ADVERTISEMENT

ಮನೆಗಳೇ ಇಲ್ಲ, ಏಕ ತಂತಿಯೇ ಎಲ್ಲ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST
ಮನೆಗಳೇ ಇಲ್ಲ, ಏಕ ತಂತಿಯೇ ಎಲ್ಲ
ಮನೆಗಳೇ ಇಲ್ಲ, ಏಕ ತಂತಿಯೇ ಎಲ್ಲ   

ಒಂದು ವಾದ್ಯವನ್ನು ಎಷ್ಟು ವರ್ಷ ಕಲಿತರೆ ಕಛೇರಿ ಕೊಡಬಹುದು?.. ಇಂದಿನ ಬಹುತೇಕ ಸಂಗೀತ ವಿದ್ಯಾರ್ಥಿಗಳು ಅವರವರ ಗುರುಗಳನ್ನು ಕೇಳುವ ಸಾಮಾನ್ಯ ಪ್ರಶ್ನೆ ಇದು. ಆದಷ್ಟು ಬೇಗ ಕಲಿತು, ಆತುರಾತುರವಾಗಿ ಕಛೇರಿ ಕೊಟ್ಟು, ಟೀವಿಯಲ್ಲಿ, ಪತ್ರಿಕೆಗಳಲ್ಲಿ ಪ್ರಚಾರ ಪಡೆದು ಜನಪ್ರಿಯತೆ ಗಳಿಸುವ ಹುಚ್ಚು ಇಂದಿನ ಮಕ್ಕಳಿಗೆ. ಮಕ್ಕಳಂತೆ ಪೋಷಕರಿಗೆ ಕೂಡ.

ಸರೋದ್‌ನಲ್ಲಿ ವಿಶ್ವವಿಖ್ಯಾತರಾದ ಪಂ. ರಾಜೀವ್ ತಾರಾನಾಥ್ ಅವರ ಬಳಿ ಈ ಪ್ರಶ್ನೆಯನ್ನು ಸುಮ್ಮನೆ ಒಮ್ಮೆ ಕೇಳಿ ನೋಡಿ. ಅವರ ಉತ್ತರ ಏನು..? ಇಲ್ಲಿ ಕೇಳಿ. `ಸಂಗೀತ ಕಲಿಕೆ, ವಾದ್ಯಗಳ ನುಡಿಸಾಣಿಕೆ ಎಂಬುದು ಸಮುದ್ರ, ಸಾಗರ ಇದ್ದ ಹಾಗೆ; ಎಷ್ಟು ಕಲಿತರೂ ಕೊನೆ ಎಂಬುದಿಲ್ಲ. ನಾನು 1955ರಿಂದ (ಕಳೆದ 58 ವರ್ಷಗಳಿಂದ) ಕಲಿಯಲು ಶುರು ಮಾಡಿದ್ದು, ಇವತ್ತಿನವರೆಗೂ ನನಗೆ ಪೂರ್ತಿಯಾಗಿ ಕಲಿತು ಆಯಿತು ಎಂದು ಅನಿಸುವುದೇ ಇಲ್ಲ...~

`ಹಾಗೆ ನೋಡಿದರೆ ನನಗೆ ಗುರುಗಳು (ಉಸ್ತಾದ್ ಅಲಿ ಅಕ್ಬರ್ ಖಾನ್) ಹೇಳಿಕೊಡುತ್ತಿದ್ದುದು ಕಡಿಮೆ. ಸರೋದ್ ನುಡಿಸುವ ಕಲೆಯನ್ನು ಮಾತ್ರ ಹೇಳಿಕೊಟ್ಟು, ನಂತರದ ಪಾಠಗಳನ್ನು ನಾವೇ ಕಲಿತು ಅರಗಿಸಿಕೊಳ್ಳಬೇಕಾಗಿತ್ತು. ದಿನಕ್ಕೆ 12 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಈಗಲೂ ದಿನಕ್ಕೆ 2-3 ಗಂಟೆ ಅಭ್ಯಾಸ ಮಾಡುತ್ತೇನೆ..~ ಎನ್ನುತ್ತಾ ತಮ್ಮ ಸಾಧನೆಯ ಹಿನ್ನೆಲೆಯನ್ನು ಆತ್ಮೀಯವಾಗಿ ಬಿಚ್ಚಿಡುತ್ತಾರೆ ಪಂ. ರಾಜೀವ್ ತಾರಾನಾಥ್.

`ವಾದ್ಯ ನುಡಿಸುವಾಗ ಸ್ವರ ಶುದ್ಧಿ, ಟೋನಲ್ ಶುದ್ಧಿ ಬಹಳ ಮುಖ್ಯ. ಈ ಸಾಧ್ಯತೆಗಳನ್ನು ನಾವೇ ಹುಡುಕಬೇಕು, ಆಗ ಸಾಧನೆಯ ಹಾದಿ ಸುಲಭ. ಹೆಚ್ಚು ಕಡಿಮೆ 12-13 ವರ್ಷ ಆದ ಮೇಲೆ ಸರೋದ್ ಕಲಿಯಲು ಶುರು ಮಾಡಬಹುದು. ಸಂಗೀತ ಜ್ಞಾನ ಇದ್ದರೆ ಬಹಳ ಒಳ್ಳೆಯದು. ನಾನು 21 ವರ್ಷ ಆದ ಮೇಲೆ ಸರೋದ್ ಕಲಿಯಲು ಶುರು ಮಾಡಿದೆ.

ಕಲಿಯಲಾರಂಭಿಸಿ ಆರು ವರ್ಷ ಕಳೆದ ಮೇಲೆ ಕೈಗೆ ಹಿಡಿತ ಬಂತು.~ ಎಂದು ಕಲಿಕೆಯ ವಿಧಾನವನ್ನೂ ಬಿಟ್ಟು ಕೊಡುತ್ತಾರೆ ಸರೋದ್‌ನಲ್ಲಿ ವಿದ್ವತ್‌ಪೂರ್ಣ ಸಾಧನೆ ಮಾಡಿದ ಈ ಹಿರಿಯ ಸಾಧಕ.  `ಸರೋದ್ ನುಡಿಸಾಣಿಕೆಯಲ್ಲಿ ಅನೇಕ ಪ್ರಯೋಗಗಳನ್ನೂ ಮಾಡಿರುವ ಪಂಡಿತ್‌ಜಿ, `ಸರೋದ್‌ನಲ್ಲಿ ಮಗುವಿಗೆ ಜೋಗುಳ ಹಾಡುವ ಹಾಗೆಯೂ ನಾದ ತರಬಹುದು; ಪ್ರೇಯಸಿಯ ಪಿಸುಮಾತು ಕೂಡ ನುಡಿಸಬಹುದು, ಎಷ್ಟು ಬೇಕಾದರೂ ವೈವಿಧ್ಯತೆಗಳನ್ನು ನಿರೂಪಿಸಬಹುದು~ ಎಂದು ವಿವರಿಸುತ್ತಾರೆ.

`ಮನೆ~ಗಳಿಲ್ಲದ ತಂತಿವಾದ್ಯ
ಸರೋದ್ ತುಂಬ ಹಳೆಯ ವಾದ್ಯವೇ. ಸುಮಾರು 6ನೇ ಶತಮಾನದಷ್ಟು ಹಳೆಯದು. ತಂತಿವಾದ್ಯಗಳ ಗುಂಪಿಗೆ ಸೇರಿದ್ದು. ತಂತಿವಾದ್ಯದಲ್ಲೂ ಮೀಟುವ (ಪಿಟೀಲು, ವೀಣೆ) ಮನೆಗಳಿರುವ ವಾದ್ಯ ಮತ್ತು ಮನೆಗಳಿಲ್ಲದ ವಾದ್ಯ ಎಂದು ಎರಡು ರೀತಿಯದ್ದು ಇವೆ. ಸರೋದ್ ಮನೆಗಳಿಲ್ಲದ ವಾದ್ಯ. ಇದರಲ್ಲಿರುವ ತಂತಿಯನ್ನು ಉಗುರಿನ ಸಹಾಯದಿಂದ ನುಡಿಸುವುದು. ನಮ್ಮ ದೇಶದಲ್ಲಿರುವ ತಂತಿ ವಾದ್ಯಗಳ ಪೈಕಿ ಸರೋದ್ ಒಂದೇ ಮನೆಗಳಿಲ್ಲದ ವಾದ್ಯ.

ಸರೋದ್ ಹೆಚ್ಚು ಕಡಿಮೆ ಸಿತಾರ್‌ನಷ್ಟೇ ಉದ್ದವಿರುತ್ತದೆ. ಹಳೆಯ ಸರೋದ್‌ಗಳು ಈಗ ಇರುವ ವಾದ್ಯಕ್ಕಿಂತ ಚಿಕ್ಕದಾಗಿರುತ್ತಿತ್ತು. ಈಗಿನ ವಾದ್ಯ ಸರೋದ್‌ನಲ್ಲಿ ದೊಡ್ಡ ಕಲಾವಿದರಾಗಿದ್ದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ತಂದೆ ಅಲಾವುದ್ದೀನ್ ಖಾನ್ ಅವರು ಆವಿಷ್ಕಾರ ಮಾಡಿದ್ದದ್ದು. ಈ ವಾದ್ಯವನ್ನು ಮರ, ತೆಂಗಿನ ಚಿಪ್ಪು, ಚರ್ಮ ಮತ್ತು ಮೆಟಲ್ ಪ್ಲೇಟ್‌ನಿಂದ ತಯಾರಿಸಲಾಗುತ್ತದೆ.
 
ಮೇಲೆ ಬಿರಡೆಗಳಿರುತ್ತವೆ. ಕುಳಿತು ನುಡಿಸುವಾಗ ತೊಡೆಯ ಕಡೆಯಿಂದ ಎದೆಯ ಕಡೆಗೆ ನಾಲ್ಕು ಪ್ರಮುಖ ತಂತಿಗಳಿರುತ್ತದೆ. ಲಯಕ್ಕೆಂದೇ ಸಣ್ಣ ತಂತಿಗಳೂ ಇರುತ್ತವೆ.
ಸರೋದ್ ನುಡಿಸುವಾಗ ವಾದ್ಯದ ತಂತಿಗಳನ್ನು ಉಗುರಿನಿಂದ ಮೃದುವಾಗಿ ಒತ್ತಬೇಕು. ಆಗ ಸುಶ್ರಾವ್ಯವಾದ ಸ್ವರ ನಾದ ಹೊರಡುತ್ತದೆ.
 
ಸಿತಾರ್‌ನಲ್ಲಿ ಹೊಮ್ಮುವ ಸುಮಧುರ ನಾದದಂತೆ. ಆದರೆ ಸಿತಾರ್ ಹೆಣ್ಣು ಸ್ವರ, ಸರೋದ್‌ನಲ್ಲಿ ಹೊರಡುವುದು ಗಂಡು ಸ್ವರ. ಇದನ್ನು ಕೇಳಲು ಬಹಳ ಇಂಪಾಗಿರುತ್ತದೆ; ಮನಸ್ಸಿಗೆ ಮುದ ನೀಡುತ್ತದೆ.

ಉಸ್ತಾದ್ ಅಮ್ಜದ್ ಅಲಿ ಖಾನ್, ಆಶಿಶ್ ಖಾನ್, ಬುದ್ಧದೇವ್ ದಾಸ್‌ಗುಪ್ತ, ಜರೀನ್ ಶರ್ಮ ದೇಶದ ಪ್ರಮುಖ ಸರೋದ್ ವಾದಕರು. ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಮಕ್ಕಳಾದ ಅಮಾನ್ ಖಾನ್, ಅಯಾನ್ ಖಾನ್ ಇಬ್ಬರೂ ಸರೋದ್‌ನಲ್ಲಿ ಮಿಂಚುತ್ತಿರುವ ಉದಯೋನ್ಮುಖ ಕಲಾವಿದರು. ಪಂ. ತಾರಾನಾಥ್ ಉತ್ತಮ ಸರೋದ್ ವಾದಕರಾಗಿದ್ದರು.

ಫ್ರೇಜರ್ ಟೌನ್‌ನ ಶಿವ ಮ್ಯೂಸಿಕಲ್ಸ್ 080-66493293, ಬ್ರಿಗೇಡ್ ರಸ್ತೆ ಸೌಂಡ್‌ಗ್ಲಿಡ್ಜ್ 080-66490858, ನ್ಯೂ ಅರುಣಾ ಮ್ಯೂಸಿಕಲ್ಸ್ 9886991666/ 9341214105 ಗಳಲ್ಲಿ ಉತ್ತಮ ಗುಣಮಟ್ಟದ ಸರೋದ್ ಸಿಗುತ್ತದೆ. ಕೋಲ್ಕತ್ತದಲ್ಲಿ ಹೇಮಲಿನ್ ಚಂದ್ರಸೇನ್ ಉತ್ತಮ ಸರೋದ್ ತಯಾರಕರಾಗಿದ್ದರು. ಈಗ ಅಲ್ಲೇ ಅಶೋಕ್ ಎಂಬವರು ಉತ್ತಮ ಗುಣಮಟ್ಟದ ಸರೋದ್ ಮಾಡಿಕೊಡುತ್ತಾರೆ. ಬೆಲೆ ಅಂದಾಜು 55-60 ಸಾವಿರ ರೂಪಾಯಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.