀಡುವ ಒಂದು ಮತ ಸರ್ಕಾರವನ್ನು ಯಾರು ರಚಿಸಬೇಕು ಎಂಬುದನ್ನು ತೀರ್ಮಾನಿಸುತ್ತದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕೇಂದ್ರೀಯ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ ಎಂ.ಜಿ. ರಸ್ತೆಯಲ್ಲಿರುವ ರಂಗೋಲಿ ಮೆಟ್ರೊ ಕಲಾ ಕೇಂದ್ರದಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ವಿನ್ಯಾಸಗೊಳಿಸಿ ಪ್ರಸ್ತುತಪಡಿಸಿದೆ.
ಮತದಾರರು ಗುರುತಿನ ಚೀಟಿಗೆ ಹೆಸರು ನೋಂದಾಯಿಸಿಕೊಳ್ಳುವ ಹಂತದಿಂದ ಹಿಡಿದು ಮತಗಟ್ಟೆಗೆ ಮತದಾನ ಮಾಡಲು ತೆರಳಿದಾಗ ಅನುಸರಿಸಬಹುದಾದ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡುವ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.
‘ಈ ದೇಶ ನಿಮ್ಮದು. ಸರ್ಕಾರವೂ ನಿಮ್ಮದೇ. ಸರ್ಕಾರದ ರಚನೆಯಲ್ಲಿ ನೀವು ಭಾಗಿದಾರರಾಗಲು ಚುನಾವಣೆಯಲ್ಲಿ ಮತ ಚಲಾಯಿಸುವುದು ಮುಖ್ಯ’, ‘ದೇಶ ಮತ್ತು ಜನತೆಯ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರವು ನೀವು ಭರಿಸುವ ಹಣದಿಂದ ಅನುಷ್ಠಾನಗೊಳಿಸುತ್ತದೆ. ನಿಮ್ಮ ಒಂದು ಮತ ಜವಾಬ್ದಾರಿ ಯಾರಿಗೆ ಎಂಬುದನ್ನು ತೀರ್ಮಾನಿಸುತ್ತದೆ’, ‘ಸುಭದ್ರ ಪ್ರಜಾಪ್ರಭುತ್ವವನ್ನು ನಿಮ್ಮ ಒಂದು ಮತ ನಿರ್ಧರಿಸುತ್ತದೆ’, ‘ಮತದಾನ ಮಾಡುವುದು ನಿಮ್ಮ ಅಭಿಮಾನ ಮತ್ತು ಗೌರವದ ಸಂಕೇತವಾಗಿದೆ. ಆದ್ದರಿಂದ ತಪ್ಪದೇ ಮತ ಚಲಾಯಿಸಿ’... ಮುಂತಾದ ಘೋಷವಾಕ್ಯಗಳು ನಮ್ಮೊಳಗಿನ ಅರಿವನ್ನು ಪ್ರೇರೇಪಿಸುವಂತಿವೆ.
ಕಳೆದ ಎರಡು ಮೂರು ಚುನಾವಣೆಗಳಿಂದ ಮತದಾರರ ಮತ ಚಲಾವಣೆಗೆ ವಿದ್ಯುನ್ಮಾನ ಮತ ಯಂತ್ರ ಬಳಕೆ ಜಾರಿಯಲ್ಲಿದೆ. ಆದರೂ ಯಂತ್ರದ ಬಳಕೆಯ ಬಗ್ಗೆ ಹಲವರಿಗಿನ್ನೂ ಮಾಹಿತಿಯ ಕೊರತೆ ಇದೆ. ಈ ಬಗ್ಗೆ ತಿಳಿವಳಿಕೆ ಮೂಡಿಸಲು ವಿದ್ಯುನ್ಮಾನ ಯಂತ್ರವೊಂದನ್ನು ಪ್ರದರ್ಶನದಲ್ಲಿ ಇಡಲಾಗಿದ್ದು, ಬಳಕೆ ಮಾಡುವ ಬಗ್ಗೆ ವಿವರಣೆ ನೀಡುವ ವ್ಯವಸ್ಥೆಯೂ ಅಲ್ಲಿ ಜಾರಿಯಲ್ಲಿದೆ.
ಚುನಾವಣಾ ಮತ ಕ್ಷೇತ್ರದಲ್ಲಿ ವಾಸಿಸುತ್ತಿರುವ ಕಳೆದ ಜನವರಿ.1ಕ್ಕೆ ಹದಿನೆಂಟು ವರ್ಷ ತುಂಬಿದ ಎಲ್ಲ ನಾಗರಿಕರು ಮತದಾನ ಮಾಡುವ ಹಕ್ಕು ಹೊಂದಿರುತ್ತಾರೆ. ಮತದಾರರು ಮತ ಚಲಾಯಿಸಲು ಮತಗಟ್ಟೆಗೆ ತರಳಿದಾಗ ಯಾವುದೇ ಅಭ್ಯರ್ಥಿ ಅಥವಾ ಪಕ್ಷದ ಗುರುತಿರುವ ಚೀಟಿ, ಬ್ಯಾಡ್ಜ್, ಬ್ಯಾನರ್‌ಗಳನ್ನು ಕೊಂಡೊಯ್ಯಬಾರದು. ಮತದಾನ ಕೇಂದ್ರದ ಹತ್ತಿರ ಯಾವುದೇ ಅಭ್ಯರ್ಥಿ ಅಥವಾ ಪಕ್ಷದ ಬಗ್ಗೆ ಪ್ರಚಾರ ಮಾಡುವುದು ನಿಷಿದ್ಧ ಎಂಬ ಸೂಚನೆಗಳನ್ನು ನೀಡಲಾಗಿದೆ.
ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರು, ಚುನಾವಣಾ ಅಪರಾಧಗಳಿಗಾಗಿ ಶಿಕ್ಷೆಗೆ ಗುರಿಯಾದವರು ಮತ್ತು ಮಾನಸಿಕ ಅಸ್ವಸ್ಥರಿಗೆ ಮತದಾನ ಮಾಡುವ ಹಕ್ಕು ಇರುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ.
ಮತ ಚಲಾಯಿಸಲು ಮತಗಟ್ಟೆಗೆ ತೆರಳಿದಾಗ ಸರದಿಯಲ್ಲಿ ನಿಂತು ಮತ ಚಲಾಯಿಸುವುದು, ತಮ್ಮ ಸರದಿ ಬರುವವರೆಗೂ ತಾಳ್ಮೆಯಿಂದ ಕಾಯುವುದು, ಮಹಿಳೆಯರು, ವೃದ್ಧರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ, ಅಂಧರು ಮತ ಚಲಾಯಿಸುವಾಗ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ಒಬ್ಬ ವ್ಯಕ್ತಿಯನ್ನು ಸಹಾಯ ಪಡೆಯಲು ಸಾಧ್ಯವಿರುವ ಅಥವಾ ಮತಯಂತ್ರಕ್ಕೆ ಬ್ರೈಲ್ ಲಿಪಿಯನ್ನು ಅಳವಡಿಸಲಾಗಿರುವ ವಿವರಗಳು ಇವೆ.
ಒಂದು ವೇಳೆ ಮತ ಚಲಾಯಿಸಲು ಮತಗಟ್ಟೆಗೆ ತೆರಳಿದಾಗ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಿರದಿದ್ದಲ್ಲಿ ಇದಕ್ಕೆ ಪರ್ಯಾಯವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್, ಭಾವಚಿತ್ರವಿರುವ ಅಂಚೆ ಉಳಿತಾಯ ಖಾತೆ ಪುಸ್ತಕ, ಭಾವಚಿತ್ರವಿರುವ ರಾಷ್ಟ್ರೀಕೃತ ಬ್ಯಾಂಕ್ ಪುಸ್ತಕ, ನರೇಗಾ ಜಾಬ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ಮುಂತಾದವುಗಳನ್ನು ತೋರಿಸಿ ಮತಚಲಾಯಿಸಲು ಸಾಧ್ಯವಿದೆ ಎಂಬ ಮಾಹಿತಿ ಇದ್ದು, ಹೀಗೆ ಮತ ಚಲಾಯಿಸಲು ಮತದಾರರ ಹೆಸರು ಕಡ್ಡಾಯವಾಗಿ ಆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇರಬೇಕು ಎಂಬ ಅಂಶವನ್ನು ಸ್ಪಷ್ಟಪಡಿಸಿದೆ.
ಮಾ.26ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಪ್ರದರ್ಶನವಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.